Friday, June 14, 2024

ಸತ್ಯ | ನ್ಯಾಯ |ಧರ್ಮ

ನಮ್ಮ ಬೊಗಸೆಗೆ ದಕ್ಕಿದ್ದಷ್ಟೇ ನಮ್ಮದು!

ನಿಖಿಲ್ ಕೋಲ್ಪೆ

ಸಾಮಾನ್ಯವಾಗಿ ಅಂಕಣಗಳಿಗೆ ಇಡಲಾಗುವ ಹೆಸರುಗಳಿಗೆ ಯಾರೂ ವಿವರಣೆಯನ್ನೇನೂ ನೀಡುವುದಿಲ್ಲ. ಆ ಕಾರಣದಿಂದಲೇ ನಾವು ಅಂತದೊದ್ದೊಂದು ಪುಟ್ಟ ವಿವರಣೆಯೊಂದಿಗೇ ಆರಂಭಿಸೋಣ. ಅಂಕಣಗಳ ಹೆಸರುಗಳು- ಅಲ್ಲಿ ಮುಂದೆ ಬರಬಹುದಾದ ವಿಷಯಗಳ ಕುರಿತು ಸೂಚನೆಯೊಂದನ್ನು ನೀಡುವುದಂತೂ ನಿಜ.

ನಾನು ಹಿಂದೆ ಕೆಲವು ಅಂಕಣಗಳನ್ನು ಬರೆದದ್ದುಂಟು. ಉದಾಹರಣೆಗೆ ೧೯೯೦ರ ಆರಂಭದ ಹೊತ್ತಿಗೆ ನಾನು “ಗೋಲದ ಸುತ್ತ ಒಂದು ಸುತ್ತು” ಎಂಬ ಒಂದು ಅಂಕಣವನ್ನು ಬರೆಯುತ್ತಿದ್ದೆ. ಹೆಸರೇ ತಿಳಿಸುವಂತೆ, ಕಳೆದೊಂದು ವಾರದಲ್ಲಿ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ, ಆಗ “ತೃತೀಯ ರಾಷ್ಟ್ರಗಳು” ಎಂದು ಕರೆಯಲಾಗುತ್ತಿದ್ದ ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ಚುಟುಕಾಗಿ ಬರೆಯುತ್ತಿದ್ದೆ. ನಮ್ಮ ಸ್ಥಳೀಯ ಪತ್ರಿಕೆಗಳಲ್ಲಿ ವಿದೇಶಿ ಸುದ್ದಿಗಳು ಕಾಟಾಚಾರಕ್ಕೆ ಪ್ರಕಟವಾಗುತ್ತಿದ್ದ, ಇಂಟರ್ನೆಟ್ ಇತ್ಯಾದಿಗಳು ಕೇಳಿ ಮಾತ್ರ ಗೊತ್ತಿದ್ದ ಕಾಲದಲ್ಲಿ ಇಂತಹ ಸುದ್ದಿಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಾಗಿರಲಿಲ್ಲ. ನಂತರ “ಅನಾವರಣ” ಎಂಬ, ವಾರದಲ್ಲಿ ಐದು ದಿನ ಇರುತ್ತಿದ್ದ ಅಂಕಣವನ್ನು ಸಂಜೆ ಪತ್ರಿಕೆಯೊಂದಕ್ಕೆ ಬರೆಯುತ್ತಿದ್ದೆ. ಇದರಲ್ಲಿ ಪ್ರಚಲಿತ ವಿದ್ಯಮಾನಗಳ ಬೇರೆಯೇ ಮುಖಗಳು ಅಥವಾ ಆಯಾಮಗಳನ್ನು ಓದುಗರ ಮುಂದೆ “ಅನಾವರಣ”ಗೊಳಿಸಲಾಗುತ್ತಿತ್ತು. ನಂತರ ೨೦೦೦ರ ದಶಕದಲ್ಲಿ ಮೈಸೂರಿನಲ್ಲಿ ಗೆಳೆಯ ವಿಲ್ಫ್ರೆಡ್ ಡಿಸೋಜಾ ಅವರು ಹೊರತರುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ವಿಷಯಗಳ ಕುರಿತ “ಸಾಲುಹೆಜ್ಜೆ” ಮಾಸ ಪತ್ರಿಕೆಗೆ ಕೆಲಸ ಮಾಡುತ್ತಿದ್ದಾಗ, “ಆಲದ ಬೀಜ” ಎಂಬ ಅಂಕಣವು ಪಂಚಾಯಿತಿ ರಾಜ್ ಕಾರ್ಯಕರ್ತರು ಮತ್ತು ತರಬೇತಿದಾರರ ನಡುವೆ ಜನಪ್ರಿಯವಾಗಿತ್ತು. ಅದರಲ್ಲಿ ಜೀವನದಲ್ಲಿ ನಾವು ನೋಡಿದ, ಅನುಭವಿಸಿದ ಚಿಕ್ಕಪುಟ್ಟ- ಹೆಚ್ಚಿನವರು ಗಮನಿಸಿಯೂ ಇರದ ವಿಷಯಗಳಲ್ಲಿ ಅಡಗಿರುವ ದೊಡ್ಡದೊಂದು ವಿಷಯವನ್ನು ತೋರಿಸಿಕೊಡುವುದು ಉದ್ದೇಶವಾಗಿತ್ತು. ಸಾಸಿವೆ ಕಾಳಿನ ಗಾತ್ರವೂ ಇರದ ಆಲದಬೀಜದೊಳಗೆ ಭವಿಷ್ಯದ ಅಷ್ಟು ಬೃಹತ್ತಾದ ಮರ ಒಂದರ ಜೀವ-ಜೀವಾಳವೆಲ್ಲವೂ ಆಡಗಿದೆ ಎಂದು ಗಮನಿಸುವವರು ಕಡಿಮೆ. ಇದುವೇ ಬೊಗಸೆಗೆ ದಕ್ಕಿದ್ದು!

ಇರಲಿ, ಇಲ್ಲಿ ಈಗ ಒಂದು ಅಂಕಣ ಬರೆಯಬೇಕು ಎಂದು ಯೋಚಿಸಿದಾಗ ಬರೆಯಬಹುದಾದ ಸಾವಿರಾರು ವಿಷಯಗಳು ಮನಸ್ಸಿನ ಮುಂದೆ ಹಾದುಹೋದವು. ಇದಕ್ಕೊಂದು ಹೆಸರಿಡಿ ಎಂದು ಹೇಳಿದಾಗ ಒಂದೇ ಒಂದು ನಿಮಿಷದಲ್ಲಿ “ಬೊಗಸೆ” ಎಂಬುದು ಹೊಳೆಯಿತು. ಇದಕ್ಕೆ ಕಾರಣವಾದದ್ದು ಇಲ್ಲಿರುವ ಈ ದಯನೀಯ ಚಿತ್ರ ಮತ್ತು ಅಲ್ಲಿ ಕಾಣುವ ಬೊಗಸೆ. ನಮ್ಮ ಸುತ್ತಲೂ ಇರುವ ಜ್ಞಾನ, ತಿಳುವಳಿಕೆ, ಅನುಭವ, ವಿವೇಕಗಳ ಮಹಾಸಾಗರದಲ್ಲಿ ನಮಗೆ ಒಮ್ಮೆಗೆ ದಕ್ಕುವುದೊಂದು ಬೊಗಸೆ ಮಾತ್ರವೇ. ಆ ಬೊಗಸೆಗೆ ದಕ್ಕಿದ್ದು ಕೂಡಾ ಶಾಶ್ವತವಾಗಿರದೆ ಬೆರಳ ಸಂದುಗಳಲ್ಲಿ ಸೋರಿಹೋಗುವಂತದ್ದೇ. ಒಂದು ಬೊಗಸೆ, ನೀರು, ಒಂದು ಬೊಗಸೆ ಧಾನ್ಯ, ಒಂದು ಬೊಗಸೆ ಅವಲಕ್ಕಿ… ಹೀಗೆ ಬೊಗಸೆಯೆಂಬುದು ಒಂದು ಅನಾದಿ ಕಾಲದ ಕೊಡುಕೊಳ್ಳುವಿಕೆಯ ಸಂಕೇತವಾಗಿದೆ. ಆದರೆ, ಒಂದು ಸಹಜೀವಿಗೆ ಒಂದು ಬೊಗಸೆ ಶುದ್ಧ ಕುಡಿಯುವ ನೀರನ್ನೂ ಕೊಡಲಾಗದ, ಚರಂಡಿಯ ಕಲುಷಿತ ನೀರನ್ನು ಕುಡಿಯಬೇಕಾದ ಸಮಾಜ ಒಂದರಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಈ ಚಿತ್ರ ಮತ್ತೆಮತ್ತೆ ನೆನಪಿಸಿ ಚುಚ್ಚುತ್ತದೆ. ಇಲ್ಲಿರುವ ಬೊಗಸೆಯು ಕಾಡುತ್ತದೆ.

ಬಹಳ ಕಾಲ ಈ ಚಿತ್ರವು “ಫೇಸ್‌ಬುಕ್”‌ನಲ್ಲಿ ನನ್ನ ಪ್ರೊಫೈಲ್ ಚಿತ್ರವಾಗಿತ್ತು. ಅದನ್ನು ನೋಡಿದ ತಕ್ಷಣವೇ ಅದು ನನ್ನನ್ನು ತಲ್ಲಣಗೊಳಿಸಲು ಕಾರಣವೆಂದರೆ, ನನ್ನ ಬಾಲ್ಯಕಾಲದಲ್ಲಿಯೇ ನನ್ನನ್ನು ಕಾಡಿದ ಒಬ್ಬಳು ಮಹಿಳೆಯ ಜೊತೆಗೆ ಈ ಚಿತ್ರಕ್ಕೆ ಇರುವ ಸಾಮ್ಯ. ಆ ಮಹಿಳೆಯ ಕತೆಯನ್ನೇ ಇಲ್ಲಿ ಸಂಕ್ಷಿಪ್ತವಾಗಿ ಹೇಳಿ ಮುಂದುವರಿಯೋಣ.

ಇದು ನಾಲ್ಕೂವರೆ ದಶಕಗಳ ಹಿಂದಿನ ವಿಷಯ. ನಾನು ಕರಾವಳಿ-ಪಶ್ಚಿಮ ಘಟ್ಟಗಳ ನಡುವಿನ ಪ್ರದೇಶದಲ್ಲಿರುವ ನಮ್ಮ ಹಳ್ಳಿಯಿಂದ ಹತ್ತಿರದ ಪೇಟೆಯ ಅಂಚಿನ ಶಾಲೆಗೆ ಹೋಗುತ್ತಿದ್ದೆ. ಪೇಟೆಯ ಏಕೈಕ ಮತ್ತು ಆಗ ಮಕ್ಕಳ ಕಣ್ಣಿಗೆ ಕೊನೆಯೇ ಇಲ್ಲದಂತೆ ಕಾಣುತ್ತಿದ್ದ ಉದ್ದವಾದ ರಸ್ತೆಯಲ್ಲಿ ಒಬ್ಬಳು “ಹುಚ್ಚಿ” ತಿರುಗಾಡುತ್ತಿದ್ದಳು. ನಾನಾಕೆಯನ್ನು ಮೊದಲ ಬಾರಿಗೆ ನೋಡಿದಾಗ ತೆಳ್ಳಗೆ, ಬೆಳ್ಳಗಿದ್ದ ಈಕೆ ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥರು ಹೇಗಿರುತ್ತಾರೋ ಹಾಗೆಯೇ ಕಾಣುತ್ತಿದ್ದಳು. ಜಾತಿ, ಧರ್ಮ, ಭಾಷೆ ಎಂದು ಕಚ್ಚಾಡುವ ಈ ಪ್ರಪಂಚದಲ್ಲಿ ಆಕೆಗೆ ಅಂತಹ ಯಾವುದೇ ಗುರುತು ಇರಲಿಲ್ಲ. ಅವಳ ದೇಹದ ಮೇಲೆ ಯಾವುದೇ ಜಾತಿಯ ಗುರುತು, ಸಂಕೇತಗಳೂ ಇರಲಿಲ್ಲ. ಅವಳು ಯಾವ ಭಾಷೆಯನ್ನೂ ಮಾತನಾಡುತ್ತಿರಲಿಲ್ಲ. ಯಾಕೆಂದರೆ, ಅವಳು ಮೂಕಿಯಾಗಿದ್ದಳು. ಅವಳನ್ನು ಎಲ್ಲರೂ ಕೈಬಿಟ್ಟಿದ್ದರು, ಯಾಕೆಂದರೆ ಅವಳು ಯಾರವಳೂ ಆಗಿರಲಿಲ್ಲ. ಅವಳು ಎಲ್ಲಿಂದ ಬಂದವಳೆಂದೂ ಯಾರಿಗೂ ಗೊತ್ತಿರಲಿಲ್ಲ.

ಅವಳಿಂದ ಯಾರಿಗೂ ತೊಂದರೆಯೇ ಇರಲಿಲ್ಲ. ಅವಳು ತನಗೆ ಸೇರಿದ ಸರಕುಗಳನ್ನು ಯಾವುದಾದರೊಂದು ಮೂಲೆಯಲ್ಲಿ ಪೇರಿಸಿಟ್ಟು ಜೀವನ ನಡೆಸುತ್ತಿದ್ದಳು. ಅವುಗಳಲ್ಲಿ ಹೆಚ್ಚಿನವು ಗುಜರಿ, ಗೋಣಿ, ಚಿಂದಿ ಸಾಮಾನುಗಳೇ ಆಗಿದ್ದವು. ಹಗಲಿಡೀ ತನಗೆ ತಾನೇ ಗೊಣಗುತ್ತಾ ಬೀದಿಯ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಎಡೆಬಿಡದೇ ನಡೆಯುತ್ತಾ, ರಾತ್ರಿ ಯಾವುದಾದರೂ ಮುಚ್ಚಿದ ಅಂಗಡಿ ಮುಂಗಟ್ಟಿನಲ್ಲಿ ಮಲಗುತ್ತಿದ್ದಳು. ಹೊಟೇಲಿನವರು, ಅಂಗಡಿಯವರು ಏನಾದರೂ ಚೂರುಪಾರು ಕೊಟ್ಟರೆ ಅದನ್ನೇ ತಿಂದು ಬದುಕುತ್ತಿದ್ದಳು. ಅವಳ ಕೈಯಲ್ಲೊಂದು ದೊಣ್ಣೆ ಇದ್ದು ಅದನ್ನು ಝಳಪಿಸುತ್ತಾ ಅವಳು ತನ್ನನ್ನು ಅಣಕಿಸಿ, ಪೀಡಿಸುತ್ತಿದ್ದ ಪಡ್ಡೆ ಹುಡುಗರನ್ನು ದೂರವಿಡುತ್ತಿದ್ದಳು.

ನಂತರ ಗೊತ್ತಾದಂತೆ, ಎಲ್ಲರೂ ಈ ಬಡಪಾಯಿ ಮಹಿಳೆಯನ್ನು ದೂರ ಇಟ್ಟಿರಲಿಲ್ಲ. ಇದು ಅವಳ ಹೊಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಾ ಇದೆ ಎಂಬುದು ಜನರ ಗಮನಕ್ಕೆ ಬಂದಾಗ ಗೊತ್ತಾಯಿತು. ಜನರು ಅವಳ ದುಃಸ್ಥಿತಿಯನ್ನು ಚಪ್ಪರಿಸುತ್ತಾ, ಆಶ್ಲೀಲ ಜೋಕ್‌ಗಳನ್ನು ಮತ್ತು ಕಟ್ಟುಕಥೆಗಳನ್ನು ಹರಿಯಬಿಟ್ಟರು. ಸುತ್ತಮುತ್ತಲಿನ ಮೈಲುಗಟ್ಟಲೆ ದೂರದ ಹಳ್ಳಿಗಳಲ್ಲಿಯೂ ಆಕೆ ಜನರ ಕೆಟ್ಟ ಗಾಸಿಪ್‌ಗಳಿಗೆ ಸರಕಾದಳು. ಆಗ ಜನರಿಗೆ ಈಗಿನಂತೆ ಆಡಿಕೊಳ್ಳಲು ದೇಶವಿದೇಶಗಳ ತಾರೆಯರ ಗಾಸಿಪುಗಳಿರಲಿಲ್ಲ. ನಂತರ ಒಂದು ದಿನ ಏಕಾ‌ಏಕಿಯಾಗಿ ಆಕೆ ಮಾಯವಾದಳು. ಒಂದೆರಡು ವಾರಗಳ ನಂತರ ಅಷ್ಟೇ ಏಕಾ‌ಏಕಿಯಾಗಿ ಆಕೆ ಮರಳಿ ಕಾಣಿಸಿಕೊಂಡಾಗ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡಹುವ ರೀತಿಯಲ್ಲಿ ಅವಳ ಹೆಗಲಿಗೆ ಹಾಕಿಕೊಂಡ ಬಟ್ಟೆಯ ಜೋಳಿಗೆಯಲ್ಲಿ ಎದೆಗವಚಿಕೊಂಡು ಪುಟ್ಟ ಮಗು ಒಂದಿತ್ತು. ಬಹಳ ದಿನಗಳ ನಂತರ ಒಂದು ದಿನ ಅವಳ ಬಳಿ ಮಗುವಿರಲಿಲ್ಲ. ಅದು ಎಲ್ಲಿ ಹೋಯಿತೆಂದು ಯಾರಿಗೂ ಯಾವ ಸುಳಿವೂ ಇರಲಿಲ್ಲ. ಯಾರೂ ಅದಕ್ಕೆ ತಲೆಕೆಡಿಸಿಕೊಳ್ಳಲೂ ಇಲ್ಲ.

ನನ್ನ ಶಾಲಾ ದಿನಗಳಲ್ಲಿ ನಾನು ಹೆಚ್ಚು ಕಡಿಮೆ ಪ್ರತಿ ವರ್ಷವೂ ಆಕೆಯನ್ನು ಹೊಸ ಮಗುವಿನೊಂದಿಗೆ ನೋಡಿದ್ದೇನೆ. ಅವು ನಂತರ ತಪ್ಪದೇ ಮಾಯವಾಗುತ್ತಿದ್ದವು. ಅವಳು ಅದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯಾದ ನೇತ್ರಾವತಿಯಲ್ಲಿ ಎಸೆದುಬರುತ್ತಿದ್ದಳು ಎಂದು ಜನರು ಆಡಿಕೊಳ್ಳುತ್ತಿದ್ದರು. ಈ ನದಿಯ ತಟದಲ್ಲಿಯೇ ನಮ್ಮ ಈ ಪಟ್ಟಣವಿರುವುದು. ಆದರೆ, ಖಚಿತವಾಗಿ ಯಾರಿಗೂ ಗೊತ್ತಿರಲಿಲ್ಲ. ಆ ಶಿಶುಗಳ ಶವ ಯಾವತ್ತೂ ಸಿಗಲಿಲ್ಲ. ಸರಕಾರಿ ಆಡಳಿತವಾಗಲೀ, ಯಾವುದೇ ಸಂಘಸಂಸ್ಥೆಯಾಗಲೀ, ವ್ಯಕ್ತಿಯಾಗಲೀ ಇದನ್ನು ತಿಳಿಯುವ ಗೋಜಿಗೆ ಹೋಗಲಿಲ್ಲ. ಒಂದು ದಿನ ಏಕಾ‌ಏಕಿಯಾಗಿ ಆಕೆಯೂ ಮಾಯವಾದಳು. ಮುಂದೆಂದೂ ಅವಳು ಕಾಣಿಸಿಕೊಳ್ಳಲಿಲ್ಲ.

30-40 ವರ್ಷಗಳ ಹಿಂದೆ ಸಮಾಜ ಇಂತಹಾ ವಿಷಯಗಳ ಬಗ್ಗೆ ಹೆಚ್ಚು ಸೂಕ್ಷ್ಮತೆ ತೋರಿಸುತ್ತಿರಲಿಲ್ಲ. ಆದರೆ, ಆಕೆಯ ಗರ್ಭಕ್ಕೆ ಕಾರಣವಾಗುತ್ತಿದ್ದ ವ್ಯಕ್ತಿ ಅಥವಾ ವ್ಯಕ್ತಿಗಳು ತಮ್ಮ ಸ್ವಂತ ರಕ್ತ ಮಾಂಸದ ಬಗೆಗಾದರೂ ಒಂದಿಷ್ಟಾದರೂ ಚಿಂತಿಸಲಿಲ್ಲವೆ ಮುಂತಾದ ನಿಮ್ಮನ್ನೂ ಈಗ ಕಾಡಬಹುದಾದ ಹಲವಾರು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ನಾನಾಗ ಚಿಕ್ಕವನು; ಆಕೆಯ ದುಃಖಮಯ ಜೀವನದ ಕುರಿತು ನಿರಂತರ ಮರುಕವಲ್ಲದೇ ನನಗಾಗ ಬೇರೇನೂ ಅನಿಸುತ್ತಿರಲಿಲ್ಲ. ಆ ಕುರಿತು ನನಗೆ ಇನ್ನೂ ಕೆಲವೊಮ್ಮೆ ಪಾಪಪ್ರಜ್ಞೆ ಕಾಡುತ್ತದೆ ಮತ್ತು ಅಂತಹ ನಿರ್ದಯಿ ಸಮಾಜದ ಭಾಗವಾಗಿದ್ದುದಕ್ಕೆ ನಾಚಿಕೆ ಎನಿಸುತ್ತದೆ. ಇಂತಹಾ ಸಾವಿರಾರು ಮಹಿಳೆಯರು ಕಿರುಕುಳ, ಶೋಷಣೆ, ಅಸಡ್ಡೆಗಳಿಗೆ ಗುರಿಯಾಗುತ್ತಾ ನಮ್ಮ ಬೀದಿಗಳಲ್ಲಿ ಜೀವನ ಕಳೆಯುತ್ತಿದ್ದಾರೆ. ಅಂತವರನ್ನು ಕಂಡಾಗಲೆಲ್ಲಾ ನನಗೆ ಈಕೆಯ ಚಿತ್ರ ಕಣ್ಣಮುಂದೆ ಬಂದು ಆಕೆ ನೆನಪಾಗುತ್ತಾಳೆ.
*

ಮುಂದಿನ ಘಟನೆ ೧೯೯೦ರ ದಶಕದ್ದು. ಮೇಲೆ ಹೇಳಿದ ಪೇಟೆಯ ಒಂಟಿ ರಸ್ತೆಯಲ್ಲಿ ಮುಂದುವರಿದರೆ ಅದು ರಾಷ್ಟ್ರೀಯ ಹೆದ್ದಾರಿ ಸೇರುತ್ತದೆ. ಅಲ್ಲಿ ಇನ್ನೊಂದು ಪಟ್ಟಣವಿದೆ. ಈಗ ಅದು ಬಹಳಷ್ಟು ಬೆಳೆದಿದೆ. ಅಲ್ಲಿನ ಬಸ್ ತಂಗುದಾಣದಲ್ಲಿ ಒಬ್ಬಳು “ಹುಚ್ಚಿ” ವಾಸವಾಗಿದ್ದಳು. ಯುವತಿಯಾಗಿ ಮೈದುಂಬಿಕೊಂಡಿದ್ದ ಈಕೆಗೆ ಕೆಲವು ಪಡ್ಡೆ ಯುವಕರು ಛೇಡಿಸುವುದು, ಕಿರುಕುಳ ನೀಡುವುದು ಮಾಡುತ್ತಲಿದ್ದರಂತೆ.

ಒಂದು ರಾತ್ರಿ ಇವಳ ಮೇಲೆ ಕೆಲವು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದರೆಂಬ ಸುದ್ದಿ ಮರುದಿನ ಆ ಪಟ್ಟಣದಲ್ಲಿ ಗುಸುಗುಸು ರೂಪದಲ್ಲಿ ಹರಿದಾಡಿತು. ತಂಗುದಾಣದ ಅರೆಗತ್ತಲೆಯಲ್ಲಿ ನಡೆದ ಗದ್ದಲ, ಆಕೆಯ ಬೊಬ್ಬೆ ಎಲ್ಲವನ್ನೂ ರಾತ್ರಿ ತಡವಾಗಿ ಬಾಗಿಲು ಮುಚ್ಚುವ ಅಂಗಡಿ ಹೊಟೇಲುಗಳವರು ಸೇರಿದಂತೆ ಹಲವರು ನೋಡಿದ್ದರು, ಕೇಳಿದ್ದರು. ಆದರೆ, ಯಾರೂ ಇದನ್ನು ನಿಲ್ಲಿಸುವ ಪ್ರಯತ್ನ ಮಾಡಿರಲಿಲ್ಲ. ಒಂದನೆಯದು ಭಯ, ಎರಡನೆಯದು ಹುಚ್ಚಿಯಲ್ಲವೇ ಎಂಬ ಅಸಡ್ಡೆ.

ಆಗ ನಾನು “ಮುಂಗಾರು” ಪತ್ರಿಕೆಯನ್ನು ಅನಿವಾರ್ಯವಾಗಿ ಬಿಟ್ಟು, ಸಂಜೆ ಪತ್ರಿಕೆಯೊಂದರಲ್ಲಿ ಬಂಟ್ವಾಳ ತಾಲೂಕು ವರದಿಗಾರನಾಗಿದ್ದೆ. ಯುವಕನ ಉತ್ಸಾಹ ಇದ್ದರೂ, ಒಳ್ಳೆಯ ಉಪಸಂಪಾದಕ ಎಂದು ಗುರುತಿಸಿಕೊಂಡಿದ್ದರೂ ಫೀಲ್ಡ್ ವರದಿಗಾರಿಕೆಯಲ್ಲಿ ಹೆಚ್ಚಿನ ಅನುಭವವಿರಲಿಲ್ಲ. ಇದ್ದಿದ್ದರೆ, ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೆ. ಈ ಯುವಕರು ಆಕೆಯನ್ನು ಹಗಲು ಹೊತ್ತಿನಲ್ಲಿ ಹತ್ತಿರದ ಬೆಟ್ಟಕ್ಕೆ ಕರೆದೊಯ್ದು ಅಲ್ಲಿನ ಕೆರೆಯೊಂದರಲ್ಲಿ ಸ್ನಾನ ಮಾಡಿಸಿದ್ದುದನ್ನೂ ನೋಡಿದವರಿದ್ದರು. ಹೀಗಿದ್ದರೂ, ಘಟನೆ ನಡೆದಿರುವುದು ನಿಜ ಎಂದು ನನಗೆ ಖಚಿತವಾಗಿದ್ದುದರಿಂದ ನಾನೊಂದು ಚಿಕ್ಕ ಸುದ್ದಿ ಕಳಿಸಿದೆ. ಅದು ಪ್ರಕಟವಾಯಿತು.

ಮಂಗಳೂರಿನಲ್ಲಿ ಪ್ರಕಟವಾಗುವ ಈ ಪತ್ರಿಕೆ ನಮ್ಮ ಪೇಟೆಗೆ ತಲಪುವ ಹೊತ್ತಿಗೇ ವಿಷಯ ಪೊಲೀಸ್ ಮೇಲಧಿಕಾರಿಗಳಿಗೆ ತಿಳಿದು, ಆಗ ಪುತ್ತೂರಿಗೆ ಎಎಸ್ಪಿಯಾಗಿ ಹೊಸದಾಗಿ ನೇಮಕವಾಗಿದ್ದ ನನಗಿಂತಲೂ ಚಿಕ್ಕಪ್ರಾಯದ ಯುವ ಅಧಿಕಾರಿಯ ಮೇಲೆ ಒತ್ತಡ ಹೇರಲಾಗಿತ್ತು. ಆತ ತಾಲೂಕು ಕೇಂದ್ರ ಬಿ.ಸಿ.ರೋಡಿನಲ್ಲಿ ಮೊಕ್ಕಾಂ ಹೂಡಿದರು. ಸಂಜೆಯ ಹೊತ್ತಿಗೆ ನನ್ನನ್ನು ಎಲ್ಲಾ ಕಡೆ ಪೊಲೀಸರು ಹುಡುಕುತ್ತಿದ್ದಾರೆ ಎಂದು ತಿಳಿದು ಕಮ್ಯುನಿಸ್ಟ್ ಪಕ್ಷದ ಸಭೆಯೊಂದರ ವರದಿ ಮಾಡಲು ಅದರ ಕಚೇರಿಗೆ ಹೋಗಿದ್ದ ನಾನು ತಕ್ಷಣವೇ ಠಾಣೆಗೆ ಹೋದೆ.

ಠಾಣೆಗೆ ಹೋದದ್ದೇ ತಡ, ನನ್ನನ್ನು ಎಎಸ್ಪಿಯ ಮುಂದೆ ಕುಳ್ಳಿರಿಸಿ ಸುತ್ತಲೂ ಎಸ್ಸೈಯಾದಿಯಾಗಿ ಪೊಲೀಸರು ನೆರೆದು ಒತ್ತಡ ಹೇರಲು ಆರಂಭಿಸಿದರು. ಆಗ, ಪೊಲೀಸರಿಗೆ ಹತ್ತಿರವಾಗಿ “ಗೆಳೆತನ”ದಲ್ಲಿ ಹೊಂದಿನಡೆಯುತ್ತಿದ್ದ ಪತ್ರಕರ್ತರು- ಒಬ್ಬನ ಹೊರತು- ಯಾರೂ ನೆರವಿಗೆ ಬರಲಿಲ್ಲ. ಅವರೆಲ್ಲರೂ ಆಗ ಅರೆಕಾಲಿಕ ವರದಿಗಾರರಾಗಿದ್ದು, ನಾನೊಬ್ಬನೇ ತಾಲೂಕಿನಲ್ಲಿ ಪೂರ್ಣಕಾಲಿಕ ವರದಿಗಾರನಾಗಿದ್ದುದರಿಂದ ಅವರಿಗೆ ಸ್ವಲ್ಪ ಉರಿ ಇದ್ದಿತ್ತು. ಪೊಲೀಸರು ಅತ್ಯಾಚಾರ ಮಾಡಿದವರು ಯಾರು ಎಂದು ತಿಳಿದುಕೊಳ್ಳುವುದರಲ್ಲಿ ಆ ಅಧಿಕಾರಿಗೆ ಆಸಕ್ತಿಯೇ ಇರಲಿಲ್ಲ. ನನಗೆ ಈ ಸುದ್ದಿ ತಿಳಿಸಿದವರ ಹೆಸರನ್ನು ಹೇಳಬೇಕೆಂದು ಒತ್ತಾಯಿಸಿದರು. ಸುದ್ದಿ ಮೂಲವನ್ನು ಬಹಿರಂಗಪಡಿಸಲು ಆಗದು ಎಂದು ನಾನು ಹೇಳಿದೆ. ನಮ್ಮ ಸಂಪಾದಕರಿಗೆ ಫೋನ್ ಮಾಡಿದಾಗ, ಹಿಂದೆ ಸುದ್ದಿಯ ಬಗ್ಗೆ ಹಿರಿಹಿರಿ ಹಿಗ್ಗಿದ್ದ ಅವರೂ, ಈಗ ಹೆಚ್ಚಿನ ಬೆಂಬಲ ನೀಡದೆ, ಹೆಸರು ತಿಳಿಸಲು ಹೇಳಿದರು. ಹೆಸರು ತಿಳಿಸಿದರೆ ತಾನು ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವುದಾಗಿ ಆ ಅಧಿಕಾರಿ ಭರವಸೆ ನೀಡಿದುದರಿಂದ ನಾನು ನಂಬಿ ಮಾಹಿತಿದಾರರ ಹೆಸರು ನೀಡಿದೆ. ಇದು ವರದಿಗಾರ ಮಾಡಬಹುದಾದ ಬಹುದೊಡ್ಡ ತಪ್ಪಾಗಿತ್ತು, ಒಂದು ರೀತಿಯಲ್ಲಿ ಶಿಕ್ಷೆ ಇಲ್ಲದ ಅಪರಾಧವೇ ಆಗಿತ್ತು- ಅದೆಂದರೆ, ಸುದ್ದಿ ಮೂಲವನ್ನು ಅವರ ಒಪ್ಪಿಗೆಯಿಲ್ಲದೇ ಬಹಿರಂಗಪಡಿಸುವುದು.

ಮಾಹಿತಿ ನೀಡಿದವರ ಹೆಸರು ಗೊತ್ತಾದ ತಕ್ಷಣವೇ ಈ ಅಧಿಕಾರಿ ಮಾಡಿದ ಕೆಲಸ ನನ್ನ ಊಹೆಗೆ ಮೀರಿದ್ದಾಗಿತ್ತು. ಅವರ ಮನೆಗೆ ಪೊಲೀಸರನ್ನು ನುಗ್ಗಿಸಿ, ಠಾಣೆಗೆ ಕರೆದುಕೊಂಡು ಬಂದು ಇಂತಹ ಘಟನೆ ನಡೆದೇ ಇಲ್ಲವೆಂದು ಹೇಳುವಂತೆ ಒತ್ತಡ ಹೇರಿ ಲಿಖಿತ ಹೇಳಿಕೆ ತೆಗೆದುಕೊಂಡದ್ದು. ಆ ಹೊತ್ತಿಗೆ ನಿಜವಾದ ಆರೋಪಿಗಳನ್ನು ಅವರು ಮುಟ್ಟಲೇ ಹೋಗಲಿಲ್ಲ. ಅವರ ಪ್ರಕಾರ “ನಡೆಯದ” ಘಟನೆಯಲ್ಲಿ ಆರೋಪಿಗಳು ಎಲ್ಲಿಂದ!? ಅಂತೂ ಇಂತೂ ಈ ಘಟನೆಗೆ ತಿಪ್ಪೆಸಾರಿಸಿ ಮುಚ್ಚಿಹಾಕಲಾಯಿತು. ವಾಸ್ತವವಾಗಿ ಪೊಲೀಸರು ಮಾಡಿದ್ದು ಸಾಕ್ಷ್ಯವನ್ನು ದಮನಿಸುವ ಶಿಕ್ಷಾರ್ಹ ಕ್ರಿಮಿನಲ್ ಅಪರಾಧವಾಗಿತ್ತು.

ಅತ್ಯಾಚಾರಗಳ ಬಗ್ಗೆ, ಅದರಲ್ಲೂ ಮಾನಸಿಕ ಅಸ್ವಸ್ಥರ ಮೇಲೆ ನಡೆಯುವ ಅತ್ಯಾಚಾರಗಳ ಬಗ್ಗೆ ಜನಸಾಮಾನ್ಯರಾಗಲೀ, ಪೊಲೀಸರಾಗಲೀ ಎಷ್ಟು ಅಸೂಕ್ಷ್ಮವಾಗಿರುತ್ತಾರೆ ಎಂದು ನನಗಾಗ ಗೊತ್ತಾಯಿತು. ಒಬ್ಬ ಸಾಮಾನ್ಯವಾಗಿ ದಕ್ಷ ಮತ್ತು ಒಳ್ಳೆಯ ಪೊಲೀಸ್ ಅಧಿಕಾರಿ ಎನಿಸಿಕೊಂಡವರು ನನಗೆ ಹೇಳಿದ್ದು: “ಇದನ್ನೆಲ್ಲಾ ಯಾಕೆ ಬರೆದು ನಮಗೆ ಯಾಕೆ ಕೆಲಸ ಹೆಚ್ಚಿಸುತ್ತೀರಿ? ನಿಮಗೆ ಗೊತ್ತಿಲ್ಲ; ಹುಚ್ಚಿಯರಿಗೆ ಸೆಕ್ಸ್ ತೆವಲು ಹೆಚ್ಚಿರುತ್ತದೆ!” ಇದು ನನಗೆ ಆಘಾತ ಉಂಟುಮಾಡಿತು.

ನಂತರ ನಡೆದದ್ದೆಂದರೆ, ಈ “ಹುಚ್ಚಿ”ಯೂ ದಿಢೀರ್ ನಾಪತ್ತೆಯಾದಳು. ಪೊಲೀಸರೇ ಅವಳನ್ನು ಜೀಪಿನಲ್ಲಿ ಹಾಕಿ ಯಾವುದೋ ಒಂದು ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದರು. ನಾನು ಏಕಾಂಗಿಯಾಗಿ ಈ ಸುದ್ದಿಯ ಬೆನ್ನು ಹತ್ತಲು ಬೇಕಾದ ಬೆಂಬಲವೂ ಇರಲಿಲ್ಲ, ಅಲ್ಪ ಸಂಬಳದಲ್ಲಿ, ಲಂಚ-ಗಿಫ್ಟ್ ಮುಟ್ಟದೆ ಬದುಕುವವರಿಗೆ ಅಂತಹ ಸಂಪನ್ಮೂಲವೂ ಇರುವುದಿಲ್ಲ. ಆದರೆ, ಎಎಸ್ಪಿ ಘಟನೆ ನಡೆದೇ ಇಲ್ಲ ಎಂದು ಸಾಧಿಸಿದರೂ, ಕೆಳ ಹಂತದ ಪೊಲೀಸರ ಮನಸ್ಸಿಗೆ ಏನೋ ಕಾಡಿದಂತಾಗಿ ಆ ಐವರು ಯುವಕರನ್ನು ಅನಧಿಕೃತವಾಗಿ ವಿಚಾರಣೆ ನಡೆಸಿ, ಚೆನ್ನಾಗಿ ಬೆಂಡೆತ್ತಿ, ಬಹಳ ಕಾಲ ಊರಿನತ್ತ ತಲೆಯೇ ಹಾಕದಂತೆ ಮಾಡಿದರು. ಘಟನೆ ನಡೆದುದುದು ನಿಜವಾಗಿತ್ತು. ಇವರಲ್ಲಿ ಇಬ್ಬರು ನನ್ನ ಪರಿಚಿತರಾಗಿದ್ದು, ಒಬ್ಬ ಬಹಳ ವರ್ಷಗಳ ನಂತರ ಸಿಕ್ಕಿ, ನನ್ನಲ್ಲಿ ಪಶ್ಚಾತ್ತಾಪ ತೋಡಿಕೊಂಡಿದ್ದ. ಟಿಬಿ ಇತ್ಯಾದಿ ತಗಲಿ, ಚೇತರಿಸಿಕೊಂಡು, ಸ್ವಭಾವ ಸುಧಾರಿಸಿಕೊಂಡು, ಚಾಲಕನಾಗಿ ಬದುಕುತ್ತಿದ್ದ. ಈಗ ಅವನು ಬದುಕಿಲ್ಲ.

ಅಷ್ಟಕ್ಕೂ ಆ ಯುವ ಆಧಿಕಾರಿ ಹಾಗೆ ಮಾಡಿದ್ದಾದರೂ ಯಾಕೆ? ನನಗೆ ಅನುಭವ ಹೆಚ್ಚಾದಂತೆ ತಿಳಿದ್ದೆಂದರೆ, ಹೊಸದಾಗಿ ಬರುವ ಅಧಿಕಾರಿಗಳು ತಮ್ಮ ಕೆಲಸದ ದಾಖಲೆಯಲ್ಲಿ ಯಾವುದೇ ಕಪ್ಪು ಕಲೆ ಬಯಸುವುದಿಲ್ಲ. ಇಂತಹ ಘಟನೆಯು ತನ್ನ ಕಾರ್ಯಕ್ಷೇತ್ರದಲ್ಲಿ ನಡೆದಿದೆ ಎಂದು ಒಪ್ಪಿಕೊಳ್ಳುವುದು ಆತನಿಗೆ ಬೇಡವಾಗಿತ್ತು. ಮುಂದೆ ಈ ಅಧಿಕಾರಿ ಬೇರೆ ಜಿಲ್ಲೆಗೆ ಎಸ್ಪಿಯಾಗಿ ಭಡ್ತಿ ಹೊಂದಿ ಹೋದಾಗ ಇದು ಬಹಿರಂಗವಾಯಿತು. ಜಿಲ್ಲೆಯಲ್ಲಿ ಸರಣೆ ಸಶಸ್ತ್ರ ದರೋಡೆಗಳು ನಡೆದಿದ್ದವು. ಇಲಾಖೆಯಲ್ಲಿ ನಿರ್ದಿಷ್ಟ ಮೊತ್ತ ಮೀರಿದ, ಸಶಸ್ತ್ರ ಪ್ರಕರಣಗಳನ್ನು ಎಸ್ಪಿಯೇ ವಹಿಸಬೇಕಾಗುತ್ತದೆ. ಈ ಅಧಿಕಾರಿ ಈ ಎಲ್ಲಾ ಪ್ರಕರಣಗಳನ್ನು ಈ ಆಧಿಕಾರಿ ನಿರ್ದಿಷ್ಟ ಮೊತ್ತಕ್ಕಿಂತ ಕಡಿಮೆಯ ಕೇವಲ ಕಳವು ಪ್ರಕರಣಗಳೆಂದು ದಾಖಲಿಸುವಂತೆ ಕೆಳ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಜವಾಬ್ದಾರಿಯಿಂದ ನುಣುಚಿಕೊಂಡು, ತನ್ನ ಅದಕ್ಷತೆ ಮುಚ್ಚಿಹಾಕಲು ಯತ್ನಿಸಿದ್ದರು. ಆದರೆ, ಜನರ ಗಮನಕ್ಕೆ ಇದು ಬಂದು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸ್ ಇಲಾಖೆಯ ಆಂತರಿಕ ತನಿಖೆ ನಡೆದು, ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ಆತನನ್ನು ವರ್ಗಾಯಿಸಲಾಗಿತ್ತು.

ನಾವು- ಹುಚ್ಚರು ಎಂದು ಕ್ಷುಲ್ಲಕವಾಗಿ ಕರೆಯುತ್ತಿದ್ದವರಿಗೆ ಈಗ “ಮಾನಸಿಕ ಅಸ್ವಸ್ಥರು, ಸವಾಲುಗಳನ್ನು ಎದುರಿಸುತ್ತಿರುವವರು…” ಇತ್ಯಾದಿಯಾಗಿ ರಂಗಿನ, ಬೇಗಡೆ ಹೆಸರುಗಳನ್ನು ಕೊಟ್ಟಿರಬಹುದು. ಬೀದಿಗೆ ಬಿದ್ದು ದಯನೀಯವಾಗಿ ಬದುಕುವ ಇಂತವರ ಬಗ್ಗೆ ಜನರ, ಕೆಲವು ಸಮಾಜ ಸೇವಕರ, ಸಂಘಸಂಸ್ಥೆಗಳ, ಸರಕಾರೇತರ ಸಂಸ್ಥೆಗಳ… ಸರಕಾರದ ಕಾಳಜಿಯು- ಮೇಲಿನ ಘಟನೆಗಳು ನಡೆದ ಕಾಲಕ್ಕೆ ಹೋಲಿಸಿದಾಗ- ಬಹಳಷ್ಟು ಸುಧಾರಿಸಿದೆ ಎಂಬುದು ನಿಜವಾದರೂ, ಜಾಗತಿಕವಾಗಿ ಸಮಸ್ಯೆಯು ಇನ್ನೂ ಪರ್ವತಾಕಾರವಾಗಿಯೇ ಇದೆ. ಮುಂದೆ ಇದನ್ನು ಇನ್ನಷ್ಟು ಪರಿಶೀಲನೆ ನಡೆಸೋಣ

Related Articles

ಇತ್ತೀಚಿನ ಸುದ್ದಿಗಳು