ತಿರುವನಂತಪುರಂ/ಬೆಂಗಳೂರು, ಮೇ 4: ಕೇರಳದಲ್ಲಿ ಯುಡಿಎಫ್‌ಗೆ ಸ್ಪಷ್ಟ ಬಹುಮತ ದೊರೆತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತ ಚರ್ಚೆಗಳು ತೀವ್ರಗೊಂಡಿದ್ದು, ಇದರ ಪ್ರತಿಫಲ ಕರ್ನಾಟಕ ರಾಜಕೀಯದಲ್ಲೂ ಕಂಡುಬರುವ ಸಾಧ್ಯತೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಮುಖ್ಯಮಂತ್ರಿ ಹುದ್ದೆಗೆ ಕೆಸಿ ವೇಣುಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಪ್ರಸ್ತುತ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಪ್ರಮುಖ ಸಂಘಟನಾ ಜವಾಬ್ದಾರಿ ನಿರ್ವಹಿಸುತ್ತಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ಸಹಚರರಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಜ್ಯ ರಾಜಕೀಯಕ್ಕೆ ಮರಳುವ ಪರಿಸ್ಥಿತಿ ಬಂದರೆ, ಕೇಂದ್ರ ಸಂಘಟನೆಯಲ್ಲಿ ಖಾಲಿಯಾಗುವ ಸ್ಥಾನವನ್ನು ಭರ್ತಿ ಮಾಡುವ ಪ್ರಶ್ನೆ ಕಾಂಗ್ರೆಸ್ ಎದುರು ಉದ್ಭವಿಸಲಿದೆ.
ಈ ಹಿನ್ನಲೆಯಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರು ರಾಷ್ಟ್ರ ಮಟ್ಟದ ಜವಾಬ್ದಾರಿಗಳಿಗೆ ಪರಿಗಣನೆಗೆ ಬರುವ ಮಾತುಗಳು ಕೇಳಿಬರುತ್ತಿವೆ. ಸಂಘಟನಾ ಸಾಮರ್ಥ್ಯ ಮತ್ತು ಹೈಕಮಾಂಡ್‌ನ ವಿಶ್ವಾಸ ಗಳಿಸಿರುವ ನಾಯಕನಾಗಿ ಅವರು ಮುಂದಿನ ಆಯ್ಕೆಯಾಗಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಡಿಕೆ ಶಿವಕುಮಾರ್ ರಾಷ್ಟ್ರ ರಾಜಕಾರಣಕ್ಕೆ ಹೋದರೆ, ಕರ್ನಾಟಕದಲ್ಲಿ ನಡೆಯುತ್ತಿರುವ ಅಧಿಕಾರ ಸಮೀಕರಣಗಳಲ್ಲಿ ಮಹತ್ವದ ಬದಲಾವಣೆ ಸಂಭವಿಸಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲೂ ಬದಲಾವಣೆ ಸಾಧ್ಯತೆ ಇದ್ದು, ಈ ಜಾಗಕ್ಕೆ ಸತೀಶ್ ಜಾರಕಿಹೊಳಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ಒಟ್ಟಿನಲ್ಲಿ, ಕೇರಳದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯ ಚರ್ಚೆ ಕೇವಲ ಆ ರಾಜ್ಯಕ್ಕೆ ಸೀಮಿತವಾಗದೆ, ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷದ ಒಳರಾಜಕೀಯ ಮತ್ತು ನಾಯಕತ್ವದ ಸಮೀಕರಣಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರವೇ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವುದಾಗಿ ತಿಳಿದುಬಂದಿದೆ.
