Friday, June 14, 2024

ಸತ್ಯ | ನ್ಯಾಯ |ಧರ್ಮ

ಸಾಲು ಸಾಲು ಅಪರಾಧಗಳು: ಶ್ರೀಕಾಂತ್ ಪೂಜಾರಿ ಬಂಧನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

31 ವರ್ಷಗಳ ಹಳೆಯ ಪ್ರಕರಣವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷ ಹಾಗೂ ಹೊಸ ಪ್ರತಿಪಕ್ಷ ನಾಯಕನ ಆಯ್ಕೆಯ ನಂತರ ಅಂತಹ ಪರಿಣಾಮಕಾರಿ ವಿಚಾರದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಬಿಸಿ ಮುಟ್ಟಿಸಿರಲಿಲ್ಲ. ಆದರೆ ಈಗ 1992ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಗುಂಪು ಗಲಭೆ ಪ್ರಕರಣದಲ್ಲಿ ಬಂಧಿತನಾದ ಶ್ರೀಕಾಂತ್ ಪೂಜಾರಿ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ “ಹಿಂದೂ ಕಾರ್ಯಕರ್ತನ ಬಂಧನ”, “ಹಿಂದೂ ವಿರೋಧಿ ಸರ್ಕಾರ” ಎಂಬ ಆರೋಪ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ಪ್ರಯತ್ನದಲ್ಲಿದೆ.

ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಹುಬ್ಬಳ್ಳಿ-ಧಾರವಾಡ ಪೊಲೀಸರು ನಾಲ್ಕು ದಿನಗಳ ಹಿಂದೆ ಶ್ರೀಕಾಂತ್ ಪೂಜಾರಿಯ ಬಂಧಿಸಿದ್ದರು. ಬಂಧಿತ ಪೂಜಾರಿ 31 ವರ್ಷಗಳ ಹಿಂದೆ ರಾಮಮಂದಿರ ನಿರ್ಮಾಣದ ಆಂದೋಲನದಲ್ಲಿ ಪಾಲ್ಗೊಂಡಿದ್ದರು, ಆಗ ದಾಖಲಾದ ಪ್ರಕರಣ ಈಗ, ಅದರಲ್ಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಂತದಲ್ಲಿ ಬಂಧನವಾಗಿರುವುದು ಬಿಜೆಪಿ ಪರೋಕ್ಷವಾಗಿ ಈ ಪ್ರಕರಣದ ಲಾಭ ಪಡೆಯಲು ಹೊರಟಿರುವುದು ಬಹಿರಂಗ ರಹಸ್ಯ ಎನ್ನಬಹುದು.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ ಪೀಪಲ್‌ ಮೀಡಿಯಾ

ಅದರಲ್ಲಿ ರಾಜ್ಯ ಬಿಜೆಪಿ ಘಟಕವು ಬೆಂಗಳೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ಬಿಜೆಪಿ ಪ್ರಾಬಲ್ಯ ಹೊಂದಿರುವ ಅನೇಕ ಕಡೆಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಕ್ಕಿರುವ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದು ಬೇಡ ಎಂದು ಹಿಂದುಮುಂದು ನೋಡದೇ ಬೀದಿಗಿಳಿದಿದೆ. ಆದರೆ ರಾಮಭಕ್ತನ ಬೆನ್ನಿಗೆ ಬಿದ್ದ ಬಿಜೆಪಿ ಅಸಲಿ ವಿಚಾರವನ್ನು ಮರೆಮಾಚಿ ಏಕಮುಖವಾಗಿ ಪ್ರಕರಣವನ್ನು ರಾಜ್ಯದ ಜನತೆಯ ಮುಂದು ಪ್ರಸ್ತುತಪಡಿಸುತ್ತಿದೆ. ಇದೇ ರೀತಿಯ ಯಡವಟ್ಟುಗಳೇ ಹಿಂದೆ ಬಿಜೆಪಿ ಸೋಲಿಗೆ ಕಾರಣ ಎಂಬ ಕಟು ಸತ್ಯ ಬಿಜೆಪಿಗೆ ಅರಿವಾದಂತಿಲ್ಲ.

ಅಂದಹಾಗೆ ಈಗ ಬಿಜೆಪಿ ಯಾರನ್ನು ರಾಮಭಕ್ತ, ಹಿಂದೂ ಕಾರ್ಯಕರ್ತ, ರಾಮ ಜನ್ಮಭೂಮಿ ಹೋರಾಟಗಾರ ಎಂದು ಕರೆಯಲು ಹೊರಟಿದೆಯೋ ಆ ವ್ಯಕ್ತಿಯ ಹಿನ್ನೆಲೆಯನ್ನು ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತೆರೆದಿಟ್ಟಿದ್ದಾರೆ. ಬಂಧಿತ ಆರೋಪಿ ಶ್ರೀಕಾಂತ ಪೂಜಾರಿ ರಾಜ್ಯದಲ್ಲಿ ಅಕ್ರಮ ಕಳ್ಳಬಟ್ಟಿ ದಂಧೆ, ಮಟ್ಕಾ, ಜೂಜಾಟ ದೊಂಬಿ ಸೇರಿದಂತೆ ಸುಮಾರು 16 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಬೇಕಾಗಿರುವ ದೊಡ್ಡ ಸಮಾಜಘಾತುಕ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಅಷ್ಟೆ ಅಲ್ಲದೆ ಈತ ತಾನು ತೊಡಗಿರುವ ಅಪರಾಧಿ ಕೃತ್ಯಗಳ ರಕ್ಷಣೆಗೆ ರಾಮಭಕ್ತ, ಹಿಂದೂ ಭಕ್ತ ಎಂದು ಬಿಜೆಪಿ ಆಶ್ರಯ ಪಡೆಯುತ್ತಿದ್ದಾನೆ. ಬಿಜೆಪಿ ಪಕ್ಷ ಇಂಥವರನ್ನು ಬೆಂಬಲಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಧರ್ಮರಕ್ಷಕನ ಮುಖವಾಡ ಹೊತ್ತ ಇಂತವರನ್ನು ಹಾಗೆಯೇ ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ. ಇದು ಬಿಜೆಪಿ ಪಕ್ಷದ ಕಪಟ ಧರ್ಮಭಕ್ತಿಗೆ ಉದಾಹರಣೆಯಾಗಿ ನಿಲ್ಲಲಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ ಪೀಪಲ್‌ ಮೀಡಿಯಾ

ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಪ್ರಕರಣದ ಅಡಿಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಬೇಕು ಅಥವಾ ಇಂತಹ ವ್ಯಕ್ತಿಯ ಪರವಾಗಿ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ – ಧಾರವಾಡ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ( ಕಾನೂನು ವಿಚಾರಣಾ ಪ್ರಮಾಣಪತ್ರ ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಪರಾಧಿ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿ ಕರಸೇವಕನಾದ ಕಾರಣಕ್ಕೆ ಆತನನ್ನು ಬಿಟ್ಟರೆ ಅಥವಾ ಬಿಡಲು ಆಗ್ರಹಿಸಿದರೆ ಅದು ಸಂವಿಧಾನ ವಿರೋಧಿ ನಡೆಯಾಗಲಿದೆ. ಬಿಜೆಪಿ ಪಕ್ಷ ಹಿಂದಿನಿಂದಲೂ ಇಂತವರ ಪರವಾಗಿಯೇ ಇದ್ದು, ದೇಶದ ಕಾನೂನುಗಳನ್ನು ಗಾಳಿಗೆ ತೂರಿದೆ. ಅಷ್ಟಕ್ಕೂ ಈತನ ಮೇಲಿದ್ದ ರಾಮಮಂದಿರ ಗಲಭೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲೇ ವಜಾಗೊಳಿಸಲು ಅವಕಾಶವಿದ್ದರೂ, ಇಂತಹದ್ದೊಂದು ಸನ್ನಿವೇಶ ಉದ್ಭವಿಸುವ ಮುನ್ಸೂಚನೆ ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅವಕಾಶ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನು ಹಾಗೆಯೇ ಉಳಿಸಿಕೊಂಡಿದೆ. ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೆ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ. ಇದರಲ್ಲಿ ಪ್ರತೀಕಾರವೂ ಇಲ್ಲ, ತುಷ್ಟೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು.. ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು