Friday, June 14, 2024

ಸತ್ಯ | ನ್ಯಾಯ |ಧರ್ಮ

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 3

ನಮ್ಮ ನ.ದಾ.ಮೋದಿಯವರು ಪ್ರಧಾನಿಯಾದ ಬೆನ್ನಲ್ಲೆ 7 ಕೋಟಿ ರೂ. ಬೆಲೆಯ BMW ಕಾರನ್ನು ಬಳಸಿದರು. ನಂತರ 12.5 ಕೋಟಿ ರೂ. ಬೆಲೆಯ ಪೆಟ್ರೋಲ್ ಚಾಲಿತ Mercedes-Benz Maybach S650 Guard ಕಾರಿಗೆ ಬಡ್ತಿ ಹೊಂದಿದರು. ಅದು ಸುರಕ್ಷಿತವಾಗಿದ್ದರೂ ತುಂಬಾ ಕಾರ್ಬನ್ ಉಗುಳುತ್ತದೆ. ಬ್ಯಾಟರಿ ಚಾಲಿತ ವಾಹನ ಬಳಸಿ ಕಾರ್ಬನ್ ಅನ್ನು ಸೋಲಿಸುವ ಹೋರಾಟಕ್ಕೆ ಅವರು ಮನಸು ಮಾಡಬೇಕು – ಕೆ ಎಸ್‌ ರವಿಕುಮಾರ್, ವಿಜ್ಞಾನ ಲೇಖಕರು

ಪರಿಸರಕ್ಕೊಂದು ಜೀವನಶೈಲಿ

ನಮ್ಮ ನ.ದಾ.ಮೋದಿಯವರು ಪ್ರಧಾನಿಯಾದ ಬೆನ್ನಲ್ಲೆ 7 ಕೋಟಿ ರೂ. ಬೆಲೆಯ BMW ಕಾರನ್ನು ಬಳಸಿದರು. ನಂತರ 12.5 ಕೋಟಿ ರೂ. ಬೆಲೆಯ ಪೆಟ್ರೋಲ್ ಚಾಲಿತ Mercedes-Benz Maybach S650 Guard ಕಾರಿಗೆ ಬಡ್ತಿ ಹೊಂದಿದರು. ಈ ಬಗೆಯ ಕಾರುಗಳು ಕಿ.ಮೀ.ಗೆ 7 ಲೀಟರ್ ಮೈಲೇಜ್ ಕೊಡುತ್ತವೆ. ಪ್ರಧಾನಿಯವರ ಈ ಕಾರು ಒಂದು ಚಲಿಸುವ ಏಳುಸುತ್ತಿನ ಕೋಟೆಯೆ ಸರಿ, ಅಷ್ಟು ಸುರಕ್ಷಿತವಾಗಿದೆ. ಆದರೆ ಕಾರ್ಬನ್ ಉಗುಳುತ್ತದೆ. ಇದಕ್ಕೆ ಬದಲಾಗಿ ಅವರು ಒಂದು ಬ್ಯಾಟರಿ ಚಾಲಿತ ಕಾರು ಬಳಸಿದರೆ ಹೆಚ್ಚು ಉತ್ತಮವೇನೊ. ಈ ಬಗ್ಗೆ ಸಲಹೆ ಕೊಡುವಷ್ಟು ಪರಿಣಿತನಲ್ಲ ನಾನು. ಆದರೆ ದೇಶದ ಜನರಿಗೆ ಬ್ಯಾಟರಿ ಚಾಲಿತ ವಾಹನ ಬಳಸಿ ಪೆಟ್ರೋಲಿಯಮ್ ಇಂಧನಗಳ ಸತತ ಬೆಲೆ ಏರಿಕೆಯಿಂದ ಮುಕ್ತರಾಗಿ ಎಂದು ಕರೆಕೊಡುವಾಗ ನಾಯಕನೊಬ್ಬ ಆ ಕರೆ ತನಗೂ ಅನ್ವಯಯೋಗ್ಯ ಎಂದು ಅಂದುಕೊಳ್ಳುವುದು ತಪ್ಪಾಗಲಾರದು. ನ.ದಾ.ಮೋದಿಯವರಿಗೆ ಈಗಲೂ ಅವಕಾಶವಿದೆ. ಕಾರ್ಬನ್ ಕಡಿತಗೊಂಡ ಹೊಸ ಜಗತ್ತಿನೆಡೆಗೆ ಹೊಸ ದಿಕ್ಕು ತೋರುವ ಅವಕಾಶವದು. ಕಾರ್ಬನ್ ಅನ್ನು ಸೋಲಿಸುವ ಹೋರಾಟಕ್ಕೆ ಅವರು ಮನಸು ಮಾಡಬೇಕು. ಜನನಾಯಕ/ಕಿ ಬದಲಾಗದೆ ಆತನ/ಆಕೆಯ ಅನುಯಾಯಿಗಳು, ಅಭಿಮಾನಿಗಳು ಮತ್ತು ಜನಸಾಮಾನ್ಯರು ಬದಲಾಗರು.‌

