Saturday, June 15, 2024

ಸತ್ಯ | ನ್ಯಾಯ |ಧರ್ಮ

ಕೆಂಪು-ಬಿಳಿ-ಹಸಿರು ಸಂಗಾತಿ: ಪ್ರಕಾಶ್ ಹಿಟ್ನಳ್ಳಿ

ಬದುಕಿಡೀ ಚಳುವಳಿಯನ್ನೇ ಹಾಸಿ ಹೊದ್ದ ಪ್ರಕಾಶ್ ಹಿಟ್ನಳ್ಳಿ ಇವತ್ತು ನಮ್ಮನ್ನಗಲಿದ್ದಾರೆ. ಹಿರಿಯ ಸಂಗಾತಿಯ ಬಗೆಗೆ ಬರೆಯಲು ಮೂರು ತಿಂಗಳ ಹಿಂದೆ ಡಾ.ಎಚ್‌ ಎಸ್‌ ಅನುಪಮಾ ಅವರ ಮನೆಗೆ ಹೋಗಿಬಂದಿದ್ದರು. ಅವರ ಸಂದರ್ಶನ ಲೇಖನವನ್ನು ಅವರಿಗೆ  ನುಡಿನಮನವಾಗಿ ಪ್ರಕಟಿಸುತ್ತಿದ್ದೇವೆ.

ವಿಜಯಪುರದ ಬಳಿಯ ಹಿಟ್ಟಿನಹಳ್ಳಿ ಊರಲ್ಲಿ ಅಂದು ಜಾತ್ರೆ. ನೆತ್ತಿ ಮೇಲೇ ನೇಸರಿತ್ತು. ಅದರ ಪರಿವೆಯಿಲ್ಲದ ಮಕ್ಕಳು ಜೀಕುವ, ತೂಗುವ, ಹತ್ತಿಳಿವ ಆಟ ನಡೆಸಿದ್ದರು. ಬೀದಿಬೀದಿಗಳ ದಾಟಿ, ಸಂದಿ ಓಣಿ ಹಾಯ್ದು ಹೋಗುತ್ತಲೇ ಇದ್ದೆವು. ಗಾಳಿ ಬೆಳಕಾದರೂ ಎಲ್ಲಿಂದ ಬಂದೀತು ಎಂದು ನಾವಚ್ಚರಿಗೊಳ್ಳುವಂತೆ ಕಟ್ಟಿದ ಕಿರಿದಾದ ಮಣ್ಣಿನ ಮನೆಗಳು. ಊಟದ ಸಮಯವೆಂದು ಮನೆಗಳಿಂದ ಹೊರಸೂಸುತ್ತಿದ್ದ ನಾನಾ ಪರಿಮಳಗಳು ತಿಳಿಸುತ್ತಿದ್ದವು.

ಕಿರಿದಾದ ಓಣಿಗಳ ಹಾದು ಮನೆಯೆದುರು ನಿಂತೆವು. ಅದು ಮನೆಯೇ? ಸುಣ್ಣಬಣ್ಣ ಕಾಣದ ಮಣ್ಣು, ಕಲ್ಲುಗಳು ಸಹಜ ರೂಪ, ಬಣ್ಣದಲ್ಲಿ ಅಂಟಿಕೊಂಡು ನಿಂತಿದ್ದವು. ಗೋಡೆಗಳು ಮೂಲೆಯಲ್ಲಿ ಕೂಡಿಕೊಂಡು ಅಷ್ಟು ಆಗಸವನ್ನು ಸೂರಿನಡಿ ಹಿಡಿದಿಟ್ಟು ಮನೆಯೆಂಬ ಆವರಣ ಸೃಷ್ಟಿಸಿದ್ದವು. ನೂರಾರು ವರ್ಷ ಹಳೆಯ ಮರದ ಬಾಗಿಲಿನ ಹೊಳಪು ಮಾಸಿದ್ದರೂ, ಮೈ ಬಿರಿಬಿಟ್ಟರೂ ತನ್ನ ಗಾತ್ರ ಮಾತ್ರದಿಂದ ಧೃಡತೆಯನ್ನು ಸಾರುತ್ತ ನಿಂತಿತ್ತು. ಬಾಗಿಲುವಾಡದ ಮೇಲೆ ಮತ್ತು ಎರಡೂ ಬದಿ ಗೂಡುದೀಪಗಳಿಗೆ ಮಾಡಿದ್ದ ಗೂಡುಗಳು ಖಾಲಿಯಿದ್ದವು.

ಹೊರಜಗಲಿಯ ಮೇಲೆ ಪುಳ್ಳೆ ಒಣಗುತ್ತಿವೆ. ಅರೆತೆರದ ಬಾಗಿಲ ಒಳಗೆ ಯಾವ ಸದ್ದೂ ಕೇಳಿಸುತ್ತಿಲ್ಲ. ಒಂದು ಜೊತೆ ಜೋಡೂ ಹೊರಗಿಲ್ಲ. ಬಾಗಿಲಾಚೆ ನೇತಾಡುತ್ತಿದ್ದ ಪೈಪಿನ ತುದಿಗಂಟಿದ ಕೆಇಬಿ ಮೀಟರು ಒಳಗ್ಯಾರೋ ವಾಸವಿರುವರೆಂದು ಸೂಚಿಸಿತು. 200 ವರ್ಷಗಳ ಹಿಂದಿನ ಕಾಲದ ತುಣುಕೊಂದನ್ನು ಅನಾಮತ್ ಎತ್ತಿತಂದು ಸಣ್ಣಪುಟ್ಟ ತಾರಸಿ ಮನೆಗಳ ಈ ಗಲ್ಲಿಯಲ್ಲಿ ಇಟ್ಟಂತೆ ಅನಿಸಿತು.

ಬಾಗಿಲು ಸರಿಸಿದರೆ ಒಳಗೆ ನಿತಾಂತ ಮೌನ. ಅಲ್ಲಿ, ನಡುಮನೆಯಲ್ಲಿ ಮೌನಚಾಪೆಯ ಮೇಲೆ ಎರಡು ಅಂಗೈಗಳನ್ನೇ ತಲೆದಿಂಬಾಗಿಸಿ ಅಂಗಾತ ಮಲಗಿದ ರೂಹು ಕಾಣಿಸಿತು. ಕಾಮ್ರೇಡ್ ಎಂದು ಕರೆದದ್ದೇ ಕೃಶಜೀವವೊಂದು ಧಿಗ್ಗನೆದ್ದು ಕುಳಿತಿತು. ಹಣೆಮೇಲೆ ಕೈಯಿಟ್ಟು ಕಣ್ಣು ಕಿರಿದಾಗಿಸಿ ಉರಿವ ಬಿಸಿಲ ಬೀದಿಯೆಡೆಗೆ ನೋಡಿತು. ಬಂದವರಾರೆಂದು ತಿಳಿದದ್ದೇ ಕಾಷ್ಟವೇ ಜೀವ ತಳೆದಂತಾಯಿತು. ಬರ್‍ಬರ್ರೀ, ಬರ್‍ಬರ್ರೀ ಎನ್ನುತ್ತ ತಡಬಡಿಸಿ ಎದ್ದು ಬಂದವರನ್ನು ಸ್ವಾಗತಿಸಿ, ಕೂರಿಸಲು ತಾವು ಹುಡುಕತೊಡಗಿತು.

ಕಟ್ಟೆಯ ಮೇಲೆ ನಾವು ಕೂರಬೇಕು, ಕೆಳಗೆ ತಾನು ಕೂರಬೇಕು ಎನ್ನುವುದು ಅವರ ವ್ಯವಸ್ಥೆ. ಬೇಡಬೇಡವೆಂದರೂ ಹೊರಹೋಗಿ `ಸಂತೋಷ’ ಎಂದು ಕೂಗಿ ಕರೆದು ನೀರು, ಸಿಹಿ ತರಿಸಿದರು. `ಇದು ಗಾಂವ್ಟಿ ಸ್ವೀಟ. ಕರದಂಟು, ತಗೋರಿ’ ಎಂದು ಎರಡೂ ಕೈ ತುಂತುಂಬಿ ಕೊಡತೊಡಗಿದರು. ಇದನೂ ತಗೋರಿ, ಇನ್ನೂ ತಗೋರಿ, ನೀವು ಕೂಡ್ರಿ, ಇಲ್ಲೆ ಬರ್ರಿ ಎಂದು ಆ ಜೀವ ಪಟ್ಟ ಸಂಭ್ರಮದಲ್ಲಿ, ಅವರ ನಡೆ, ಮಾತು, ಚರ್ಯೆಯಲ್ಲಿ, `ನಿಮ್ಮ ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ವೆಂಬ ಬಸವಣ್ಣನ ಮಾತು ಮೈವೆತ್ತಿಬಂದಂತೆ ಕಂಡಿತು. ಅವರನ್ನು ನೋಡುತ್ತ ಸರಿಯಾಗಿ ಮಾತನಾಡಲು ಸಾಧ್ಯವಾಗುವಂತೆ ನಡುಮನೆಯ ನಡುವೆ ಕುರ್ಚಿ ಮೇಲೆ ಅವರನ್ನು ಕುಳ್ಳಿರಿಸಿ ಸುತ್ತ ನಾವು ಕೂತೆವು.

ಅವರು ಪ್ರಕಾಶ ಕುಲಕರ್ಣಿ. ಶರಣ ಪ್ರಕಾಶ ಕುಲಕರ್ಣಿ. ಅಷ್ಟೇ ಅಲ್ಲ, ಕಾಮ್ರೇಡ್ ಪ್ರಕಾಶ್ ಕುಲಕರ್ಣಿ. ಮನ್ನಿಸಿ, ಪ್ರಕಾಶ ಹಿಟ್ನಳ್ಳಿ.

ಹೌದು. ಪ್ರಕಾಶ್ ಕುಲಕರ್ಣಿಯಾಗಿ ದೊಡ್ಡ ರೈತ ಮನೆತನದ ವಾಡೆಯಲ್ಲಿ ಹುಟ್ಟಿದ ವ್ಯಕ್ತಿ ಪ್ರಕಾಶ್ ಹಿಟ್ನಳ್ಳಿಯಾದದ್ದರ ಹಿಂದೆ ಒಂದು ಪರಿವರ್ತನೆಯ ಕಥನವಿದೆ.

***

1940ರಲ್ಲಿ ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿಯ ಕುಲಕರ್ಣಿಯವರ ಕೃಷಿ ಮನೆತನದಲ್ಲಿ ಹುಟ್ಟಿದ ಹುಡುಗ ಪ್ರಕಾಶ. 10 ತಿಂಗಳ ಎಳವೆಯಲ್ಲಿಯೇ ಮೂರು ಮಕ್ಕಳನ್ನು ಬಿಟ್ಟು ಅವನ ತಾಯಿ ತೀರಿಹೋದಳು. ತಂದೆ ಮರುಮದುವೆಯಾಗಲಿಲ್ಲ. ಪ್ರಾಥಮಿಕ ಶಾಲೆ ಊರಲ್ಲೇ ಮುಗಿಯಿತು. ಬಳಿಕ ಕೃಷಿಕ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದು ನಡೆಯಿತು. ತಾಯಿಲ್ಲದ ಮನೆಯ ಹುಡುಗ ಬಳಗದೊಳಗೇ ಏಕಾಂಗಿಯಂತಿದ್ದ. ಅವನಾಯಿತು, ಅವನ ಲೋಕವಾಯಿತು. ಸದಾ ಏನನ್ನೋ ಯೋಚಿಸುತ್ತ ಹುಬ್ಬು ಗಂಟಾಗಿಸಿ, ಕಣ್ಣು ಕಿರಿದಾಗಿಸಿ, ಒಂದುಕಡೆ ಕೂತು ಯೋಚಿಸುತ್ತಿದ್ದ. ನೂರೆಂಟು ಪ್ರಶ್ನೆಗಳು, ಸಂದೇಹಗಳು, ಹಿಂಜರಿಕೆಗಳು. ಜೊತೆಗೊಂದಷ್ಟು ಮನೆತನದ ಹಿರಿಮೆ ಮತ್ತು ಗಂಡು ಗತ್ತು. ತಾನು, ತನ್ನ ಸ್ಥಿತಿಗತಿಯ ಬಗೆಗೆ ಕೇಳಿಕೊಳ್ಳುತ್ತ ಬೆಳೆದ ಅವನು ಪ್ರೌಢಶಾಲೆ ಪ್ರವೇಶಿಸಿದ. ಚುರುಕಿನ ಹುಡುಗ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾದರೂ ಎಸ್ಸೆಸ್ಸೆಸಿ ಫೇಲಾದ. ಕಾರಣ ಅವನ ಗಮನ ಓದಿನಿಂದ ಹೋರಾಟದತ್ತ ತಿರುಗಿತು. ವೆಂಕಟೇಶ್ ಕುಲಕರ್ಣಿ ಅವನ ಮಾಸ್ತರಾಗಿದ್ದರು. (ನಂತರ ವಕೀಲರಾದರು.) ಅವರು ವಿದ್ಯಾರ್ಥಿಗಳಲ್ಲಿ ಹೋರಾಟದ ಪ್ರವೃತ್ತಿ ಬೆಳೆಸುತ್ತಿದ್ದರು. ಒಂದುದಿನ ಹಳತಾದ ಶಾಲೆಯ ಕಟ್ಟಡ ಕುಸಿದುಬಿತ್ತು. ಸದ್ಯ, ಮಕ್ಕಳು ಒಳಗಿರದಿದ್ದರಿಂದ ಪ್ರಾಣಾಪಾಯ ತಪ್ಪಿತು. ಅದು ಶಿಥಿಲವಾಗಿದೆಯೆಂದು ಎಷ್ಟು ಬಾರಿ ಪತ್ರ ಬರೆದರೂ, ಖುದ್ದು ಹೋಗಿ ಹೇಳಿದರೂ ರಿಪೇರಿ ಮಾಡಿಸದ ಆಡಳಿತದವರಿಗೆ ಚುರುಕು ಮುಟ್ಟಿಸಬೇಕೆಂದು ಮಾಸ್ತರರು ಇಡೀ ಶಾಲೆಯ ಮಕ್ಕಳನ್ನು ಮುನ್ಸಿಪಾಲ್ಟಿ ಕಟ್ಟಡಕ್ಕೆ ಒಯ್ದರು. ಅಲ್ಲೇ ಒಳಗೆ ಕೂರಿಸಿ ಪಾಠ ಮಾಡತೊಡಗಿದರು. ಅದು ಸಂಘರ್ಷ, ಹೋರಾಟದೆಡೆಗೆ ಎಳೆಯ ಹುಡುಗ ಪ್ರಕಾಶನ ಮೊದಲ ಪಯಣ. ಬಳಿಕ ಬಿಜಾಪುರದಲ್ಲಿ ಆರಂಭವಾಗಿದ್ದ `ಜಾಗೃತ ಭಾರತ ಸಂಘಟನೆ’ಯಲ್ಲಿ ಹುಡುಗ ಸೇರಿಕೊಂಡ. ಮುಂದಿನದನ್ನು ಪ್ರಕಾಶ್ ಅವರ ಮಾತುಗಳಲ್ಲೇ ಕೇಳಬೇಕು:

`ಅಲ್ಲಿ ಲಾಯದಗುಂದಿ ಅಂತ ನಂ ಲೀಡರೊಬ್ಬರಿದ್ದರು. ಅವರಿಗೆ ಸಿದ್ಧಪ್ಪ ನಿಂಬರಗಿ ಲೀಡರ್. ನಿಂಬರಗಿ ಅವರಿಗೆ ಡಾಕ್ಟರ್ ಗಂಗಾಧರ ಅಧಿಕಾರಿ ಲೀಡರ್. ಡಾಕ್ಟರ್ ಅಧಿಕಾರಿ ಗೊತ್ತೇನಿಲ್ಲೋ? ಗೊತ್ತಿರಲೇಬೇಕು ನಿಮಗ. ಜರ್ಮನಿಯ ಬರ್ಲಿನಿನಲ್ಲಿ ಕೆಮಿಸ್ಟ್ರಿ ಪಿಎಚ್ಡಿ ಮಾಡಿದ್ದರು. ಐನ್‍ಸ್ಟೀನ್, ಜೆ. ಸಿ. ಬೋಸ್, ಸಿ. ವಿ. ರಾಮನ್ ಅಂಥವರ ಪರಿಚಿತರು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರು. ಮೀರತ್ ಕೇಸಿನಲ್ಲಿ ಜೈಲಿಗೆ ಹೋದ 33 ಜನರಲ್ಲಿ ಅವರೂ ಒಬ್ಬರು. ಅವರು ನಾಲ್ಕು ಜನರನ್ನು ತಯಾರು ಮಾಡಿದರು: ಬಾಲಸಿಂಗ್ ಮಾಸ್ತರ್, ಸದಪ್ಪ ಅಕ್ಕಿ, ರಾಜಪ್ಪ ದುಬೆ, ಲಾಯದಗುಂದಿ. ಅದರಾಗ ದುಬೆ ಅನ್ನೋರು (ಬಿಜಾಪುರದಿಂದ ಆಮೇಲೆ ಎರಡು ಸಲ ಎಂಪಿ ಆದ್ರು), ಕಮ್ಯುನಿಸ್ಟ್, ಸೋಷಲಿಸ್ಟ್, ಅಂಬೇಡ್ಕರ್ವಾದಿ ಅಂತ ಯಾರ್ಯಾರು ಕಾಂಗ್ರೆಸ್ಸಿಂದ ದೂರದೂರ ಇರತಿದ್ದರೋ, ಅವರನ್ನೆಲ್ಲ ಎಳೆದೆಳೆದು ಕಾಂಗ್ರೆಸ್ಸಿಗೆ ತರತಿದ್ರು. `ಕಾಂಗ್ರೆಸ್ ನಿಮ್ದೂ ಹೌದು, ನಮ್ಮಂಥಾ ಎಲ್ಲರ್ದೂ ಹೌದು. ನೀವೂ ಬರ್ರಿ, ಕಾಂಗ್ರೆಸ್‍ನ ಕಬ್ಜಾ ಮಾಡ್ರಿ’ ಅಂತಿದ್ರು. ಎಸ್. ಎಸ್. ಅರಕೇರಿ ಅಂತ. 1967ರಾಗ ಎಂಎಲ್‍ಎ ಆಗಿದ್ರು. ಅವರ್ನೂ ಕಾಂಗ್ರೆಸ್ಸಿಗೆ ಕರಕಂಡು ಬಂದ್ರು.

ಕಾಂಗ್ರೆಸ್ ಬಿಟ್ಟು ಎಡಕ್ಕೆ ಯಾಕೆ ಬಂದ್ರಿ?

ಬ್ಲಿಟ್ಸ್‌ನಂತಹ ಪತ್ರಿಕೆ ಓದಿ, ಪಾಟೀಲ ಪುಟ್ಟಪ್ಪ, ಬೊಮ್ಮಾಯಿ ಬರೆದ ಎಂ. ಎನ್. ರಾಯ್ ಕುರಿತ ಬರಹ ಓದಿ, ಅನ್ಯಾಯದ ವಿರುದ್ಧ ಹೋರಾಟ ಅಂದ್ರೆ ಕಾಂಗ್ರೆಸ್ ವಿರುದ್ಧ ಹೋರಾಟ ಅಂತ ಅನಿಸಿಬಿಟ್ಟಿತ್ತು. ಕಾಂಗ್ರೆಸ್ ಬಗ್ಗೆ ವಿರೋಧ ಭಾವನೆ ಬಂದಿತ್ತು. ನನ್ನಂಗೆ ಅನಿಸಿದೋರು ಅಲ್ಲಾವುದ್ದೀನ್ ಹಿಪ್ಪರಗಿ, ದಸ್ತಗೀರ್ ಸಾಹೇಬ್ ಕೊಲ್ಹಾರ್, ಬಾಲಸಿಂಗ್ ಉಸ್ತಾದ ಮೊದಲಾಗಿ ಬಾಳ ಮಂದಿ ಇದ್ರು. ಇವರೆಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಕಮ್ಯುನಿಸ್ಟ್ ಪಕ್ಷ, ಚಿಂತನೆ ಬೆಳೆಯಕ್ಕೆ ಕಾರಣ ಆದವರು. 1945-46ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಶುರು ಮಾಡಿದ್ರು. ನಾನು ಕಾಂಗ್ರೆಸ್ ಬಿಟ್ಟು ಎಡಕ್ಕೆ ಬರಲು ಡಾ. ಸಂಗಪ್ಪ ಮನಗೂಳಿ ಕಾರಣ. ಅವರು ನಾನಾಸಾಹೇಬರ ತೂಫಾನ್ ಸೇನೇಲಿದ್ರು. ರಾಮದುರ್ಗ, ಜತ್ತ್, ಸಾಂಗ್ಲಿ, ಜಮಖಂಡಿ ಸಂಸ್ಥಾನಗಳ ವಿರುದ್ಧ ಪ್ರಜಾ ಪರಿಷತ್ ಕಟ್ಟೋದ್ರಲ್ಲಿ ಅವರು ಪಾತ್ರ ದೊಡ್ಡದು. 1962ರಲ್ಲಿ ಜಾಗೃತ ಭಾರತ ಪತ್ರಿಕೆ ಶುರುವಾಯ್ತು. ನಮ್ಮ ಸಂಬಂಧ ಗಾಢವಾಗಿ ಬೆಳೀತು. ರಾವ್ ಬಹಾದೂರ್, ಸದಪ್ಪ ಅಕ್ಕಿ ಅವರ ಪರಿಚಯ ಆಯ್ತು. ಇಂಚಗೇರಿ ಸಂಪ್ರದಾಯದ ಪರಿಚಯಾನೂ ಆತು. ಇಂಚಗೇರಿ ಊರಂತೂ ಕಮ್ಯುನಿಸ್ಟ್ ಊರಿನಂಗಿತ್ತು. ಅಲ್ಲಿ ಮಕ್ಕಳಿಗೆ ಲೆನಿನ್, ಮಾವೋ ಅಂತೆಲ್ಲ ಹೆಸರಿಟ್ಟಿದ್ರು. ಆ ಹೆಸರಿನೋರು ಈಗೂ ಸಿಗತಾರೆ ನಿಮಗೆ. ಅವರು ಭೂಮಾಲಿಕರ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಭೀಮಾ ನದಿ ದಂಡೆಯ ಜಾಗೀರದಾರರ ವಿರುದ್ಧ ಭಾಳ ಹೋರಾಟ ನಡೆದವು. ಈ ಹೋರಾಟ ಕಟ್ಟಲಿಕ್ಕೆ ಅಂತನೇ ರೈತಸಂಘದ ಯುನಿಟ್ಸ್ ಇದ್ದವು. ತೆಲಂಗಾಣ, ಬಂಗಾಳ, ಯುಪಿ ತರಾನೇ ಇಲ್ಲೂ ಸಣ್ಣಪುಟ್ಟ ಭೂ ಹೋರಾಟ ನಡೆದೇ ಇತ್ತು. ಇಂಚಗೇರಿ ಮಹಾದೇವಪ್ಪನವರ ನಂತರ ಭೂಪಾಲ ನಾಂದ್ರೇಕರ್ ಅಲ್ಲಿಗೆ ಬಂದ್ರು. ಇಂಚಗೇರಿ ಮಠ ಹೇಗಿತ್ತು ಅಂದ್ರೆ ಎಲ್ಲೇ ಏನೇ ತಕರಾರು ನಡೀಲಿ, ಮಠ ಮಧ್ಯಪ್ರವೇಶ ಮಾಡಿ ಲೋಕಲ್ ಕೋರ್ಟ್ ತರಹ ನ್ಯಾಯ ಬಗೆಹರಿಸ್ತಾ ಇತ್ತು. ಯಾವ್ದೇ ಭಾಗದಲ್ಲಿ ಹೋರಾಟ ನಡೀಲಿ, 200, 300, 500 ಜನ ಕಾರ್ಯಕರ್ತರ ತಂಡ ತಗಂಡು ಇಂಚಗೇರಿಯ ಲೀಡರ್ಸ್ ಬರ್ತಿದ್ರು. ಸರ್ಕಾರದೋರು ಎಷ್ಟೋ ಸಲ ಡಾಂಗೆ, ಇಂಚಗೇರಿ ಮಹಾದೇವಪ್ಪ, ಡಾ. ಮನಗೂಳಿ ಅವರನ್ನೆಲ್ಲ ಅರೆಸ್ಟ್ ಮಾಡಿ ಆರ್ಥರ್ ರೋಡ್ ಜೈಲಲ್ಲಿಟ್ಟಿದ್ರು. ಒಂದ್ಸಲ ಜೈಲಲ್ಲಿ ಡಾಂಗೆ ಮರ್ಡರ್ ಆಗ್ತಿದ್ರು. ಅವರನ್ನು ಅಂಕೋಲಾದ ಗಣು ನಾಯ್ಕರ್ ಉಳಿಸಿದ್ದು. ಆಗ ಬಿ. ವಿ. ಕಕ್ಕಿಲ್ಲಾಯ ಅವರ ಹತ್ರ ಭೂಗತ ಪಾರ್ಟಿಯ ಕೆಲವು ಜವಾಬ್ದಾರಿಗಳಿದ್ವು. ಅವರು ಮಹಾರಾಷ್ಟ್ರ ಪಾರ್ಟಿ ಯುನಿಟ್‍ಗಿಂತ ಬೆಂಗಳೂರು ಯುನಿಟ್ ಜೊತೆ ಹೆಚ್ಚು ಸಂಪರ್ಕ ಇಟ್ಕಂಡಿದ್ರು. ಹಿಂಗಾಗಿ ಕರ್ನಾಟಕದ ಏಕೀಕರಣಕ್ಕೆ ಮುಂಚೆನೇ ನಾವು ಬೆಂಗ್ಳೂರಿನ ಪಾರ್ಟಿ ಜನರ ಜೊತೆಗೆ ಹೆಚ್ಚು ಸಂಪರ್ಕ ಬೆಳೆಸಿದ್ವಿ.

ನೀವು ಜಮೀನ್ದಾರರ ಮನೆಯವರು. ಭೂ ಹೋರಾಟದಲ್ಲಿ ತೊಡಗಿದ್ದಕ್ಕೆ ಮನೆಯಲ್ಲಿ ಏನೂ ಹೇಳಲಿಲ್ವಾ?

ಯಾರೂ ನನ್ನನ್ನ, ನನ್ನ ಕೆಲ್ಸಾನ ಕೇರ್ ಮಾಡ್ಲಿಲ್ಲ. ಇಂವಾ ಏನೋ ಹೇಳತಾನ, ಹೋರಾಟ ಗೀರಾಟ ಅಂತ ಅನ್ನತಾನ, ಹಂಗೆಲ್ಲಾಕತಿ ಅಂತ ಬಾಳ ಧೈರ್ಯದಾಗಿದ್ರು. ಮುಂಬೈ ಪ್ರಾಂತ್ಯದೊಳಗ ಒಂದು ಕುಟುಂಬ ಹೆಚ್ಚಂದ್ರ 52 ಎಕರೆ ಜಮೀನು ಇಟಗೋಬೌದು; ಒಕ್ಕಲುತನಕ್ಕ ಬ್ಯಾರೇದರಿಗೆ ಕೊಟ್ಟ ಜಮೀನು ಉಳೋರಿಗೇ ಸೇರತದೆ ಅನ್ನೋ ಕಾಯ್ದೆನ ಮೊರಾರ್ಜಿ ದೇಸಾಯಿ ಜಾರಿಗೆ ತರತಾನೆ ಅಂತ ಸುದ್ದಿ ಬಿತ್ತು. ಅದು ಗೊತ್ತಾಗಿದ್ದೇ ಮೋಜಣಿ ಇಲಾಖೇಲಿ ನೌಕರ ಆಗಿದ್ದ ನಮಪ್ಪ ಹೊಲಾ ಎಲ್ಲ ವಾಪಸ್ ತಗಂಡು ಒಕ್ಕಲುತನಾ ಚಾಲೂ ಮಾಡಿದ. ನಾ ಸಣ್ಣಾವಿದ್ದಾಗೇ, 10 ತಿಂಗಳಾ ಇರಬೇಕು, ಅವ್ವ ತೀರ್ಕಂಡಿದ್ಲು. ಮತ್ತೆ ಮದುವೆ ಆಗಲಿಲ್ಲ. ನಮ್ಮನ್ನು ನೋಡಿಕಳೋ ಕೆಲಸ, ರೈತಾಪಿ ಎಲ್ಲಾ ಮಾಡಾಕ ಹತ್ತಿದ್ದ. 1966ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಾಗ ಟೆನನ್ಸಿ ತರಹದ ಏನೋ ಮಾಡಾಕ್ ಹೋದ್ರು. ಆದ್ರೆ ಅದು ಸರಿ ಇರ್ಲಿಲ್ಲ. ಉಳೋರಿಗೆ ಸಿಗೋ ಭೂಮಿಗೂ ಒಂದು ಸೀಲಿಂಗ್ ಹಾಕಿದ್ರು. ಅದಕ್ಕೆ ಬಾಳ ವಿರೋಧ ಬಂದವು. ಆದರೆ ದೇವರಾಜ ಅರಸು ಕಾಯ್ದೆ ಬಂತಲ್ಲ, ಅದು ನಿಜಕೂ ರೆವಲ್ಯೂಷನರಿನೇ. ಬಂಗಾಳ, ಕೇರಳದ ಕಾಯ್ದೆಕಿಂತಾ ಅದು ರೆವಲ್ಯೂಷನರಿ. ಯಾಕಂತಿರಾ? ಅಲ್ಲಿ ಪಹಣಿಯಿರಬೇಕು, ಉಳುಮೆ ಮಾಡುತ್ತಿರುವ ರೈತರ ಹೆಸರಿರಬೇಕು ಅಂದಿದ್ರು. ಇಲ್ಲಿ ಅದೇನಿಲ್ಲ. ಸಾಕ್ಷಿ ಸಾಕು. ಟ್ರಿಬ್ಯೂನಲ್ ಮಾಡಿಬಿಟ್ರು, ಲೋಕಲ್ ಟ್ರಿಬ್ಯೂನಲ್. ಅದರಲ್ಲಿ ಬೇರೆಬೇರೆ ಗುಂಪಿನ ಹಿರೇರನ್ನ ಹಾಕಿ ಒಬ್ರಿಗೊಬ್ರು ಸುಳ್ಳು ಹೇಳಲಾರದಂಗ ಸತ್ಯ ಸೀಲ್ ಆಗೋಹಂಗ ಆತು. ನಿಂ ಕಾರವಾರ, ದಕ್ಷಿಣಕನ್ನಡ ಜಿಲ್ಲೆ ವಳಗ ಬಾರೀ ಸಕ್ಸಸ್ ಆಯ್ತು. ಹೌದಿಲ್ಲೋ? ಆದ್ರ ನಂ ಜಿಲ್ಲೆಯೊಳಗ ಬಾಳ ಮಂದಿ ಉಳುಮಿ ಮಾಡೋರ ಹತ್ರ ಜುಲುಮಿಂದ ಸಹಿ ತಗೊಂಡ್ರು. ಅದ ತಿಳಿದು ನಾವು ಹೋರಾಟ ಮಾಡ್ತಿದ್ದೆವು.

ಇನ್ನ ನಂ ಮನೆಯೋರು. ಅವರು ನನ್ನ ಲೆಕ್ಕದಿಂದ ಬಿಟ್ಟಿದ್ರು. ಯಾಕ? ನಾ 16 ವರ್ಷಕ್ಕ ಜನಿವಾರ ತಗದು ಹರ್ದುಹಾಕಿದ್ದೆ. ಗುಡಿಗೆ ಹೋಗೋದು ಬಿಟ್ಟಿದ್ದೆ. ಹಾಗಂತ ಮನೇ ಬಿಡಲಿಲ್ಲ. ಹೋಗಿ ಬರತಾ ಇರ್ತಿದ್ದೆ. ಅಪ್ಪ ಇಲ್ಲಾದ ಮ್ಯಾಲ ಜಮೀನು ಉಳುಮಿ ಮಾಡ್ತಿದ್ದೆ. ನಂಗೆ ಅವರು ಸಪೋರ್ಟೂ ಕೊಡ್ಲಿಲ್ಲ, ವಿರೋಧನೂ ಮಾಡಲಿಲ್ಲ. ಅವರಿಗೆ ಎರಡು ವಿಷ್ಯ ಗೊತ್ತಿದ್ವು: ಇಂವಾ ಕೆಣಕಿದರ ಸುಮ್ಮಿರಾಂವಲ್ಲ ಅನ್ನೋದೊಂದು. ಮತ್ತ ಇಂವಾ ಕೆಟ್ ಕೆಲ್ಸಾ ಮಾಡಂಗಿಲ್ಲ ಅನ್ನೋದು ಇನ್ನೊಂದು. ನಾ ಯಾವ ಪುಸ್ತಕ ತಂದು ಓದತಿದ್ನೋ ನಮಪ್ಪ ಅವನೆಲ್ಲಾ ಓದತಿದ್ದ. ಅವರಿಗೆ ನಂದೇನು ಅಂತ ಗೊತ್ತಿತ್ತು. ಹಂಗಾಗಿ ಯಾವುದಕೂ ಜುಲುಮಿ ಮಾಡಲಿಲ್ಲ.

ಪ್ರೇಮ ಗೀಮ?

ಏ ಎಲ್ಲಾದ್ರೂ ಐತೆನು? ಆಗೆಲ್ಲ ಗಂಡು, ಹೆಣ್ಣು ಒಟ್ಟು ಕೂಡಿ ಕೆಲ್ಸಾ ಮಾಡೋ ಹೊಕ್ಕು ಬಳಕೆನೇ ಇದ್ದಿದ್ದಿಲ್ಲ. ಮುಂಬೈ, ಕಲಕತ್ತಾದಂತ ಕಡೆ ಇದ್ದಿರಾಕಬೇಕು ಅಷ್ಟ. ಕರ್ನಾಟಕದ ಕಮ್ಯುನಿಸ್ಟ್ ವಲಯದಾಗಂತೂ ಹೆಣ್ಣುಮಕ್ಕಳು ಗಂಡುಮಕ್ಕಳು ಒಗ್ಗೂಡಿ ಕೆಲಸಾ ಮಾಡೋದು ಒಟ್ ಇರ್ಲಿಲ್ಲ.

