Home ಬೆಂಗಳೂರು ‘ದುರಂತಕ್ಕೆ ವ್ಯವಸ್ಥೆಯ ಲೋಪ ಮಾತ್ರವಲ್ಲ, ಸಮೂಹ ಸನ್ನಿಯ ಲಾಭ ಪಡೆಯಲು ಯತ್ನಿಸಿದ ವಿಪಕ್ಷಗಳ ರಾಜಕೀಯವೂ ಕಾರಣ’:...

‘ದುರಂತಕ್ಕೆ ವ್ಯವಸ್ಥೆಯ ಲೋಪ ಮಾತ್ರವಲ್ಲ, ಸಮೂಹ ಸನ್ನಿಯ ಲಾಭ ಪಡೆಯಲು ಯತ್ನಿಸಿದ ವಿಪಕ್ಷಗಳ ರಾಜಕೀಯವೂ ಕಾರಣ’: ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ತೀಕ್ಷ್ಣವಾಗಿ ತಿರುಗೇಟು ನೀಡಿದರು. ವಿರೋಧ ಪಕ್ಷಗಳ ಸದಸ್ಯರಾದ ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಅವರು, ಈ ದುರಂತಕ್ಕೆ ಕೇವಲ ಸರ್ಕಾರದ ಲೋಪ ಮಾತ್ರವಲ್ಲ, ಸಮೂಹ ಸನ್ನಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ವಿರೋಧ ಪಕ್ಷಗಳು ಯತ್ನಿಸಿದ್ದೂ ಒಂದು ಕಾರಣ ಎಂದು ಆರೋಪಿಸಿದರು.

‘ಅಬೆಟರ್’ ಪದದ ಮೇಲೆ ತೀವ್ರ ವಾಗ್ವಾದ:

ಸದಸ್ಯ ಸುರೇಶ್ ಕುಮಾರ್ ಅವರು ಸರ್ಕಾರವನ್ನು ‘ಅಬೆಟರ್’ ಎಂದು ಕರೆದಿದ್ದನ್ನು ತೀವ್ರವಾಗಿ ಖಂಡಿಸಿದ ಸಿದ್ದರಾಮಯ್ಯ, “ನಮ್ಮನ್ನು ಅಬೆಟರ್ ಎಂದು ಕರೆಯುವ ಮೊದಲು, ನಿಮ್ಮ ಬಿಜೆಪಿ ಆಡಳಿತದಲ್ಲಿ ನಡೆದ ದುರಂತಗಳಿಗೆ ನಿಮ್ಮನ್ನು ಅಬೆಟರ್ ಎಂದು ಕರೆಯುವ ಧೈರ್ಯವಿದೆಯೇ?” ಎಂದು ಪ್ರಶ್ನಿಸಿದರು. 2006ರಲ್ಲಿ ಡಾ. ರಾಜ್‌ಕುಮಾರ್ ಅವರ ನಿಧನದ ನಂತರ ನಡೆದ ಗೋಲಿಬಾರ್ ಮತ್ತು ಕಾಲ್ತುಳಿತ, ಹಾವೇರಿಯಲ್ಲಿ ಗೊಬ್ಬರಕ್ಕಾಗಿ ರೈತರ ಮೇಲೆ ಗುಂಡು ಹಾರಿಸಿದ್ದು, ಹಾಗೂ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಸಾವನ್ನಪ್ಪಿದ ಘಟನೆಗಳನ್ನು ಉಲ್ಲೇಖಿಸಿ, ಅಂದಿನ ಬಿಜೆಪಿ ಸರ್ಕಾರಗಳ ಪಾತ್ರವನ್ನು ಪ್ರಶ್ನಿಸಿದರು.

ದುರಂತಕ್ಕೆ ಸಮೂಹ ಸನ್ನಿ ಕಾರಣ:

ಕ್ರಿಕೆಟ್ ಜ್ವರ ಮತ್ತು ಅಭಿಮಾನಿಗಳ ಭಾವನಾತ್ಮಕತೆಯ ಲಾಭವನ್ನು ವಿರೋಧ ಪಕ್ಷಗಳೂ ಪಡೆದಿವೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಮೆರವಣಿಗೆಗೆ ಅನುಮತಿ ನಿರಾಕರಿಸಿದಾಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರದ ವಿರುದ್ಧ X (ಟ್ವಿಟರ್) ನಲ್ಲಿ ಟೀಕಿಸಿ, ಜನರಲ್ಲಿ ಉನ್ಮಾದವನ್ನು ಹೆಚ್ಚಿಸಲು ಪ್ರಯತ್ನಿಸಿದವು ಎಂದು ಅವರು ಹೇಳಿದರು. “ಜನರ ಉನ್ಮಾದದ ಕಿಚ್ಚಿಗೆ ನೀವುಗಳು ತುಪ್ಪ ಸುರಿದಿದ್ದೀರೋ ಇಲ್ಲವೋ?” ಎಂದು ನೇರವಾಗಿ ಪ್ರಶ್ನಿಸಿದರು.

ಸರ್ಕಾರದ ತಕ್ಷಣದ ಕ್ರಮಗಳು:

ದುರಂತ ಸಂಭವಿಸಿದ ಕೂಡಲೇ ಸರ್ಕಾರವು ಕೈಗೊಂಡ ಕ್ರಮಗಳನ್ನು ಸಿದ್ದರಾಮಯ್ಯ ವಿವರಿಸಿದರು. ತಕ್ಷಣವೇ ಬೆಂಗಳೂರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತನಿಖೆಗೆ ಆದೇಶ ನೀಡಲಾಯಿತು ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಲಾಯಿತು. ಎರಡೂ ವರದಿಗಳ ಪ್ರಕಾರ, ಆರ್.ಸಿ.ಬಿ., ಡಿ.ಎನ್.ಎ., ಕೆ.ಎಸ್.ಸಿ.ಎ. ಮತ್ತು ನಗರ ಪೊಲೀಸರ ಲೋಪಗಳಿಂದ ಈ ದುರಂತ ಸಂಭವಿಸಿದೆ ಎಂದು ವರದಿಗಳು ದೃಢಪಡಿಸಿವೆ.

ಘಟನೆಯ ನಂತರ, ಸಂಬಂಧಪಟ್ಟ ಪೊಲೀಸ್ ಕಮಿಷನರ್‌ನಿಂದ ಇನ್ಸ್‌ಪೆಕ್ಟರ್‌ವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಯಿತು. ಆರ್.ಸಿ.ಬಿ., ಡಿ.ಎನ್.ಎ. ಮತ್ತು ಕೆ.ಎಸ್.ಸಿ.ಎ. ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ವಿರೋಧ ಪಕ್ಷಗಳಂತೆ ದುರಂತ ನಡೆದ ನಂತರ ತಮ್ಮ ಸರ್ಕಾರ ಕೈಕಟ್ಟಿ ಕೂರಲಿಲ್ಲ ಎಂದು ಅವರು ವಿವರಿಸಿದರು.

You cannot copy content of this page

Exit mobile version