ಭಾರತೀಯ ಪ್ರಧಾನಿಗಾಗಿ Mercedes-Benz Maybach S650 Guard

ಅಂದಹಾಗೆ ನಮ್ಮ ಪ್ರಧಾನಿಯವರಿಗೆ ಅವರದೇ ಸರ್ಕಾರದ ಒಂದು ಸಾರುಹ(slogan)ವನ್ನು ಅವರ ಚುನಾವಣಾ ಬ್ಯುಸಿ ಶೆಡ್ಯೂಲಿನ ನಡುವೆ ನೆನಪಿಸುವ ನನ್ನ ಅಧಿಕಪ್ರಸಂಗವನ್ನು ದಯಮಾಡಿ ಮನ್ನಿಸಬೇಕು. ಕಳೆದ ವರುಷ ಅಕ್ಟೋಬರ್ ನಲ್ಲಿ (18ರಿಂದ 20ರವರೆಗೆ) ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಭಾರತಕ್ಕೆ ಭೇಟಿ ಕೊಟ್ಟಿದ್ದರು. ನ.ದಾ.ಮೋದಿಯವರ ಜೊತೆಗಿನ ಮಾತುಕತೆಯ ವೇಳೆ ಇಬ್ಬರೂ ಕೂಡಿ ಒಕ್ಕೂಟ ಸರ್ಕಾರ ಅಣಿಗೊಳಿಸಿದ ‘LiFE’ ಅಂದರೆ ‘‘Lifestyle for Environment’ ಎಂಬ ಸಾರುಹವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದರು. ನಮ್ಮ ಜೀವನ ಶೈಲಿಯು ಭೂಪರಿಸರಕ್ಕೆ ಪೂರಕವಾಗಿರಬೇಕು ಮತ್ತು ಹವಾಮಾನ ಬದಲಾವಣೆಗೆ ಇಂಬು ಕೊಡುವಂತಿರಬಾರದು ಎಂಬ ಕಾಳಜಿ ಈ ಸಾರುಹದ ಹಿಂದಿದೆ. ಒಕ್ಕೂಟ ಸರ್ಕಾರದ ಈ ಸಾರುಹದ ಪ್ರತೀ ಬರಿಗೆಯೂ ಬಿಡುಗಡೆಗೊಳಿಸಿದ ಈ ಇಬ್ಬರಲ್ಲದೆ ಜಗದ ಪ್ರತೀಯೊಬ್ಬರಿಗೂ ಅನ್ವಯಿಸುವಂತಹುದು. ಭಾರತ ಹತ್ತಿರ ಭವಿಷ್ಯದಲ್ಲೆ ಹೆಚ್ಚೆಚ್ಚು ಹಸಿರುಶಕ್ತಿಯ ಮೂಲಗಳಿಗೆ ಒತ್ತುಕೊಟ್ಟು ಕಾರ್ಬನ್ ಕಡಿತವನ್ನು ಗಣನೀಯವಾಗಿ ಸಾಧಿಸಲಿದೆ ಎಂದು ನ.ದಾ.ಮೋದಿಯವರು ಗುಟೆರೆಸ್ ಅವರಿಗೆ ಭರವಸೆ ಕೂಡಾ ಕೊಟ್ಟಿದ್ದರು. ಹಾಗೆ ನೋಡಿದರೆ ಗ್ಲಾಸ್ಗೋ ಸಮ್ಮೇಳನದಲ್ಲೆ ಅವರು ಈ ಕುರಿತು ಒಂದು ಮುನ್ನೋಟವನ್ನು ನೀಡಿಬಂದಿದ್ದರು. ಅಂದಹಾಗೆ, ಭಾರತದ ಯಾವ ಮುಖ್ಯವಾಹಿನಿಯ ಮಾಧ್ಯಮದಲ್ಲಿ ನಮ್ಮ ನೆಲದ್ದೇ ಆದ ಈ ಸಾರುಹ ಮತ್ತು ಪ್ರಧಾನಿಯವರ ಭರವಸೆಯನ್ನು ಚರ್ಚಿಸಲಾಯಿತು? ನನಗಂತೂ ಮಾಹಿತಿಯಿಲ್ಲ, ಮನ್ನಿಸಿ.

