Saturday, June 15, 2024

ಸತ್ಯ | ನ್ಯಾಯ |ಧರ್ಮ

ಸ್ಪೀಕರ್‌ ಸರ್‌, ಮಕ್ಕಳು ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪಲ್ಲ, ಆದರೆ…

ಪ್ರಿಯ ಯು ಟಿ ಖಾದರ್‌ ಸರ್‌ ನಮಸ್ಕಾರ!

“ಮಕ್ಕಳು ಶಾಲೆಯಲ್ಲಿ ಶೌಚಾಲಯ ತೊಳೆಯುವುದು ತಪ್ಪಲ್ಲ” ಎನ್ನುವ ನಿಮ್ಮ ಹೇಳಿಕೆಯನ್ನು ಪ್ರಜಾವಾಣಿಯಲ್ಲಿ ಓದಿದೆ. ಓದಿ ತೀರಾ ಆಘಾತವೇನೂ ಆಗಲಿಲ್ಲ. ಇತ್ತೀಚಿನ ನಿಮ್ಮ ಮಾತುಗಳು ಆಘಾತ ನೀಡುತ್ತಲೇ ಇರುವುದರಿಂದಾಗಿ ಇದರಲ್ಲಿ ಹೊಸದೇನೂ ಕಾಣಲಿಲ್ಲ. ಆದರೆ ಈ ಸಮಯದಲ್ಲಿ “ಶಾಲೆಯಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು” ಎನ್ನುವುದನ್ನು ಅಷ್ಟು ಸುಲಭವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ.

ವಾಟ್ಸಾಪ್‌ ಹಾಗೂ ಫೇಸ್ಬುಕ್‌ ವೇದಿಕೆಗಳಲ್ಲಿ ಜಪಾನ್‌ ದೇಶದಲ್ಲಿ ಮಕ್ಕಳಿಗೆ ಸಣ್ಣವರಿರುವಾಗಲೇ ಶೌಚಾಲಯ ಸ್ವಚ್ಛತೆಯೂ ಸೇರಿದಂತೆ ಹಲವು ಕೆಲಸಗಳನ್ನು ಶಾಲೆಯಲ್ಲಿ ಹೇಳಿಕೊಡಲಾಗುತ್ತದೆಯೆನ್ನುವ ಚಿತ್ರ ಸಮೇತ ಬರೆಹಗಳನ್ನು ನೀವೂ ಓದಿರಬಹುದು. ಮತ್ತು ಆ ಕುರಿತು ನಿಮಗೂ ಹೆಮ್ಮೆಯೆನ್ನಿಸಿರಬಹುದು.

ಅಲ್ಲದೆ ನಮ್ಮ ದೇಶದ ಪ್ರಧಾನಿಯವರೂ ಸ್ವಚ್ಛತೆಯೆನ್ನುವುದು ನನ್ನ ಪಾಲಿಗೆ ಪೂಜೆಯಿದ್ದಂತೆ ಎಂದಿದ್ದಾರೆ. ಗಾಂಧಿಯವರೂ ಶೌಚಾಲಯ ಸ್ವಚ್ಛತೆಯ ಕುರಿತು ಸಾಕಷ್ಟು ಮಾತನಾಡಿದ್ದಾರೆ. ನಮ್ಮ ಶೌಚಾಲಯಗಳನ್ನು ನಾವೇ ಸ್ವಚ್ಛಗೊಳಿಸಿಕೊಳ್ಳಬೇಕು ಎನ್ನುವ ನಿಲುವನ್ನೂ ಅವರು ಹೊಂದಿದ್ದರು. ಇರಲಿ ಅದೆಲ್ಲ ಹಳೆಯ ಮಾತಾಯಿತು.

