ಎರಡು ವರ್ಷ ನಮ್ಮದೇ ಸರ್ಕಾರ ಇರತ್ತೆ: ನಾವೇ ಮುಖ್ಯಮಂತ್ರಿ ಆಗಿರ್ತೀವಿ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ಸಿ.ಎಂ ಕರೆ

ಬಾಗಲಕೋಟೆ ಮಾ 31: ರಾಜ್ಯದಲ್ಲಿ ಇನ್ನೂ ಎರಡು ವರ್ಷ ನಮ್ಮದೇ ಸರ್ಕಾರ ಇರತ್ತೆ. ನಾವೇ ಮುಖ್ಯಮಂತ್ರಿ ಆಗಿರ್ತೀವಿ. ಹೆಚ್.ವೈ.ಮೇಟಿಯವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಮುಂದುವರೆಯಲು ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿಗಳು ಐಹೊಳೆ ಮತ್ತು ಅಮೀನಘಡ ಗ್ರಾಮಗಳಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ನೀವು ಉತ್ತಮ‌ ಜನಪ್ರತಿನಿಧಿಯನ್ನು ಆರಿಸಬೇಕಾಗಿದೆ. ನಿಮ್ಮ ಪ್ರತಿನಿಧಿ ಹೇಗಿರಬೇಕೆಂದು ಸರಿಯಾಗಿ ನಿರ್ಧರಿಸಿ ಎಂದು ಸಿಎಂ ಕರೆ ನೀಡಿದರು.

ಮೋದಿಯವರು ಪ್ರಧಾನಿಯಾಗಿ 12 ವರ್ಷ ಆಯ್ತು. ಅಚ್ಚೆ ದಿನ್ ಎಂದರು, ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಎಂದರು. ಪ್ರತಿ ಕುಟುಂಬಕ್ಕೆ 15 ಲಕ್ಷ ಕೊಡ್ತೀವಿ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದರು. ಅವರು ಹೇಳಿದ್ದರಲ್ಲಿ ಒಂದನ್ನೂ ಮಾಡಲಿಲ್ಲ. ದೇಶದ ಸಾಲವನ್ನು 50 ಲಕ್ಷ ಕೋಟಿಯಿಂದ 218 ಲಕ್ಷ ಕೋಟಿಗೆ ಹೆಚ್ಚಿಸಿದ್ದೇ ಮೋದಿಯವರ ಸಾಧನೆ. ಹೀಗಿದ್ದೂ ಬಿಜೆಪಿ ನಾಯಕರು ಯಾವ ಮುಖ ಇಟ್ಟುಕೊಂಡು “ಮೋದಿ ಮುಖ ನೋಡಿ ಬಿಜೆಪಿಗೆ ಮತ ಹಾಕಿ” ಎಂದು ಕೇಳ್ತೀರಿ ಎಂದು ವ್ಯಂಗ್ಯವಾಡಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೃಷ್ಣ ಮೇಲ್ದಂಡೆ ಮತ್ತು ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದ್ದರಿಂದಲೇಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ. ನಾನು ಮುಖ್ಯಮಂತ್ರಿಯಾಗಿ ಸಭೆ ನಡೆಸಿ ಎಕರೆ ನೀರಾವರಿ ಜಮೀನಿಗೆ 40ಲಕ್ಷ, ಒಣ ಭೂಮಿಗೆ 30 ಲಕ್ಷ ರೂ ಪರಿಹಾರ ಕೊಡುವ ತೀರ್ಮಾನ ಮಾಡಿ ಕೆಲಸ ಪ್ರಾರಂಭ ಮಾಡಿದ್ದು ಮೂರು ವರ್ಷದಲ್ಲಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಹೀಗಾಗಿ ಬಿಜೆಪಿ ಗೆ ಮತ ಹಾಕಬೇಡಿ. ಎಚ್.ವೈ.ಮೇಟಿಯವರ ಒತ್ತಾಯದಂತೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ತರಲು ಶಂಕುಸ್ಥಾಪನೆ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಟ್ರಾಮಾ ಸೆಂಟರನ್ನೂ ನಾವು ಮಾಡುತ್ತೇವೆ.

ಐಹೊಳೆಯನ್ನು ಐತಿಹಾಸಿಕ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಸಾಧ್ಯವಿರುವ ಎಲ್ಲಾ ಕೆಲಸಗಳನ್ನೂ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಉಮೇಶ್ ಮೇಟಿಯವರು ಗೆದ್ದರೆ ನನ್ನ ಕೈ ಬಲಪಡಿಸಿದಂತಾಗುತ್ತದೆ. ಅಹಿಂದ ಸಮುದಾಯದ ಪ್ರಗತಿಗೆ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತದೆ. ಆದ್ದರಿಂದ ಇವರನ್ನೇ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಅಮೀನಘಡದ ಸಾರ್ವಜನಕ ಸಭೆಗೂ ಮುನ್ನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು.‌

Related Articles

ಇತ್ತೀಚಿನ ಸುದ್ದಿಗಳು