Sunday, June 16, 2024

ಸತ್ಯ | ನ್ಯಾಯ |ಧರ್ಮ

ಪ್ರತಿಭಾ ನಂದಕುಮಾರ್‌ ಹಂಚಿಕೊಂಡಿದ್ದ ಪೋಸ್ಟ್‌ ವಿರುದ್ಧ ದೂರು ದಾಖಲು

ಬೆಂಗಳೂರು: ಎರಡು ದಿನಗಳ ಹಿಂದೆ ಹಿರಿಯ ಕವಯತ್ರಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಲವು ಪತ್ರಕರ್ತರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದ್ದ ಬರೆಹವೊಂದನ್ನು ಹಂಚಿಕೊಂಡಿದ್ದು, ಆ ಬರೆಹದ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಾಗಿದೆ. ವಿವಾದಿತ ಬರೆಹವನ್ನು ನರೇಂದ್ರ ತೂದಳ್ಳಿ ಎಂಬುವವರು ಬರೆದಿದ್ದರು ಎನ್ನಲಾಗಿದ್ದು ಅವರ ಮೇಲೆ ವಿಜಯವಾಣಿ ದಿನಪತ್ರಿಕೆ ಸಂಪಾದಕರಾದ ರುದ್ರಣ್ಣ ಹರ್ತಿಕೋಟೆಯವರು ದೂರು ಸಲ್ಲಿಸಿದ್ದಾರೆ. ಇದರ ಜೊತೆಯಲ್ಲಿ ಶಂಕರಪುರ ಪೊಲೀಸ್‌ ಠಾಣೆಯಲ್ಲಿ ಸಹ ಎರಡು ದೂರುಗಳು ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಾಖಲಾಗಿವೆ. ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶಿವಾನಂದ ತಗಡೂರು ಮತ್ತು ರುದ್ರಣ್ಣ ಹರ್ತಿಕೋಟೆ ಇಬ್ಬರೂ ಪ್ರತ್ಯೇಕವಾಗಿ ಸಲ್ಲಿಸಿರುವ ದೂರುಗಳು ಶಂಕರಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ.

ಮಾನವ ಹಕ್ಕು ಆಯೋಗದಲ್ಲಿ ಸಲ್ಲಿಸಿರುವ ದೂರಿನ ಪ್ರತಿ

ದೂರಿನಲ್ಲಿ ಏನಿದೆ?

ಹಕ್ಕಿಗೂಡು ಪತ್ರಿಕೆಯ ಸಂಪಾದಕ ನರೇಂದ್ರ ತೂದಳ್ಳಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ವಾಟ್ಸಾಪ್‌ ಫೇಸ್ಬುಕ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ್ದು ಇದರಲ್ಲಿ ಅತಿಭ್ರಷ್ಟ ಪತ್ರಕರ್ತರು ಎಂಬ ಪಟ್ಟಿ ನೀಡಲಾಗಿದೆ. ಈ ಪಟ್ಟಿಯಲ್ಲಿ ನನ್ನ ಹೆಸರಿನ ಉಲ್ಲೇಖವಿದ್ದು ಸಾಕ್ಷಾಧಾರಗಳಿಲ್ಲದ ಹಲವು ಆರೋಪಗಳನ್ನು ಮಾಡಲಾಗಿದೆ. ಅಲ್ಲದೇ ನನ್ನನ್ನು ಗುರಿಯಾಗಿಸಿಕೊಂಡು ಮಾನಹಾನಿ ಮಾಡುವ ಭಾಷೆಯನ್ನು ನಿರ್ದಯವಾಗಿ ಬಳಸಿ ತೇಜೋವಧೆ ಮಾಡಲಾಗಿದೆ. ಈ ಸಂಬಂಧ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು ಎಂದು ದೂರಿನಲ್ಲಿ ವಿನಂತಿಸಲಾಗಿದೆ. ರುದ್ರಣ್ಣ ಹರ್ತಿಕೋಟೆಯವರು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ದೂರಿನ ಪ್ರತಿ ಪೀಪಲ್ ಮೀಡಿಯಾಗೆ ಲಭ್ಯವಾಗಿದೆ‌. ಅದರಲ್ಲಿ ಅವರು, ʼವೈರಲ್ ಆದ ಪೋಸ್ಟ್ ನಲ್ಲಿ ತೇಜೋವಧೆಯ ಜೊತೆಗೆ ತಮ್ಮ ದೇಹದ ಕುರಿತೂ ವ್ಯಂಗ್ಯವಾಡಿ (ಬಾಡಿ ಶೇಮ್) ಅಪಮಾನಿಸಲಾಗಿದೆʼ ಎಂದು ದೂರಿದ್ದಾರೆ.  

ಶಂಕರಪುರ ಠಾಣೆಯಲ್ಲಿ ಸಲ್ಲಿಸಿರುವ ದೂರಿನ ಪ್ರತಿ

ಇತ್ತೀಚೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಉಡುಗೊರೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪತ್ರಕರ್ತರಿಗೆ ಕಳಿಸಿದ್ದ ಆಘಾತಕಾರಿ ಸುದ್ದಿ ಪೀಪಲ್‌ಮೀಡಿಯಾ ಮೂಲಕ ಬಯಲಾಗಿತ್ತು. ತದನಂತರ ಮಾಧ್ಯಮದ ಭ್ರಷ್ಟಾಚಾರ ಕುರಿತಂತೆ ಪೀಪಲ್‌ಮೀಡಿಯಾವು ಆರೋಗ್ಯಕರ ಸಂವಾದವನ್ನೂ ಆರಂಭಿಸಿತ್ತಲ್ಲದೆ ಹಲವಾರು ಹಿರಿಯ ಪತ್ರಕರ್ತರು ಅಮೂಲ್ಯ ಸಲಹೆಗಳನ್ನು ನೀಡತೊಡಗಿದ್ದರು. ಈ ಸಂದರ್ಭದಲ್ಲಿ ದಿಡೀರನೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಅಡ್ರೆಸ್‌ ಇಲ್ಲದ ಬರೆಹವೊಂದು ಹಲವು ಪತ್ರಕರ್ತರ ಮೇಲೆ ವೈಯಕ್ತಿಕ ದಾಳಿಯ ರೂಪದಲ್ಲಿ ಕಾಣಿಸಿಕೊಂಡು ವೈರಲ್‌ ಆಗಿತ್ತು. ದುರದೃಷ್ಟವೆಂದರೆ ಅದೊಂದು ತೀರಾ ವೈಯಕ್ತಿಕ ದಾಳಿಯ ರೂಪದ ಬರೆಹವಾಗಿದ್ದು ಆರೋಗ್ಯಕರ ಚರ್ಚೆಗೆ ದಾರಿ ಮಾಡುವುದಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದ್ದರೂ ಹಿರಿಯ ಕವಯತ್ರಿ ಪ್ರತಿಭಾ ನಂದಕುಮಾರ್‌ ಅವರು ತಮ್ಮ ಫೇಸ್ಬುಕ್‌ ಗೋಡೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಹಲವಾರು ಪತ್ರಕರ್ತರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದು ಒಟ್ಟಾರೆ ಮಾಧ್ಯಮ ಭ್ರಷ್ಟಾಚಾರ ಕುರಿತ ಚರ್ಚೆಯನ್ನೇ ಹಳ್ಳ ಹಿಡಿಸಿತ್ತು.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಬರೆಹದ ಕುರಿತು ದೂರುಗಳು ದಾಖಲಾಗಿರುವುದು ಯಾವ ತಿರುವು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು