ಕಾರವಾರ ಅಂಕೋಲಾ ಕ್ಷೇತ್ರದಲ್ಲಿರುವ ಕೈಗಾ ಮತ್ತು ಸೀಬರ್ಡ್ ಯೋಜನೆಗಳಲ್ಲಿರುವ ವಿವಿಧ ಗುತ್ತಿಗೆ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.70 ರಷ್ಟು ಉದ್ಯೋಗ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಕೆ ಸೈಲ್ ಹೇಳಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಖಾಸಗಿ ಕಂಪನಿಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಕಾರವಾರ ವಿಧಾನಸಭಾ ಕ್ಷೇತ್ರದ ಕೈಗಾ ಹಾಗೂ ಸೀಬರ್ಡ್ನಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸುವ ಹಲವು ಗುತ್ತಿಗೆ ಕಂಪನಿಗಳಿವೆ. ಆ ಕಂಪನಿಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸ್ಥಳೀಯರಿಗೆ ಕಡಿಮೆ ಉದ್ಯೋಗವಕಾಶ ನೀಡುತ್ತಿರುವುದರಿಂದ ಸ್ಥಳೀಯರು ಗೋವಾ, ಮುಂಬೈ, ಮಂಗಳೂರು ಮತ್ತಿತರ ಕಡೆಗಳಲ್ಲಿ ಉದ್ಯೋಗ ಅರಸಿಕೊಂಡು ಹೋಗುತ್ತಿದ್ದಾರೆ. ಈ ಯೋಜನೆಗಳಿಗೆ ಸ್ಥಳೀಯರು ತಮ್ಮ ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದಾರೆ. ಆದ್ದರಿಂದ ಇಲ್ಲಿನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಶೇ.70 ರಷ್ಟು ಸ್ಥಳೀಯರು ಹಾಗೂ ಶೇ. 30 ರಷ್ಟು ಹೊರಗಿನವರನ್ನು ತೆಗೆದುಕೊಳ್ಳಬೇಕು ಹಾಗೂ ಈ ಶೇ.70 ರಷ್ಟು ಸ್ಥಳೀಯ ಕಾರ್ಮಿಕರಲ್ಲಿ ಕಂಪನಿ ಇರುವ ಸ್ಥಳದ 5 ಕಿ.ಮೀ ವ್ಯಾಪ್ತಿಯೊಳಗೆ ವಾಸಿಸುವ ಶೇ.50 ರಷ್ಟು ಕಾರ್ಮಿಕರಿರಬೇಕು, ಎಲ್ಲಾ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ಗುತ್ತಿಗೆ ಕಂಪನಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾ ಹಾಗೂ ಸೀಬರ್ಡ್ನಲ್ಲಿ ಕಾರ್ಮಿಕರ ಅಗತ್ಯತೆ ಪೂರೈಸಲು ಪ್ರತೀ ಗ್ರಾಮ ಪಂಚಾಯಿತಿಯಲ್ಲಿರುವ ನಿರುದ್ಯೋಗಿಗಳ ಪಟ್ಟಿಯನ್ನು, ಇಂಜಿನಿಯರಿAಗ್, ಪದವಿ, ಐಟಿಐ/ಡಿಪ್ಲೊಮಾ, ಎಸ್.ಎಸ್.ಎಲ್.ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ವಿದ್ಯಾರ್ಹತೆಯ ವಿವರಗಳೊಂದಿಗೆ ತಾಲೂಕು ಪಂಚಾಯತ್ ಮೂಲಕ ತಯಾರಿಸಬೇಕು. ಈ ಪಟ್ಟಿಯನ್ನು ತಹಸೀಲ್ದಾರರು ಹಾಗೂ ಕಾರ್ಮಿಕ ಅಧಿಕಾರಿಗಳು ಪ್ರತಿ ಕಂಪನಿಗೆ ಕಳಿಸಬೇಕು. ಕಂಪನಿಯು ಅಗತ್ಯಕ್ಕೆ ತಕ್ಕಂತೆ ಹಾಗೂ ಅಹರ್ತೆಗೆ ಅನುಗುಣವಾಗಿ ಈ ಪಟ್ಟಿಯಲ್ಲಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಹೊಸ ಕಂಪನಿಗಳು ಕೂಡ ಈ ಮಾಹಿತಿಯನ್ನು ಬಳಸಿಕೊಳ್ಳಬೇಕು. ಅಲ್ಲದೇ ಕಾರ್ಮಿಕ ಇಲಾಖೆಯ ನಿಯಮದಂತೆ ಕೇಂದ್ರ ಸರ್ಕಾರದ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕು ಎಂದರು.
ಸೀಬರ್ಡ್ ಹಾಗೂ ಕೈಗಾ ನಿರ್ಭಂದಿತ ಜಾಗವಾದ ಕಾರಣ ಸ್ಥಳೀಯರ ಬಗ್ಗೆ ಪೊಲೀಸ್ ಪರಿಶೀಲನೆ ನಂತರ ಉದ್ಯೋಗಕ್ಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಕಂಪನಿಗಳಲ್ಲಿ ಸ್ಥಳೀಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರು ಬಂದಲ್ಲಿ, ಅವರಿಗೆ 3 ನೋಟಿಸ್ ನೀಡಿ ಕೆಲಸದಿಂದ ತೆಗೆಯಬಹುದಾಗಿದೆ ಎಂದರು.
ಸ್ಥಳೀಯರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ತಹಸೀಲ್ದಾರರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ಮತ್ತು ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಲೂಕು ಮಟ್ಟದ ಸಮಿತಿಯನ್ನು ರಚಿಸುವಂತೆ ತಿಳಿಸಿದರು.
ಕಾರ್ಮಿಕರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯದ ಕಾರ್ಮಿಕ ಸಚಿವರನ್ನು ಕಾರವಾರಕ್ಕೆ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ತಹಸೀಲ್ದಾರ್ ನಿಶ್ಚಲ ನರೋನಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ್ , ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ ಹಾಗೂ ಕೈಗಾ ಮತ್ತು ಸೀಬರ್ಡ್ನಲ್ಲಿನ ವಿವಿಧ ಗುತ್ತಿಗೆ ಕಂಪನಿಗಳ ಅಧಿಕಾರಿಗಳು ಇದ್ದರು.