Heavy snow fall

ಹಸಿರು ಮೂಲದ ಶಕ್ತಿ ಉತ್ಪಾದನೆಯ ಯೋಜನೆಗಳಿಗೆ ಉತ್ತೇಜನ ಕೊಡುತ್ತಿದ್ದರೂ ಕಲ್ಲಿದ್ದಿಲಿನ ಮೇಲೆ ಒಕ್ಕೂಟ ಸರ್ಕಾರಕ್ಕಿರುವ ಅಪೂರ್ವ ಆಸ್ತೆಯ ಬಗ್ಗೆ ಒಂದು ಉದಾಹರಣೆ ಕೊಡಲೇನು? ಮೊನ್ನೆಮೊನ್ನೆಯಷ್ಟೆ ಸಾರ್ವಜನಿಕ ಉದ್ಯಮವಾದ National Thermal Power Corporation (NTPC) ತನ್ನ ಕಲ್ಲಿದ್ದಿಲು ಉತ್ಪಾದನೆಯ ಸಾಧನೆಯನ್ನು ಹೊರಗೆಡಹಿದೆ. ಕಳೆದ ಒಂದೇ ವರುಷದಲ್ಲಿ ಅದು ಗಣಿಗಾರಿಕೆಯಿಂದ ಉತ್ಪಾದಿಸಿದ ಕಲ್ಲಿದ್ದಲಿನ ಪ್ರಮಾಣ ಶೇಕಡಾ 65ರಷ್ಟು ಹೆಚ್ಚಿದೆ. 2021-22ರಲ್ಲಿ 1.42 ಕೋಟಿ ಟನ್ನುಗಳಷ್ಟಿದ್ದ ಉತ್ಪಾದನೆ 2022-23ರಲ್ಲಿ 2.32 ಕೋಟಿ ಟನ್ನುಗಳಿಗೇರಿದೆ. ಈ ಹೆಚ್ಚಳವನ್ನು NTPC ಮತ್ತು ಒಕ್ಕೂಟ ಸರ್ಕಾರಗಳೆರಡೂ ಸಡಗರಿಸಿವೆ. ಹೀಗೆಯೆ ಹೆಚ್ಚುತ್ತ ಹೋದರೆ ಭಾರತ ಕಲ್ಲಿದ್ದಿಲಿನ ಆಮದನ್ನು ನಿಲ್ಲಿಸಿಯೇ ಬಿಡಬಹುದು ಎಂದು ಕಲ್ಲಿದ್ದಿಲು ಮಂತ್ರಿ ಆನಂದತುಂದಿಲರಾಗಿದ್ದಾರೆ. ಅತ್ತ ಖಾಸಗೀ ವಲಯವೂ ಹೆಚ್ಚಳವನ್ನು ದಾಖಲಿಸಿದೆ. ಕಲ್ಲಿದ್ದಿಲಿಗೆ ಕಾರ್ಬನ್ ಕಡಿತಗೊಳಿಸುವ ನಿಟ್ಟಿನಲ್ಲಿ ಎಲ್ಲ ಒಳ್ಳೆಯ ಪ್ರಯತ್ನಗಳನ್ನು ನುಚ್ಚುನುರಿಯಾಗಿಸುವ ಅಪೂರ್ವ ತಾಕತ್ತಿದೆ.

