Friday, August 16, 2024

ಸತ್ಯ | ನ್ಯಾಯ |ಧರ್ಮ

RTI ಕಾರ್ಯಕರ್ತರನ್ನು ಟಾರ್ಗೆಟ್‌ ಮಾಡುವುದನ್ನು ಬಿಟ್ಟು ಸಿದ್ಧರಾಮಯ್ಯ ತನಿಖೆ ಎದುರಿಸಲಿ: ಕುಮಾರಸ್ವಾಮಿ

ಹಗರಣಗಳನ್ನು ಪ್ರಶ್ನಿಸಿದ ಪ್ರತಿಪಕ್ಷಗಳನ್ನು ವಿಧಾನಮಂಡಲದಲ್ಲಿ ಹತ್ತಿಕ್ಕಲಾಗುತ್ತಿದೆ ಮತ್ತು ಸತ್ಯಶೋಧನೆಯಲ್ಲಿ ನಿರತರಾದ RTI ಕಾರ್ಯಕರ್ತರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ದಮನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

ಮುಖ್ಯಮಂತ್ರಿಗಳ ಕುಟುಂಬ ಮೈಸೂರಿನ ಮೂಡಾದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ RTI ಕಾರ್ಯಕರ್ತರನ್ನು ಕಾಂಗ್ರೆಸ್ ಗುರಿ ಮಾಡಿಕೊಂಡಿದೆ. ಆರೋಪಿತ ಸ್ಥಾನದಲ್ಲಿರುವ ಸಿಎಂ ಪರಿವಾರವನ್ನು ರಕ್ಷಿಸುವ ಏಕೈಕ ದುರುದ್ದೇಶದಿಂದ ಕಾಂಗ್ರೆಸ್ಸಿಗರು RTI ಕಾರ್ಯಕರ್ತರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತಿದೆ ಈ ನಾಟಕ ಎಂದು ಅವರು ಹೇಳಿದ್ದಾರೆ.

ಪೊಲೀಸ್ ಬಲ ಬಳಸಿ ಸತ್ಯದ ಕತ್ತು ಹಿಚುಕಲು ಸಾಧ್ಯವೇ ಇಲ್ಲ. ಹಾದಿಬೀದಿಯಲ್ಲಿ ಜನರ ಕೈಗೆ ಸಿಕ್ಕಿರುವ ದಾಖಲೆಗಳೇ ಮೂಡಾ ಹಗರಣದ ‘ಅಸಲಿ ಕೈ’ ಯಾವುದು ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದ ಮೇಲೆ ಸತ್ಯವನ್ನು ಹೆಕ್ಕಿ ತೆಗೆದ RTI ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ.

ದೂರು ನೀಡಿರುವ ಪ್ರಸಂಗ ಹೇಗಿದೆ ಎಂದರೆ; ಬದಲಿ ನಿವೇಶನ ಫಲಾನುಭವಿಗಳು ಪರೋಕ್ಷವಾಗಿ ಸತ್ಯ ಒಪ್ಪಿಕೊಂಡಂತೆ ಆಗಿದೆ. ಅಷ್ಟೇ ಅಲ್ಲ; RTI ಕಾರ್ಯಕರ್ತರ ಟಾರ್ಗೆಟ್ ಮಾಡಿದಷ್ಟು ಮೂಡಾದ ಮೂಲೆಮೂಲೆಗಳಲ್ಲಿ ಮುಗ್ಗುತ್ತಿರುವ ಸತ್ಯಗಳು ಮತ್ತಷ್ಟು ವ್ಯಘ್ರವಾಗಿ ಹೂಂಕರಿಸುತ್ತವೆ.

ಇಂಥ ವ್ಯರ್ಥ ಕೆಲಸ ಬಿಟ್ಟು ಮರ್ಯಾದೆಯಿಂದ ಸತ್ಯವನ್ನು ಎದುರಿಸುವುದು ಸಿಎಂ ಆದವರಿಗೆ ಶೋಭೆ ತರುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ನಡುವೆ ಕಾಂಗ್ರೆಸ್‌ ಕುಮಾರಸ್ವಾಮಿ ಕುಟುಂಬ ಮುಡಾದಲ್ಲಿ ಪಡೆದಿರುವ ಸೈಟುಗಳ ಕುರಿತು ಮಾಡಿರುವ ಆರೋಪದ ಕುರಿತು ಜೆಡಿಎಸ್‌ ಇದುವರೆಗೂ ಪ್ರತಿಕ್ರಿಯಿಸಿಲ್ಲ. ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ, ಪ್ರತ್ಯಾರೋಪಗಳು ಸದನದ ಒಳಗೂ, ಹೊರಗೂ ಜೋರಾಗಿಯೇ ಪ್ರತಿಧ್ವನಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page