Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸಾಹಿತಿ, ಕಲಾವಿದರಿಗೆ ಧನ ಸಹಾಯ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟವು, ಧನ ಸಹಾಯ ಪಡೆಯುತ್ತಿರುವ ಸಂಘ ಸಂಸ್ಥೆಗಳ ಕುತ್ತಿಗೆ ಹಿಸುಕುವ ರೀತಿಯಲ್ಲಿ ರೂಪಿತವಾಗಿರುವ ಮಾರ್ಗಸೂಚಿ ರದ್ದುಪಡಿಸಿ, ಸರಳ ಮಾರ್ಗಸೂಚಿ ರೂಪಿಸಿ ಕೂಡಲೇ ಧನ ಸಹಾಯ ಬಿಡುಗಡೆ ಮಾಡವಂತೆ ಕೋರಿ ತಮ್ಮ ಹಕ್ಕೊತ್ತಾಯಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಡಿಸೆಂಬರ್‌ 12ರಂದು ನಾಡಿನ ಸಂಘ ಸಂಸ್ಥೆಗಳು, ಕನ್ನಡಪರ ಹೋರಾಟಗಳು, ಸಾಹಿತಿಗಳು, ಪತ್ರಕರ್ತರು, ಸಂಸ್ಕೃತಿ ಚಿಂತಕರು ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.

ಒಕ್ಕೂಟದ ಹಕ್ಕೊತ್ತಾಯಗಳು ಈ ಕೆಳಗಿನಂತಿವೆ.

1. ಸಂಘ ಸಂಸ್ಥೆಗಳು ಧನ ಸಹಾಯ ನೀಡುವಲ್ಲಿ ಏಕರೂಪದ ಮಾರ್ಗಸೂಚಿ ಪಾಲಿಸಬೇಕು. ಕ್ರಮ ಸಂಖ್ಯೆ 9 ರಂತೆ ಸರ್ಕಾರ ಸೂಚಿಸುವ ಕಾರ್ಯಕ್ರಮಗಳಿಗೆ ಧನ ಸಹಾಯ ನೀಡಬೇಕು.

2. ಈ ಆರ್ಥಿಕ ವರ್ಷದಿಂದ ಸಂಘ ಸಂಸ್ಥೆಗಳಿಗೆ ಧನ ಸಹಾಯ ಕನಿಷ್ಠ 5 ಲಕ್ಷ ದಿಂದ ಗರಿಷ್ಠ 15 ಲಕ್ಷದಿಂದ ಗರಿಷ್ಠ 15 ಲಕ್ಷಗಳಿಗೆ ನಿಗದಿಗೊಳಿಸಿ, ತಕ್ಷಣ ಬಿಡುಗಡೆ ಮಾಡಬೇಕು.

3. ಆರ್.ಟಿ.ಜಿ.ಎಸ್‌ ಪದ್ಧತಿ ರದ್ದುಗೊಳಿಸಬೇಕು.

4. ಅವೈಜ್ಞಾನಿಕವಾಗಿರುವ ಕಲಾ ತಂಡ app ದೋಷಪೂರಿತವಾಗಿದೆ ಅದನ್ನು ತತ್‌ಕ್ಷಣ ರದ್ಧುಗೊಳಿಸಬೇಕು.

5. ಮಾರ್ಗಸೂಚಿಗಳನ್ನು ಗ್ರಾಮೀಣ ಕಲಾವಿದರು, ಕಲಾ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸರಳೀಕರಣಗೊಳಿಸಬೇಕು.

6. ವಿವಿಧ ಉದ್ದೇಶ ಅಂಶಗಳನ್ನು ಹೊಂದಿರುವ ಕ್ರಿಯಾಶೀಲ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ತಪ್ಪಿಸಿ, ಅವರನ್ನು ಕೂಡ ಪರಿಗಣಿಸಿ ಧನಸಹಾಯ ಯೋಜನೆಯ ಮಿತಿಗೆ ತರಬೇಕು(ಈ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಗಳನ್ನು ಪರಿಗಣಿಸಬೇಕು)

7. ಅವೈಜ್ಞಾನಿಕ ಮತ್ತು ದೂಷಪೂರಿತ ನಿರ್ಧಾರಗಳನ್ನು ಕೂಡಲೇ ರದ್ಧುಗೊಳಿಸಿ, ಜೇಷ್ಟತೆ ಆಧಾರದ ಮೇಲೆ ವಲಯವಾರು, ಪ್ರಾದೇಶಿಕವಾರು ಧನ ಸಹಾಯಕ ಪರಿಗಣಿಸಬೇಕು.

