Saturday, August 31, 2024

ಸತ್ಯ | ನ್ಯಾಯ |ಧರ್ಮ

ನಿರಂತರ ಮಳೆಯಿಂದ ಉಂಟಾದ ಬೆಳೆ ಹಾನಿಯ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಆಗಸ್ಟ್ 31; ಮುಂಗಾರು ಹಂಗಾಮಿನಲ್ಲಿ ಅತಿ ಮತ್ತು ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಕಂದಾಯ ಮತ್ತು ಕೃಷಿ ಇಲಾಖೆ ಮಾಡುತ್ತಿರುವ ಜಂಟಿ ಸಮೀಕ್ಷೆಯನ್ನು ಬೇಗ ಪೂರ್ಣಗೊಳಿಸಿ, ವರದಿ ನೀಡಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಆಗಿದೆ. ಈ ಕುರಿತು ಕಂದಾಯ ಮತ್ತು ಕೃಷಿ ಇಲಾಖೆಯಿಂದ ನಡೆದಿರುವ ಜಂಟಿ ಸಮೀಕ್ಷೆಯನ್ನು ಬೇಗನೆ ಪೂರ್ಣಗೊಳಿಸಬೇಕು. ಈ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಪಂಚಾಯತ ರಾಜ್ಯ ಇಂಜನಿಯರಿಂಗ್ ವಿಭಾಗದ ವ್ಯಾಪ್ತಿಗೆ ಒಳಪಡುವ ಸುಮಾರು 624 ಕಿ.ಮೀ. ರಸ್ತೆ ಮಳೆಯಿಂದ ಹಾನಿ ಆಗಿದ್ದು, ಇಲಾಖೆಯಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ತುರ್ತು ಅಗತ್ಯವಿರುವ ರಸ್ತೆಗಳನ್ನು ದುರಸ್ತಿ ಮಾಡಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಬೇಕು. ಮತ್ತು 35 ಸೇತುವೆಗಳು ಹಾನಿ ಆಗಿದ್ದು, ರಿಪೇರಿಗೆ ಆದ್ಯತೆ ನೀಡಬೇಕು. ಮತ್ತು ಇವುಗಳ ಕುರಿತು ಸಮಗ್ರ ವರದಿಯನ್ನು ಇಲಾಖೆ ಮುಖ್ಯಸ್ಥರಿಗೆ ತಕ್ಷಣ ಸಲ್ಲಿಸಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಆಗುವ ನೀರು ಸ್ವಚ್ಛ ಮತ್ತು ಶುದ್ಧವಾಗಿರುವಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಕಲ್ಮಶ ಅಥವಾ ಕಲುಷಿತ ನೀರು ಸರಬರಾಜು ಆದ ಬಗ್ಗೆ ದೂರು, ವರದಿ ಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯತನ ಆಧಾರದ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ನೇರವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಮಹತ್ವದಾಗಿದ್ದು, ಕೆಲವು ಇಲಾಖೆ ಅಧಿಕಾರಿಗಳು ಮಾಹಿತಿ ನೀಡದೆ ಗೈರಾಗುವುದು ಅಥವಾ ಬೇರೆ ಅಧಿಕಾರಿ, ಸಿಬ್ಬಂದಿಗಳನ್ನು ಸಭೆಗೆ ನಿಯೋಜಿಸುತ್ತಿರುವುದು ಕಂಡು ಬರುತ್ತಿದೆ. ಗೈರುಹಾಜರಾಗಿರುವ ಅಧಿಕಾರಿಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನೋಟಿಸ್ ನೀಡಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಾಟೀಲ ಮಾತನಾಡಿ, ತುರ್ತು ಕಾಮಗಾರಿ ನಿರ್ವಹಣೆಗೆ ರೂ. 1.16 ಕೋಟಿ ಅನುದಾನ ಬಂದಿದ್ದು, ಆದ್ಯತೆ ಮೇಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರ ಮಾತನಾಡಿ, ಮಳೆಯಿಂದಾಗಿ 64 ಅಂಗನವಾಡಿ ಕೇಂದ್ರಗಳಿಗೆ ಹಾನಿ ಆಗಿದ್ದು, ಇದರಲ್ಲಿ 44 ಅಂಗನವಾಡಿ ಕೇಂದ್ರಗಳ ಕಟ್ಟಡ ದುರಸ್ತಿಗೆ ನಮ್ಮ ಇಲಾಖೆಯಿಂದ ಅನುದಾನ ಬಿಡುಗಡೆ ಆಗಿದ್ದು, ಶೀಘ್ರದಲ್ಲಿ ಏಜನ್ಸಿ ಪಿಕ್ಸ್ ಮಾಡಿ, ಕಾರ್ಯಾದೇಶ ನೀಡಲಾಗುವುದು ಎಂದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಸುಜಾತಾ ಹಸವೀಮಠ ಅವರು ಮಾತನಾಡಿ, ಜಿಲ್ಲೆಯಲ್ಲಿ ಡೆಂಗ್ಯೂ ಖಾಯಿಲೆ ನಿಯಂತ್ರಣವಾಗಿದ್ದು, ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಆರೋಗ್ಯ ಕಾರ್ಯಕರ್ತೆಯಿಂದ ಲಾರ್ವಾನಾಶ ಮತ್ತು ಮನೆಮನೆ ಸಮೀಕ್ಷೆ, ಡೆಂಗ್ಯೂ ಹಾಗೂ ಇತರ ಋತುಮಾನದ ಸಾಮಾನ್ಯ ಖಾಯಿಲೆಗಳ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಮಾತನಾಡಿ, ಮಳೆಯಿಂದಾಗಿ ಸೋರುತ್ತಿದ್ದ ಮತ್ತು ದುರಸ್ತಿಗೆ ಅಗತ್ಯವಿದ್ದ ಕೊಠಡಿಗಳಿಂದ ಮಕ್ಕಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ವಿಶೇಷ ಅನುದಾನದಲ್ಲಿ ಇವುಗಳ ದುರಸ್ತಿ ಕಾಮಗಾರಿಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ತುರ್ತು ಅಗತ್ಯವಿರುವ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಎಲ್ಲಾ ತಹಶಿಲ್ದಾರರು, ತಾಲೂಕು ಪಂಚಾಯತ ಇಓಗಳು, ಅಗ್ನಿಶಾಮಕ, ಕೃಷಿ, ತೋಟಗಾರಿಕೆ, ಆಹಾರ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page