ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿರುವ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸು ಎಂದು ಹೇಳಿದ್ದಾರೆ.
ಭಾರತ ಐಕ್ಯತಾ ಯಾತ್ರೆಗೆ ಸಿಗುತ್ತಿರುವ ಬೆಂಬಲವನ್ನು ಉದ್ದೇಶಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ಈ ಯಾತ್ರೆಗೆ ಜನಸಾಮಾನ್ಯರಿಂದ ಯಾವುದೇ ಸ್ಪಂದನೆ ಇಲ್ಲ. ಪ್ರಯಾಸದಿಂದ ನಾನಾ ಭಾಗಗಳಿಂದ ಜನರನ್ನು ಕರೆತಂದು ಯಾತ್ರೆಗೆ ಸೇರಿಸಿ ಪ್ರದರ್ಶಿಸುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಮುಂತಾದವರು ಮಾಡುತ್ತಿರುವ ಶೋ ಇದು ಎಂದು ಬೊಮ್ಮಾಯಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ನಾವು ಸಣ್ಣ ಮಟ್ಟದ ರಾಜಕೀಯ ಮಾಡುವುದಿಲ್ಲ. ಜಾಮೀನಿನ ಮೇಲೆ ಹೊರಗಿರುವವರ ಪಕ್ಷದಿಂದ ನಾವೇನು ನೈತಿಕ ಪಾಠ ಕಲಿಯುವ ಅಗತ್ಯವಿಲ್ಲ. ಈಗಾಗಲೇ ಜನರು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌ನವರು ಯಾವ ಪಾದಯಾತ್ರೆ ಮಾಡಿಕೊಂಡು ಹೋದರು ಮುಂಬರುವ 2023 ರ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷದವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ ಹಾಗೆ ಕಾಂಗ್ರೆಸ್ ಪಕ್ಷ ಇನ್ನು 6 ತಿಂಗಳಲ್ಲಿ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಕನಸು. ಹಾಗೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಬೊಮ್ಮಾಯಿ ಹೇಳಿದರು.