Sunday, June 16, 2024

ಸತ್ಯ | ನ್ಯಾಯ |ಧರ್ಮ

ಹವಾಮಾನ ಬದಲಾವಣೆ ಮತ್ತು ಹಿಮಾಲಯ

ಹಿಮಾಲಯಕ್ಕಿಂತ ಗಟ್ಟಿಮುಟ್ಟಾಗಿರುವ ನಮ್ಮ ಪಶ್ಚಿಮಘಟ್ಟವೆ ಈಗ ಗಟ್ಟಿಯಾಗುಳಿದಿಲ್ಲ. ಹುಚ್ಚುಮಳೆಗೆ ತಾನೂ ಕುಸಿಯಬಲ್ಲೆ ಎಂಬುದನ್ನು ಅದು ಕೇರಳ, ಕೊಡಗು, ಸಕಲೇಶಪುರಗಳಲ್ಲಿ ತೋರಿಸಿಕೊಟ್ಟಿದೆ. ಅಷ್ಟಾದರೂ ನಾವು ಶಿರಾಡಿಯಲ್ಲಿ ಸುರಂಗ ಕೊರೆಯಲಿದ್ದೇವೆ, ಮತ್ತೆಲ್ಲೊ ಹೊಳೆ ತಿರುಗಿಸಿದ್ದೇವೆ….. ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್ ಬರೆಯುತ್ತಿರುವ ʼಜರಿಯುತ್ತಿರುವ ಜೋಶಿಮಠʼ ಸರಣಿ ಬರಹದ ಈ ಅರನೆಯ ಹಾಗೇ ಕೊನೆಯ ಭಾಗ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ತೊಂಬತ್ತರ ದಶಕದಲ್ಲಿ ನಾವೆಲ್ಲ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಲವಾರು ಚಟುವಟಿಕೆಗಳಲ್ಲಿ  ‘ಮಾನವ ಓ ನವಮಾನವ, ಬರೀ ಸ್ವಾರ್ಥಿಯಾದೆಯಲ್ಲೊ…’ ಎಂಬ ಹಾಡನ್ನು ತಪ್ಪದೆ ಹೇಳುತ್ತಿದ್ದೆವು. ಕವಿ ಅಬ್ಬಾಸ್ ಅಬ್ಬಲಗೆರೆ ಬರೆದ ಈ ಹಾಡಿನಲ್ಲಿ ‘ಅಚಲಾಚಲ ಹಿಮಾಚಲವೆ ಕುಸಿಯತೊಡಗಿದೆ’ ಎಂಬ ಸಾಲು ಬರುತ್ತದೆ. ಈ ಬರಹವನ್ನು ಬರೆಯಲು ಕುಳಿತಂದಿನಿಂದಲೂ ಈ ಸಾಲು ಮೇಲಿಂದ ಮೇಲೆ ನೆನಪಾಗುತ್ತಿತ್ತು. ಯಾವುದನ್ನು ಅಚಲವೆಂದು ನಂಬಿದ್ದೆವೊ ಅದು ಈಗ ಚಲಿಸಿ ಕುಸಿಯುತ್ತಿದೆ. ಜೊತೆಗೆ ಹವಾಮಾನ ಬದಲಾವಣೆಯ ಕೆಂಗಣ್ಣು ಹಿಮಾಲಯದ ಮೇಲೂ ಬಿದ್ದಿದೆ. ಜಗತ್ತಿನ ಅತಿ ಎತ್ತರದ ಹೆಬ್ಬೆಟ್ಟಗಳ ಸಾಲಾದ ಹಿಮಾಲಯ ಮುಂಚಿನಂತಿಲ್ಲ. ಕಾರ್ಬನ್ ಉಗುಳುವ ಎರಡು ದೊಡ್ಡ ದೇಶಗಳ ನಡುವೆ ಅದು ಸ್ಯಾಂಡ್‍ವಿಚ್ ಆಗಿದೆ. ಅದರ ಪರಿಸರದ ಹವೆಯ ಸರಾಸರಿ ತಾಪ ವರುಷದಿಂದ ವರುಷಕ್ಕೆ ಹೆಚ್ಚುತ್ತ ಸಾಗಿದೆ. ಈ ಹೆಚ್ಚುವರಿ ತಾಪಕ್ಕೆ ಮಂಜು ಕಳೆದುಕೊಂಡು ಬೆಟ್ಟಗಳು ಬೆತ್ತಲಾಗುತ್ತಿವೆ. ಶಾಶ್ವತ ಮಂಜು (perpetual snow) ಬೇಗ ಬೇಗ ಕರಗಿಹೋಗಿ ಹಿಮಾಲಯದಲ್ಲೂ ಮತ್ತು ತಪ್ಪಲಿನ ಬಯಲು ನಾಡುಗಳಲ್ಲೂ ನೀರಿನ ಕೊರತೆ ಸೃಷ್ಟಿಯಾಗುತ್ತಿದೆ. ಮಂಜು ತುಂಬಿಕೊಂಡು ವರುಷಕ್ಕೆ ಕೆಲವೇ ಸೆಂಟಿಮೀಟರ್ ದೂರ ಚಲಿಸುತ್ತಿದ್ದ ಗ್ಲೇಸಿಯರ್‍ಗಳು ಈಗ ಬೆಚ್ಚಿಬೀಳಿಸುವ ಪ್ರಮಾಣದಲ್ಲಿ ಕರಗಿ ದಿಡೀರ್ ನೆರೆಗಳಿಗೆ ಕಾರಣವಾಗುತ್ತಿವೆ. ಮೋಡಸಿಡಿತಗಳಿಂದ ಹೆಮ್ಮಳೆ ಮತ್ತು ಹೆನ್ನೆರೆಗಳು ತೀರಾ ಸಾಮಾನ್ಯವಾಗಿ ಹೋಗಿವೆ. ಹೀಗಾಗಿ ನೆಲಕುಸಿತ ಈಗ ಎಲ್ಲೆಂದರಲ್ಲಿ ಉಂಟಾಗುತ್ತದೆ. 2013ರ ಮೋಡಸಿಡಿತ ತಂದ ದುರಂತಗಳ ಸರಮಾಲೆಯ ನಂತರ ಉತ್ತರಾಖಂಡ್ ರಾಜ್ಯ ಮರಣಾಂತಿಕ ಪ್ರಮಾಣದಲ್ಲಿ ವಿಪತ್ತಿಗೆ ಒಳಗಾಗುವ ರಾಜ್ಯವೆಂದೇ ಗುರುತಿಸಲ್ಪಟ್ಟಿದೆ. ಸರ್ಕಾರದ Uttarakhand Disaster Mitigation and Management Centre ಸಂಸ್ಥೆಯೆ ತನ್ನ ವರದಿಯಲ್ಲಿ 2015ರಿಂದ 2021ರವರೆಗೆ ರಾಜ್ಯದಲ್ಲಿ ಮೋಡಸಿಡಿತ, ಗ್ಲೇಸಿಯರ್‍ಗಳು ಉಕ್ಕುವುದು, ನೆರೆ ಮತ್ತು ಭಾರೀ ಮಳೆಯ ಪ್ರಕರಣಗಳಲ್ಲಿ ಹೆಚ್ಚಳವನ್ನು ಗುರುತಿಸಿದೆ. ಈ ಗಡುವಿನಲ್ಲಿ 1,961 ನೆಲಕುಸಿತಗಳು, 7,750 ಭಾರೀ ಮಳೆ ಮತ್ತು ಮೋಡಸಿಡಿತಗಳನ್ನು ದಾಖಲಿಸಿದೆ. ಹಿಂದೆಂದೂ ಪ್ರಕರಣಗಳ ಸಂಖ್ಯೆ ಇಷ್ಟು ತೀವ್ರವಾಗಿರಲಿಲ್ಲ. ಈ ಅನಾಹುತಗಳಿಗೆ ಸಂಬಂಧಿಸಿದಂತೆ 394 ಸಾವುಗಳೂ ಸಂಭವಿಸಿವೆ. 2021ರ ಫೆಬ್ರವರಿಯಲ್ಲಿ ಜೋಶಿಮಠದ ಸನಿಹ ರಿಷಿಗಂಗಾ ಮತ್ತು ದೌಲಿಗಂಗಾ ನದಿಕಣಿವೆಗಳಲ್ಲಿ ಜರುಗಿದ ಬೆಟ್ಟಗಳ ಕುಸಿತ ಭಾರೀ ಭಯಾನಕವಾಗಿತ್ತು. 20 ಮೀಟರಿಗಿಂತಲೂ ಅಗಲವಾದ ಹೆಬ್ಬಂಡೆಗಳು 200 ಮೀಟರ್ ಎತ್ತರಕ್ಕೆ ಕಣಿವೆಗಳಲ್ಲಿ ಗೋಡೆಯಂತೆ ಪೇರಿಸಲ್ಪಟ್ಟಿದ್ದವು. ಮತ್ತಷ್ಟು ನೀರಿನ ಜೊತೆ ಉರುಳಿಹೋಗಿ ತಪೋವನ್ ವಿದ್ಯುತ್ ಯೋಜನೆಯ ಅಣೆಕಟ್ಟನ್ನು ಪೂರ್ತಿ ನಾಶ ಮಾಡಿದ್ದವು. ಬಂಡೆಗಳ ನೆರೆಗೆ ಮನುಷ್ಯ ನಿರ್ಮಿಸಿದ ಕಾಂಕ್ರೀಟ್ ಅಣೆಕಟ್ಟು ಯಾವ ಲೆಕ್ಕ?

ಹವಾಮಾನ ಬದಲಾವಣೆಯಿಂದ ಮುನಿದ ನಿಸರ್ಗದ ಜೊತೆ ಭೂಕಂಪ ಪರಿಣಿತರು ಇಡೀ ಉತ್ತರಾಖಂಡ್ ರಾಜ್ಯವೇ ಭೂಕಂಪನದ ಕಟ್ಟಕಡೆಯ Zone V ವಲಯಲ್ಲಿದೆ ಎಂಬ ಸತ್ಯವನ್ನು ಆಗಾಗ ನೆನಪಿಸುತ್ತಾರೆ. ಹೀಗಂದರೆ ನೆಲಕುಸಿತ ಮತ್ತು ಭೂಕಂಪನಕ್ಕೆ ಸಂಬಂಧಿಸಿದಂತೆ ತೀರಾ ಅಪಾಯಕಾರಿ ಸ್ಥಿತಿಯಲ್ಲಿ ಉತ್ತರಾಖಂಡ್ ಇದೆ ಎಂದರ್ಥ. ಈ ವಲಯದ ಭೂಕಂಪನದ ತೀವ್ರತೆ 9 ಮತ್ತು ಅದಕ್ಕಿಂತ ಹೆಚ್ಚಿರುತ್ತದೆ. ಇಂತಹ ಹಿನ್ನೆಲೆಯಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ದೊಡ್ಡ ಕಾಮಗಾರಿಗಳ ಜಾರಿಗೆ ಯಾಕೆ ರಚ್ಚೆ ಹಿಡಿದಿವೆಯೊ?

ಹಿಮಾಲಯಕ್ಕಿಂತ ಗಟ್ಟಿಮುಟ್ಟಾಗಿರುವ ನಮ್ಮ ಪಶ್ಚಿಮಘಟ್ಟವೆ ಈಗ ಗಟ್ಟಿಯಾಗುಳಿದಿಲ್ಲ. ಹುಚ್ಚುಮಳೆಗೆ ತಾನೂ ಕುಸಿಯಬಲ್ಲೆ ಎಂಬುದನ್ನು ಅದು ಕೇರಳ, ಕೊಡಗು, ಸಕಲೇಶಪುರಗಳಲ್ಲಿ ತೋರಿಸಿಕೊಟ್ಟಿದೆ. ಅಷ್ಟಾದರೂ ನಾವು ಶಿರಾಡಿಯಲ್ಲಿ ಸುರಂಗ ಕೊರೆಯಲಿದ್ದೇವೆ, ಮತ್ತೆಲ್ಲೊ ಹೊಳೆ ತಿರುಗಿಸಿದ್ದೇವೆ, ರಸ್ತೆ ಅಗಲಿಸಲು ಅಷ್ಟಿಷ್ಟು ಉಳಿದ ಕಾಡುಗಳಿಗೆ ಗರಗಸ ತಗಲಿಸುತ್ತಿದ್ದೇವೆ, ನೀರಿನ ಸೆಲೆಗಳನ್ನು ನಾಶಮಾಡುವ ಗಣಿಗಾರಿಕೆಯನ್ನು ಸಡಗರಿಸುತ್ತೇವೆ… ಓಹ್! ಒಂದೇ ಎರಡೇ…! ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ದೊಡ್ಡವರಾದ ನಾವು ಬಿಟ್ಟುಹೋಗುವ ಭೂಮಿಯಲ್ಲಿ ಯಾವುದೂ ಮುಂದೆ ಓರಣವಾಗಿ ಉಳಿದಿರುವುದಿಲ್ಲ.

ಕೆ.ಎಸ್.ರವಿಕುಮಾರ್, ಹಾಸನ

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ

9964604297

Related Articles

ಇತ್ತೀಚಿನ ಸುದ್ದಿಗಳು