ಈಗ ಏನು ಗೊತ್ತಾ ಸರ್?‌ ಭಾರತದಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದೆಂದರೆ ಅದೊಂದು ಕೆಲಸವಲ್ಲ. ನಮ್ಮಲ್ಲಿ ದಡ್ಡ ಮಕ್ಕಳಿಗೆ “ನೀನು ಯಾವುದಕ್ಕೂ ಲಾಯಕ್‌ ಇಲ್ಲ, ಎಲ್ಲಾದರೂ ಬಾತ್‌ ರೂಮ್‌ ತೊಳೆಯೋದಕ್ಕೆ ಹೋಗು” ಅಂತ ಸ್ಕೂಲ್‌ ಟೀಚರುಗಳೇ ಬೈತಾರೆ. ಇನ್ನೂ ಒಂದು ವಿಷಯವೆಂದರೆ ನಮ್ಮ ದೇಶದಲ್ಲಿ ಎಲ್ಲ ಕೆಲಸಗಳಿಗೂ ಒಂದೊಂದು ಜಾತಿಯಿದೆ. ಹಾಗೆಯೇ ಈ ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೂ ಜಾತಿಯಿದೆ. ನಿಮಗೆ ಇದೆಲ್ಲ ಗೊತ್ತಿಲ್ಲದೆ ಇದ್ದಿರಲಾರದು.

ಈಗ ನಿಮ್ಮ ಹೇಳಿಕೆಯ ಹಿನ್ನೆಲೆಗೆ ಹೋಗೋಣ. ನೀವು “ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವುದಕ್ಕೆ ಹಾಗೂ ಕಸ ಗುಡಿಸುವುದಕ್ಕೆ ಪ್ರತ್ಯೇಕ ಸಿಬ್ಬಂದಿ ಇಲ್ಲ. ಅಂತಹ ಕೆಲಸಗಳನ್ನು ಶಿಕ್ಷಕರು ಅಥವಾ ಶಾಲಾಭಿವೃದ್ಧಿ ಸಮಿತಿಯವರು ಮಾಡುವುದಿಲ್ಲ. ಆ ಕೆಲಸವನ್ನು ಮಕ್ಕಳು ಮಾಡುತ್ತಾರೆ. ಕೈಗವಸು ಹಾಕಿಕೊಂಡು, ಬ್ರಷ್ ಉಪಯೋಗಿಸಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ತಪ್ಪು ಅನಿಸುವುದಿಲ್ಲ. ಚಿಕ್ಕವನಿದ್ದಾಗ ನಾನೂ ಶಾಲೆಯಲ್ಲಿ ಕಸ ಗುಡಿಸಿದ್ದೆ” ಎಂದಿದ್ದೀರಿ.

ಇಲ್ಲಿ ನೀವು ನಾನೂ ಶಾಲೆಯಲ್ಲಿ ಕಸ ಗುಡಿಸಿದ್ದೆ ಎಂದಿದ್ದೀರಿ. ಆದರೆ ಶೌಚಾಲಯ ತೊಳೆದಿದ್ದೆ ಎಂದಿಲ್ಲ. ಇದಕ್ಕೆ ಎರಡು ಕಾರಣಗಳಿವೆ ಸರ್.‌ ಒಂದು ಆ ಕಾಲದಲ್ಲಿ ನಿಮ್ಮ ಶಾಲೆಯಲ್ಲಿ ಶೌಚಾಲಯ ಇದ್ದಿರುವ ಸಾಧ್ಯತೆ ಕಡಿಮೆ. ಎರಡನೆಯದು ನಿಮ್ಮ ಸಾಮಾಜಿಕ ಪ್ರಿವಿಲೇಜ್‌ ಸರ್.‌ ಹೌದು ಸರ್‌,ಶಿವಮೊಗ್ಗದಲ್ಲಿ ಆ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು ಒಂದು “ನಿರ್ದಿಷ್ಟ ಜಾತಿಗೆ” ಸೇರಿದವರು. ಮತ್ತು ಅವರು ಆ ಜಾತಿಗೆ ಸೇರಿದವರು ಎನ್ನುವ ಕಾರಣಕ್ಕಾಗಿಯೇ ಅವರ ಬಳಿ ಶೌಚ ಗುಂಡಿಯನ್ನು ಸ್ವಚ್ಛಗೊಳಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎರಡು ಘಟನೆಗಳು ಕೇವಲ ಉದಾಹರಣೆಗಳು ಮಾತ್ರ ಸರ್.‌ ಆದರೆ ದೇಶದಾದ್ಯಂತ ಇಂತಹ ಘಟನೆಗಳು ನೂರಾರು ಸಂಖ್ಯೆಯಲ್ಲಿ ವರದಿಯಾಗುತ್ತವೆ. ಹೀಗಿರುವಾಗ ನೀವು ಸುಲಭವಾಗಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸಿದರೆ ತಪ್ಪಿಲ್ಲ ಎನ್ನುತ್ತೀರಿ ಮತ್ತು ಆ ಮೂಲಕ ಒಂದು ಅಪರಾಧ ಪ್ರಕರಣವನ್ನು ಸಾಧಾರಣ ಪ್ರಕರಣ ಎನ್ನುವಂತೆ ಸಾಮಾನ್ಯೀಕರಿಸುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಿದೆಯೋ ಇಲ್ಲವೋ ತಿಳಿಯದು.

