Home ಬೆಂಗಳೂರು ರೈಲ್ವೆ ಕಾಮಗಾರಿ ಆರಂಭ ರಾಜ್ಯದ ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ

ರೈಲ್ವೆ ಕಾಮಗಾರಿ ಆರಂಭ ರಾಜ್ಯದ ಪ್ರಮುಖ ರೈಲುಗಳ ಸಂಚಾರ ವ್ಯತ್ಯಯ

ಬೆಂಗಳೂರು: ರೈಲ್ವೆ ಹಳಿ ಸುಧಾರಣೆ, ಸುರಕ್ಷತಾ ಕ್ರಮಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ರಾಜ್ಯದ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೊಳೆನರಸೀಪುರ–ಮಾವಿನಕೆರೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ ಸ್ಟೇಷನ್‌ನಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ .18ರಿಂದ ಆಗಸ್ಟ್ ತಿಂಗಳವರೆಗೆ ಹಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಕೆಲವು ರೈಲುಗಳ ಮಾರ್ಗ ಮತ್ತು ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.

ರದ್ದಾಗಿರುವ ರೈಲುಗಳ ಪಟ್ಟಿಯಲ್ಲಿ ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16205) ಹಾಗೂ ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267) ಸೇರಿವೆ.

ಇನ್ನು ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225) ಜೂನ್ 18 ಮತ್ತು 23ರಂದು ಮೈಸೂರಿನಿಂದ ಹೊರಡುವ ಬದಲಿಗೆ ಅರಸೀಕೆರೆಯಿಂದಲೇ ಸಂಚಾರ ಆರಂಭಿಸಲಿದೆ. ಇದರಿಂದ ಮೈಸೂರು, ಕೆ.ಆರ್.ನಗರ ಹಾಗೂ ಹಾಸನ ಭಾಗದ ಪ್ರಯಾಣಿಕರಿಗೆ ಸೇವೆ ಲಭ್ಯವಾಗುವುದಿಲ್ಲ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208) ರೈಲು ಮಾರ್ಗ ಮಧ್ಯೆ ನಿಯಂತ್ರಣಕ್ಕೊಳಗಾಗಲಿದ್ದು, 30 ರಿಂದ 120 ನಿಮಿಷಗಳವರೆಗೆ ವಿಳಂಬವಾಗಿ ಸಂಚರಿಸುವ ಸಾಧ್ಯತೆ ಇದೆ.

ವಂದೇ ಭಾರತ್, ಲಾಲ್‌ಬಾಗ್ ಮತ್ತು ಕಾವೇರಿ ಎಕ್ಸ್‌ಪ್ರೆಸ್‌ಗೂ ಪರಿಣಾಮ

ಕೆಎಸ್‌ಆರ್ ಬೆಂಗಳೂರು ನಿಲ್ದಾಣದಲ್ಲಿ ನಡೆಯುತ್ತಿರುವ ಯಾರ್ಡ್ ನವೀಕರಣ ಕಾಮಗಾರಿಯಿಂದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೆಲವು ಪ್ರಮುಖ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಜುಲೈ 31 ಮತ್ತು ಆಗಸ್ಟ್ 3ರಂದು ಎರ್ನಾಕುಲಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26652) ಕೆಎಸ್‌ಆರ್ ನಿಲ್ದಾಣಕ್ಕೆ ಆಗಮಿಸುವ ಬದಲು ಕೃಷ್ಣರಾಜಪುರಂ ರೈಲ್ವೆ ಸ್ಟೇಷನ್‌ನಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.

ಚೆನ್ನೈ–ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲನ್ನು ಜುಲೈ 31ರಿಂದ ಆಗಸ್ಟ್ 3ರವರೆಗೆ ಬೈಯಪ್ಪನಹಳ್ಳಿಯಿಂದ ಎಸ್‌ಎಂವಿಟಿ ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.

ಆಗಸ್ಟ್‌ನಲ್ಲಿ ಸಂಪೂರ್ಣ ರದ್ದಾಗುವ ರೈಲುಗಳು

  • ಆಗಸ್ಟ್ 1: ಕೆಎಸ್‌ಆರ್ ಬೆಂಗಳೂರು–ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12658)
  • ಆಗಸ್ಟ್ 2: ಚೆನ್ನೈ–ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12657)
  • ಆಗಸ್ಟ್ 2 ಮತ್ತು 3: ಚೆನ್ನೈ–ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್

ಪ್ರಯಾಣಿಕರು ತಮ್ಮ ಪ್ರಯಾಣದ ಮೊದಲು ರೈಲುಗಳ ನವೀಕೃತ ವೇಳಾಪಟ್ಟಿ ಹಾಗೂ ಸಂಚಾರ ಮಾಹಿತಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

You cannot copy content of this page

Exit mobile version