8. ಅಸಂಘಟಿತ ಕಲಾವಿದರಿಗೆ ವೇಷಭೂಷಣ, ರಂಗ ಪರಿಕರಗಳು, ವಾದ್ಯ ಪರಿಕರಗಳ ಧನ ಸಹಾಯವನ್ನು  ರೂ.1 ಲಕ್ಷದಿಂದ 2 ಲಕ್ಷಕ್ಕೆ ಏರಿಸಿ ಜೇಷ್ಟತೆ ಆಧಾರದ ಮೇಲೆ ನೀಡಬೇಕು.

9. ಎಲ್ಲಾ ಉತ್ಸವಗಳನ್ನು ಹಾಗೂ ಜಿಲ್ಲಾ ಉತ್ಸವಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡುವುದನ್ನು ರದ್ದುಗೊಳಿಸಿ, ಸಂಸ್ಕೃತಿ ಇಲಾಖೆಯೇ ನೇರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

10. ಉತ್ಸವದಲ್ಲಿ ಕರ್ನಾಟಕ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.

11. ಕಷ್ಟ ಪರಿಸ್ಥಿತಿಯಲ್ಲಿರುವ ಎಲ್ಲಾ ಪ್ರಾಕಾರದ ಕಲಾವಿದರ, ಸಾಹಿತಿಗಳ ವೈದ್ಯರ ಸಂಪೂರ್ಣ ವೆಚ್ಚವನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ  ತಕ್ಷಣವೇ ಭರಿಸುವಂತೆ ಕ್ರಮ ಕೈಗೊಳ್ಳಬೇಕು.

12. ಜಾನಪದ ಜಾತ್ರೆಯನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮತ್ತೆ ಪ್ರಾರಂಭಿಸುವುದು.

13. ಸ್ಥಗಿತಗೊಂಡಿರುವ ಹಲವು ಹೆಸರಾಂತ ಯೋಜನೆಗಳಾದ ಸುಗ್ಗಿ- ಹುಗ್ಗಿ , ಯುವಸೌರಭ , ಚಿಗುರು, ಉದಯರಾಗ, ಸಂಧ್ಯರಾಗ, ಮಹಿಳಾಉತ್ಸವ ಇನ್ನು ಮುಂತಾದ ಹಲವು ಯೋಜನೆಗಳು ಮರು ಪ್ರಾರಂಭಿಸುವುದು. ಹಾಡಿರೇ ರಾಗಗಳ ತೂಗಿರೇ ದೀಪಗಳ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು.

14. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಾಮಾನುಸಾರ ನೊಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳಿಗೆ, ಏಕರೂಪದ ಮಾನದಂಡವನ್ನು ಅನುಸರಿಸಿ, ತಾರತಮ್ಯ ಮಾಡದೇ, ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡುವುದು, ಅನುದಾನ/ಧನ ಸಹಾಯ ನೀಡುವಾಗ ಆ ಸಂಘ ಸಂಸ್ಥೆಗಳ ಜೇಷ್ಠತೆ, ಕಾರ್ಯಕ್ಷಮತೆ, ದಕ್ಷತೆ ನಿರಂತರ ಮತ್ತು ಗುಣಾತ್ಮಕ ಕಾರ್ಯಚಟುವಟಿಕೆಗಳನ್ನು ಆಧರಿಸಿ ಸಂಘ ಸಂಸ್ಥೆ ಸಲ್ಲಿಸುವ ಕ್ರಿಯಾಯೋಜನೆಗನುಗುಣವಾಗಿ ಸಮರ್ಪಕ ಅನುದಾನವನ್ನು ನಿಗದಿ ಮಾಡಬೇಕು.

15. ಕರ್ನಾಟಕ ಸರ್ಕಾರವು ನೀಡುವ 12ರಿಂದ 14 ಪ್ರಶಸ್ತಿಗಳನ್ನು ಆಯಾಯ ವರ್ಷದಲ್ಲೇ ಘೋಷಣೆ ಮಾಡಿ ಅರ್ಹ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡುವುದು.

16. ಕಲಾವಿದರ ಜೊತೆ ಅನುಚಿತವಾಗಿ ವರ್ತಿಸುವ ಕೆಲವು ಅಧಿಕಾರಿಗಳನ್ನು ಕೇಂದ್ರ ಕಛೇರಿಯಿಂದ ಕೂಡಲೇ ವರ್ಗಾಯಿಸಬೇಕು ಮತ್ತು ಈಗಾಗಲೇ ಹಲವಾರು ವರ್ಷಗಳಿಂದ ಇಲ್ಲೇ ಬಿಡುಬಿಟ್ಟಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು.

