Monday, November 25, 2024

ಸತ್ಯ | ನ್ಯಾಯ |ಧರ್ಮ

ಉಪಚುನಾವಣೆ ಫಲಿತಾಂಶದ ಸಂದೇಶಗಳು: ಬದಲಾದ ರಾಜಕೀಯ ಧೋರಣೆ  ಮತ್ತು ಮತದಾರರ ಮನ್ನಣೆ

ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಮತದಾರರ ಮಣೆ, ಬಿಜೆಪಿ-ಜೆಡಿಎಸ್‌ ಸೋಲಿಗೆ ಯಾರು ಹೊಣೆ?

ಲೇಖನ: ರಾಜೇಶ್‌ ಹೆಬ್ಬಾರ್

ನ್ನಪಟ್ಟಣ, ಶಿಗ್ಗಾಂವ, ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿ(ಎಸ್) ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈ ಚುನಾವಣೆಗಳು ಒಂದು ಕಡೆ ದಿಗ್ಗಜರು, ಮಾಜಿ ಮುಖ್ಯಮಂತ್ರಿಗಳು ಮತ್ತು ಅವರ ಪುತ್ರರನ್ನು ಒಳಗೊಂಡ ಹೈ-ವೋಲ್ಟೇಜ್ ಹೋರಾಟಗಳನ್ನು ಕಂಡವು, ಮತ್ತು ಇನ್ನೊಂದು ಕಡೆ ಇಡೀ ಸರ್ಕಾರಿ ಯಂತ್ರ. 

ಎರಡೂ ಕಡೆಯವರು ಅಪಾರ ಸಂಪನ್ಮೂಲಗಳು, ಭಾವನಾತ್ಮಕ ಮತ್ತು ಕೋಮುವಾದಿ ನಿರೂಪಣೆಗಳು ಹಾಗೂ ವೈಯಕ್ತಿಕ ದಾಳಿಗಳನ್ನು ಬಳಸಿಕೊಂಡು ತೀವ್ರವಾದ ಪ್ರಚಾರದಲ್ಲಿ ತೊಡಗಿಸಿಕೊಂಡರು.   ಈ ಬಿರುಸಿನ-ತುರುಸಿನ ಪೈಪೋಟಿಯಲ್ಲಿ  ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿತು ಮತ್ತು ಬಿಜೆಪಿ-ಜೆಡಿ (ಎಸ್) ಗೆ ಬಲವಾದ ಹೊಡೆತವನ್ನು ನೀಡಿತು.  ವಿಶೇಷವಾಗಿ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಅವರಿಗೆ ಈ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಮತ್ತು ಅವರ ನಾಯಕತ್ವದ ಕುರಿತು ಅನೇಕ ಪ್ರಶ್ನೆಗಳು ಏಳುವಂತೆ ಮಾಡಿದೆ.

ಈ ಗೆಲುವು ಕಾಂಗ್ರೆಸ್ಸಿನ ಸ್ಥೈರ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.  ಪ್ರತಿಪಕ್ಷಗಳು, ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಆಂತರಿಕ ಪ್ರತಿಸ್ಪರ್ಧಿಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಿರಾಳತೆಯನ್ನು ಒದಗಿಸಿದೆ. ಅವರ ಮುಖ್ಯಮಂತ್ರಿ ಸ್ಥಾನವನ್ನು ಬಲಪಡಿಸಿದೆ. ಈ ಫಲಿತಾಂಶಗಳು ಸಿದ್ದರಾಮಯ್ಯ ಅವರ ನಾಯಕತ್ವದ ವಿಶ್ವಾಸಾರ್ಹತೆಯನ್ನು ಮರು ಸಾಬೀತು ಪಡಿಸಿವೆ ಮತ್ತು  ಅಹಿಂದ ವರ್ಗದ ಮತದಾರರ ಬೆಂಬಲ ಅಚಲವಾಗಿರುವುದನ್ನು ಸ್ಪಷ್ಟಪಡಿಸಿದೆ. 

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಅವರಿಗೂ ಈ ಉಪಚುನಾವಣೆ ಅಷ್ಟೇ ನಿರ್ಣಾಯಕವಾಗಿದ್ದು, ವಿಶೇಷವಾಗಿ ಅವರ ಸಹೋದರ ಡಿ.ಕೆ. ಸುರೇಶ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರಿಂದ ಹಿನ್ನಡೆಯಿಂದ ಹೊರಬರಲು ಇದು ನೆರವಾಯಿತು. ಶಿವಕುಮಾರ್‌ ಅವರ ಬಹುಕಾಲದ ಪ್ರತಿಸ್ಪರ್ಧಿ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಇದು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕತ್ವಕ್ಕೆ ಅವರು ನಡೆಸುತ್ತಿದ್ದ ಹೋರಾಟಕ್ಕೆ ಬಲ ತಂದಿದೆ. ಭವಿಷ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅವರ ಬೇಡಿಕೆಯನ್ನು  ಇದು ಗಟ್ಟಿಗೊಳಿಸಿದೆ.

ಈ ಉಪಚುನಾವಣೆ ಫಲಿತಾಂಶಗಳು ರಾಜ್ಯದಾದ್ಯಂತ ವೈವಿಧ್ಯಮಯ ಸಂದೇಶಗಳನ್ನು ರವಾನಿಸಿದ್ದು, ಅನೇಕರು ಅವುಗಳನ್ನು ವಿವಿಧ ದೃಷ್ಟಿಕೋನಗಳ ಮೂಲಕ ವ್ಯಾಖ್ಯಾನಿಸಿದ್ದಾರೆ.

23 ನವೆಂಬರ್‌, 2024 ರಂದು ಹೊರಬಂದ ಕರ್ನಾಟಕದ ಮೂರು ಉಪಚುನಾವಣೆಯ ಫಲಿತಾಂಶಗಳನ್ನು ಅನೇಕರು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ, ಅರ್ಥೈಸಿದ್ದಾರೆ. ಕಳೆದ 2024 ರ ಲೋಕಸಭೆ ಚುನಾವಣೆಯ ನಂತರದಲ್ಲಿ ರಾಜ್ಯದಲ್ಲಿ ನಡೆದ ಬೆಳವಣಿಗೆಗಳನ್ನು ಒಮ್ಮೆ ಮೆಲಕು ಹಾಕಿದರೆ ಈ ವಿಧಾನಸಭೆ ಉಪಚುನಾವಣೆಗಳು ಅನೇಕ ರೀತಿಯ ದಿಕ್ಸೂಚಿಯನ್ನು ನೀಡುತ್ತಿವೆ. ಇದು ಸಾಮಾನ್ಯ ಉಪಚುನಾವಣೆಯಾಗಿದ್ದರೆ ಆಡಳಿತಾರೂಢ ಪಕ್ಷ ತನ್ನ ಪ್ರಾಬಲ್ಯ ಮತ್ತು ಪ್ರಭಾವದಿಂದ ಈ ಚುನಾವಣೆ ಗೆಲ್ಲುವುದು ಅಂತಹ ವಿಶೇಷ ಎಂದೆನಿಸುತ್ತಿರಲಿಲ್ಲ. ಆದರೆ ಈ ಮೂರು ಉಪಚುನಾವಣೆಗಳೂ ಯಾವ ಹಂತದಲ್ಲಿಯೂ ಏಕಪಕ್ಷೀಯವಾಗಿ ನಡೆಯಲಿಲ್ಲ. ಚನ್ನಪಟ್ಟಣದಿಂದ ಆರಂಭವಾದ ಗದ್ದಲ, ಜಿದ್ದಾಜಿದ್ದಿ ಹೋರಾಟ, ಶಿಗ್ಗಾವಿ ಸಂಡೂರು ಸೇರಿದಂತೆ ಮೂರು ಕ್ಷೇತ್ರಗಳಲ್ಲೂ ಪರಾಕಾಷ್ಠೆಯನ್ನು ತಲುಪಿದೆ. ಈ ಮೂರು ಕ್ಷೇತ್ರದ ಮತದಾರರು ಹಿಂದೆಂದೂ ಕಂಡಿರದ ಪೈಪೋಟಿ, ರಾಜಕೀಯ ಹೇಳಿಕೆಗಳ ಬಿರುಸು- ಬಾಣ, ಶಕ್ತಿ ಪ್ರದರ್ಶನ, ಹಣದ ಹೊಳೆಗೆ ಉಪಚುನಾವಣೆ ಸಾಕ್ಷಿಯಾಗಿದೆ. ಇಲ್ಲಿ ಎರಡು ಕ್ಷೇತ್ರಗಳು ಬಿಜೆಪಿ-ಜೆಡಿಎಸ್‌ ಮೈತ್ರಿಯ ಪ್ರಾಬಲ್ಯವಿರುವ ಮತ್ತು ಮಾಜಿ ಮುಖ್ಯಮಂತ್ರಿಗಳು ಸತತವಾಗಿ ಪ್ರತಿನಿಧಿಸುತ್ತಿದ್ದವು ಎಂಬುದು ಬಹು ಮುಖ್ಯದ ಸಂಗತಿ. ಈ ಚುನಾವಣೆಯಲ್ಲಿ ಅವರ ಪುತ್ರರೇ ಆಯಾ ಪಕ್ಷದ ಅಭ್ಯರ್ಥಿಗಳು ಮತ್ತು ರಾಜಕೀಯ ಉತ್ತರಾಧಿಕಾರಿಗಳು. ಇಲ್ಲಿ ಕಾಂಗ್ರೆಸ್‌ ಪಕ್ಷ ಇತ್ತೀಚಿನ ದಶಕದಲ್ಲಿ ಗೆಲುವು ಸಾಧಿಸುವುದಿರಲಿ ಮತಗಳಿಕೆಯಲ್ಲಿಯೂ ಬಾರಿ ಹಿಂದೆ ಇತ್ತು. ಇದೆಲ್ಲದರ ಆಧಾರದಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌ ಮತ್ತು ಶಿಗ್ಗಾವಿಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಬಹುತೇಕ ಮಾಧ್ಯಮ ಸಮೀಕ್ಷೆಗಳು ಕೂಡ ಇದನ್ನೇ ಬಿತ್ತರಿಸಿದ್ದವು. 

ಆದರೆ ಈ ಚುನಾವಣೆ ಸಂಪೂರ್ಣವಾಗಿ ಭಿನ್ನವಾದ ಫಲಿತಾಂಶವನ್ನು ನೀಡಿದೆ. ಈ ಕ್ಷೇತ್ರದ ಜನರು ಭಾರೀ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ತಮ್ಮದೇ ವರ್ಚಸ್ಸು, ಕಾರ್ಯಕರ್ತರ ಪಡೆ ಮತ್ತು ಕುಟುಂಬದ ಪ್ರಭಾವದಿಂದ ಕ್ಷೇತ್ರವನ್ನು ಭದ್ರಕೋಟೆಯನ್ನಾಗಿಸಿಕೊಂಡಿದ್ದ ಇಬ್ಬರು ಮುಖ್ಯಮಂತ್ರಿಗಳ ಕೋಟೆ ಛಿದ್ರವಾಗಿದೆ. ಸಾಮಾನ್ಯ ಕುಟುಂಬದಿಂದ ಬಂದ ಅಭ್ಯರ್ಥಿಗಳು ಮಾಜಿ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಕುಟುಂಬದ ಕುಡಿಗಳ ವಿರುದ್ಧ ಗೆಲುವು ಸಾಧಿಸಿದ್ದಾರೆ. 

ರಾಜಕೀಯ ವಲಯದಿಂದ ಆಚೆ ಇರುವವರು ಈ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೂ ಫಲಿತಾಂಶ ಬೀರಬಹುದಾದ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವದ ಗೆಲುವು ಎನ್ನುವ ರೀತಿಯಲ್ಲಿ ಅನೇಕರು ವ್ಯಾಖ್ಯಾನಿಸುತ್ತಿದ್ದರೂ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಯಾವ ರಾಜಕೀಯ ಪಕ್ಷಗಳೂ ಆ ಗಾಂಭೀರ್ಯತೆ ಮತ್ತು ಬದ್ಧತೆಯನ್ನು ಉಳಿಸಿಕೊಳ್ಳದಿರುವ ಕಾರಣ ಐಡಿಯಲಿಸ್ಟಿಕ್‌ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ.  

ಈ ವಿಧಾನಸಭೆ ಉಪಚುನಾವಣೆ ಮೂರು ಮುಖ್ಯ ಸಂದೇಶಗಳನ್ನು ನೀಡಿದೆ. 

1. ಒಂದು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರರಲ್ಲಿ ಇಂದಿಗೂ ಪ್ರಭಾವವನ್ನು ಉಳಿಸಿಕೊಂಡಿವೆ ಎಂದು. 

2. ಎರಡನೇಯದು,  ಸತತ ಅಪಪ್ರಚಾರ, ರಾಜಕೀಯ, ಭೃಷ್ಟಾಚಾರ, ಹಗರಣಗಳ ಅರೋಪಗಳ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವರ್ಚಸ್ಸು ಮತ್ತು ಪ್ರಭಾವಗಳನ್ನು ಉಳಿಸಿಕೊಂಡಿದ್ದಾರೆ ಮತ್ತು ಅಹಿಂದ ವರ್ಗ ಅವರ ಜೊತೆ ಅದಮ್ಯ ನಿಷ್ಠೆ ಮತ್ತು ಬೆಂಬಲದಿಂದ ನಿಂತಿದೆ, ಸದ್ಯದಲ್ಲಿ ಸಿದ್ದರಾಮಯ್ಯನವರನ್ನು ದುರ್ಬಲಗೊಳಿಸುವ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಹೊರಗಿನವರ ಮತ್ತು ಒಳಗಿನವರ ಪ್ರಯತ್ನಗಳಿಗೆ ಜನ ಮನ್ನಣೆಯನ್ನು ನೀಡಿಲ್ಲ ಎಂಬುದು. 

3. ಬಿಜೆಪಿ-ಜೆಡಿಎಸ್‌ ಆರು ತಿಂಗಳ ಸತತ ರಾಜಕೀಯ ಹೋರಾಟ, ರಾಜ್ಯಪಾಲರ ಬೆಂಬಲದಿಂದ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಸಮರ, ದಲಿತ ವಿರೋಧಿ ಪಟ್ಟಕಟ್ಟುವ ಪ್ರಚಾರ, ಗ್ಯಾರಂಟಿಗಳಿಂದ ಕರ್ನಾಟಕ ದಿವಾಳಿಯಾಗಿದೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತಗೊಂಡಿದೆ ಎಂಬ ದಿನ ನಿತ್ಯದ ಬಿಜೆಪಿ-ಜೆಡಿಎಸ್‌ ಮತ್ತು ಮುಖ್ಯವಾಹಿನಿ ಮಾಧ್ಯಮದ ನರೆಟಿವ್‌ ಮತದಾರರನ್ನು ಗಂಭೀರವಾಗಿ ಪ್ರಬಾವಿಸಿಲ್ಲ ಎಂದು.

ಗ್ಯಾಂಟಿಯೋಜನೆಗಳಿಗೆ ಕರ್ನಾಟಕ ಸರ್ಕಾರ ಸರಾಸರಿ 56,000 ಕೋಟಿಗಳಷ್ಟು ಅನುದಾನ ಅಂದರೆ ರಾಜ್ಯದ ಬಜೆಟ್‌ ನ 14% ಹಣವನ್ನು ಮೀಸಲಿರಿಸಿದೆ. ಇದು ದೇಶದಲ್ಲಿಯೇ ಅತಿದೊಡ್ಡ  ನೇರ ಲಾಭ ಹಸ್ತಾಂತರಿಸುವ (Direct Benefit Transfer-DBT) ಕಾರ್ಯಕ್ರಮ. ಈ ಐದು ಗ್ಯಾರಂಟಿ ಯೋಜನೆಯ ಮುಖಾಂತರ ರಾಜ್ಯದ 224 ಕ್ಷೇತ್ರಗಳಿಗೆ ತಲಾ 200-215 ಕೋಟಿ ರೂ ನಷ್ಟು ಅನುದಾನ ವಿತರಣೆಯಾಗುತ್ತಿದೆ. ಇಷ್ಟು ಬೃಹತ್‌ ಹಣವನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿರಿಸಿದ್ದರೂ   ಕರ್ನಾಟಕ ಜಿಎಸ್‌ಟಿ ಸಂಗ್ರಹಣೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನಕ್ಕೆ ಏರಿದೆ, ಹಾಗೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆ (GSDP)  ಶೇ 10.2% ಕ್ಕೆ ಹೆಚ್ಚಳವಾಗಿದ್ದು, ಇಲ್ಲಿ ಕೂಡ ರಾಜ್ಯ ಎರಡನೇ ಸ್ಥಾನಕ್ಕೆ ಏರಿದೆ. ಗುಜರಾತ್‌, ತಮಿಳುನಾಡು ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕವು ಈ ವರ್ಷ ಆರ್ಥಿಕ ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಮಾಹಿತಿ ತಂತ್ರಜ್ಞಾನದ ಬೆಳವಣಿಗೆ, ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಸೇರಿದಂತೆ ಅನೇಕ ಮಹತ್ತ ಮೈಲಿಗಲ್ಲು ಸ್ಥಾಪಿಸಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೂಡ ಕರ್ನಾಟಕದ ಸೂಚ್ಯಂಕ ಭಾರತದ ರಾಷ್ಟ್ರೀಯ ಸೂಚ್ಯಂಕಕ್ಕಿಂತ ಉತ್ತಮ ಗೊಂಡಿದೆ. ಈ ಅಂಕಿ ಸಂಖ್ಯೆಗಳು ಯಾವುದೋ ಖಾಸಗಿ ಸಂಸ್ಥೆಗಳು ನೀಡಿದ್ದಲ್ಲ, ಸ್ವತ: ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ನೀಡಿದ ಅಂಕಿ ಅಂಶಗಳು. 

ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ತಳಮಟ್ಟದ ಜನರ ಜೀವನದಲ್ಲಿ ಸುಧಾರಣೆಯಾದಾಗ ಮಾತ್ರ ಈ ಪ್ರಗತಿ ಸಾಧ್ಯ ಎಂಬುದು ಸಾರ್ವತ್ರಿಕ ಸತ್ಯ. ಆದರೂ ಸರ್ಕಾರ ತನ್ನನ್ನು ಪ್ರಚಾರ ಮಾಡಿಕೊಳ್ಳಲು ವಿಫಲವಾಗಿ ವಿರೋಧ ಪಕ್ಷದ ಅಪಪ್ರಚಾರಕ್ಕೆ ಎಡೆ ಮಾಡಿಕೊಟ್ಟಿದೆ. ಪ್ರಧಾನಿ  ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಗ್ಯಾರಂಟಿ ಯೋಜನೆಗಳನ್ನು ಪುಂಕಾನುಪುಂಕವಾಗಿ ವಿರೋಧಿಸಿದ್ದಾರೆ. ಆದರೆ ಚುನಾವಣೆ ಫಲಿತಾಂಶ ಅವರ ಪ್ರಚಾರಕ್ಕೆ ವ್ಯತಿರಿಕ್ತವಾಗಿದೆ. ಕಾಂಗ್ರೆಸ್‌ನ ಅನೇಕ ಮಂತ್ರಿಗಳು ಮತ್ತು ಶಾಸಕರು ಸಹಿತ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಸ್ಥಗಿತಗೊಳಿಸುವ ಮಾತನಾಡಿದ್ದರು. ಆದರೆ ಇವರೆಲ್ಲರ ಬಾಯಿ ಮುಚ್ಚಿಸುವಂತೆ ಜನರು ಗ್ಯಾರಂಟಿ ಯೋಜನೆಗಳು ಮುಂದುವರೆಯಬೇಕು ಎಂಬ ತೀರ್ಪನ್ನು ಈ ಉಪಚುನಾವಣೆಯ ಮೂಲಕ ಪರೋಕ್ಷವಾಗಿ ರವಾನಿಸಿದ್ದಾರೆ. ಬಿಜೆಪಿಯ ನಕಾರಾತ್ಮಕ ಪ್ರಚಾರಗಳು ಇಲ್ಲಿ ಕೆಲಸಮಾಡಿಲ್ಲ.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಕಾಂಗ್ರೆಸ್ ತನ್ನ ಕಲ್ಯಾಣ ಉಪಕ್ರಮಗಳಾದ ‘ಗೃಹ ಜ್ಯೋತಿ’ ಮತ್ತು ‘ಗೃಹ ಲಕ್ಷ್ಮಿ’ ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳನ್ನು ಯಶಸ್ವಿಯಾಗಿ ಪ್ರಚಾರ ಮಾಡಿತು, ಇದು ಕರ್ನಾಟಕದಾದ್ಯಂತ ಮನೆಗಳಿಗೆ ಆರ್ಥಿಕ ಪರಿಹಾರವನ್ನು ಒದಗಿಸುವ ಗುರಿ ರಾಜಕೀಯವಾಗಿ ಕಾಂಗ್ರೆಸ್ ಗೆ ಲಾಭ ತಂದುಕೊಟ್ಟಿದೆ. ಈ ಯೋಜನೆಗಳು ಮತದಾರರೊಂದಿಗೆ, ವಿಶೇಷವಾಗಿ ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳಲ್ಲಿ ಕಾಂಗ್ರೆಸ್‌ನ ಬೆಂಬಲದ ನೆಲೆಯನ್ನು ಗಟ್ಟಿಗೊಳಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಮತ್ತು ಜೆಡಿ (ಎಸ್) ಋಣಾತ್ಮಕ ಪ್ರಚಾರವನ್ನು ಆಶ್ರಯಿಸಿ, ವಕ್ಫ್ ವಿಷಯದಲ್ಲಿ ವಿವಾದವನ್ನು ಹುಟ್ಟುಹಾಕಲು ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಆಧಾರರಹಿತ ಕಾನೂನು ಮೊಕದ್ದಮೆಗಳನ್ನು ಹೂಡಲು ಪ್ರಯತ್ನಿಸಿದವು. ಆದಾಗ್ಯೂ, ಈ ತಂತ್ರಗಳು ಕಾಂಗ್ರೆಸ್‌ನ ಆಡಳಿತದ ವಿರುದ್ಧ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಕುಗ್ಗಿಸುವ ಹತಾಶ ಪ್ರಯತ್ನವಾಗಿಯಷ್ಟೆ ಉಳಿದಿದೆ. ಪ್ರಭಾವಿ ಜನಾಭಿಪ್ರಾಯ ರೂಪಿಸಲು ವಿರೋಧ ಪಕ್ಷಗಳು ಸೋತಿವೆ.

ಕರ್ನಾಟದ ಮತದಾರರಲ್ಲಿ ನಾಯಕತ್ವದ ಬದಲಾವಣೆ ಕುರಿತಂತೆ ಇಂದಿಗೂ ಒಂದು ಸಂದೇಹ ಮತ್ತು ಅಸ್ಪಷ್ಟತೆ ಕಾಡುತ್ತಿರುವುದು ಈ ಚುನಾವಣೆಯ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.  ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ-ಜೆಡಿಎಸ್‌ ಮೂಡಾ ಆರೋಪ, ಪಾದಯಾತ್ರೆ, ರಾಜ್ಯವ್ಯಾಪಿ ಹೋರಾಟ ನಡೆಸಿದರೂ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಅದಕ್ಕೆ ಸಮರ್ಥ ಪರ್ಯಾಯ ನಾಯಕತ್ವ ಯಾರದು ? ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ದೀರ್ಘಕಾಲದಿಂದ ಚುನಾವಣಾ ರಾಜಕಾರಣವು ಪಕ್ಷದ ವರ್ಚಸು ಮಾತ್ರವಲ್ಲದೇ ನಾಯಕತ್ವದ ವರ್ಚಸ್ಸು ಮತ್ತು  ಜನಬೆಂಬಲದ ಆಧಾರದಲ್ಲಿ ನಡೆದಿರುವುದು ಎಲ್ಲರಿಗೂ ಅರಿವಿರುವ ಸಂಗತಿ. ಈ ಸಂದರ್ಭದಲ್ಲಿ ಜನರು ಪರ್ಯಾಯ ನಾಯಕತ್ವದತ್ತ ದೃಷ್ಟಿ ನೆಟ್ಟಿಲ್ಲ ಎಂಬುದು ಈ ಮೂರು ಉಪಚುನಾವಣೆಗಳ ಒಟ್ಟೂ ಫಲಿತಾಂಶದ ಆಧಾರದಲ್ಲಿ ಹೇಳಬಹುದು. 

ಪ್ರತಿ ಮತ ಕ್ಷೇತ್ರದ ಸ್ಥಳೀಯ ರಾಜಕೀಯ, ಜಾತಿ ಸಮೀಕರಣ ಮತ್ತು ಅಲ್ಲಿನ ಮತದಾರರು ನಿರ್ದಿಷ್ಟ ಪಕ್ಷವನ್ನು, ಮತ್ತು ಅಭ್ಯರ್ಥಿಯನ್ನು ಬೆಂಬಲಿಸಲು ಇರುವ ಕಾರಣಗಳು ಭಿನ್ನವಾಗಿವೆ ಇದೆ. ಆದರೆ ಒಟ್ಟು ರಾಜ್ಯ ರಾಜಕಾರಣ ಸಾಗುತ್ತಿರುವ ದಿಕ್ಕು ಮತ್ತು ದಿಶೆಯಲ್ಲಿ ಈ ಉಪಚುನಾವಣೆ ರಾಜ್ಯವ್ಯಾಪಿ   ಸಾರ್ವತ್ರಿವಾಗಹುದಾದ ಅನೇಕ ಸಂದೇಶಗಳನ್ನು ನೀಡಿದೆ. 

ಲೋಕಸಭೆ ಚುನಾವಣೆ ನಂತರ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟವು ಕಾಂಗ್ರೆಸ್ ಸರ್ಕಾರದ ವಿರುದ್ಧ  ನಕಾರಾತ್ಮಕ ಪ್ರಚಾರಗಳ ಸರಣಿಯನ್ನು ಪ್ರಾರಂಭಿಸಿತು, ಸಾರ್ವಜನಿಕರ ಗಮನವನ್ನು ಸೆಳೆಯಲು ಮತ್ತು ಜನಾಭಿಪ್ರಾಯವನ್ನು ರೂಪಿಸಲು ನಡೆಸಿದ ಬಿಜೆಪಿ-ಜೆಡಿಎಸ್‌ ಪ್ರಯತ್ನ ವಿಫಲವಾಗಿದೆ. ಬದಲಾಗಿ, ಅವರ ಕೋಮು ಧ್ರುವೀಕರಣದ ತಂತ್ರಗಳು, ತಪ್ಪುದಾರಿಗೆಳೆಯುವ ನಿರೂಪಣೆಗಳು ಮತ್ತು ಭಾವನಾತ್ಮಕ ಪ್ರಚಾರ ತಂತ್ರಗಳು  ಅಂತಿಮವಾಗಿ ನೆಲಕಚ್ಚಿವೆ. ಬಿಜೆಪಿ-ಜೆಡಿ(ಎಸ್) ಮೈತ್ರಿ ಕೂಡ ಆಂತರಿಕ ಬಿರುಕುಗಳು ಈ ಚುನಾವಣೆಯಲ್ಲಿ ಬಹಿರಂಗಗೊಂಡಿದೆ. 

ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಜೆಡಿ (ಎಸ್), ಪ್ರಭಾವಿ ಸಂದೇಶವನ್ನು ನೀಡಲು ಹೆಣಗಾಡುತ್ತಿದೆ,  ವಂಶಪಾರಂಪರ್ಯ  ರಾಜಕೀಯದ ಬಗ್ಗೆ ಬೆಳೆಯುತ್ತಿರುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಲು ಜೆಡಿಎಸ್‌ ವಿಫಲವಾಗಿದೆ. ವಿಶೇಷವಾಗಿ ಎಚ್‌ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಗೆ  ನಾಯಕತ್ವವನ್ನು ಹಸ್ತಾಂತರಿಸುವ ಪ್ರಯತ್ನಗಳನ್ನು ಜನರು ಸತತವಾಗಿ ತಿರಸ್ಕರಿಸಿದ್ದಾರೆ. ಈ ಕ್ರಮವು ಕಾಂಗ್ರೆಸ್‌ನ ಬಡವರ ಪರ, ಜನಸಾಮಾನ್ಯರ ಪರ ಎಂಬ ಇಮೇಜಿಗೆ ಪ್ರಬಲ ಪರ್ಯಾಯವನ್ನು ಪ್ರಸ್ತುತಪಡಿಸಲು ಪಕ್ಷದ ಅಸಮರ್ಥತೆಯ ಜೊತೆಗೆ ಮತದಾರರಲ್ಲಿ ಪರಕೀಯತೆಯ ಭಾವನೆಗೆ ಕಾರಣವಾಯಿತು. ಬಿಜೆಪಿ ಮತದಾರರು ಸಹ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಹಿಂಜರಿಯುತ್ತಿರುವುದು ಮೈತ್ರಿಯ ಬಲವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದೆ. 

ಬಿಜೆಪಿಯಲ್ಲಿ ಸಹ ಬಿಎಸ್‌ ಯೆಡಿಯೂರಪ್ಪನವರ ನಂತರ ಪಕ್ಷದ ಹಿಡಿತ ವಿಜಯೇಂದ್ರ ಕೈಗೆ ಹೋಗುವುದನ್ನು ಆ ಪಕ್ಷದ ಮುಖಂಡರು ಬಹಿರಂಗವಾಗಿ ವಿರೋಧಿಸಿದ್ದಾರೆ. ಬಿಜೆಪಿಯ ಪ್ರಭಾವಿ ನಾಯಕ ಬಸವನಗೌಡ ಯತ್ನಾಳ್‌ ನಾಯಕತ್ವದಲ್ಲಿ ಬಿಜೆಪಿಯಲ್ಲಿಯೇ ಪರ್ಯಾಯ ಗುಂಪು ವಿಜಯೇಂದ್ರ ಪದಚ್ಯುತಿಗೆ ನಿರಂತರ ಪ್ರಯತ್ನ ನಡೆಸುತ್ತಿದ್ದು ಸರಣಿ ಸಭೆಗಳು,  ಸತತ ಹೇಳಿಕೆಗಳು ಹೊರಬರುತ್ತಿವೆ. ಅಧಿಕಾರ ಮತ್ತು ಪ್ರಾಬಲ್ಯ ಸಾಧಿಸುವ, ಕುಗ್ಗಿಸುವ ಗೌಪ್ಯ ಅಜೆಂಡಾದೊಂದಿಗೆ ನಡೆಸಿದ ಬಿಜೆಪಿಯ ಪ್ರತಿಭಟನೆ ಮತ್ತು ಹೋರಾಟಗಳು ಕೇವಲ ಮೇಲ್ಪದರಕ್ಕಷ್ಟೇ ಸೀಮಿತವಾಗಿವೆ, ಮಾಧ್ಯಮದ ಪ್ರಚಾರಕ್ಕಷ್ಟೇ ಸೀಮಿತವಾಗಿವೆ ಎಂಬುದನ್ನು ಈ ಚುನಾವಣಾ ಫಲಿತಾಂಶ ಪ್ರತಿಧ್ವನಿಸಿದೆ. ತಳಮಟ್ಟದಲ್ಲಿ ಜನರನ್ನು ಸ್ಪರ್ಷಿಸಿದೇ ಹೇಳಿಕೆಗಳ ಹೋರಾಟಗಳು ಜನಬೆಂಬಲವನ್ನು ಗಳಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಕ್ಕೆ ನೀಡಿದೆ.

ಬಿಜೆಪಿ, ವಿಶೇಷವಾಗಿ ಬಸವನಗೌಡ ಯತ್ನಾಳ್ ಮತ್ತು ಸಿ.ಟಿ.ರವಿಯಂತಹ   ನಾಯಕರು, ತಮ್ಮ ಪಕ್ಷದ ಸೋಲಿಗೆ ಮುಸ್ಲಿಮರನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿದ್ದಾರೆ, ತಮ್ಮ ಸೋಲಿಗೆ ಅವರನ್ನು ದೂಷಿಸುತ್ತಿದ್ದಾರೆ. ಇಂತಹ ಸಮಾಜದಲ್ಲಿ ವಿಷ ಭಿತ್ತುವ ಹೇಳಿಕೆಗಳು,  ಕೋಮು ವಿಭಜನೆಗಳು ಜನ ಬೆಂಬಲವನ್ನು ಒಟ್ಟುಗೂಡಿಸುವ ಬದಲು, ಮತದಾರರನ್ನು ದೂರವಿಡುತ್ತವೆ, ವಿಶೇಷವಾಗಿ ವೈವಿಧ್ಯಮಯ ಜಾತಿ ಸಮೀಕರಣ ಹೊಂದಿರುವ ಕ್ಷೇತ್ರಗಳಲ್ಲಿ ಕೋಮು ಧ್ರುವೀಕರಣದ ಮೂಲಕ ಭಾವನಾತ್ಮಕವಾಗಿ ಸಮಾಜವನ್ನು ಒಡೆಯುವ ಮೂಲಕ ಬಿಜೆಪಿ-ಜೆಡಿಎಸ್  ರಚಿಸಿದ ಬಿಜೆಪಿಯ ಪ್ರಯತ್ನಗಳು ಮತದಾರರ ಕಲ್ಪನೆಯನ್ನು ಸೆರೆಹಿಡಿಯಲು ವಿಫಲವಾಗಿದೆ. ಬಿಜೆಪಿ ಈ ಉಪಚುನಾವಣೆಯಿಂದ ಅರ್ಥಮಾಡಿಕೊಳ್ಳ ಬೇಕಾಗಿರುವದೆಂದರೆ ಜನರ ಬದುಕಿನ ಮೇಲೆ ಯಾವುದೇ ಆರ್ಥಿಕ-ಸಾಮಾಜಿಕ ಪ್ರಭಾವ ಬೀರದ, ಭರವಸೆಯನ್ನೂ ನೀಡದ ಮತೀಯ ರಾಜಕಾರಣ ಒಂದು ಪೊಳ್ಳು ತಂತ್ರ ಮತ್ತು ವಿಫಲವಾದ ಮಾದರಿ ಅಷ್ಟೇ. ದೀರ್ಘಕಾಲದಲ್ಲಿ ಇದು ಮತದಾರರನ್ನು ಪ್ರಭಾವಿಸಲು ಸಾಧ್ಯವಿಲ್ಲ. ಜನಪರ ರಾಜಕಾರಣವಲ್ಲದೇ ಮತ್ಯಾವ ಗಿಮಿಕ್‌ಗಳಿಂದ ಜನರ ಮನಸು ಗೆಲ್ಲುವುದು ಸುಲಭವಲ್ಲ ಎಂಬ ಸಂದೇಶವನ್ನು ಜನರು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ ಈ ಚುನಾವಣೆ ಮೂಲಕ ರವಾನಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಮತದಾರರು ಚುನಾವಣೆ ದಿನ ಹರಿದು ಬರುವ ಹಣಕ್ಕೆ ಮಹತ್ವ ಕೊಡದೇ ತಮ್ಮ ಗಮನವನ್ನು ಸರ್ಕಾರದ ಆರ್ಥಿಕ ನೆರವು ಯೋಜನೆ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಸ್ಪಷ್ಟವಾದ ವಿಷಯಗಳ ಮೇಲೆ ಕೇಂದ್ರೀಕರಿಸಿರುವುದು ಕಂಡು ಬಂದಿದೆ. ಬಿಜೆಪಿ-ಜೆಡಿಎಸ್ ತಮ್ಮ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಒಗ್ಗಟ್ಟಿನ ನಾಯಕತ್ವ ಮತ್ತು ಸಂಘಟಿತ ಹೋರಾಟ ನಡೆಸಲು ವಿಫಲವಾದವು. ಕುಟುಂಬದ ಕುಡಿಗಳ ಸ್ಪರ್ಧೆ ಅವರ ಪತನಕ್ಕೆ ಮತ್ತಷ್ಟು ಕೊಡುಗೆ ನೀಡಿತು, ಬಿಜೆಪಿ-ಜೆಡಿಎಸ್‌ ಪಕ್ಷದ ನಾಯಕರು ತಮ್ಮ ನಾಯಕತ್ವವನ್ನು ಬಹಿರಂಗವಾಗಿ ಟೀಕಿಸಿದರು ಮತ್ತು ಏಕೀಕೃತ ಸಂದೇಶವನ್ನು ಪ್ರಸ್ತುತಪಡಿಸಲು ವಿಫಲರಾದರು.

ರಾಜ್ಯ ಭೀಕರ ಪ್ರವಾಹ, ಬರ, ನೆರೆಯಲ್ಲಿ ನಲುಗುತ್ತಿದ್ದಾಗಲೂ ಬಿಜೆಪಿ ಸಿದ್ದರಾಮಯ್ಯನವರ ವಿರುದ್ಧ ವಯಕ್ತಿಕ ತೇಜೋವಧೆಯಲ್ಲಿ, ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತ್ತು. ಇದು ಜನರಿಗೆ ಹಿಡಿಸಿದಂತೆ ಕಾಣಿಸುತ್ತಿಲ್ಲ. ಹಾಗೇ ರಾಜ್ಯದ ಪರವಾಗಿ ಧ್ವನಿ ಎತ್ತಲು ವಿಫಲವಾದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧವೂ ಮತದಾರರಲ್ಲಿ ಅಸಮಾಧಾನದ ಹೊಗೆ ನಿಧಾನವಾಗಿ ಏಳಲು ಆರಂಭವಾಗಿರುವುದು ಸ್ಪಷ್ಟವಾಗಿದೆ. 

ಅಬ್ಬರದ ಪಾದಯಾತ್ರೆ, ನಾಯಕರ ಭಾಷಣಗಳ ನಡುವೆಯೂ ಎನ್‌ಡಿಎ  ಮೈತ್ರಿಕೂಟ ಮತದಾರರನ್ನು ತಲುಪಲು ವಿಫಲವಾಗಿದೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶ ಸ್ಪಷ್ಟ ಉದಾಹರಣೆ. ಪಾದಯಾತ್ರೆಯ ಅಬ್ಬರದ ಹೊರತಾಗಿಯೂ ಚನ್ನಪಟ್ಟಣದಲ್ಲಿ ಮೈತ್ರಿಯ ನಾಯಕನ ಪುತ್ರ ಹೀನಾಯ ಸೋಲನ್ನು ಅನುಭವಿಸುವಂತಾಯಿತು. ಈ ಸೋಲನ್ನು, ಮತದಾರರು ಕಾಂಗ್ರೆಸ್‌ನ ಆಡಳಿತ ಮಾದರಿಗೆ ಅಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಉತ್ಪ್ರೇಕ್ಷೇಯ ವ್ಯಾಖ್ಯಾನ ಕೂಡ ಅತ್ಯಂತ ಅಪಾಯಕಾರಿ.

ಚುನಾವಣೆಯ ನಂತರ, ಬಿಜೆಪಿ ನಾಯಕರ ಮುಸ್ಲಿಮರ ವಿರುದ್ಧ ಆಧಾರರಹಿತ ಆರೋಪಗಳು ಮತ್ತು ಸೋಲನ್ನು ಘನತೆಯಿಂದ ಸ್ವೀಕರಿಸಲು ವಿಫಲವಾದದ್ದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ರಚನಾತ್ಮಕ ರಾಜಕೀಯ ಚರ್ಚೆಗಿಂತ ಹೆಚ್ಚಾಗಿ ಕೋಮು ಮತ್ತು ಭಾವನಾತ್ಮಕ ಮನವಿಗಳ ಮೇಲಿನ ಅವಲಂಬನೆಯು ಅಲ್ಪಸಂಖ್ಯಾತ ಸಮುದಾಯಗಳನ್ನು ಮಾತ್ರವಲ್ಲದೆ ಬಿಜೆಪಿಯ ವಿಭಜಕ ತಂತ್ರಗಳಿಂದ ಭ್ರಮನಿರಸನಗೊಂಡ ದಲಿತ, ಹಿಂದುಳಿದ ವರ್ಗ ಮತ್ತು ಸ್ವಲ್ಪ ಪ್ರಮಾಣದ ಒಕ್ಕಲಿಗ-ಲಿಂಗಾಯಿತ ಮತದಾರರನ್ನು ದೂರ ಮಾಡಿದೆ. ಇದರ ಪರಿಣಾಮವಾಗಿ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಸರ್ಕಾರ ಪ್ರಬಲವಾಗಿ ಹೊರಹೊಮ್ಮಿದೆ, ಆಡಳಿತ, ಒಳಗೊಳ್ಳುವಿಕೆ ಮತ್ತು ಕಲ್ಯಾಣದ ಪಕ್ಷವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಈ ಉಪಚುನಾವಣೆ ಫಲಿತಾಂಶ ಕರ್ನಾಟಕ ರಾಜಕೀಯದಲ್ಲಿ ಮಹತ್ವದ ತಿರುವು ನೀಡಿದೆ. ಕಾಂಗ್ರೆಸ್   ವಿರುದ್ಧ ಅಪಪ್ರಚಾರ, ಸಿದ್ಧರಾಮಯ್ಯನವರ ವಿರುದ್ಧ ವಯಕ್ತಿಕ ತೇಜೋವಧೆಯ ಅಭಿಯಾನ ನಡೆಸಲು ಬಿಜೆಪಿ-ಜೆಡಿಎಸ್  ಪ್ರಯತ್ನಿಸಿದರೂ, ಅದರಲ್ಲಿ ಯಶಸ್ವಿಯಾಗಿಲ್ಲ. ಸಾಮಾಜಿಕ ನ್ಯಾಯ ಮತ್ತು ಗ್ಯಾರಂಟಿ ಯೋಜನೆಗಳು ಜನರ ಬೆಂಬಲ ಪಡೆದಿವೆ. ಕಲ್ಯಾಣ-ಕೇಂದ್ರಿತ ರಾಜಕೀಯದ ಮೇಲೆ ಸಾರ್ವಜನಿಕರ ನಂಬಿಕೆ ಅಚಲವಾಗಿದೆ. ಈ ಫಲಿತಾಂಶವು ಜನರ ಆಯ್ಕೆಯಲ್ಲಿ ಸ್ಪಷ್ಟತೆಯನ್ನು ತೋರಿಸುತ್ತದೆ. ಉಪಚುನಾವಣೆಗಳು ಮತದಾರರ ಬದಲಾಗುತ್ತಿರುವ ಆದ್ಯತೆಗಳನ್ನು ಪ್ರತಿಬಿಂಬಿಸುತ್ತಿದ್ದು, ಎಲ್ಲಾ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಿದೆ. ಕಲ್ಯಾಣ ಯೋಜನೆಗಳ ಯಶಸ್ಸು, ವಿಶೇಷವಾಗಿ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ, ಮತದಾರರ ನಂಬಿಕೆಗಳನ್ನು ಆರ್ಥಿಕ ಅಭಿವೃದ್ಧಿಯತ್ತ ಕೇಂದ್ರೀಕರಿಸಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಆಂತರಿಕ ಕಲಹ ಮತ್ತು ನಕಾರಾತ್ಮಕ ಪ್ರಚಾರದಿಂದ ಬಳಲಿದ್ದು, ಕೋಮು ಧ್ರುವೀಕರಣದ ಪ್ರಯತ್ನ, ವಂಶಪಾರಂಪರ್ಯದ ನಾಯಕತ್ವವನ್ನು ಬೆಳೆಸುವ ಪ್ರಯತ್ನಗಳು ವಿಫಲವಾಗಿವೆ. ಮತದಾರರು ವಿಭಜನೆಗಿಂತ ಏಕತೆ, ಪ್ರಗತಿ ಮತ್ತು ಸ್ಥಿರ ಆಡಳಿತವನ್ನು ಆಯ್ಕೆ ಮಾಡಿದ್ದಾರೆ..

ಈ ಫಲಿತಾಂಶಗಳು ಕರ್ನಾಟಕದಲ್ಲಿ ಮತದಾರರ ಮನಸ್ಥಿತಿ  ಬದಲಾಗುತ್ತಿರುವುದನ್ನು, ಮತ್ತು ಆರ್ಥಿಕ ಕಲ್ಯಾಣ, ಸಾಮಾಜಿಕ ನ್ಯಾಯ ಅಭಿವೃದ್ಧಿಯ ನಿರೂಪಣೆಗಳು ಕೋಮು, ಜಾತಿ ವಿಭಜನೆ ರಾಜಕೀಯಕ್ಕಿಂತ ಪ್ರಾಮುಖ್ಯತೆ ಪಡೆಯುತ್ತಿರುವುದನ್ನು ತೋರಿಸುತ್ತವೆ.

ಸರ್ಕಾರ ತನ್ನ ಬಣ್ಣದ ಕನಸುಗಳಿಂದ ಹೊರಬಂದು ಜನಪರ ಕಾರ್ಯಗಳಿಗೆ ಗಮನ ಹರಿಸಲು ಇದು ಉತ್ತಮ ಅವಕಾಶ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಪ್ರಮುಖ ಬದಲಾವಣೆ ತರುವ, ಕ್ರಾಂತಿಕಾರಕ ಯೋಜನೆ ಅಥವಾ ಕಾನೂನುಗಳನ್ನು ಜನರು ನಿರೀಕ್ಷಿಸುತ್ತಿದ್ದಾರೆ. ರಾಜಕೀಯ ಶಕ್ತಿ, ಇರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಂಡು, ರಾಜ್ಯದ ಅಭಿವೃದ್ಧಿಯ ದಿಕ್ಕಿನಲ್ಲಿ ಸರ್ಕಾರ ಚಿಂತನೆ ಮಾಡಿದರೆ ಸೂಕ್ತ. 

ಜಾತಿ ಜನಗಣತಿ ಬಹಿರಂಗಗೊಳಿಸುವುದು, ಎಸ್‌ಎಸ್ಟಿ ಒಳ ಮೀಸಲಾತಿಯ ಅನುಷ್ಠಾನ, ಕೃಷಿ ಸುಧಾರಣೆ, ಬಗರ್‌ ಹುಕುಂ, ಸಾಗುವಳಿ ಚೀಟಿ ವಿತರಣೆ, ಮನೆಗಳ ನಿರ್ಮಾಣ, ಬಿಪಿಎಲ್‌ ಕಾರ್ಡ್‌ಗಳ ಪರಿಷ್ಕರಣೆ ಮತ್ತು ಅಭಿವೃದ್ಧಿಗೆ ಅನುದಾನ ಹೊಂದಿಸುವಂತಹ ದೊಡ್ಡ ಸವಾಲುಗಳು ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರಿವೆ. ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ವಿರೋಧ ಪಕ್ಷಗಳ ಟೀಕೆ ಮತ್ತು ಆಂತರಿಕ ಅಸಮಾಧಾನವನ್ನು ನಿಭಾಯಿಸಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಅವಕಾಶವಾಗಿದೆ. ಆದರೆ ಜನರ ಸಮಸ್ಯೆಗಳಿಗೆ ಪ್ರಾಮುಖ್ಯತೆ ನೀಡದೆ ಅಧಿಕಾರದ ಲಾಲಸೆಯಲ್ಲಿ ಮುನ್ನುಗ್ಗಿದರೆ, ಮುಂದಿನ ಚುನಾವಣೆಗಳಲ್ಲಿ ಜನರ ಕಠಿಣ ತೀರ್ಪು ಎದುರಿಸಲೇಬಾಕುಗತ್ತದೆ.   

ಲೇಖನ: ರಾಜೇಶ್‌ ಹೆಬ್ಬಾರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page