ಆದರೆ ಕಾಂಗ್ರೆಸ್ಸಿನಲ್ಲಿ, ನೀವಿದ್ದ ಸೇವಾದಳದಲ್ಲಿ ಸಾಕಷ್ಟು ಹೆಣ್ಣುಮಕ್ಕಳಿದ್ರು. 300 ವಿಧವೆಯರ ಒಂದು ಮಹಿಳಾ ತಂಡವನ್ನು ಉಮಾಬಾಯಿ ಕುಂದಾಪುರ ಕಟ್ಟಿದ್ದರು. ಗಾಂಧೀಜಿಯವರ ಕಾಲದಲ್ಲಿ ಹೆಚ್ಚು ಹೆಣ್ಣುಮಕ್ಕಳು ಸಾಮಾಜಿಕವಾಗಿ ತೊಡಗಿಕೊಂಡಿದ್ರು.

ಹೌದು. ಉಮಾಬಾಯಿ, ಯಶೋಧರಮ್ಮ ತರಾ ಬಾಳ ಮಂದಿ ಹೆಣಮಕ್ಕಳು ಕಾಂಗ್ರೆಸ್ಸಿಗೆ ಬಂದ್ರು. ಆದರ ಕಮ್ಯುನಿಸ್ಟ್ ಪಕ್ಷದೊಳಗ ಅಷ್ಟು ನಡೀಲಿಲ್ಲ ಅಂತ ಅನಸತದ. ಸಮಸಮಾಜ ಅನ್ನೋವಂತಾ ನಾವು, ಹುಡಕಿ ಹುಡುಕಿ ಇನ್ನೂ ಅಷ್ಟು ಹೆಣಮಕ್ಳನ್ನ ಸೇರಿಸಿಕೋಬೇಕಿತ್ತು ಅಂತನಿಸತದ.

ಸಮಸಮಾಜ ಕನಸಿನ ಪಕ್ಷದ ಅಜೆಂಡಾದಲ್ಲಿ ಗಂಡುಹೆಣ್ಣು ಸಮಾನತೆ ಇರಲಿಲ್ಲ ಅಂತಾಯ್ತು. ಇವತ್ತಿಗೂ ಕಮ್ಯುನಿಸ್ಟ್ ಪಕ್ಷಗಳ ಪಾಲಿಟ್ ಬ್ಯೂರೋದಲ್ಲಿ ಮಹಿಳೆಯರು ವಿರಳವಾಗಿರೋದಕ್ಕೆ ಇದೇ ಮನಸ್ಥಿತಿ ಕಾರಣವಾಗಿರಬಹುದೇ?

ಹೌದು. ನೀವು ಹೇಳಿದ್ದನ್ನೆಲ್ಲ ನಾನು ಹೊತಗೋತೀನಿ, ತಪ್ಪಾಗೇದ. ಮಹಿಳಾ ಪ್ರಶ್ನೆ ನಮಗ ಮುಖ್ಯ ಆಗಲಿಲ್ಲ. ನಮದಷ್ಟೇ ಅಲ್ಲ, ನನಗನಿಸತದ, ಏಷ್ಯನ್ ದೇಶಗಳಲ್ಲೆಲ್ಲ ಹೀಂಗ ಆಗೇದ. ಮತ್ಯಾರೂ ಬೇಡ, ಕಾಮ್ರೇಡುಗಳು ಅವರವರ ಮನೆ ಹೆಣಮಕ್ಳನ್ನ ಕರಕಂಡು ಬಂದ್ರೂ ಸಾಕಿತ್ತು. ಜಾಗೃತಿ ಬೆಳೀತಿತ್ತು. ಅದು ಆಗಲಿಲ್ಲ. ಇನ್ನು ಯುವಕಾರ್ಯಕರ್ತರಿಗೆ ವೈರಾಗ್ಯ, ಬ್ರಹ್ಮಚರ್ಯಗಳು ಮಹಾ ಮೌಲ್ಯಗಳು ಅನ್ನಂತಹ ವಾತಾವರಣ. ನನ್ನ ಮೇಲೆ ಆನಂದಮಠ ಕಾದಂಬರಿ ಪ್ರಭಾವ, ಅರಬಿಂದೋ, ದಯಾನಂದ ಸರಸ್ವತಿ, ವಿವೇಕಾನಂದರ ಪ್ರಭಾವ ಆಗಿರಬಹುದು. ನಾನಂತ್ರೂ ಗಾಂಧಿ ಪುಸ್ತಕ ಓದೇ ಲಗ್ನಾ ಆಗದು ಬಿಟ್ಟೆ. ಮದಿವಿ ಕಡೆ ಮನಸ್ಸೇ ಹರೀಲಿಲ್ಲ. ಮನಿಯಾಗ ಮದವಿ ಅಂದ್ರು. ಇಲ್ಲ, ಸ್ವಾಮಿ ವಿವೇಕಾನಂದರ ಹಾದೀ ವಳಗ, ಗಾಂಧೀ ಹೇಳಿದಂಗ ಬ್ರಹ್ಮಚಾರಿಯಾಗಿ ಇರತೀನಿ ಅಂದೆ. ಅಣ್ಣಂದ್ರ ಮದುವೆಯಾತು, ಅವರ ಸಂಸಾರ ಬೆಳಕೋತ ಹೋಯ್ತು.

ನೀವು ಅರೆಸ್ಟ್ ಆಗಿದ್ರಾ? ಭೂಗತ ಆಗಿದ್ರಾ?

ಅರೆಸ್ಟ್ ಆಗೇನಿ, ಆದರ ಭೂಗತ ಆಗಲಿಲ್ಲ. ನನ್ನ ಕೆಲಸದ ರೀತೀಲಿ ಯಾವಾಗೂ ಭೂಗತ ಆಗೂ ಪ್ರಸಂಗ ಬರಲಿಲ್ಲ. ಆದರ ಭಾಳ ಮಂದಿ ಭೂಗತ ಆಗಿ ಕೆಲಸಾ ಮಾಡ್ಯಾರ. ಹುತಾತ್ಮ ಆಗ್ಯಾರ. ಮನೀಮಠ ಆಸಿ ಬಿಟ್ಟು ಜೈಲಿನ್ಯಾಗ ಕೊಳತಾರ. ನಾ ಲಾಕಪ್ಪಿನಾಗ ಹೊಡತ ಬಡತ ತಿಂದೇನಿ, ಭೂಗತ ಆಗಲಿಲ್ಲ.

ಕಮ್ಯನಿಸ್ಟೇತರ ಚಟುವಟಿಕೆಗಳಲ್ಲೂ ಇದ್ರಾ?

1955 ಅನಸತದ, ಗೋವಾ ವಿಮೋಚನೆ ಟೈಮಲ್ಲಿ ಬೇರೆ ಬೇರೆ ಕಡೆಯಿಂದ ಕಾರ್ಯಕರ್ತರನ್ನ ಕಳಿಸಿ ಹೋರಾಡಿದವರು ಕಮ್ಯುನಿಸ್ಟರೇ. ಅದು ಇಂಪೀರಿಯಲಿಸ್ಟ್ಸ್ ವಿರುದ್ಧ ಹೋರಾಟದಂಗ ತಿಳಿದಿವಿ. ಆಗೆಲ್ಲ ನಂ ಕಡೆಯಿಂದ ಕಾರ್ಯಕರ್ತರು ಗೋವಾದ ಒಳಗ ನುಸುಳಿದರು.

