Friday, November 7, 2025

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ‘ವಂದೇ ಮಾತರಂ’ ತುಂಡು ಮಾಡಿ ಐಕ್ಯತೆ ಒಡೆದಿದೆ : ನರೇಂದ್ರ ಮೋದಿ, “ರಾಷ್ಟ್ರಗೀತೆ ಹಾರಿಸದವರದು ಬೂಟಾಟಿಕೆ” ಎಂದ ಖರ್ಗೆ

1937 ರ ಫೈಜಾಬಾದ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷವು ವಂದೇ ಮಾತರಂ ಮೂಲ ಪಂದ್ಯದಿಂದ ಪ್ರಮುಖ ಚರಣಗಳನ್ನು ತೆಗೆದುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ಹಾಡನ್ನು ತುಂಡು ಮಾಡಿದ್ದಲ್ಲದೆ ವಿಭಜನೆಯ ಬೀಜಗಳನ್ನು ಕಾಂಗ್ರೆಸ್ ಬಿತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ನ 150 ವರ್ಷಾಚರಣೆ ಆಚರಿಸುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಭಾಗವಹಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದುರದೃಷ್ಟವಶಾತ್, 1937 ರಲ್ಲಿ, ಮೂಲ ವಂದೇ ಮಾತರಂ ಹಾಡಿನಿಂದ ಪ್ರಮುಖ ಚರಣಗಳನ್ನು ತೆಗೆದುಹಾಕಿ ಅದನ್ನು ಒಡೆಯಲಾಯಿತು. ಇದು ದೇಶಕ್ಕೆ ಕಾಂಗ್ರೆಸ್ ವಿಭಜನೆಯ ಬೀಜಗಳನ್ನು ಬಿತ್ತಿತು. ಈ ಅನ್ಯಾಯವನ್ನು ಏಕೆ ಮಾಡಲಾಯಿತು? ಅದೇ ವಿಭಜಕ ಸಿದ್ಧಾಂತವು ರಾಷ್ಟ್ರಕ್ಕೆ ಇಂದೂ ಸವಾಲಾಗಿ ಉಳಿದಿದೆ” ಎಂದು ಹೇಳಿದರು.

“ನಿರಾಶಾವಾದಿ ದೃಷ್ಟಿಕೋನ ಹೊಂದಿರುವ ಜನರು ನಮ್ಮ ಮನಸ್ಸಿನಲ್ಲಿ ಅನುಮಾನವನ್ನು ಬಿತ್ತಲು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ, ವಂದೇ ಮಾತರಂ ನಮಗೆ ಸ್ಫೂರ್ತಿ ನೀಡುತ್ತದೆ. ಕೋಟ್ಯಂತರ ಮಕ್ಕಳನ್ನು ಹೊಂದಿರುವ ತಾಯಿ ಹೇಗೆ ದುರ್ಬಲಳಾಗಬಹುದು? ಭಾರತ ಮಾತೆಗೆ 140 ಕೋಟಿ ಮಕ್ಕಳಿದ್ದಾರೆ” ಎಂದು ನರೇಂದ್ರ ಮೋದಿ ಹೇಳಿದರು.

ಇತ್ತ “ವಂದೇ ಮಾತರಂ ವಾರ್ಷಿಕೋತ್ಸವವನ್ನು ಆಚರಿಸುವವರು ತಮ್ಮ ಕಚೇರಿಗಳಲ್ಲಿ ಅಥವಾ ಶಾಖೆಗಳಲ್ಲಿ ಅದನ್ನು ಎಂದಿಗೂ ಹಾಡಿಲ್ಲ ಎಂದು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹೇಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಆರ್‌ಎಸ್‌ಎಸ್ ಈ 100 ವರ್ಷಗಳಲ್ಲಿ ತನ್ನ ಕಛೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು, ರಾಷ್ಟ್ರಗೀತೆ ಅಥವಾ ಒಂದೇ ಮಾತರಂ ಹಾಡಲು ಅದೆಷ್ಟು ಹಿಂದೆ ಬಿದ್ದಿತ್ತು ಎಂಬ ಬಗ್ಗೆ ಪ್ರಸ್ತಾಪಿಸಿ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

“ಇಂದು ರಾಷ್ಟ್ರೀಯತೆಯ ಸ್ವಯಂ ಘೋಷಿತ ರಕ್ಷಕರೆಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಮತ್ತು ಬಿಜೆಪಿ – ತಮ್ಮ ಶಾಖೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಂದೇ ಮಾತರಂ ಅಥವಾ ನಮ್ಮ ರಾಷ್ಟ್ರಗೀತೆ ಜನ ಗಣ ಮನವನ್ನು ಎಂದಿಗೂ ಹಾಡಿಲ್ಲ ಎಂಬುದು ತೀವ್ರ ವಿಪರ್ಯಾಸ. ಬದಲಾಗಿ, ಅವರು ರಾಷ್ಟ್ರವನ್ನಲ್ಲ, ತಮ್ಮ ಸಂಘಟನೆಗಳನ್ನು ವೈಭವೀಕರಿಸುವ ಹಾಡಾದ ನಮಸ್ತೆ ಸದಾ ವತ್ಸಲೆಯನ್ನು ಮಾತ್ರ ಹಾಡುತ್ತಲೇ ಇದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ರಾಷ್ಟ್ರೀಯ ಚಳವಳಿಯಲ್ಲಿ ಭಾರತೀಯರ ವಿರುದ್ಧ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರವು ಬ್ರಿಟಿಷರನ್ನು ಬೆಂಬಲಿಸಿತು, 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ, ಭಾರತದ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡಿತು, ಬಾಪು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಕೃತಿಗಳನ್ನು ಸುಟ್ಟಿತು ಮತ್ತು ಸರ್ದಾರ್ ಪಟೇಲ್ ಅವರ ಮಾತಿನಲ್ಲಿ ಹೇಳುವುದಾದರೆ, ಗಾಂಧೀಜಿಯವರ ಹತ್ಯೆಯಲ್ಲಿ ಭಾಗಿಯಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ” ಎಂದು ಖರ್ಗೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page