ಕೇಂದ್ರದ ‘ತೆರಿಗೆ ದರೋಡೆ’ಯಿಂದಾಗಿ ರಾಜ್ಯಕ್ಕೆ ಸಾಲದ ಅನಿವಾರ್ಯತೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿಗತಿ ಮತ್ತು ಸಾಲದ ಕುರಿತು ಟೀಕೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿಅಂಶಗಳ ಸಮೇತ ಖಡಕ್ ಉತ್ತರ ನೀಡಿದ್ದಾರೆ. ಕನ್ನಡಿಗರು ಪಾವತಿಸುವ ಪ್ರತಿ ಒಂದು ರೂಪಾಯಿ ತೆರಿಗೆಗೆ ಕೇಂದ್ರ ಸರ್ಕಾರ ಕೇವಲ 15 ಪೈಸೆ ಮಾತ್ರ ವಾಪಸು ನೀಡುತ್ತಿದೆ. ಇದನ್ನು “ತೆರಿಗೆ ಭಯೋತ್ಪಾದನೆ” ಎನ್ನಬೇಕೋ ಅಥವಾ “ತೆರಿಗೆ ದರೋಡೆ” ಎನ್ನಬೇಕೋ ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದಿಂದ ತೆರಿಗೆ, ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ರೂ. 4.50 ಲಕ್ಷ ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ. ಆದರೆ ರಾಜ್ಯಕ್ಕೆ ಮರಳಿ ನೀಡಿದ್ದು ಕೇವಲ ರೂ. 79,000 ಕೋಟಿ ಮಾತ್ರ. ಈ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಧ್ವನಿ ಎತ್ತಿದಾಗ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಸರ್ಕಾರದ ವಿರುದ್ಧ ಕೂಗಾಡುತ್ತಿದ್ದಾರೆ ಎಂದು ಸಿಎಂ ಕಿಡಿಕಾರಿದರು.

ಜಿಎಸ್‌ಟಿ ಸಂಗ್ರಹದ ಬೆಳವಣಿಗೆ ದರದಲ್ಲಿ ಶೇ. 17ರ ಸಾಧನೆಯೊಂದಿಗೆ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಕೇಂದ್ರಕ್ಕೆ ನೀಡಿದರೂ, ರಾಜ್ಯಕ್ಕೆ ದೊರೆಯುತ್ತಿರುವುದು ಕೇವಲ ಶೇ. 52ರಷ್ಟು ಪಾಲು ಮಾತ್ರ. ಜಿಎಸ್‌ಟಿಯ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ಅವರು ವಿವರಿಸಿದರು.

15ನೇ ಹಣಕಾಸು ಆಯೋಗದಡಿ ನ್ಯಾಯಬದ್ಧ ಪಾಲು ನೀಡದೆ ಕೇಂದ್ರ ಸರ್ಕಾರವು ಕರ್ನಾಟಕವನ್ನು ಸಾಲ ಮಾಡಲೇಬೇಕಾದ ಅಸಹಾಯಕ ಸ್ಥಿತಿಗೆ ತಳ್ಳಿದೆ. “ನಮಗೆ ಸಿಗಬೇಕಾದ ನ್ಯಾಯಯುತ ಪಾಲನ್ನು ನೀಡಿದರೆ, ಒಂದು ಪೈಸೆ ಸಾಲ ಮಾಡದೆ ರಾಜ್ಯದ ಆರ್ಥಿಕತೆಯನ್ನು ನಿರ್ವಹಿಸುವೆ” ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ರಾಜ್ಯದ ಸಾಲದ ಬಗ್ಗೆ ಮಾತನಾಡುವ ಬಸವರಾಜ ಬೊಮ್ಮಾಯಿ ಮತ್ತು ಆರ್. ಅಶೋಕ್ ಅವರಿಗೆ ಕೇಂದ್ರದ ಸಾಲ ಕಾಣಿಸುತ್ತಿಲ್ಲವೇ? ಎಂದು ಸಿಎಂ ಪ್ರಶ್ನಿಸಿದರು. 2014ರಲ್ಲಿ ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದ ಸಾಲ ರೂ. 51.06 ಲಕ್ಷ ಕೋಟಿ ಇತ್ತು, ಈಗ ಅದು ರೂ. 214 ಲಕ್ಷ ಕೋಟಿಗೆ ಏರಿದೆ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ ರೂ. 1.50 ಲಕ್ಷ ಸಾಲದ ಹೊರೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು