Friday, April 18, 2025

ಸತ್ಯ | ನ್ಯಾಯ |ಧರ್ಮ

ಕೊಡಗಿನಲ್ಲಿ ಬೀಡುಬಿಟ್ಟಿರುವ ಹುಲಿಗಳ ಸೆರೆಗೆ ಅರಣ್ಯಾಧಿಕಾರಿಗಳ ಕೂಂಬಿಂಗ್ ಕಾರ್ಯಾಚರಣೆ ಆರಂಭ

ಮಡಿಕೇರಿ: ಇತ್ತೀಚೆಗಷ್ಟೇ ಕರ್ನಾಟಕದ ದಕ್ಷಿಣ ಕೊಡಗು ಜಿಲ್ಲೆಯ ಹರಿಹರ ಗ್ರಾಮದಲ್ಲಿ ಎರಡು ಕಾಡೆಮ್ಮೆಗಳ ಮೇಲೆ ಹುಲಿಗಳು ದಾಳಿ ಮಾಡಿ ಕೊಂದು ಹಾಕಿರುವ ಹಿನ್ನೆಲೆಯಲ್ಲಿ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.

ಹುಲಿಯನ್ನು ಸೆರೆಹಿಡಿಯಲು ಅಧಿಕಾರಿಗಳು ಎರಡು ಸ್ಥಳಗಳಲ್ಲಿ ಪಂಜರಗಳನ್ನು ಅಳವಡಿಸಿದ್ದಾರೆ ಮತ್ತು ಹುಲಿಗಳ ಚಲನವಲನವನ್ನು ಪರಿಶೀಲಿಸಲು ಕ್ಯಾಮೆರಾ ಟ್ರ್ಯಾಪ್ ಅನ್ನು ಅಳವಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ (TOI) ವರದಿ ಮಾಡಿದೆ.

ಮಾಹಿತಿ ಪ್ರಕಾರ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆಲವು ಹುಲಿಗಳು ಆಹಾರ ಅರಸಿ ಗ್ರಾಮದತ್ತ ಹೊರಟಿದ್ದು, ಈ ಭಾಗದ ಶ್ರೀಮಂಗಲ, ಹುದಿಕೇರಿ ಮತ್ತು ಬಾಳೆಲೆ ಗ್ರಾಮಗಳ ಕಾಫಿ ತೋಟಗಳಲ್ಲಿ ಸುಮಾರು 7 ರಿಂದ 10 ವರ್ಷದ ಮೂರು ಹುಲಿಗಳು ಕಾಣಿಸಿಕೊಂಡಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಹರಿಹರ ಗ್ರಾಮದಲ್ಲಿ ಹಾಕಲಾಗಿದ್ದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಹುಲಿಯ ಚಿತ್ರವೂ ಸೆರೆಯಾಗಿದೆ.

 ಈ ಕುರಿತು ರೈತ ಸಂಘದ ಸದಸ್ಯ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹುಲಿಗಳು ಈ ಭಾಗದಲ್ಲಿ ಬೀಡು ಬಿಡುತ್ತವೆ. ಆದಾಗ್ಯೂ, ಈ ವರ್ಷ, ಹುಲಿಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಈ ಕಾರಣ ಬೋಪಯ್ಯ ಅವರು ಹುಲಿಯನ್ನು ಹಿಡಿಯಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಆರ್.ಎನ್.ಮೂರ್ತಿ ಹಾಗೂ ವಿರಾಜಪೇಟೆ ಡಿಸಿಎಫ್ ಚಕ್ರಪಾಣಿ ಗ್ರಾಮಕ್ಕೆ ಭೇಟಿ ನೀಡಿದ್ದು, ಶೀಘ್ರವೇ ಕಾಡು ಹುಲಿಯನ್ನು ಹಿಡಿಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಿವಾಸಿಗಳಿಗೆ ಭರವಸೆ ನೀಡಿದರು ಹಾಗೂ  ಇಲಾಖೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

15 ದಿನಗಳ ಹಿಂದೆ ಬಾಳೆಲೆ ಗ್ರಾಮದ ಬೊಮ್ಮಡು ಗಿರಿಜನ ಕಾಲೋನಿಯಲ್ಲಿ ಹುಲಿ ಕಾರ್ಮಿಕನೊಬ್ಬನನ್ನು ಕೊಂದಿತ್ತು. ಇದರ ಬೆನ್ನಲ್ಲೇ ಜಾನುವಾರುಗಳ ಮೇಲೆ ಹುಲಿ ದಾಳಿ ಮುಂದುವರಿದಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page