ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋಮುವಾದಿ ಶಕ್ತಿಗಳನ್ನು ನಿಗ್ರಹಿಸುವ ಸಲುವಾಗಿ ರಾಜ್ಯ ಸರ್ಕಾರ ಪಣ ತೊಟ್ಟಿದ್ದು, ಕೋಮು ಹಿಂಸಾಚಾರ ನಿಗ್ರಹ ಪಡೆಯನ್ನು ಘೋಷಿಸಿದೆ. ಕೇವಲ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಇದು ಜಾರಿಯಲ್ಲಿದ್ದು ಮುಂದೆ ಅಗತ್ಯ ಇರುವ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ‘ಕೋಮು ಸ್ವರೂಪದ ನೈತಿಕ ಪೊಲೀಸ್‌ಗಿರಿಯ ಘಟನೆಗಳನ್ನು ಸಹ ಕೋಮು ಹಿಂಸಾಚಾರ ನಿಗ್ರಹ ಪಡೆಗೇ ವಹಿಸಲಾಗುವುದು’ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಗಲಭೆಗಳನ್ನು ತಡೆಹಿಡಿಯಲು, ನಕ್ಸಲ್ ವಿರೋಧಿ ಪಡೆ (ANF) ಮಾದರಿಯಲ್ಲಿ ಕೋಮು ಹಿಂಸಾಚಾರ ನಿಗ್ರಹ ಪಡೆ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಪೊಲೀಸ್ ಮಹಾನಿರ್ದೇಶಕರ ಪ್ರಸ್ತಾವನೆಯಂತೆ ಅದನ್ನು ಅಗತ್ಯ ಇರುವ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.
“ನೈತಿಕ ಪೊಲೀಸ್‌ಗಿರಿ ಕೇವಲ ಸಾಮಾಜಿಕ ಸಮಸ್ಯೆಯಾಗಿದ್ದರೆ, ನಿಯಮಿತ ಪೊಲೀಸರು ಅದನ್ನು ನಿಯಂತ್ರಿಸಬಹುದು. ಆದರೆ ಅದು ಕೋಮು ಸ್ವರೂಪದ್ದಾಗಿದ್ದರೆ ಅಥವಾ ಕೋಮು ಸಮಸ್ಯೆಗಳಲ್ಲಿ ಕೊನೆಗೊಂಡರೆ, ನಾವು ಖಂಡಿತವಾಗಿಯೂ ಅದನ್ನು ಕೋಮು ಹಿಂಸೆ ವಿರೋಧಿ ಪಡೆಗೆ ವಹಿಸುತ್ತೇವೆ” ಎಂದು ಪರಮೇಶ್ವರ್ ಹೇಳಿದರು.