Friday, October 24, 2025

ಸತ್ಯ | ನ್ಯಾಯ |ಧರ್ಮ

‘ಸಿಎಂ ಸಿದ್ದರಾಮಯ್ಯನವರಿಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ವ್ಯತ್ಯಾಸ ಗೊತ್ತಿಲ್ಲ’ – ತೇಜಸ್ವಿ ಸೂರ್ಯ ತಿರುಗೇಟು

ಬೆಂಗಳೂರು, ಅ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಮಾವಾಸ್ಯೆಗೂ ಹುಣ್ಣಿಮೆಗೂ ಇರುವ ವ್ಯತ್ಯಾಸ ತಿಳಿದಿಲ್ಲ. ಅಮಾವಾಸ್ಯೆ ದಿನವೂ ಸೂರ್ಯ ಇರುತ್ತಾನೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಮಾತನಾಡಿದ್ದಾರೆ. “ಅಮಾವಾಸ್ಯೆ ದಿನ ಚಂದ್ರ ಇರುವುದಿಲ್ಲ. ಈ ಚಂದ್ರನನ್ನು ನೋಡಿ ಪೂಜೆ ಮಾಡುವವರ ಜೊತೆ ಇದ್ದು, ಸಿದ್ದರಾಮಯ್ಯ ಅವರು ಈ ರೀತಿ ಹೇಳಿರಬೇಕು. ಸೂರ್ಯ ಯಾವಾಗಲೂ ಇರುತ್ತಾನೆ. ಸೂರ್ಯನ ಪೂಜೆ ಮಾಡುವವರಿಗೂ, ಚಂದ್ರನ ಪೂಜೆ ಮಾಡುವವರಿಗೂ ಇರುವ ವ್ಯತ್ಯಾಸ ತಿಳಿದು ಮಾತನಾಡಲಿ” ಎಂದು ಹೇಳಿದರು.

ವೈಯಕ್ತಿಕ ಟೀಕೆಗೆ ಸೂರ್ಯ ನಿರಾಕರಣೆ:

“ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ಶೋಭೆ ತಾರದ ರೀತಿಯಲ್ಲಿ ಟೀಕೆಗಳನ್ನು ಮಾಡುತ್ತಾರೆ. ನಾನು ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಹುದು. ನಾನು 24 ಲಕ್ಷ ಜನರಿಂದ ಆಯ್ಕೆಯಾಗಿದ್ದೇನೆ. ಆದರೂ, ನಾನು ವೈಯಕ್ತಿಕ ಟೀಕೆಗಳಿಗೆ ಹೋಗುವುದಿಲ್ಲ. ನಮ್ಮ ಪಕ್ಷದ ಸಂಸ್ಕೃತಿಯೂ ಸಹ ಅದಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಆರೋಪಗಳು:

“ಕರ್ನಾಟಕಕ್ಕೆ ಹಿಡಿದಿರುವ ಗ್ರಹಣವೇ ನಿಮ್ಮ ಆಡಳಿತ. ಬೆಂಗಳೂರಿನ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಗುಂಡಿ ಇಲ್ಲದ ಒಂದು ರಸ್ತೆಯೂ ಇಲ್ಲಿಲ್ಲ. ರಸ್ತೆ ಗುಂಡಿಗಳೇ ನಿಮ್ಮ ಆಡಳಿತ ವೈಖರಿಯನ್ನು ತೋರಿಸುತ್ತವೆ” ಎಂದು ಅವರು ಆಪಾದಿಸಿದರು.

ಅಲ್ಲದೆ, ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪಟ್ಟಿ ಮಾಡಿದರು:

15 ಬಿಲಿಯನ್ ಡಾಲರ್ ಹೂಡಿಕೆ ಆಂಧ್ರ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ.

2,300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾರಿಗೆ ನೌಕರರು ಸಂಬಳವಿಲ್ಲದೆ ಪ್ರತಿಭಟನೆ ಮಾಡಿದ್ದಾರೆ.

ಹಿಂದಿನ ಸರ್ಕಾರದ ಮೇಲ್ಸೇತುವೆ ಯೋಜನೆಗಳು ಇಂದಿಗೂ ಮುಗಿದಿಲ್ಲ.