17. ವಿಶೇಷ ಘಟಕ ಯೋಜನೆ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದೆ 2 ವರ್ಷಗಳಿಂದ ಸರ್ಕಾರಕ್ಕೆ ಅನುದಾನವನ್ನು ಹಿಂತಿರುಗಿಸುವ ವಿಷಯ ನಿರ್ವಾಹಕರನ್ನು ಅಮಾನತ್ತುಗೊಳಿಸಿ ತನಿಖೆಗೊಳಪಡಿಸಬೇಕು. ಈ ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ವಿನಿಯೋಗ ಮಾಡಬೇಕು ಮತ್ತು ಪ್ರಕಟನೆಗಳಿಗೆ ವ್ಯಯ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು.

18. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರಂಭವಾಗಿದ್ದು, ಕನ್ನಡ ನಾಡಿನ ಕಲೆ, ಸಾಹಿತ್ಯ ಸಂಗೀತ, ಸಂಸ್ಕೃತಿ ಮತ್ತು ನಾಡು ನುಡಿ ಸಂರಕ್ಷಣೆ ಮತ್ತು ಅಭಿವೃದ್ಧಿಯ ಧ್ಯೆಯೋದ್ಧೇಶದಿಂದ ಇತ್ತೀಚೆಗೆ ಪ್ರಭಾವಿ ಶೈಕ್ಷಣಿಕ ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ಇಲಾಖೆ ವತಿಯಿಂದ ಕೋಟಿಗಟ್ಟಲೆ ಅನುದಾನ ನೀಡುವ ಮೂಲಕ ಧ್ಯೆಯೋದ್ದೇಶವನ್ನು ಗಾಳಿಗೆ ತೂರಿದ್ದೀರಿ. ಈ ಕೂಡಲೇ ಶಿಕ್ಷಣ ಸಂಸ್ಥೆ ಮತ್ತು ಮಠಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಬೇಕು.

19. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯ ಬಗ್ಗೆ ಅರಿವು ಮತ್ತು ಕಾಳಜಿಯಿರುವ ಕಾರ್ಯದರ್ಶಿಗಳನ್ನು ನೇಮಿಸಬೇಕು.

20. ಮಹಿಳಾ ಕಲಾತಂಡ/ಕಲಾವಿದರಿಗೆ ಕಾಲಕಾಲಕ್ಕೆ ಸರ್ಕಾರದ ನಿಯಮಾನುಸಾರ 33% ಕಾರ್ಯಕ್ರಮ ಮತ್ತು ಅನುದಾನವನ್ನು ನೀಡುವುದು.

21. ಇಲಾಖೆಯ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಸರ್ಕಾರಿ ನೌಕರರು ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಸಂಘ ಸಂಸ್ಥೆಗಳ ಅನುದಾನ ಪಡೆಯುತ್ತಿರುವ ಸಂಘ ಸಂಸ್ಥೆಗಳನ್ನು ಗುರ್ತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

22. ಇಲಾಖೆಯ ಸಚಿವರಾದವರು ತಮ್ಮ ಮತಕ್ಷೇತ್ರದಲ್ಲಿ ಚಿತ್ರವಿಚಿತ್ರವಾದ ಕಾರ್ಯಕ್ರಮ ಹೆಸರಿನಲ್ಲಿ ಇಲಾಖೆಯ ಬಹುತೇಕ ಧನಸಹಾಯ ಹಣವನ್ನು ಬಳಕೆ ಮಾಡುವುದನ್ನು ನಿಲ್ಲಿಸಿ, ರಾಜ್ಯವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಚಿವರಾದವರು ಪ್ರಯತ್ನಿಸಬೇಕು.

23. ಬೇರೆ ಇಲಾಖೆಯಿಂದ ಪ್ರತಿ ನಿಯೋಜನೆಯಡಿಯಲ್ಲಿ ಬಂದಿರುವ ಅಧಿಕಾರಿ/ನೌಕರರನ್ನು ತತ್‌ಕ್ಷಣವೇ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು.

24. ನೇರ ನೇಮಕಾತಿಯಡಿ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ  ತುಂಬಬೇಕು.

ಈ ಹಕ್ಕೊತ್ತಾಯಗಳನ್ನು  ಕೂಡಲೇ ಪುರಸ್ಕರಿಸಬೇಕೆಂದು ಜನಸಾಮಾನ್ಯರ ಮುಖ್ಯಮಂತ್ರಿಗಳೆಂದು ಹೆಸರುವಾಸಿಯಾಗಿರುವ ತಾವುಗಳು ತಕ್ಷಣವೇ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು