Wednesday, January 8, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿಗೆ ಬರುತ್ತಿರುವ ನಕ್ಸಲ್‌ ಹೋರಾಟಗಾರರು

ಚಿಕ್ಕಮಗಳೂರು ಜ,08: ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಒಪ್ಪಿದ್ದ 6 ಮಂದಿ ನಕ್ಸಲ್ ಹೋರಾಟಗಾರರನ್ನು ನೇರವಾಗಿ ಭೇಟಿಯಾಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಪೇಕ್ಷೆ ಪಟ್ಟಿದ್ದಾರೆ. ಮಾವೋವಾದಿ ಚಳವಳಿಯ ಕೊನೆಯ ನಕ್ಸಲ್ ಹೋರಾಟಗಾರರಾಗಿದ್ದ ಈ 6 ಮಂದಿ ಹೋರಾಟಗಾರರು ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕಿತ್ತು. ಆದರೆ ಮುಖ್ಯಮಂತ್ರಿಗಳು ನೇರವಾಗಿ ತಾವೇ ಅವರನ್ನು ಮುಖ್ಯವಾಹಿನಿಗೆ ಕರೆತರಲು ಅಪೇಕ್ಷಿಸಿರುವುದರಿಂದ ನಕ್ಸಲ್ ಹೋರಾಟಗಾರರು ಇಂದು ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ಭೇಟಿನೀಡಲಿದ್ದಾರೆ.

ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಿದ್ಧತೆ ನಡೆಸಿದ್ದ ನಕ್ಸಲ್ ಹೋರಾಟಗಾರರಾದ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಮಾತುಕತೆ ನಡೆಸಲಾಗಿತ್ತು. ಈ ಬಗ್ಗೆ ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದರು.

ಇನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನವರಿ 08, 2025 ಬುಧವಾರದಂದು ನಕ್ಸಲರು ಶರಣಾಗತಿಯಾಗಲು ಬಯಸ್ಸಿದ್ದರಿಂದಾಗಿ ಕಚೇರಿಯ ಸುತ್ತಲು ಮಾಧ್ಯಮಗಳು, ಜನಪರ ಸಂಘಟನೆಗಳ ನಾಯಕರು ಬೆಳಗಿನಿಂದಲೂ ಕಾಯುತ್ತಿದ್ದರು. ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಗಳೇ ಖುದ್ದು ಭೇಟಿಯಾಗುವುದಾಗಿ ತಿಳಿಸಿದ್ದರಿಂದ ನಕ್ಸಲ್ ಹೋರಾಟಗಾರರು ನೇರವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದುಬಂದಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page