ಶಿಕ್ಷಕರ ನೇಮಕಾತಿ ಆಗುತ್ತಿಲ್ಲ, ಬದಲಿಗೆ ವರ್ಗಾವಣೆ ದಂಧೆ ನಡೆಯುತ್ತಿದೆ.

ಹಣಕಾಸು ಮತ್ತು ಸಾಲದ ಬಗ್ಗೆ ವಾಗ್ದಾಳಿ:

“ಬೆಂಗಳೂರಿನಲ್ಲಿ ನಿವೇಶನಕ್ಕೆ ‘ರೇಟ್ ಚಾರ್ಟ್’ (ಭ್ರಷ್ಟಾಚಾರದ ದರಪಟ್ಟಿ) ಸಿದ್ಧವಾಗುತ್ತಿದೆ. ನೀವು ಬಿಹಾರ ಚುನಾವಣೆಯ ಫಂಡಿಂಗ್‌ನಲ್ಲಿ ನಿರತರಾಗಿದ್ದೀರಿ. ಹಿಂದಿನ ಬಿಜೆಪಿ ಸರ್ಕಾರವು ಉಳಿತಾಯದ (ಬಜೆಟ್‌) ಹಣವನ್ನು ನೀಡಿತ್ತು. ಆದರೆ ನೀವು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ. ನಿಮ್ಮ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. 100 ರೂಪಾಯಿ ಆದಾಯದಲ್ಲಿ 18 ರೂಪಾಯಿ ಬಡ್ಡಿಗೆ ಹೋಗುತ್ತಿದೆ. ವಿವಿಧ ಇಲಾಖೆಗಳಿಗೆ ಮೀಸಲಿಟ್ಟ ಹಣಕ್ಕಿಂತ ಹೆಚ್ಚು ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗುತ್ತಿದೆ. ಇನ್ನೆರಡು ವರ್ಷದಲ್ಲಿ ರಾಜ್ಯಕ್ಕೆ ಹಿಡಿದ ಗ್ರಹಣ ಬಿಡಲಿದೆ” ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, “ರಾಜಕೀಯ ನಿವೃತ್ತಿಯ ನಂತರ ನಿಮ್ಮ ಕೊಡುಗೆ ಏನು? ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ್ದಲ್ಲವೇ?” ಎಂದು ವಾಗ್ದಾಳಿ ನಡೆಸಿದರು.

ಶ್ವೇತಪತ್ರಕ್ಕೆ ಆಗ್ರಹ:

“ಆರ್ಥಿಕವಾಗಿ ನಿಮಗೆ ನಂಬಿಕೆ ಇದ್ದರೆ, ರಾಜ್ಯ ಸರ್ಕಾರವು ಕರ್ನಾಟಕ ಎಷ್ಟು ಸಾಲ ಮಾಡಿದೆ, ಎಷ್ಟು ಬಡ್ಡಿ ಕಟ್ಟುತ್ತಿದೆ, ಈಗ ಸಾಲದ ಹೊರೆ ಹೆಚ್ಚಿದೆಯೇ ಅಥವಾ ಕಡಿಮೆಯಾಗಿದೆಯೇ ಎಂಬುದರ ಬಗ್ಗೆ ಶ್ವೇತಪತ್ರವನ್ನು ಹೊರಡಿಸಲಿ” ಎಂದು ಅವರು ಸವಾಲು ಹಾಕಿದರು.

ಯತೀಂದ್ರ ಹೇಳಿಕೆ ಮತ್ತು ಸುರಂಗ ಯೋಜನೆ ಟೀಕೆ:

ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ಕಾಂಗ್ರೆಸ್‌ನಲ್ಲಿ ‘ಮ್ಯೂಸಿಕಲ್ ಚೇರ್’ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವವರೆಗೂ ಇದು ಸರಿಯಾಗುವುದಿಲ್ಲ” ಎಂದರು. “ಬೆಂಗಳೂರಿನಲ್ಲಿ ಸುರಂಗ (ಟನಲ್) ಯೋಜನೆಯೇ ಅವೈಜ್ಞಾನಿಕವಾಗಿದೆ. 25,000 ಕೋಟಿ ರೂಪಾಯಿಗಳನ್ನು ಯಾರ ಸಲುವಾಗಿ ಖರ್ಚು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page