ಕರ್ನಾಟಕ, ತಮಿಳುನಾಡು ಸೇರಿದಂತೆ ಶಾಲೆಯಲ್ಲಿ ಅಡುಗೆ ಮಾಡಿದವರ ಜಾತಿಯ ಕಾರಣಕ್ಕಾಗಿ ಮಕ್ಕಳನ್ನು ಊಟ ಮಾಡದಂತೆ ಪೋಷಕರು ತಡೆದಿದ್ದಾರೆ. ತಮಿಳುನಾಡಿನ ಒಂದು ಊರಿನಲ್ಲಿ ಸೋ ಕಾಲ್ಡ್‌ ಕೆಳಜಾತಿಯ ಮಕ್ಕಳಿಗೆ ಕೈಗೆ ಬ್ಯಾಂಡ್‌ ಕಟ್ಟಿಕೊಂಡು ಬರುವಂತಹ ನಿಯಮಿವಿತ್ತು ಎಂದರೆ ನೀವು ನಂಬುತ್ತೀರಾ ಸರ್?

ಇದೊಂದು ವರದಿ ಹೇಳುವಂತೆ “ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳ ನಡುವೆ ಜಾತಿ ಘರ್ಷಣೆ, 15 ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಳ್ಳುವುದು, ದಲಿತರಿಗೆ ಅಡುಗೆ ಮಾಡಲು ಅವಕಾಶ ನೀಡದಿರುವುದು, ದಲಿತ ಮತ್ತು ದಲಿತೇತರ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸರತಿ ಸಾಲು, ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಕೂರಿಸಿರುವುದು ಮತ್ತು ಶಿಕ್ಷಕರಲ್ಲಿ ಜಾತಿ ತಾರತಮ್ಯ ಕಂಡು ಬಂದಿದೆ.” ನಿಮಗೆ ಸಮಯ ಸಿಕ್ಕಲ್ಲಿ ಈ ವರದಿಯನ್ನೂ ಓದಬಹುದು.

ಈಗ ಹೇಳಿ ಸರ್‌, ಈಗಲೂ ನೀವು ನಿಮ್ಮ ನಿಲುವಿಗೆ ಬದ್ಧರೆ? ಹೇಳಲು ಬಹಳಷ್ಟಿದೆ. ಆದರೆ ಈ ಗದ್ದಲದಲ್ಲಿ ಹೇಳಿದ್ದೆಲ್ಲವೂ ಗಾಳಿಯಲ್ಲಿಯೇ ತೇಲಿ ಹೋಗುತ್ತದೆ. ಹೇಳಿ ಪ್ರಯೋಜನವಿಲ್ಲವೆನ್ನುವ ಹತಾಶೆಯ ನಡುವೆಯೂ ನಿಮ್ಮ ಹೇಳಿಕೆಯ ಕಾರಣಕ್ಕೆ ಇಷ್ಟೆಲ್ಲ ಬರೆಯಬೇಕಾಯಿ.

ನಮಸ್ಕಾರಗಳೊಂದಿಗೆ

ಓರ್ವ ಸಾಮಾನ್ಯ ಪ್ರಜೆ

Related Articles

ಇತ್ತೀಚಿನ ಸುದ್ದಿಗಳು