Monday, July 28, 2025

ಸತ್ಯ | ನ್ಯಾಯ |ಧರ್ಮ

ಕರಾವಳಿ ಜಿಲ್ಲೆಗಳ ಸಂಸದರಿಗೆ ಪ್ರತಿಭಟನೆ ಬಿಸಿ: ಗೋಬ್ಯಾಕ್‌ ಎನ್ನುತ್ತಿರುವ ಕಾರ್ಯಕರ್ತರು

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಕರ್ನಾಟಕ ಕರಾವಳಿಯ ಸಂಸದರು ಎಚ್ಚರಗೊಂಡಿದ್ದಾರೆ. ಆದರೆ ಅವರು ಎಚ್ಚರಗೊಂಡಿದ್ದು ಬಹಳ ತಡವಾಗಿದೆಯೆನ್ನುವುದು ಕಾರ್ಯಕರ್ತರ ದೂರು. ಕರಾವಳಿ ಜಿಲ್ಲೆಗಳ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್‌ ಕಟೀಲ್‌, ಮತ್ತು ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಈಗ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಧಿಕ್ಕಾರವನ್ನು ಎದುರಿಸುತ್ತಿದ್ದಾರೆ.

ಈ ಮೂರು ಸಂಸದರಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರು ಕಳೆದ ಎರಡು ಮೂರು ವರ್ಷಗಳಿಂದ ಹೋದಲ್ಲೆಲ್ಲ ಮುಜುಗರ ಎದುರಿಸುತ್ತಿದ್ದಾರೆ. ನೀವಿನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಸಾಕು ಮನೆಯಲ್ಲಿ ಕುಳಿತುಕೊ‍ಳ್ಳಿ ಎಂದು ಅವರ ಪಕ್ಷದ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಬಗೆ ಬಗೆಯ ವ್ಯಂಗ್ಯದ ಪೋಸ್ಟುಗಳು ಸಹ ಬರಲಾರಂಭಿಸಿವೆ.

ಅತ್ತ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ವಿರುದ್ಧವೂ ಪ್ರತಿಭಟನೆಯ ಕಾವು ಏರುತ್ತಿದೆ. ಕಾರ್ಯಕರ್ತರು ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸುವಂತೆ ಕೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಸಮಸ್ಯೆ ಹೇಳಿಕೊಂಡ ಮೀನುಗಾರರಿಗೆ ಶೋಭಾ ಕರಂದ್ಲಾಜೆ ಗದರಿಸಿದ ಸುದ್ದಿ ಅವರ ವಿರುದ್ಧ ಪ್ರತಿಭಟನೆಗೆ ಇನ್ನಷ್ಟು ಕಾವು ಕೊಟ್ಟಿದೆ. ಶೋಭಾ ವಿರುದ್ಧ ಸೋಷಿಯಲ್‌ ಮೀಡಿಯಾ ಕ್ಯಾಂಪೇನ್‌ ಜೊತೆಗೆ ಪತ್ರ ಚಳವಳಿಯೂ ನಡೆಯುತ್ತಿದ್ದು, ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮನವಿ ಮಾಡಿ ಚಳವಳಿ ನಡೆಸಲಾಗುತ್ತಿದೆ.

ಇನ್ನು ಕಳೆದ ಇಪ್ಪತ್ತು ಚಿಲ್ಲರೆ ವರ್ಷಗಳಿಂದ ಕಾರವಾರ ಸಂಸತ್‌ ಕ್ಷೇತ್ರದ ಸದಸ್ಯರಾಗಿರುವ ಅನಂತಕುಮಾರ ಹೆಗಡೆಯವರ ಸಾಧನೆ ಮಾತ್ರ ಶೂನ್ಯ. ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಸರ್ಕಾರಿ ಮೆಡಿಕಲ್‌ ಕಾಲೇಜ್‌ ಬೇಡಿಕೆಯಾಗಿಯೇ ಉಳಿದಿದೆ. ಅಲ್ಲದೆ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಅಲ್ಲಿನ ಶಾಸಕರಾಗಲಿ, ಸಂಸದರಾಗಲೀ ಈ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಲ್ಲಿನ ಕಾರ್ಯಕರ್ತರು ಮತ್ತು ಮತದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದೆರಡು ಚುನಾವಣೆಗಳನ್ನು ಮೋದಿ ಹೆಸರಿನಲ್ಲಿ ಗೆದ್ದ ಈ ಸಂಸದರಿಗೆ ಈ ಚುನಾವಣೆ ಒಂದಷ್ಟು ಕಷ್ಟವಾಗುವ ಎಲ್ಲಾ ಸೂಚನೆಗಳು ಕಾಣುತ್ತಿದ್ದು, ಕೊನೆಯ ಕ್ಷಣದಲ್ಲಿ ಈ ಬಾರಿ ಈ ಬಾರಿ ಈ ಕ್ಷೇತ್ರಗಳಲ್ಲಿ ಅಚ್ಚರಿಯ ಅಭ್ಯರ್ಥಿಗಳು ಕಣಕ್ಕಿಳಿದರೂ ಆಶ್ಚರ್ಯವಿಲ್ಲವೆಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತ ಕಾಂಗ್ರೆಸ್‌ ಕೂಡಾ ಈ ಮೂರು ಕ್ಷೇತ್ರಗಳ ಜನರ ಅಸಮಾಧಾನವನ್ನು ತನ್ನ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹಿರಿಯ ರಾಜಕಾರಣಿ ಜಯಪ್ರಕಾಶ ಹೆಗಡೆಯವರು ಸ್ಪರ್ಧಿಸುವುದು ಬಹುತೇಕೆ ಗ್ಯಾರಂಟಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page