ಕಮ್ಯುನಿಸ್ಟೇತರ ಚಟುವಟಿಕೆ ಅಂದ್ರ, ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಪಿಎಸ್‍ಪಿ, ಆರ್‍ಪಿಐ ಕೂಡೇ ಕೆಲಸ ಮಾಡತಿದ್ವಿ. 1960ರಲ್ಲಿ ರಾಷ್ಟ್ರೀಯ ಕಾರ್ಮಿಕ ಮುಷ್ಕರ ಆತು. ಜಾಗೃತ ಭಾರತ ಸಂಘಟನೆಯಿಂದ ಒಟ್ಟೇ ಹೋರಾಡಿದ್ವಿ. ನಾನು ಮೂರು ದಿನ ಲಾಕಪ್‍ನಲ್ಲಿದ್ದೆ. ಆಮ್ಯಾಲೆ ನಮ್ಮನ್ನ ಬಿಟ್ರು. ನಂ ಲೀಡರುಗಳನ್ನಷ್ಟೇ ಜೈಲಿಗೆ ಹಾಕಿದ್ರು. 1962ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ನಡೀತು. ಆಗ ಅದನ್ನ ಕೊಯ್ನಾ-2 ಪ್ರಾಜೆಕ್ಟ್ ಅಂತಿದ್ರು. ಮಹಾರಾಷ್ಟ್ರಕ್ಕ 4 ಕೋಟಿ ರೂಪಾಯಿ ಮೊದಲೇ ಕೊಟ್ಟಿದ್ದಿದ್ರೆ ವಿಜಾಪುರನೂ ಬಾಳ ಮೊದಲೇ ಸೊಲ್ಲಾಪುರದಂಗ ಆಗತಿತ್ತು. ಹಂಗಾಗಲಿಲ್ಲ. ಹೋರಾಟ ನಡೀತು. ವಿಜಾಪುರ ನಗರ ಸೇವಾ ಸಮಿತಿ ಅಂತ ಆತು. ಪಿ. ಎಸ್. ಪಾಟೀಲ್ ಅಧ್ಯಕ್ಷರು, ಲಾಯದಗುಂದಿ ಅದರ ಸೆಕ್ರೆಟರಿ. 4 ಲಕ್ಷ ಎಕರೆಗೆ ನೀರುಣಿಸೋ ಕೊಯ್ನಾ-2 ಬ್ಯಾಡ ನಮಗ, 22 ಲಕ್ಷ ಎಕರೆಗೆ ನೀರುಣಿಸೋ ಆಲಮಟ್ಟಿ ಪ್ರಾಜೆಕ್ಟ್ ತಗಳಿ ಅಂತ ಹೋರಾಟ ನಡೀತು. ಅದರಾಗ ನಾನಿದ್ದೆ. ನಾ ಒಬ್ಬನ ಅಲ್ಲ, ನಾವು ಬಾಳ ಮಂದಿ ಹೋರಾಟ ಮಾಡಿದ್ವಿ. ಕೊನೆಗೆ 1964ರಾಗ ಶಾಸ್ತ್ರಿಯವರು 15 ಲಕ್ಷ ಎಕರೆ ಯೋಜನೆಗೆ ಶಂಕುಸ್ಥಾಪನೆ ಮಾಡಿದರು.

ಕಮ್ಯುನಿಸ್ಟ್ ಪಕ್ಷ ವಿಭಜನೆ ಬಗ್ಗೆ ಏನು ಹೇಳ್ತೀರಿ?

ವಿಕೇಂದ್ರೀಕರಣ ಆಗಬೇಕೇ ಹೊರತು ವಿಚ್ಛಿದ್ರ ಆಗಬಾರದು. ನಾ ಇವತ್ಗೂ ಸಾಧ್ಯ ಇದ್ದಷ್ಟೂ ಒಂದಾಗ್ಬೇಕು ಅಂತೀನಿ. ಆದರ ಕಾಲ ಹೀಂಗ ಹೊಂಟದ, ಕಮ್ಯುನಿಸ್ಟ್ ಪಕ್ಷ ಅಷ್ಟ ಅಲ್ಲ, ಎಲ್ಲಾವ್ದೂ ಹೋಳಾಗ್ಯಾವ, ಆಗಲಿಕತ್ತಾವ. ಅದಕ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಿಂತ ಸ್ವಹಿತಾಸಕ್ತಿನೇ ಹೆಚ್ಚು ಕಾರಣ ಅನಸತದ ನನಗ. ನನ್ನ ಮಾತು ಸರಿ ಹೌದಲ್ಲೋ ನೀವ ಯೋಚನೆ ಮಾಡರಿ. ನೆಹರೂ ಸರ್ಕಾರದ ಜೊತೆ ಹೋಗಬೇಕೋ ಬೇಡವೋ ಅನ್ನುವುದೇ ಮುಖ್ಯ ಕಾರಣವಾಗಿ ಪಕ್ಷ ಒಡೀತು. ರಷ್ಯಾ ಜೋಡಿ ನೆಹರೂ ಗೌರ್ಮೆಂಟಿನ ಸಂಬಂಧ ಚಲೋ ಇತ್ತಲ, ಕೆಲವ್ರು ಕಾಂಗ್ರೆಸ್ ಜೊತೆನೇ ಇರೋ ನಿರ್ಧಾರ ಮಾಡಿದ್ರು. ಇಂಡೋಚೀನಾ ಯುದ್ಧ ಆಯ್ತು. ನೆಹರೂ ಜೊತೆ ಇಲ್ಲದೇ ಇರೋರು ಅರೆಸ್ಟ್ ಆದ್ರು. ಅವರೆಲ್ಲ ಸೇರಿ ಹೊಸಾ ಪಕ್ಷ ಹುಟ್ಟತು. ಇದ್ರ ಬಗ್ಗೆ ಬಾಳಾ ಮಾತುಕತೆ ಆಗಿದೆ. ಬಾಳ ಗೊಂದಲ. ಎಷ್ಟು ಮಾತಾಡಿದರೂ ಸಮಾಧಾನ ಆಗಂಗಿಲ್ಲ. ಏನು ಹೇಳದು. ರಷ್ಯಾ ಚೀನಾ ದೂರ ಆಗಿ ಇಲ್ಲಿ ಎರಡು ಪಕ್ಷ ಆದ್ವು ಅನಿಸತದ. ಇಲ್ಲೀ ಬಾಳ ಮಂದಿ ಆಚೆಗ್ ಹೋದ್ರು. ಮೂಲ ಪಕ್ಷದಾಗ ಸ್ವಲ್ಪ ಜನ ಅಷ್ಟ ಉಳದ್ವಿ. ನಾನೂ ಮೂಲ ಪಕ್ಷದಾಗೇ ಉಳದೆ. ಪಕ್ಷ ಒಡದಿದ್ದು ಮತ್ತ ಒಡೀತು, ಮತ್ತ ಒಡೀತು. ಇದುತನಾ 20-30 ಹೋಳಾತಂದರ ಪಕ್ಷ, ಐಡಿಯಾಲಜಿ ಉಳೀತಾವೇನು? ಏನ್ ಡಿಫರೆನ್ಸ್ ಐತಿ, ಕೂತು ಮಾತಾಡಿ ಬಗೆಹರಿಸಿಕೋಬೇಕು, ಅಷ್ಟೇ ಶಿವಾಯ್ ಪಕ್ಷ ಒಡೀಬಾರ್ದು.

ತುರ್ತುಪರಿಸ್ಥಿತಿಯಲ್ಲಿ ನಿಮ್ಮ ಪಕ್ಷ ಕಾಂಗ್ರೆಸ್ಸನ್ನು ಬೆಂಬಲಿಸಿತಲ್ಲ?

ನನ್ನ ತಿಳುವಳಿಕೆ ಮಟ್ಟಿಗೆ ತುರ್ತು ಪರಿಸ್ಥಿತಿ ಬೆಂಬಲಿಸಲಿಕ್ಕೆ ಒಂದೇ ಕಾರಣ ಇದ್ದದ್ದು ನಮಗ. ಇಂದಿರಾ ಗಾಂಧಿ 20 ಅಂಶದ ಕಾರ್ಯಕ್ರಮ ಹಾಕಿದ್ರಲ್ಲ, ಅದು ಪೂರಾ ಆಂಟಿ ಫ್ಯೂಡಲ್ ಕಾರ್ಯಕ್ರಮ ಮತ್ತು ಅದು ಜಾರಿಗೆ ಬರೋದರಲ್ಲಿ ನಮ್ಮ ಹೋರಾಟನೂ ಇತ್ತು. ಹೌದಿಲ್ಲೋ ನೀವ ನೋಡ್ರಿ, 1969ರಿಂದ 1975-76ರ ತನಕದ ಇಂದಿರಾ ಕಾಂಗ್ರೆಸ್ ಬೇರೆ. ಎಮರ್ಜೆನ್ಸಿ ನಂತರದ ಸಂಜಯ್ ಗಾಂಧಿ ಕಾಂಗ್ರೆಸ್ ಬೇರೆ. ಹಾಗಾಗಿ 20 ಅಂಶದ ಕಾರ್ಯಕ್ರಮ ಅನುಷ್ಠಾನ ಆಗಾಕ ಎಮರ್ಜೆನ್ಸಿ ಒಳ್ಳೇ ಅವಕಾಶ ಅಂತ ತಿಳಿದಿವಿ. ಬಾಳ ಕೆಲಸಾ ಮಾಡಿದಿವಿ. ಅದು ಎಲ್ಲೆಲ್ಲಿ ಅನುಷ್ಠಾನ ಆಕೋತ ಹೋಯ್ತೋ, ಅಲ್ಲೆಲ್ಲ ನಾವು ಅರೆಸ್ಟ್ ಆದ್ವಿ. ದೇಶಾದ್ಯಂತ ಒಟ್ಟು 32,000 ಸಿಪಿಐ ಕಾರ್ಯಕರ್ತರು ಬಂಧನಕ್ಕೊಳಗಾಗ್ಯಾರ. ಆದರ ಎಮೆರ್ಜೆನ್ಸಿ ಹೊತ್ತಿನಾಗೂ ಸರ್ಕಾರನ ಸಪೋರ್ಟ್ ಮಾಡಿದ್ದಕ್ಕೆ ಪಕ್ಷ ಬಾರೀ ಹೊಡೆತ ತಿಂದಿದೆ. ಮತ್ತ ಪಾರ್ಟಿ ಒಳಗ ವಿರೋಧ ಅಭಿಪ್ರಾಯ ಬಂದು ಒಡೆದಿದೆ. ನಂ ಲೀಡರಾಗಿದ್ದ ಡಾಂಗೆಯವರನ್ನೆ ತೆಗೆದು ಹಾಕಿದಾರೆ. ಪಕ್ಷ ಮತ್ತ ಮತ್ತ ಒಡೀಲಿಕ್ಕೆ, ದುರ್ಬಲ ಆಗೋದಕ್ಕೆ ಇವೆಲ್ಲ ಕಾರಣ ಆಗ್ಯಾವ. ಆದರ ಈಗ ಯಾಕೋ ದೊಡ್ಡ ಶತ್ರು ಎದುರು ಬಂದು ನಿಂತಂತ ಹೊತ್ತಿನ್ಯಾಗ ಎಲ್ರೂ ಕೂಡುವ ಮಾತಾಡ್ಲಿಕ್ ಹತ್ಯಾರ. ನೀವೂ ಎಲ್ಲಾರ್ನೂ ಕೂಡಿಸಿಕೋತ ಹೊಂಟೀರಿ. ಅದ ಸ್ವಲ್ಪು ಸಮಾಧಾನ ಅನಿಸೇದ. ಒಂದೇ ದಾರೀ ವಳಗ ಹೋಗೋರು, ಒಂದೇ ಕನಸಿನ್ಯಾಗ ದುಡಿಯೋರು ನಾವು `ನಾನು, ನಂದು’ ಆಗಬಾರ್ದು. ಕೂಡಿ ಚರ್ಚಾ ಮಾಡಬೇಕು, ಕೂಡಿ ಕೆಲಸಾ ಮಾಡಬೇಕು, ಕೂಡಿ ಬಾಳಬೇಕು. ಆಗ ಸಮಾಜದಾಗ ಏನಾದರೂ ಬದಲಾವಣೆ ತರೋಕೆ ಸಾಧ್ಯ ಆಗತದ. ಹೌದಿಲ್ಲೋ?

***

ನಾನು ಎನ್ನುವುದನ್ನು ಆದಷ್ಟು ತಪ್ಪಿಸಿಕೊಳ್ಳಲು ನೋಡುತ್ತಿದ್ದ ಆ ಸಂಘಜೀವಿ, `ಏ, ನಾ ಮಾಡಿದ್ದಲ್ಲದು’, `ನಾವೊಬ್ಬನ ಅಲ್ಲ’, `ನಾವು ಅಷ್ಟ್ರೂ ಕೂಡಿ ಮಾಡೇವಿ’ಯಂತಹ ಮಾತುಗಳನ್ನು ಪದೇಪದೇ ಹೇಳುತ್ತ `ನಾನು’ವಿನಿಂದ ದೂರ ಇರಲು ಯತ್ನಿಸಿದ್ದು ವಿಶೇಷವೆನಿಸಿತು. ಅವರ ಆರೋಗ್ಯದ ಬಗೆಗೆ ವಿಚಾರಿಸಿದಾಗಲೂ ಸಹ, ಅದೇನೂ ದೊಡ್ಡ ಸಮಸ್ಯೆಯಲ್ಲವೆಂಬಂತೆ ತೇಲಿಸಿದರು. ಮಾತಾಡುವಾಗ ಬರುವ ಏದುಸಿರು, ಬಾತುಕೊಂಡ ಕಾಲು, ಆಯ ತಪ್ಪುತ್ತ ನಡೆಯುತ್ತಿದ್ದ ಪರಿಗೆ ಮತ್ತೆಮತ್ತೆ ಆರೋಗ್ಯದ ಬಗೆಗೆ ಕೇಳಿದೆವು. `ಹಾರ್ಟಿನ ಪಂಪ್ ಏನೋ ಸರೀ ಕೆಲಸ ಮಾಡತಿಲ್ಲ ಅನತಾರ, ಅದಕ ಮಾತ್ರೆ ಕೊಟ್ಟಾರ. ಊಟ ಎಷ್ಟ್ ಉಣತೀನೋ ಅಷ್ಟು ಮಾತ್ರೆನೂ ತಗೋರಿ ಅನತಾರ. ನಮದೆಲ್ಲ ಮುಗೀತಿನ್ನು, ಗುಳಿಗಿ ಪಳಿಗಿ ಅಂತ ರೊಕ್ಕಾ ವೇಸ್ಟು. ಅದಕ ನಾನ ಕಡಿಮಿ ಮಾಡಿಕೋತ ಬಂದೇನಿ. ಶುಗರು ಬಂದದ ಅಂದರು. ಅದು ಬ್ಯಾಡ, ಇದು ಬ್ಯಾಡ ಅಂದ್ರು. ಈಗ ಯಾರೋ ಹೊಸಬ ಡಾಕ್ಟರು ಸಿಕ್ಕಾರ. ಔಷಧ ಇಲ್ಲದಂಗ ಕಡಿಮಿ ಮಾಡಿ ಕೊಡತೇನಿ ಅಂದಾರ. ಎಲ್ಲಾನೂ ಕಡಿಮಿ ಈಗ’ ಎಂದು ಆರೋಗ್ಯದ ವಿಷಯ ಬೆಳೆಸಲಿಚ್ಛಿಸದೆ ಮೊಟಕುಗೊಳಿಸಿದರು. ಬಹುತೇಕ ಹೋರಾಟಗಾರರು ಪ್ರಾಯದ ಕಾಲದಲ್ಲಿ ಆರೋಗ್ಯದ ಬಗೆಗೆ ಕಾಳಜಿ ವಹಿಸಿರುವುದಿಲ್ಲ. ದೇಹ ಮಾಗಿದಾಗಲೂ ಕಾಯಿಲೆಗೆ ಔಷಧಿ, ಆಹಾರಕ್ರಮ, ವ್ಯಾಯಾಮಗಳ ಬಗೆಗೆ ವಿಶ್ವಾಸವಿಡುವುದಿಲ್ಲ. ಗಾಂಧಿ ಇದಕ್ಕೊಂದು ಅಪವಾದದಂತಿದ್ದದ್ದು ಬಿಟ್ಟರೆ ಬಹುತೇಕರು ಹೀಗೇ ಇರುವರಲ್ಲ ಎಂದುಕೊಳ್ಳುತ್ತ ಮೇಲೆದ್ದೆವು.

ಒಮ್ಮೆ ಅವರ ಮನೆ ಸುತ್ತು ಹಾಕೋಣವೆಂದು ಹೊರಟೆವು. ಆ ಮನೆಗೆ ಎಲ್ಲೂ ಕಿಟಕಿಯಿಲ್ಲ, ಮೇಲೊಂದು ಸಣ್ಣ ಗೂಡಿನಂತಹ ಕಿಂಡಿ ಮಾತ್ರ. ಆದರೂ ನಂಬಿ, ಬಿರುಬೇಸಿಗೆಯ ಒಂದು ದಿನ, ವಿಜಯಪುರ ಜಿಲ್ಲೆಯ ಒಂದೂರಿನಲ್ಲಿ, ಫ್ಯಾನಿಲ್ಲದ ಮನೆಯ ಕೋಣೆಯಲ್ಲಿ ಸೆಕೆಯಿಲ್ಲದೆ ಕುಳಿತಿದ್ದೆವು. ಎರಡು ಮೊಳ ದಪ್ಪದ ಗೋಡೆಗಳ ಒಳಗಿನ ಕೋಣೆಯಂತೂ ಎಸಿ ರೂಮಿನಷ್ಟು ತಣ್ಣಗಿತ್ತು. ಮಣ್ಣುಕಲ್ಲು ಸೇರಿಸಿ ಕಟ್ಟಿದ ಹಳೆಯ ಮನೆಗಳು ಹಾಗೆಯೇ ಎಂಬ ತಂಪು ಎಂಬ ಉತ್ತರ ಹಿಟ್ನಳ್ಳಿಯವರಿಂದ ಬಂದಿತು.

