Friday, January 30, 2026

ಸತ್ಯ | ನ್ಯಾಯ |ಧರ್ಮ

ಕಾನ್ಪಿಡೆಂಟ್ ಗ್ರೂಪ್ ಚೇರ್‌ಮನ್ ಸಿ.ಜೆ. ರಾಯ್ ಆತ್ಮಹತ್ಯೆ – ತನಿಖೆ ಆರಂಭ

ನಗರದ ರಿಚ್ಮಂಡ್ ಸರ್ಕಲ್ ಬಳಿ ಇರುವ ಕಾನ್ಪಿಡೆಂಟ್ ಗ್ರೂಪ್ ಕಚೇರಿಯಲ್ಲಿ ಸಂಸ್ಥೆಯ ಚೇರ್‌ಮನ್ ಹಾಗೂ ಅಧ್ಯಕ್ಷರಾದ ಸಿ.ಜೆ. ರಾಯ್ ಅವರು ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದ ಸಿ.ಜೆ. ರಾಯ್ ಅವರು ಹತ್ತಾರು ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಕಾನ್ಪಿಡೆಂಟ್ ಗ್ರೂಪ್ ರಿಯಲ್ ಎಸ್ಟೇಟ್ ಜೊತೆಗೆ ಹೋಟೆಲ್, ರೆಸಾರ್ಟ್, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಿತ್ತು.

ಇತ್ತೀಚಿನ ದಿನಗಳಲ್ಲಿ ಕಾನ್ಪಿಡೆಂಟ್ ಗ್ರೂಪ್ ಹಾಗೂ ಸಿ.ಜೆ. ರಾಯ್ ಅವರಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಮಾಹಿತಿ ಲಭ್ಯವಾಗಿದೆ. ಇಂದು ಕೂಡ ಸಂಸ್ಥೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಕಾರ್ಯಾಚರಣೆ ನಡೆದಿತ್ತು ಎನ್ನಲಾಗಿದೆ. ಈ ಎಲ್ಲ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಮೃತ್ಯುವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಿ.ಜೆ. ರಾಯ್ ಅವರು ಶಿಕ್ಷಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು ಸೇರಿದಂತೆ ದಾನಧರ್ಮ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಉದ್ಯಮ ವಲಯದಲ್ಲಿ ಈ ಘಟನೆಯಿಂದ ಆಘಾತ ವ್ಯಕ್ತವಾಗಿದ್ದು, ಕುಟುಂಬ ಸದಸ್ಯರು ಹಾಗೂ ನಿಕಟವರ್ತಿಗಳಿಂದ ಶೋಕ ವ್ಯಕ್ತವಾಗಿದೆ.

ಪೊಲೀಸರು ಘಟನೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಮರಣೋತ್ತರ ಪರೀಕ್ಷೆ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page