Saturday, September 14, 2024

ಸತ್ಯ | ನ್ಯಾಯ |ಧರ್ಮ

ಊರಿಗೆಲ್ಲ ಸಂಸ್ಕಾರ ಹೇಳುವ ಬಿಜೆಪಿ ಮೊದಲು ಗಬ್ಬೆದ್ದು ನಾರುತ್ತಿರುವ ಮುನಿರತ್ನ ಬಾಯಿಯನ್ನು ಶುದ್ಧಗೊಳಿಸಲಿ: ಸಿ ಎಮ್‌ ಸಿದ್ಧರಾಮಯ್ಯ

ಬೆಂಗಳೂರು: ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಮೇಲೆ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ವಿಷಯದ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟಿನಲ್ಲಿ ಅವರು “ಬಾಯ್ತೆಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ದಿ ಹೇಳಿ” ಎಂದು ಆಗ್ರಹಿಸಿದ್ದಾರೆ

ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣರು. ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ.

ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ ಎಂದು ಟೀಕಿಸಿದ್ದಾರೆ.

40% ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ.

ಮಾದ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯಾ? ಎಂದು ಕೇಳಿದ್ದಾರೆ

ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ. ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು ಎಂದು ಸಲಹೆಯನ್ನೂ ನೀಡಿದ್ದಾರೆ.

ಈ ಕುರಿತು ಬಿಜೆಪಿ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.

ಶಾಸಕ ಮುನಿರತ್ನ ವಿರುದ್ಧ ಎರಡು FIR: ಕೊಲೆ ಬೆದರಿಕೆ, ಜಾತಿ ನಿಂದನೆ ದೂರಿನಡಿ ಪ್ರಕರಣ ದಾಖಲು

Related Articles

ಇತ್ತೀಚಿನ ಸುದ್ದಿಗಳು

You cannot copy content of this page