ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಇಂದು ಕೊನೆಗೊಳ್ಳಲಿದೆ. ಆದರೆ ಆನ್‌ಲೈನ್ ಮೂಲಕ ಮಾಹಿತಿ ನೀಡುವವರಿಗೆ ನ.10 ವರೆಗೆ ಅವಕಾಶ ನೀಡಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ವಿವಿಧ ಕಾರಣದಿಂದ ಸಮೀಕ್ಷೆಯಲ್ಲಿ ಭಾಗವಹಿಸದವರಿಗೆ ಆನ್‌ಲೈನ್ ಮೂಲಕ ಸ್ವಯಂ ಮಾಹಿತಿ ನೀಡಲು ನ.10ರ ವರೆಗೆ ಅವಕಾಶ ನೀಡಲಾಗಿದೆ. ಆನ್‌ಲೈನ್ https://kscbcselfdeclaration.karnataka.gov.in ಲಿಂಕ್ ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050770004 ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಬೆಂಗಳೂರು ವ್ಯಾಪ್ತಿಯಲ್ಲಿ ಶೇ.48.32 ಸಮೀಕ್ಷೆ ಮುಗಿದಿದೆ. ಇದಕ್ಕೆ ಕೆಲ ತಾಂತ್ರಿಕ ಕಾರಣಗಳು ಕಂಡು ಬಂದಿದೆ. ಯಾಕೆ ಸಮೀಕ್ಷೆ ಕಡಿಮೆಯಾಗಿದೆ ಎಂಬ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಶುಕ್ರವಾರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ವಾಸವಾಗಿರುವರು ಬಹುತೇಕರು ಹೊರ ಜಿಲ್ಲೆಯಿಂದ ಬಂದವರಾಗಿದ್ದಾರೆ. ಸ್ವಂತ ಊರಿನಲ್ಲಿ ಮಾಹಿತಿ ಕೊಟ್ಟಿದ್ದು, ಬಾಡಿಗೆ ಮನೆಯಲ್ಲಿ ಕೊಡಲು ನಿರಾಕರಿಸಿರುವುದು ಕಂಡು ಬಂದಿದೆ ಎಂದು ತಿಳಿಸಿದರು. ಅಲ್ಲದೆ, ವಿದ್ಯುತ್ ಮೀಟರ್ ಸಹ ಹೆಚ್ಚಿಗೆ ಇರುವ ಪರಿಣಾಮ ಶೇಕಡಾವಾರು ಪ್ರಮಾಣ ಕಡಿಮೆ ತೋರಿಸುತ್ತಿದೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.
ಒಟ್ಟಾರೆಯಾಗಿ ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ (ಬೆಂಗಳೂರು ನಗರ ಹೊರತುಪಡಿಸಿ) 1,46,53,638 ಮನೆಗಳು ಹಾಗೂ 5,52, 57,205 (ಶೇ.101) ಜನರ ಸಮೀಕ್ಷೆ ಮಾಡಲಾಗಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
