Friday, January 2, 2026

ಸತ್ಯ | ನ್ಯಾಯ |ಧರ್ಮ

ಮರ್ಯಾದಾಗೇಡು ಹತ್ಯೆ ವಿರುದ್ಧದ ವಿಶೇಷ ಅಭಿಯಾನ; ‘ಮಾನ್ಯಾ ಕಾಯ್ದೆ’ ಬಗ್ಗೆ ಸಿಎಂ ಸಿದ್ಧರಾಮಯ್ಯ ಭರವಸೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮರ್ಯಾದಾಗೇಡು ಹತ್ಯೆಗಳನ್ನು (Honor Killing) ತಡೆಯಲು ಪ್ರತ್ಯೇಕ ಕಠಿಣ ಕಾಯ್ದೆ ರೂಪಿಸಬೇಕೆಂದು ಪತ್ರಕರ್ತ ಹಾಗೂ ಲೇಖಕ ಎನ್. ರವಿಕುಮಾರ್ (ಟೆಲೆಕ್ಸ್) ಅವರು ನಡೆಸುತ್ತಿರುವ ಅಭಿಯಾನದ ಮನವಿ ಪತ್ರವನ್ನು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲ್ಲಿಸಿದರು.

ಈ ವೇಳೆ ಪತ್ರಕರ್ತರಾದ ಶಿವಾನಂದ ತಗಡೂರು ಹಾಗೂ ಬಿ.ಎನ್. ರಮೇಶ್ ಉಪಸ್ಥಿತರಿದ್ದರು.

ಮನವಿ ಪತ್ರವನ್ನು ಸ್ವೀಕರಿಸಿ ವಿವರಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಮರ್ಯಾದಾಗೇಡು ಹತ್ಯೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ತರಲಾಗುವುದು ಎಂದು ಭರವಸೆ ನೀಡಿದರು. ಜಾತಿ ದ್ವೇಷದಿಂದ ನಡೆಯುವ ಹಿಂಸೆ, ಹತ್ಯೆಗಳಂತಹ ಅಮಾನವೀಯ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಮನವಿ ಪತ್ರದಲ್ಲಿ, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದ್ದು, ಇದು “ಜಾತಿ ಭಯೋತ್ಪಾದನೆ”ಯ ರೂಪ ಪಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಅಂತರ್‌ಜಾತಿ ವಿವಾಹಗಳನ್ನು ವಿರೋಧಿಸುವ ಮನೋಭಾವದಿಂದ ಪ್ರೀತಿಸಿದ ಯುವಕ-ಯುವತಿಯರನ್ನೇ ಅಥವಾ ದಂಪತಿಗಳನ್ನು ಮರ್ಯಾದೆಯ ಹೆಸರಿನಲ್ಲಿ ಕುಟುಂಬಸ್ಥರೇ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಉಲ್ಲೇಖಿಸಲಾಗಿದೆ.

ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ಅಂತರ್‌ಜಾತಿ ವಿವಾಹ ಮಾಡಿಕೊಂಡಿದ್ದ ತುಂಬು ಗರ್ಭಿಣಿ ಯುವತಿಯನ್ನು ಜಾತಿ ದ್ವೇಷದಿಂದ ಹತ್ಯೆ ಮಾಡಿರುವ ಘಟನೆಗೆ ಉದಾಹರಣೆ ನೀಡಲಾಗಿದ್ದು, ಇಂತಹ ಕ್ರೌರ್ಯಗಳನ್ನು “ಘೋರ ಅಪರಾಧ”ವೆಂದು ಪರಿಗಣಿಸಿ ಕಠಿಣ ಶಿಕ್ಷೆಯ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.

ಈ ಹಿನ್ನೆಲೆಯಲ್ಲಿ, ಮರ್ಯಾದಾಗೇಡು ಹತ್ಯೆಗಳಿಗೆ ಬಲಿಯಾದ ಯುವತಿ ‘ಮಾನ್ಯಾ’ ಅವರ ಹೆಸರಿನಲ್ಲಿ ಉಗ್ರ ಶಿಕ್ಷೆಯ ಕಾಯ್ದೆಯನ್ನು “ಮಾನ್ಯಾ ಕಾಯ್ದೆ” ಎಂದು ನಾಮಕರಣ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ. ಈ ಮೂಲಕ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿ ಎಂಬ ಆಶಯವನ್ನೂ ವ್ಯಕ್ತಪಡಿಸಲಾಗಿದೆ.

ಅಭಿಯಾನಕ್ಕೆ ಸಾವಿರಾರು ನಾಗರಿಕರು, ಪತ್ರಕರ್ತರು, ಲೇಖಕರು, ಸಾಹಿತಿಗಳು, ಕಲಾವಿದರು ಹಾಗೂ ಸಾಮಾಜಿಕ ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page