ಬಳ್ಳಾರಿ, ಅಕ್ಟೋಬರ್ 13:ಕಾಂಗ್ರೆಸ್ ನವರದ್ದು 85 % ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಸಿರಗುಪ್ಪದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಮಾತನ್ನು ಹಿಂದೆಯೇ ರಾಜೀವ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧೀ ಇವರೆಲ್ಲರಿಗಿಂತ ಸಜ್ಜನರು. ದಿಲ್ಲಿಯಿಂದ ನೂರು ರೂಪಾಯಿ ಕಳಿಸಿದರೆ. ಹಳ್ಳಿಗೆ 15 ರೂಪಾಯಿ ತಲುಪುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳಿದ್ದರು. 85 ರೂ.ಗಳು ಮಧ್ಯದಲ್ಲಿ ಸೋರಿಹೋಗುತ್ತಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ , ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷವಿತ್ತು. ಇದು ಅಂದಿನ ವ್ಯವಸ್ಥೆ. ನರೇಂದ್ರ ಮೋದಿಯವರು ಬಂದ ನಂತರ ಎಲ್ಲಾ ಯೋಜನೆಗಳನ್ನು ನೇರವಾಗಿ ಎಲ್ಲಾ ಫಲಾನುಭವಿಗಳಿಗೆ ಶೇ 100ರಷ್ಟು ಮೊತ್ತವನ್ನು ಡಿಬಿಟಿ ವ್ಯವಸ್ಥೆಯಡಿ ತಲುಪಿಸಿದ್ದಾರೆ ಎಂದರು.
ಭೂಮಿ, ಆಕಾಶ, ಪಾತಾಳದಲ್ಲಿ ಭ್ರಷ್ಟಾಚಾರ
ಇವರ ಕಾಲದಲ್ಲಿ ಭೂಮಿಯ ಮೇಲೆ, ಆಕಾಶಕ್ಕೆ ಹಾಗೂ ಪಾತಾಳಕ್ಕೆ ಭ್ರಷ್ಟಾಚಾರ ಮಾಡಿದರು. ಆಕಾಶಕ್ಕೆ ಭ್ರಷ್ಟಾಚಾರ ಅಂದರೆ 2 ಜಿ ಹಗರಣ. ಕಾಮನ್ ವೆಲ್ತ್ ಹಾಗೂ ಕಲ್ಲಿದ್ದಲು ಹಗರಣ ಮಾಡುವ ಆಕಾಶ, ಭೂಮಿ, ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕೆರೆ ತುಂಬಿಸುವ ಯೋಜನೆಯಡಿ ಭ್ರಷ್ಟಾಚಾರ, ನೀರಾವರಿ,ಸಣ್ಣ ನೀರಾವರಿ, ಗಂಗಾಕಲ್ಯಾಣ ಯೋಜನೆಯಡಿ 36 ಕೊಳವೆಬಾವಿಗಳನ್ನು ಒಂದೇ ದಿನ ಮಂಜೂರು ಮಾಡಿ ದುಡ್ಡು ಹೊಡೆದರು ಎಂದರು.
ಅಧಿಕಾರಕ್ಕಾಗಿ ರಾಜಕಾರಣ
ಜನಸಂಕಲ್ಪ ಯಾತ್ರೆ ರಾಯಚೂರು, ವಿಜಯನಗರ, ಕೊಪ್ಪಳಕ್ಕೆ ಹೋಗಿ ಬಳ್ಳಾರಿಗೆ ಬಂದಿದೆ. ಹೋದಲ್ಲೆಲ್ಲಾ ಜನಬೆಂಬಲ ಹಾಗೂ ಜೋಶ್ ದೊರೆತಿದೆ. ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ. ಜನಪರವಾದ ನಿರ್ಣಯ ತೆಗೆದುಕೊಳ್ಳಲು ಕಾಂಗ್ರೆಸ್ಸಿಗೆ ಬರುವುದಿಲ್ಲ. ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅಧಿಕಾರಕ್ಕೆ ಬಂದಾಗ ಅವರು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಂಡರು. ಜನರನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಕಾಂಗ್ರೆಸ್ಸಿನ ಮಾಜಿ ಮಂತ್ರಿಗಳೊಬ್ಬರು ನಾವು ಅಧಿಕಾರ ದಲ್ಲಿದ್ದಾಗ ಮತ್ತು ಅಧಿಕಾರದಲ್ಲಿಲ್ಲದಾಗ ಅವರು ಏನಾಗುತ್ತಾರೆ ಎಂದು ತಿಳಿಸಿದ್ದರು. ಅಂದರೆ ಈ ರಾಷ್ಟ್ರವನ್ನು 50 ವರ್ಷ ಆಳಿ, ಈ ರಾಜ್ಯದ ಪ್ರಗತಿಗೆ ಮಾರಕವಾಗಿ, ರಾಜ್ಯವನ್ನು ತಮ್ಮ ಹೈ ಕಮಾಂಡಿಗೆ ಒತ್ತೆ ಇಟ್ಟು, ಕರ್ನಾಟಕ ರಾಜ್ಯದ ಸ್ವಾಭಿಮಾನವನ್ನೂ ಲೆಕ್ಕಿಸದೇ, ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿರುವ ಕಾಂಗ್ರೆಸ್ಸನ್ನು ಶಾಶ್ವತವಾಗಿ ಮನೆಗೆ ಕಳಿಸುವ ಕೆಲಸವನ್ನು ಕರ್ನಾಟಕದ ಜನತೆ 2023ರಲ್ಲಿ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಸಂಸ್ಕೃತಿ
ಅಧಿಕಾರಕ್ಕೆ ಬಂದಾಗ ಜನರನ್ನು ಮರೆತಿದ್ದಕ್ಕೆ ಉದಾಹರಣೆ ಎಂದರೆ. ಸೋನಿಯಾ ಗಾಂಧಿ ಬಳ್ಳಾರಿಗೆ ಸಂಸದರಾಗಿ ಬಂದರು. ಮೂರು ಸಾವಿರ ಕೋಟಿ ಪ್ಯಾಕೇಜ್ ಮಾಡುವುದಾಗಿ ಹೇಳಿದರು. ಎಲ್ಲಿದೆ ಪ್ಯಾಕೇಜ್? ಯಾರ ಮನೆಗೆ ಹೋಗಿದೆ? ಬಳ್ಳಾರಿ ಜಿಲ್ಲೆಗೆ ಒಂದು ಪೈಸೆಯನ್ನೂ ಕೊಡಲಿಲ್ಲ. ಧನ್ಯವಾದಗಳನ್ನೂ ಹೇಳಲಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದರು.