Sunday, June 23, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಪ್ರಣಾಳಿಕೆ ಭಾರತದ ಸ್ಥಿತಿಯನ್ನೇ ಬದಲಿಸಬಲ್ಲದು: ರಾಹುಲ್ ಗಾಂಧಿ

ಹೈದರಾಬಾದ್, ಏಪ್ರಿಲ್ 7: ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ‘ಕ್ರಾಂತಿಕಾರಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಬಣ್ಣಿಸಿದ್ದಾರೆ ಮತ್ತು ಇದು ದೇಶವನ್ನೇ ಬದಲಾಯಿಸಬಲ್ಲದು ಎಂದು ಹೇಳಿದ್ದಾರೆ.

ಈ ಪ್ರಣಾಳಿಕೆ ದೇಶದ ಬಡವರು, ರೈತರು, ಯುವಕರು, ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರಬಲ್ಲದು ಎಂದು ಅವರು ನುಡಿದರು.

ದೆಹಲಿಯಲ್ಲಿ ಶುಕ್ರವಾರ ಅನಾವರಣಗೊಂಡ ಪಕ್ಷದ ಚುನಾವಣಾ ಪ್ರಣಾಳಿಕೆಯ ತೆಲುಗು ಆವೃತ್ತಿಯನ್ನು ಬಿಡುಗಡೆ ಮಾಡಲು ಶನಿವಾರ ಸಂಜೆ ಹೈದರಾಬಾದ್‌ನ ಹೊರವಲಯದಲ್ಲಿರುವ ತುಕ್ಕುಗುಡದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದರು.

ಪ್ರಣಾಳಿಕೆಯಲ್ಲಿನ ಐದು ಭರವಸೆಗಳನ್ನು ಎತ್ತಿ ಹಿಡಿದ ರಾಹುಲ್ ಗಾಂಧಿ, ತೆಲಂಗಾಣದಲ್ಲಿ ಪಕ್ಷ ನೀಡಿದ ಗ್ಯಾಂರಂಟಿಗಳನ್ನು ಜಾರಿಗೆ ತಂದ ರೀತಿಯಲ್ಲಿಯೇ ದೇಶದಲ್ಲಿಯೂ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಏನೇ ಭರವಸೆ ನೀಡಿದ್ದರೂ ಅದನ್ನು ಈಡೇರಿಸಿ ತೋರಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಕೆಲ ತಿಂಗಳ ಹಿಂದೆ ಇದೇ ಜಾಗದಿಂದ ತೆಲಂಗಾಣಕ್ಕೆ ಪಕ್ಷ ಗ್ಯಾರಂಟಿ ನೀಡಿತ್ತು ಎಂದು ನೆನಪಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತೆಲಂಗಾಣ ಎಐಸಿಸಿ ಉಸ್ತುವಾರಿ ದೀಪಾ ದಾಸ್ಮುನ್ಶಿ, ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ರಾಜ್ಯದ ಸಚಿವರು ಮತ್ತು ಪಕ್ಷದ ಮುಖಂಡರು ಶನಿವಾರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಪ್ರಣಾಳಿಕೆಯು ಭಾರತದ ಜನರ ಧ್ವನಿ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.

ದೇಶದಲ್ಲಿ ನಿರುದ್ಯೋಗ ಪ್ರಮಾಣ 40 ವರ್ಷಗಳಲ್ಲೇ ಅತಿ ಹೆಚ್ಚು ಎನ್ನುವ ಸಂದರ್ಭದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಆಡಳಿತ 30,000 ಜನರಿಗೆ ಸರ್ಕಾರಿ ಉದ್ಯೋಗ ನೀಡಿದ್ದು, ಇನ್ನೂ 50,000 ಜನರಿಗೆ ಶೀಘ್ರದಲ್ಲೇ ಉದ್ಯೋಗ ದೊರೆಯಲಿದೆ ಎಂದರು.

ಭಾರತದ ಸಂವಿಧಾನವು ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಬಡವರು ಸೇರಿದಂತೆ ಎಲ್ಲಾ ವರ್ಗದ ಜನರನ್ನು ರಕ್ಷಿಸುತ್ತದೆ ಎಂದು ಹೇಳಿದ ಅವರು, ಬಿಜೆಪಿಯು ಸಂವಿಧಾನವನ್ನು ರದ್ದುಗೊಳಿಸಲು ಬಯಸುತ್ತಿದೆ ಎಂದು ಆರೋಪಿಸಿದರು.

Related Articles

ಇತ್ತೀಚಿನ ಸುದ್ದಿಗಳು