Tuesday, January 27, 2026

ಸತ್ಯ | ನ್ಯಾಯ |ಧರ್ಮ

ಮನರೇಗಾ ಬಚಾವ್‌ ಸಂಗ್ರಾಮ್‌: ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ; ಸಂಚಾರ ನಿರ್ಬಂಧ

ವಿಬಿ–ಜಿ ರಾಮ್‌ಜಿ ಯೋಜನೆಯನ್ನು ಕೈಬಿಟ್ಟು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯನ್ನು ಮರು ಜಾರಿಗೆ ತರಬೇಕೆಂದು ಆಗ್ರಹಿಸಿ ಆಡಳಿತಾರೂಢ ಕಾಂಗ್ರೆಸ್‌ ಮಂಗಳವಾರ ‘ಮನರೇಗಾ ಬಚಾವ್‌ ಸಂಗ್ರಾಮ್‌’ ಹೆಸರಿನಲ್ಲಿ ಬೃಹತ್‌ ಆಂದೋಲನ ಹಮ್ಮಿಕೊಂಡಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾರಿ ಪ್ರತಿಭಟನೆ ನಡೆಸಿ, ಬಳಿಕ ಲೋಕಭವನ ಚಲೋ ಕಾರ್ಯಕ್ರಮಕ್ಕೆ ಪಕ್ಷ ಮುಂದಾಗಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ಸಂಚಾರದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.

ಸಂಚಾರ ನಿರ್ಬಂಧ ಇರುವ ಮಾರ್ಗಗಳು:
* ಶಾಂತಲಾ ಜಂಕ್ಷನ್‌ ಹಾಗೂ ಖೋಡೆ ವೃತ್ತದಿಂದ ಆನಂದರಾವ್‌ ಮೇಲ್ಸೇತುವೆ, ಜೆಡಿಎಸ್‌ ಹಳೆ ಕಚೇರಿ, ಶೇಷಾದ್ರಿ ರಸ್ತೆ ಮೂಲಕ ಫ್ರೀಡಂ ಪಾರ್ಕ್‌ಗೆ ಹೋಗುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ.
* ಮೈಸೂರು ಬ್ಯಾಂಕ್‌ ವೃತ್ತದಿಂದ ಚಾಲುಕ್ಯ ವೃತ್ತದ ಕಡೆಗೆ ಹಾಗೂ ಚಾಲುಕ್ಯ ವೃತ್ತದಿಂದ ಮೈಸೂರು ಬ್ಯಾಂಕ್‌ ವೃತ್ತದ ಕಡೆಗೆ ಸಂಚಾರಕ್ಕೆ ನಿರ್ಬಂಧವಿದೆ.
* ಕಾಳಿದಾಸ ರಸ್ತೆಯ ಕನಕದಾಸ ಜಂಕ್ಷನ್‌ನಿಂದ ಸ್ವಾತಂತ್ರ್ಯ ಉದ್ಯಾನದ ಕಡೆಗೂ, ಮೌರ್ಯ/ಸುಬ್ಬಣ್ಣ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್‌ಗೆ ಹೋಗುವ ಮಾರ್ಗದಲ್ಲೂ ಸಂಚಾರ ಸ್ಥಗಿತಗೊಳಿಸಲಾಗಿದೆ.

ಪರ್ಯಾಯ ಮಾರ್ಗ ವ್ಯವಸ್ಥೆ:
* ಲುಲು ಮಾಲ್‌, ಕೃಷ್ಣ ಫ್ಲೋರ್‌ ಮಿಲ್‌, ರಾಜೀವ್‌ ಗಾಂಧಿ ವೃತ್ತ, ಮಂತ್ರಿ ಮಾಲ್‌, ಸ್ವಸ್ತಿಕ್‌ ವೃತ್ತ, ಶೇಷಾದ್ರಿಪುರ, ನೆಹರೂ ವೃತ್ತ ಹಾಗೂ ರೇಸ್‌ಕೋರ್ಸ್‌ ಮೇಲ್ಸೇತುವೆ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
* ಇದೇ ರೀತಿ ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್‌ ವೃತ್ತ, ಸಾಗರ್‌ ಜಂಕ್ಷನ್‌, ಕೆ.ಜಿ. ಜಂಕ್ಷನ್‌, ಎಲೈಟ್‌, ಟಿ.ಬಿ. ರಸ್ತೆ ಮೂಲಕವೂ ಸಂಚರಿಸಬಹುದಾಗಿದೆ.
* ಚಾಲುಕ್ಯ ವೃತ್ತದಿಂದ ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ ಹಾಗೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವೃತ್ತದ ಮೂಲಕ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಾಗಿದೆ.
* ಸುಬ್ಬಣ್ಣ ಜಂಕ್ಷನ್‌ನಿಂದ ಬಲಕ್ಕೆ ತಿರುಗಿ ಆನಂದರಾವ್‌ ಸರ್ಕಲ್‌ ಕಡೆಗೆ ಸಂಚರಿಸಲು ಸೂಚಿಸಲಾಗಿದೆ.

ಪ್ರಮುಖ ನಾಯಕರು ಭಾಗಿ:
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page