Tuesday, August 12, 2025

ಸತ್ಯ | ನ್ಯಾಯ |ಧರ್ಮ

ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಕಾರ್ಯಾರಂಭಕ್ಕೆ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಹಾಸನ : ನಗರದಲ್ಲಿರುವ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರ ಕಾರ್ಯಾರಂಭ ಮತ್ತು ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಬಲೀಕರಣಕ್ಕೆ ಒತ್ತಾಯಿಸಿ ಜಿಲ್ಲಾ ದಲಿತ ಮತ್ತು ಮಾದಿಗ ದಂಡೋರ ಹಾಗೂ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೆ ವೇಳೆ ದಲಿತ ಸಂಘಟನೆಯ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್ ಮಾತನಾಡಿ, ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್.) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ‘ಜನಾರೋಗ್ಯಕ್ಕಾಗಿ ಜನಾಂದೋಲನ’ ಆರಂಭಿಸಲಾಗಿದೆ. ಜಿಲ್ಲೆಯ ದಲಿತ ಸಂಘಟನೆಗಳೂ ಇದರ ಭಾಗವಾಗಿದ್ದು, ಆಗಸ್ಟ್ 15ರ ಸ್ವಾತಂತ್ರ‍್ಯ ದಿನದಂದ ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಮುಂದೆ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ’ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಜನಾರೋಗ್ಯದ ಪರಿಸ್ಥಿತಿ ಎಷ್ಟು ತೀವ್ರವಾಗಿ ಉಲ್ಬಣಗೊಂಡಿದೆ ಎಂದರೆ, ಲಿಂಗಭೇದವಿಲ್ಲದೇ ಎಲ್ಲಾ ವಯಸ್ಸಿನವರಲ್ಲಿ ಹೃದಯಾಘಾತ, ಹೃದಯ ಸ್ತಂಭನ ಮತ್ತು ಹಠಾತ್ ಮರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇಂದಿನ ಜನಾರೋಗ್ಯ ತುರ್ತುಸ್ಥಿತಿಯಲ್ಲಿರುವುದರ ಮುನ್ಸೂಚನೆಯಾಗಿದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸಗಳು ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ಖಾಯಿಲೆಗಳು ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ. ಜಿಲ್ಲೆಯ ಜನಾರೋಗ್ಯದ ಸ್ಥಿತಿ ಹಾಗೂ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವಿನ ಅಂತರಗಳು ಹೆಚ್ಚಾಗಿವೆ. ಹೀಗಾಗಿ ಸೂಕ್ತ ಸಮಯದಲ್ಲಿ ಖಾಯಿಲೆಗಳ ಪತ್ತೆ, ಸೂಕ್ತ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ದೊರೆಯದೆ ಮರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಖಾಸಗಿಯಲ್ಲಿ ದುಬಾರಿಯಾದ ತಪಾಸಣೆ ಮತ್ತು ಚಿಕೆತ್ಸೆಗೆ ಒಳಗಾದವರು ಅತ್ಯಂತ ಆರ್ಥಿಕ ದುಸ್ಥಿತಿಗೆ ತಳ್ಳಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಜನರು ಖಾಸಗಿ ವ್ಯವಸ್ಥೆಯನ್ನು ಅವಲಂಭಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ದಮನಕೊಳಗಾಗಿರುವ ದಲಿತ ಸಮುದಾಯವು ತೀವ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.


ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಡಲಿತ ಹಾಗೂ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದ್ದೇವೆ. ಪ್ರಮುಖವಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮಿಕ್ಕ ಆಸ್ಪತ್ರೆಯ ಕಟ್ಟಡದ ತುರ್ತು ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಸದ್ಯದ ಅಂದಾಜಿನ ಪ್ರಕಾರ ಕನಿಷ್ಠ 60 ಕೋಟಿ ರೂಪಾಯಿಗಳ ಅನುದಾನದ ಅಗತ್ಯವಿದೆ. ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಗ್ಯಾಸ್ಟ್ರೋ ಎಂಟಾಲಜಿ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮಾರಣಾಂತಿಕ ರೋಗ ತಪಾಸಣೆಯ ಹತ್ತು ವಿಶೇಷ ವಿಭಾಗಗಳ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಇಲ್ಲಿ ಸಾಧ್ಯತೆ ಇದ್ದು, ಇಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸೆ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ನುರಿತ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳನ್ನು ನೇಮಕ ಮಾಡಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಕೂಲಗಳನ್ನು ತುರ್ತಾಗಿ ಒದಗಿಸಿ, ಕೂಡಲೇ ಸರ್ಕಾರವು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಹಾಗೂ ಇತರೆ ಬೇಡಿಕೆಯನ್ನು ಸರಕಾರದ ಮುಂದೆ ಆಗ್ರಹಿಸಿದರು. ಆಗಸ್ಟ್ 15 ರಂದು ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ನಡೆಯುವ ‘ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ದರಣಿ ಸತ್ಯಾಗ್ರಹ’ ನಡೆಯುವ ಸ್ಥಳಕ್ಕೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಸಂಸದರು, ಮಾನ್ಯ ಶಾಸಕರು ಮತ್ತು ಮಾನ್ಯ ಜಿಲ್ಲಾಧಿಕಾರಿಯವರು ಆಗಮಿಸಿ ನಮ್ಮ ಹಕ್ಕೊತ್ತಾಯಗಳನ್ನು ಅತ್ಯಂತ ತುರ್ತಾಗಿ ಆದ್ಯತೆಯ ಆಧಾರದಲ್ಲಿ ಈಡೇರಿಸಲು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಂಖಡರಾದ ಎಂ. ಸೋಮಶೇಖರ್, ಟಿ.ಆರ್. ವಿಜಯ್ ಕುಮಾರ್, ರಾಜಶೇಖರ್ ಹುಲಿಕಲ್, ಅಂಬುಗ ಮಲ್ಲೇಶ್, ರಮೇಶ್ ಹಾಸನ್‌, ಪೃಥ್ವಿ, ಬಿ.ಸಿ ರಾಜೇಶ್, ಹರೀಶ್ ಕಟ್ಟೆ ಬಕಾರ್ಲೆ, ಜಾವಗಲ್ ಇಂದ್ರೇಶ್, ರಾಜೇಶ್, ರವಿ ಬಸವಾಪುರ, ಮಂಜು ತೇಜೂರ್, ಕೆ.ಎಂ.ಸತೀಶ್, ಪುಟ್ಟರಾಜು, ಕಾರ್ಲೆ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page