ಆ ಮನೆಯಲ್ಲಿ ಫ್ಯಾನಷ್ಟೇ ಅಲ್ಲ, ಇನ್ನೆಷ್ಟೆಷ್ಟೋ ಇಲ್ಲ. ಮುಂದಿನ ಬಾಗಿಲು ಪೂರಾ ಹಾಕಲಾಗುವುದಿಲ್ಲ. ಹಿಂದಿನ ಬಾಗಿಲಿಗೆ ಕದವೇ ಇಲ್ಲ. ಅಡುಗೆಯ ಮನೆಯ ಒಂದುಕಾಲದ ಸಮೃದ್ಧಿ, ಸುವರ್ಣ ಯುಗಗಳನ್ನು ಸಾರುತ್ತ ಇರುವ ಒಲೆ, ತೋಡೊಲೆ, ನಾಗಂದಿಗೆ, ನೇತು ಹಾಕುವ ಗೂಟ, ನಿಲ, ಕಪಾಟು, ದೀಪದ ಗೂಡುಗಳು ಹತ್ತಾರು ವರ್ಷಗಳಿಂದ ಉಪಯೋಗವಾಗುತ್ತಿಲ್ಲ. ಅಡುಗೆ ಮನೆಯ ಹಿಂದಿನ ಬಾವಿ, ಬಟ್ಟೆ-ಪಾತ್ರೆ ತೊಳೆವ ಕಲ್ಲಿನ ಕಟ್ಟೆಗಳ ಸುತ್ತ ಜಾಲಿ, ಹಳು, ಕಳೆ ಬೆಳೆದು ಅವು ಕಾಣುವುದೇ ಇಲ್ಲ. ಮುಕ್ಕಾಲು ಭಾಗ ಬಳಸದೇ ಇರುವ ಮನೆಯು ಕೆಲವೇ ದಿನದಲ್ಲಿ ನೆಲಸಮವಾಗುವುದನ್ನು ತಪ್ಪಿಸುವ ಪ್ರಯತ್ನಗಳು ನಡೆದಂತಿಲ್ಲ. `ಇನ್ನೇಸು ದಿನ ಇರತೀನಿ ನಾ? ಎಲ್ಲ ಕಾಯಲಿಕತಾರ, ಈ ಮುತ್ಯಾ ಯಾವಾಗ ಸಾಯತಾನಂತ. ನಾ ಸತ್ತ ಕೂಡಲೇ ಈ ಮನೀ ಬೀಳತದ, ತಾರಸಿ ಮನೀ ಏಳತಾವ, ನೋಡತಿರ್ರಿ’ ಎನ್ನುತ್ತ ಮನೆ ರಿಪೇರಿ ಮಾಡಿಸುವ ಸಲಹೆಯನ್ನು ತುಂಡರಿಸಿ ವಿದಾಯದ ಮಾತು ಹೇಳಿದರು. `ನಿಮ್ಮನ್ನ ಬಿಟ್ಟು ಬರತೀನಿ’ ಅಂತ ತೇಲುಗಾಲು ಹಾಕುತ್ತ ನಮ್ಮ ಜೊತೆ ಬಂದರು. ಬೇಡಬೇಡವೆಂದು ನಾವು ಹೇಳಿದರೂ; `ಬಿಸುಲ್ಯಾಗ ಯಾಕ ಹೊಕ್ಕೀರಿ ಅಜ್ಜಾರ. ನಂ ಹುಡುಗ್ರನ್ನ ಕಳಸ್ತೀವಿ, ನೀವ್ ಹೋಗಬ್ಯಾಡ್ರಿ’ ಅಂತ ಬಾಜು ಮನೆಯ ಹೆಂಗಸರು ಕೂಗಿದರೂ ಅಜ್ಜ ಕೇಳಲಿಲ್ಲ. `ಮುತ್ಯಾ ಮಾತು ಕೇಳಂಗಿಲ್ಲ’ ಎಂದು ಅವರು ಗೊಣಗಿಕೊಂಡಿದ್ದು ಸರಿಯೆನ್ನುವಂತೆ ಅಜ್ಜಾರು ಪಂಚೆ ಚುಂಗನ್ನು ಒಂದು ಕೈಲಿ ಹಿಡಿದು, ಮತ್ತೊಂದು ಕೈ ಗಾಳಿಯಲ್ಲಾಡಿಸುತ್ತ ಮೂಲೆಯ ತನಕ ಬಂದು ನಮ್ಮನ್ನು ಕಳಿಸಿಯೇ ಹಿಂತಿರುಗಿದರು.

ಅದು ಕಾಮ್ರೇಡ್ ಪ್ರಕಾಶ್.

ಪ್ರಾಯದಲ್ಲಿ ಘನತೆಯಿಂದ, ದಿಟ್ಟವಾಗಿ ಲೋಕಕ್ಕಾಗಿ ಬದುಕಿ ಜೀವನ ಸವೆಸಿದ ಎಷ್ಟೋ ಹಿರಿಯ ಜೀವಗಳು ಇಳಿಗಾಲದ ಒಂಟಿತನ, ಅಸಹಾಯಕತೆ, ಏಕಾಂಗಿತನಕ್ಕೆ ಹಣ್ಣಾಗಿ ಆತ್ಮಮರುಕದಲ್ಲಿ ಮುಳುಗಿಹೋಗುತ್ತವೆ. ದಯನೀಯ ಮನಸ್ಥಿತಿ ತಲುಪುತ್ತವೆ. ಮತ್ತೆ ಕೆಲವರು ತಾವು ನಂಬಿದ್ದಕ್ಕೆ ವಿರುದ್ಧ ದಿಕ್ಕಿನತ್ತ ಚಲಿಸಿ ಢಿಕ್ಕಿ ಹೊಡೆದು ನಿಂತು ಮಣ್ಣಾಗುವುದೂ ಇದೆ. ಆದರೆ ಈ 83ರ ಹರೆಯದ ಘಾಟಿ ತರುಣ ಪ್ರಕಾಶ ಹಿಟ್ನಳ್ಳಿ ಮಾತ್ರ ಇಳಿಗಾಲದಲ್ಲೂ ತಮ್ಮ ವಿನಯ, ವಿಶ್ಲೇಷಣೆ, ವಿಮರ್ಶೆಯ ಗುಣಗಳನ್ನು ಬಿಟ್ಟುಕೊಡದೆ ಆರೋಗ್ಯಕರ ಮನಸ್ಸನ್ನು ಹೊಂದಿರುವುದು; ವರ್ತಮಾನದ ಸಣ್ಣ ಸೂಕ್ಷ್ಮಗಳನ್ನೂ ಗಮನಿಸಿ ಚರ್ಚಿಸುವುದು ಅನುಕರಣೀಯ ಗುಣವಾಗಿದೆ. ಸೆಕೆ, ಚಳಿ, ದೂಳು, ಬಿಸಿಲು, ಬರಗಳ ಸಮ್ಮಿಶ್ರ ನೆಲ ವಿಜಯಪುರವು ಇಂದು ಅಷ್ಟಿಷ್ಟಾದರೂ ಸಮೃದ್ಧಿ, ನೆಮ್ಮದಿ ಪಡೆದಿದ್ದರೆ ಅದಕ್ಕೆ ಪ್ರಕಾಶರ ತಲೆಮಾರಿನ ಹತ್ತುಹಲವು ಹೋರಾಟಗಾರರ ನಿಸ್ವಾರ್ಥ ತೆತ್ತುಕೊಳ್ಳುವಿಕೆ ಕಾರಣವಾಗಿದೆ. ಇವರೆಲ್ಲರ ಹೋರಾಟದ ಬದುಕುಗಳು ಕಾಲದ ವಿಸ್ಮೃತಿಗೆ ಸರಿಯುವ ಮುನ್ನ ದಾಖಲಿಸುವ ಕೆಲಸವಾಗಬೇಕಿದೆ ಎಂದುಕೊಳ್ಳುತ್ತ, ಅವರ ಬದ್ಧತೆ ನಮ್ಮ ಕಣ್ಣುಗಳಲ್ಲಷ್ಟು ಕನಸನ್ನಾದರೂ ತುಂಬಲಿ ಎಂದು ಹಾರೈಸಿಕೊಳ್ಳುತ್ತಾ ರಣಬಿಸಿಲಿನಡಿ ನಡೆಯತೊಡಗಿದೆವು.

ಡಾ. ಎಚ್. ಎಸ್. ಅನುಪಮಾ

ವೈದ್ಯರು, ಲೇಖಕರು

ಇದನ್ನೂ ಓದಿ-ಗದ್ದರ್ : ಮರೆಯಲಾಗದ ‘ಪಾಟ’, ಮರೆಯಬಾರದ ಪಾಠ

Related Articles

ಇತ್ತೀಚಿನ ಸುದ್ದಿಗಳು