ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಹಿಂದ ಮತ ಬ್ಯಾಂಕ್ ರಾಜಕೀಯ ಮತ್ತೆ ಕೇಂದ್ರಬಿಂದುವಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ರಾಜಕಾರಣದ ಪ್ರಭಾವ ಹೈಕಮಾಂಡ್‌ಗೂ ಚೆನ್ನಾಗಿ ತಿಳಿದಿದ್ದು, ಅದೇ ಕಾರಣಕ್ಕೆ ಅವರನ್ನು ಕೇರಳ ರಾಜಕೀಯ ತಂತ್ರದಲ್ಲಿ ಪ್ರಮುಖ ಪಾತ್ರಕ್ಕೆ ಕರೆತರಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮುಂದಿನ ವರ್ಷ ಕೇರಳದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅಹಿಂದ ಮತಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಈ ತಂತ್ರದ ಭಾಗವಾಗಿ ಕರ್ನಾಟಕದ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಕೇರಳಕ್ಕೆ ಆಹ್ವಾನಿಸಲಾಗಿದೆ.
ದೆಹಲಿ ಭೇಟಿಯಲ್ಲಿ ಮಹತ್ವದ ಮಾತುಕತೆ
ಶನಿವಾರ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ದೆಹಲಿ ಪ್ರವಾಸದ ಬಳಿಕ ಅವರು ಡಿಸೆಂಬರ್ 30 ಹಾಗೂ 31ರಂದು ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ನಾರಾಯಣ ಧರ್ಮ ಸಂಘದ ವತಿಯಿಂದ ಆಯೋಜಿಸಲಾಗಿರುವ 93ನೇ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಕೆ.ಸಿ. ವೇಣುಗೋಪಾಲ್ ಸಹ ಹಾಜರಿರಲಿದ್ದಾರೆ.
ಕೇರಳದಲ್ಲೂ ಅಹಿಂದ ಸಮಾವೇಶ
ಕೇರಳದಲ್ಲಿ ಬೃಹತ್ ಅಹಿಂದ ಸಮಾವೇಶ ಹಮ್ಮಿಕೊಳ್ಳಲು ಕಾಂಗ್ರೆಸ್ ನಾಯಕತ್ವ ಮುಂದಾಗಿದ್ದು, ಈ ಸಮಾವೇಶಕ್ಕೆ ಸಿದ್ದರಾಮಯ್ಯ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಡಿಸೆಂಬರ್ 31ರಂದು ಕೇರಳದ ವರ್ಕುಳದಲ್ಲಿ ನಡೆಯಲಿರುವ ಈ ಅಹಿಂದ ಸಮಾವೇಶವು ಕೇರಳ ಕಾಂಗ್ರೆಸ್ ರಾಜಕೀಯಕ್ಕೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಕರ್ನಾಟಕ ರಾಜಕೀಯಕ್ಕೂ ಕೊಂಡಿ
ಇತ್ತ ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿ ಕುರಿತ ಚರ್ಚೆಗಳು ಮತ್ತೆ ಚುರುಕಾಗಿರುವ ನಡುವೆಯೇ, ಅಹಿಂದ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಚರ್ಚೆ ತೀವ್ರವಾಗಿದೆ. ಡಿಕೆ ಶಿವಕುಮಾರ್ ಬಣದ ವಿರುದ್ಧ ಅಹಿಂದ ಮತ ಬ್ಯಾಂಕ್‌ನ್ನು ಮತ್ತಷ್ಟು ಬಲಪಡಿಸುವ ಯತ್ನ ಇದಾಗಿರಬಹುದು ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಹೈಕಮಾಂಡ್ ಭೇಟಿ ಬಳಿಕ ಹೊಸ ತಂತ್ರ?
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾದ ಬಳಿಕ ಸಿದ್ದರಾಮಯ್ಯ ಹೊಸ ರಾಜಕೀಯ ತಂತ್ರಕ್ಕೆ ಮುಂದಾಗಿದ್ದಾರಾ? ಅಥವಾ ಪವರ್ ಶೇರಿಂಗ್ ವಿವಾದಕ್ಕೆ ಬ್ರೇಕ್ ಹಾಕಲು ಈ ಚಟುವಟಿಕೆಗಳೇ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಮೂಡಿವೆ. ಆದರೆ, ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಇನ್ನಷ್ಟು ಸಕ್ರಿಯರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
