Friday, May 23, 2025

ಸತ್ಯ | ನ್ಯಾಯ |ಧರ್ಮ

ಅವಿವೇಕಿ ಜಾಹಿರಾತು, ತಮನ್ನಾ ಭಾಟಿಯಾ ಮತ್ತು ಸಾಯಿ ಪಲ್ಲವಿ ಎಂಬ ಹೆಣ್ಮಗಳ ವಿವೇಕವೂ

ಫೇರ್ ಅಂಡ್ ಲವ್ಲಿ ಜಾಹೀರಾತು ಬಂದಾಗ ನಾನಿನ್ನೂ ಚಿಕ್ಕ ಹುಡುಗ. ನನ್ನ ಅಪ್ಪನಂತೆ ಕಪ್ಪಗಿದ್ದ ನನ್ನ ದೊಡ್ಡತಂಗಿಗೆ ಬೆಳ್ಳಗಾಗುವ ಆಸೆ. ನಾನು ಓದಿ ಬೂದಿ ಉಯ್ಯಲಿ ಎಂದು ನಮ್ಮ ಮನೆಯ ಯಜಮಾನತಿ ಆಗಿದ್ದ ನನ್ನಮ್ಮ ಆಕೆಯನ್ನು ಮೂರನೇ ತರಗತಿಗೆ ಶಾಲೆ ಬಿಡಿಸಿ, ಕೂಲಿಗೆ ಹಾಕಿದ್ದಳು. ಅಮ್ಮನಿಗೆ ತಿಳಿಯದಂತೆ ತಾನು ಕೂಲಿ ಮಾಡಿದ ಹಣದಲ್ಲೇ ಫೇರ್ & ಲವ್ಲೀ ಕೊಂಡುಕೊಂಡು ದಿನವೂ ಹಚ್ಚಿಕೊಳ್ಳುತ್ತಿದ್ದಳು. ಒಂದುದಿನ ಅಮ್ಮನ ಕೈಗೆ ಸಿಕ್ಕಾಕಿಕೊಂಡು ‘ನೀನು ಯಾವತ್ತಿದ್ರೂ ತೊಳ್ದ ಕೆಂಡವೇ, ನಿಂಗ್ಯಾಕೆ ಪಾರೆನ್ ಲವ್ಲಿ?’ ಅಂತ ದನಕ್ಕೆ ಬಡಿದಂತೆ ಬಡಿದದ್ದು ನನಗೆ ಈಗಲೂ ಕಣ್ಣಿಗೆ ಕಟ್ಟಿದೆ.
*
“ಹೇ… ಫಾರಿನ್ನಿoದ powder ತಂದ್ಹಾಕಿದ್ರೂ ಊ ನಿಂದ್ ಇಷ್ಟೇ colour… Bleaching ಪೌಡರ್ಲದ್ದಿದ್ರೂ… ನಿಂದು ಗ್ಯಾರಂಟೀ colourrrrr”
ಸ್ವಸ್ತಿಕ್ ಎಂಬ ಚಿತ್ರದ ಈ ಅವಿವೇಕಿ ಹಾಡಿಗೆ ಗಣೇಶೋತ್ಸವದ ಸ್ಟೇಜುಗಳು, ಸ್ಕೂಲ್ ಡೇ ಪ್ರೋಗ್ರಾಗಳಲ್ಲಿ ನನ್ನನ್ನೂ ಸೇರಿದಂತೆ ಅದೆಷ್ಟೋ ಜನ ಕುಣಿದು ಕುಪ್ಪಳಿಸಿ, ಕಪ್ಪಗಿರುವವರನ್ನು ಆಡಿಕೊಂಡು ನಕ್ಕಿದ್ದೇವೆ.

ಕಾಮೆಡಿ ಹೆಸರಿನಲ್ಲಿ ಕಲರ್ ಕುರಿತ ಚೀಪ್ ಡೈಲಾಗ್‌ಗಳನ್ನು ಎಂಜಾಯ್ ಮಾಡಿದ್ದೇನೆ. ಆಮೇಲಾಮೇಲೆ ಲಂಕೇಶರನ್ನು ಓದುತ್ತಾ, ಸಾಹಿತ್ಯದ ಆಳಕ್ಕೆ ಇಳಿಯುತ್ತಾ ಹೋದಂತೆ ನನ್ನ ಹಿಂದಿನ ನಡೆಯ ಬಗ್ಗೆ ಜಿಗುಪ್ಸೆ ಹುಟ್ಟಿ ಮನುಷ್ಯನಾಗಲು ಕನಿಷ್ಟ ಪ್ರಯತ್ನಪಟ್ಟಿದ್ದೇನೆ. ತನ್ನ ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣಿಗೆ ಕೊರಳೊಡ್ಡಿದ ಬೆಂಜಮೀನ್ ಮೊಲಾಯಿಸನ ಪದ್ಯಗಳನ್ನು ಓದಿ ಅಕ್ಷರಶಃ ಅತ್ತಿದ್ದೇನೆ. ‘ತಮಿಳರು ಹುಟ್ಟುವ ಜಾಗ ಇದು’ ಎಂದು ಎಲ್‌ಟಿಟಿಇ ಕಾರ್ಯಕರ್ತೆಯ ಯೋನಿಗೆ ಗ್ರೆನೇಡ್ ಇಟ್ಟು ಸಿಡಿಸಿದ ಕಂದು ಬೌದ್ದರ ಕ್ರೌರ್ಯ ಕಂಡು ನಡುಗಿಹೋಗಿದ್ದೇನೆ.

ಹಾಲಿವುಡ್ ಸಿನಿಮಾಗಳಲ್ಲಿ ಕಳ್ಳ, ಕೊಲೆಗಾರ, ಡ್ರಗ್ ಅಡಿಕ್ಟ್‌ಗಳಂತೆ ಚಿತ್ರಿತವಾಗುವ ಕಪ್ಪುಜನರ ನಡುವೆಯೂ ವಿಲ್ ಸ್ಮಿತ್ ಎಂಬ ನಟ ‘ಐ ಯಾಮ್ ಲೆಜೆಂಡ್’ ಎಂದು ಎದೆತಟ್ಟಿ ಹೇಳಿದ್ದನ್ನು ಕೇಳಿ ಪುಳಕಗೊಂಡಿದ್ದೇನೆ. ಇದೆಲ್ಲದರ ನಡುವೆ ಮಾಯಾ ಎಂಜೆಲೋ, ವೋಲೆ ಸೋಯಿಂಕಾ, ಚಿನುವಾ ಅಚಿಬೆ, ಆಲೀಸ್ ವಾಕರ್ ಮುಂತಾದವರು ಕಪ್ಪುಜನರ ವಿರುದ್ಧ ಜರುಗಿದ ವಿಕೃತಿಗಳನ್ನು ಕಟ್ಟಿಕೊಟ್ಟ ಕೃತಿಗಳನ್ನು ಓದಿ ‘ನಾನು ಮತ್ತೂ ಮನುಷ್ಯನಾಗಬೇಕೆಂಬ’ ಓಟಕ್ಕೆ ಇಂಧನವಾಗಿಸಿಕೊಂಡಿದ್ದೇನೆ.

ಇನ್ನು ನನ್ನ ಕನ್ನಡ ನೆಲಕ್ಕೆ ಬಂದರೆ ಮಜ್ಜಿಗೆ ಹುಳಿ, ಕೋಸಂಬರಿ ಸಾಹಿತಿಗಳ ನಡುವೆ ಹೋರಾಟದ ಹಣತೆ ಹಚ್ಚಿದ ಸಿದ್ದಲಿಂಗಯ್ಯ, ಗೋವಿಂದಯ್ಯ, ಕೆ ಬಿ ಸಿದ್ದಯ್ಯ, ಎನ್ ಕೆ ಹನುಮಂತಯ್ಯ, ಶ್ರೀಕೃಷ್ಣ ಆಲನಹಳ್ಳಿ ಮುಂತಾದವರು ನನ್ನೊಳಗೆ ಕೊರಬಾಡಿನ ಸವಿಯುಣಿಸಿದ್ದಾರೆ. ಬೆಳ್ಳಗಿರುವವರ ಮೇಲೆ ಅಸಹನೆ ಬೆಳೆಸದೆ, ಕಪ್ಪು ಜನರ ಕರಾಳ ನೋವಿನ ಅಗಾಧ ಕಡಲ ಅಲೆಗಳು ನನ್ನೆದೆಗೆ ಆಗಾಗ್ಗೆ ಅಪ್ಪಳಿಸುತ್ತಲೇ ಇವೆ.

ತೀರಾ ಇತ್ತೀಚಿನ ವರ್ಷಗಳಲ್ಲಿ ಸಾಯಿ ಪಲ್ಲವಿ ಎಂಬ ನಟಿ, ಕಾಸ್ಮೆಟಿಕ್ ಕಂಪನಿಯ ಎರಡು ಕೋಟಿ ಆಫರ್‌ನ ಜಾಹೀರಾತನ್ನು ತಿರಸ್ಕರಿಸುತ್ತಾರೆ. ಅವರು ಕೊಟ್ಟ ಕಾರಣ ಅದ್ಭುತ! ‘ನಾನು ಸಿನಿಮಾದಲ್ಲೇ ಮೇಕಪ್ ಮಾಡಿಕೊಳ್ಳುವುದಿಲ್ಲ. ಅಂತಹುದರಲ್ಲಿ ಜನರನ್ನು ನಿಮ್ಮ ಉತ್ಪನ್ನಗಳ ಕಾರಣಕ್ಕಾಗಿ ವಂಚಿಸಲಾರೆ!’ ಎಂದುಬಿಟ್ಟರು…

ಚಿನ್ನದ ಗಣಿಯ ನೆಪಕ್ಕೆ ಕೋಲಾರ ನಮಗೆ ಬೇಕೇ ಬೇಕೆಂದು ನಿಜಲಿಂಗಪ್ಪ ಪಟ್ಟು ಹಿಡಿದ ಕಾರಣಕ್ಕೆ, ನಮ್ಮ ಕೈ ತಪ್ಪಿ ಹೋದ ಊಟಿ ಎಂಬ ಅದ್ಭುತ ಪ್ರದೇಶದ, ಕನ್ನಡ ಸಂಬಂಧಿತ ಬಡಗ ಭಾಷೆಯ ಹೆಣ್ಣುಮಗಳು ಈ ಸಾಯಿಪಲ್ಲವಿ! ತನ್ನ ರಕ್ತದಲ್ಲಿರುವ ದ್ರಾವಿಡತನಕ್ಕೆ ಚ್ಯುತಿ ಬಾರದಂತೆ ನಟನೆ, ಬದುಕನ್ನು ಸಾಗಿಸುತ್ತಿರುವ ಅಪ್ಪಟ ಮಾನವಪ್ರೇಮಿ ಈಕೆ. ದ್ರಾವಿಡರೆಂದರೆ ಕೇಳಬೇಕೆ? ಈ ಮೂಲದವರಿಗೆ ಬಣ್ಣದ ಬಗ್ಗೆ ನಿಖರವಾದ ಗೌರವ ಮತ್ತು ಅಪಾರ ಪ್ರೀತಿ ಇದೆ. ಅಲ್ಲಿ ಕರುಪ್ಪು ಎಂಬುದನ್ನು ಗೌರವದ, ಅಸ್ಮಿತೆಯ ಸಂಕೇತವಾಗಿ ಬಳಸುತ್ತಾರೆ. ಆದರೆ ಇಲ್ಲಿ, ಒಬ್ಬ ಮುಖ್ಯಮಂತ್ರಿಯನ್ನೇ ‘ಕರಿ ಇಡ್ಲಿ’ ಎಂದು ಹೀಯಾಳಿಸುತ್ತಾರೆ! ಆಡಿಕೊಳ್ಳುತ್ತಾರೆ.

ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್ ದೇಶಗಳಲ್ಲಿ ಜನರನ್ನು ಬಣ್ಣದ ಆಧಾರದಲ್ಲಿ ಹೀಯಾಳಿಸುವುದು ಅಪರಾಧ! ಆದರೆ ಇಲ್ಲಿ ಬಣ್ಣ, ಲಿಂಗ, ಜಾತಿ, ವರ್ಗ, ಧರ್ಮ, ಹುಟ್ಟಿನ ಮೂಲದಲ್ಲೂ ಹೀಯಾಳಿಸಿ, ಸಂವಿಧಾನದ ಆರ್ಟಿಕಲ್ 14 ಅನ್ನು ಕಾಲುಕಸ ಮಾಡಿಕೊಂಡು ಬದುಕುತ್ತಿರುವುದು ದುರಂತ. ಈ ದೇಶಕ್ಕೆ ಬಡಿದಿರುವ ಈ ದರಿದ್ರ ರೋಗಗಳು ವಾಸಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಇಲ್ಲಿ ಮನುಷ್ಯರ ಜತೆಗೆ ನೀಚರೂ ಬದುಕುತ್ತಿದ್ದಾರೆ. ನೀಚರಿಗಾಗಿ ಒಂದು ದೇಶ ನಿರ್ಮಿಸಿ, ಅಲ್ಲಿ ಅವರನ್ನು ಸ್ವಚ್ಛಂದವಾಗಿ ಜೀವಿಸಲು ಬಿಟ್ಟುಬಿಡಬೇಕು ಅಂತ ಅನೇಕಸಾರಿ ಅನಿಸಿಬಿಡುತ್ತದೆ.

ಫೇರ್‌ನೆಸ್ ಕ್ರೀಮ್‌ಗಳು ಕಪ್ಪಗಿರುವ ಯಾರನ್ನೂ ಯಾವ ಕಾಲಕ್ಕೂ ಬೆಳ್ಳಗೆ ಮಾಡಿರುವ ಸಣ್ಣ ಉದಾಹರಣೆ ಕೂಡಾ ಇಲ್ಲ. ಅಷ್ಟಕ್ಕೂ ಕಪ್ಪು ಯಾಕ್‌ ಬೆಳ್ಳನೆಯ ಬಣ್ಣವಾಗಿ ಬದಲಾಗ್ಬೇಕು. ? ಆದರೂ ಪತ್ರಿಕೆಗಳು, ದೃಶ್ಯ ಮಾಧ್ಯಮಗಳ ಹಣದ ಲಾಲಸೆಯಿಂದ ಕಾಸ್ಮೆಟಿಕ್ ಕಂಪೆನಿಗಳು ಹೇಳುವ ಸುಳ್ಳಿಗೆ ವೇದಿಕೆ ಕಲ್ಪಿಸುತ್ತವೆ. ಮುಗ್ಧರು ನಂಬಿ ಮೋಸ ಹೋಗುತ್ತಾರೆ. ಈ ಮೋಸ ಭಾರತದ ದಿನಚರಿಯಾಗಿಬಿಟ್ಟಿದೆ.

ಇಂಥ ದಿನಚರಿಗೆ ಈಗ ತಮನ್ನಾ ಭಾಟಿಯಾ ಸೇರಿದ್ದಾರೆ. ಈಕೆಯನ್ನು ಮೀಡಿಯಾಗಳು ಉದ್ಘರಿಸುವುದು ಮಿಲ್ಕೀ ಬ್ಯೂಟಿ ಎಂದು! ಸರಿಸುಮಾರು ನೂರಾ ಹತ್ತೊಂಬತ್ತು ವರ್ಷಗಳ ಸುದೀರ್ಘ ಇತಿಹಾಸವಿರುವ “ಮೈಸೂರು ಸ್ಯಾಂಡಲ್‌ ಸೋಪ್‌”ಗೆ ಈಗ ಮಿಲ್ಕೀ ಬ್ಯೂಟಿ ಬಾಡಿಗಾರ್ಡ್!‌ ಯಾವುದೇ ಅಬ್ಬರವಿಲ್ಲದೆ, ತಣ್ಣಗೆ ತನ್ನಪಾಡಿಗೆ ತಾನು ಕರ್ನಾಟಕವೂ ಸೇರಿದಂತೆ ದೇಶ ವಿದೇಶಗಳಲ್ಲಿ ಮಾರಾಟವಾಗುತ್ತಿರುವ ಸೋಪಿಗೆ ಮಿಲ್ಕೀ ಬ್ಯೂಟಿಯ ಲೇಪನ ಮಾಡುತ್ತಿರುವುದು ಲಾಭಕೋರತನದ ದೃಷ್ಟಿಯಿಂದಷ್ಟೇ ನೋಡಿದರೆ ಸರಿಯಲ್ಲ. ಈ ಸೋಪು ಬಳಸಿದರೆ ತಾನು ಕೂಡಾ ತಮನ್ನಾ ಥರ ಮಿಲ್ಕೀ ಬ್ಯೂಟಿಯಾಗಿ, ಬೆಳ್ಳಗೆ ಕಾಣಿಸಿಕೊಳ್ಳಬಹುದೆಂಬ ಭ್ರಮೆ ಅದೆಷ್ಟೋ ಮುಗ್ಧ ಹೆಣ್ಣುಮಕ್ಕಳನ್ನು ಆವರಿಸಿಕೊಳ್ಳುತ್ತದೆ. ಬೆಳ್ಳಗಾಗುವುದಿಲ್ಲವೆಂದು ತಿಳಿದ ದಿನ ಆ ಹೆಣ್ಣುಮಕ್ಕಳು ಖಿನ್ನತಗೆ ಒಳಗಾಗುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ, ಕೆಲವರು ಅದಕ್ಕೂ ಮೀರಿ ಜೀವವನ್ನು ನೀಗುತ್ತಾರೆ.

ಕಾಸ್ಮೆಟಿಕ್‌ ಕಂಪೆನಿಗಳಿಗೆ ಕಚ್ಚಾವಸ್ತುಗಳನ್ನು ಹೆಕ್ಕಿ ತೆಗೆಯಲು ಇಂದಿಗೂ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ದೊಡ್ಡ ಗಣಿಗಾರಿಕೆಯೇ ನಡೆಯುತ್ತಿದೆ. ರಾಜಸ್ತಾನ, ಬಿಹಾರದ ಮಧ್ಯ ಪ್ರದೇಶದ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅಲ್ಲಿನ ಕಾಡುಗಳನ್ನು ಕಡಿದು, ಕಾಸ್ಮೆಟಿಕ್ಸ್‌ ಉತ್ಪನ್ನಗಳಿಗೆ ಬೇಕಾದ ಕಾವೇಕಲ್ಲು, ಸುಗಂಧಕಲ್ಲು ಮುಂತಾದವುಗಳನ್ನು ಬಗೆದು ಫ್ಯಾಕ್ಟರಿಗಳಿಗೆ ಸಾಗಿಸಿ, ಅಲ್ಲಿ ಉತ್ಪನ್ನಗಳನ್ನು ತಯಾರಿಸಿ ಮಾರಲಾಗುತ್ತಿದೆ. ಸೌಂದರ್ಯವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಪ್ರಕೃತಿಹರಣ, ಮಕ್ಕಳ ಹಕ್ಕುಗಳ ವಂಚನೆ ಎಲ್ಲವೂ ಈ ಅವಿವೇಕದ ಜಾಹಿರಾತುಗಳಲ್ಲಿ ಮುಚ್ಚಿಹೋಗುತ್ತಿವೆ. ಕಾಸ್ಮೆಟಿಕ್‌ ಗಣಿಗಳಲ್ಲಿ ದುಡಿಯುವ ಮಕ್ಕಳು ಒಂದು ದಿನ ನಗರಕ್ಕೆ ಬಂದಾಗ ನಗರದ ಜಾಹಿರಾತು ಬೋರ್ಡುಗಳಲ್ಲಿರುವ ನಟ-ನಟಿಯರನ್ನು ಕಂಡು ಪುಳಕಗೊಳ್ಳುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ ಸಾಕು…

-ವಿ.ಆರ್.ಕಾರ್ಪೆಂಟರ್

Related Articles

ಇತ್ತೀಚಿನ ಸುದ್ದಿಗಳು

You cannot copy content of this page