ಬೋರಿಕ್ ಮಾದರಿ

ಕಳೆದ ವರುಷ ಚಿಲಿಯ ಅಧ್ಯಕ್ಷರಾಗಿ 36ರ ಹರೆಯದ ಗೇಬ್ರಿಯೆಲ್ ಬೋರಿಕ್ ಫೊಂಟ್ ಆಯ್ಕೆಯಾದರು. ಜಗತ್ತಿನಲ್ಲೆ ಅತಿಚಿಕ್ಕ ವಯಸ್ಸಿನಲ್ಲಿ ದೇಶವೊಂದರ ಉನ್ನತ ಸ್ಥಾನಕ್ಕೆ ಚುನಾಯಿತರಾದ ಮೊದಲ ನಾಯಕ ಅವರು. ಬಹಳ ಸರಳ ಜೀವನ ಶೈಲಿಗೆ ಹೆಸರಾದ ಬೋರಿಕ್ ಅವರು ಅರಮನೆಯನ್ನೂ ನಾಚಿಸುವ ರಾಷ್ಟ್ರಪತಿ ಭವನದಲ್ಲಿ ವಾಸಿಸದೆ ಮಧ್ಯಮ ವರ್ಗದ ಮಂದಿ ಮತ್ತು ವಿದ್ಯಾರ್ಥಿಗಳೆ ಹೆಚ್ಚಿರುವ ಸ್ಯಾಂಟಿಯಾಗೋದ ಸಾಧಾರಣ ಬಡಾವಣೆಯ posh ಅಲ್ಲದ ಸಾಧಾರಣ ಮನೆಯಲ್ಲಿ ವಾಸಿಸುವ ಬಗ್ಗೆ 2022ರಲ್ಲಿ ಆಗಸ್ಟ್ 31ರ ಟೈಮ್ ಸಂಚಿಕೆ ವಿಶೇಷ ಬರಹವನ್ನು ಪ್ರಕಟಿಸಿತ್ತು. ಅದೇ ವರುಷ ನವೆಂಬರ್ 19ರಂದು ಅಲ್ ಜಜೀರಾ ಟಿವಿ ಚಾನೆಲ್ ಬೋರಿಕ್ ಅವರನ್ನು ಸಂದರ್ಶಿಸಿತು . ಸಂದರ್ಶನದ ವೇಳೆ ಹಿಂದೆ ತಾನೆಂದೂ ಸ್ವಂತಕ್ಕೆ ಕಾರು ಹೊಂದಿರದ ವಿಚಾರವನ್ನು ಅವರು ಹೊರಗೆಡಹಿದರು. ಎಲ್ಲೇ ಹೋಗುವುದಿದ್ದರೂ ಮೆಟ್ರೊ ರೈಲು ಮತ್ತು ಬಸ್ಸನ್ನೆ ಅವರು ಬಳಸುತ್ತಿದ್ದುದು. ಈಗಲೂ ಹೀಗೆಯೆ. ಈಗಲೂ ಅವರು ಕಾರುರಹಿತರೆ. ತೀರಾ ತುರ್ತಿನ ಸರ್ಕಾರಿ ಕೆಲಸಗಳಿಗಷ್ಟೆ ಸರ್ಕಾರದ ಕಾರು ಬಳಸುವುದು. ಉಳಿದಂತೆ ಸೈಕಲ್ಲಿನಲ್ಲೆ ಅವರ ಪಯಣ. ರಾಷ್ಟ್ರಪತಿ ಕಛೇರಿಗೆ ಸೈಕಲ್ ತುಳಿಯಲು ಅವರು ಹಿಂಜರಿಯುವುದಿಲ್ಲ. ಬೋರಿಕ್ ಅವರಿಗೆ ತನ್ನ ದೇಶದ ಆರ್ಥಿಕತೆಯನ್ನು ಹಸಿರು ಆರ್ಥಿಕತೆ (Green Economy)ಯಾಗಿ ಮಾರ್ಪಡಿಸುವ ಹೊಸದೊಂದು ಪರಿಕಲ್ಪನೆ ಇದೆ. ಹವಾಮಾನ ಬದಲಾವಣೆಯ ಬಗ್ಗೆ ಬಹಳ ನಿಚ್ಚಳ ಅರಿವಿರುವ ಅವರು ಕಾರ್ಬನ್ ಕಡಿತಗೊಳಿಸಿರುವ ತನ್ನ ವೈಯುಕ್ತಿಕ ಜೀವನ ಶೈಲಿಯ ಮೂಲಕ ಚಿಲಿಯ ಜನರಿಗೆ ಸಂದೇಶ ರವಾನಿಸಿದ್ದಾರೆ. ಜಗತ್ತಿನ ಎಲ್ಲ ದೇಶಗಳ ನಾಯಕರಿಗೆ ಕಾರ್ಬನ್ ವಾತಾವರಣದಲ್ಲಿ ಮಾಡುವ ಅವಾಂತರದ ಪರಿಣಾಮಗಳ ಕುರಿತು ತಿಳುವಳಿಕೆಯಿರಬೇಕು.

(ಮುಗಿಯಿತು)

ಕೆ.ಎಸ್.ರವಿಕುಮಾರ್, ಹಾಸನ

ವಿಜ್ಞಾನ ಲೇಖಕರು

ಮೊ. 9964604297

ಇದನ್ನು ಓದಿದ್ದೀರಾ |ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 1

ಹವಾಮಾನ ಬದಲಾವಣೆ: ಕಾನ್ಫರೆನ್ಸ್ ಟೇಬಲ್‍ನಿಂದ ಡಿನ್ನರ್ ಟೇಬಲ್ಲಿಗೆ | ಭಾಗ 2

Related Articles

ಇತ್ತೀಚಿನ ಸುದ್ದಿಗಳು