ಮಧ್ಯಪ್ರದೇಶದಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿ (RO) ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವು ಬುಧವಾರ (ಜೂನ್ 10) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಪಕ್ಷವು ಜಂಟಿ ಪೀಠಕ್ಕೆ ಮನವಿ ಮಾಡಿದೆ.
ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿವರಗಳನ್ನು ನಾಮಪತ್ರದಲ್ಲಿ ಉಲ್ಲೇಖಿಸದೆ ಮರೆಮಾಚಿದ್ದಾರೆ ಎಂದು ಬಿಜೆಪಿ ನೀಡಿದ ದೂರಿನ ಆಧಾರದ ಮೇಲೆ ಚುನಾವಣಾಧಿಕಾರಿಯು ಮೀನಾಕ್ಷಿ ಅವರ ನಾಮಪತ್ರವನ್ನು ವಜಾಗೊಳಿಸಿದ್ದರು. ಆದರೆ, ಮೀನಾಕ್ಷಿ ನಟರಾಜನ್ ವಿರುದ್ಧ ತೆಲಂಗಾಣದಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ, ಅವರಿಗೆ ಕೇವಲ ನ್ಯಾಯಾಲಯದ ನೋಟಿಸ್ ಮಾತ್ರ ಜಾರಿಯಾಗಿದೆ ಎಂದು ಕಾಂಗ್ರೆಸ್ ವಾದಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಎಂಪಿಗಳಾದ ಕೆ. ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ರಣದೀಪ್ ಸುರ್ಜೇವಾಲಾ ಒಳಗೊಂಡ 10 ಹಿರಿಯ ಕಾಂಗ್ರೆಸ್ ನಾಯಕರ ನಿಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆ. ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮಾತನಾಡಿ, “ಬಿಜೆಪಿ ಉಲ್ಲೇಖಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ನ್ಯಾಯಾಲಯವು ಇನ್ನೂ ಯಾವುದೇ ಕಾಗ್ನಿಸೆನ್ಸ್ (ವಿಚಾರಣಾರ್ಹತೆ) ತೆಗೆದುಕೊಂಡಿಲ್ಲ. ಹೀಗಾಗಿ ಕಾನೂನಿನ ದೃಷ್ಟಿಯಲ್ಲಿ ಅಂತಹ ಪ್ರಕರಣವೇ ಅಸ್ತಿತ್ವದಲ್ಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಚುನಾವಣಾಧಿಕಾರಿ ವಿರುದ್ಧ ತೀವ್ರ ಆಕ್ಷೇಪ: ಮತ್ತೊಂದೆಡೆ, ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಚುನಾವಣಾಧಿಕಾರಿಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 33 ಬಿ ಪ್ರಕಾರ, ನ್ಯಾಯಾಲಯ ಅಥವಾ ಚುನಾವಣಾ ಆಯೋಗವು ಕಡ್ಡಾಯಗೊಳಿಸದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲು ಅಭ್ಯರ್ಥಿ ಬಾಧ್ಯಸ್ಥನಾಗಿರುವುದಿಲ್ಲ. ಪ್ರಕರಣವೊಂದರಲ್ಲಿ ಆರೋಪಪಟ್ಟಿ (Charges) ಸಲ್ಲಿಕೆಯಾಗಿ, ನ್ಯಾಯಾಲಯವು ಆರೋಪ ಹೊರಿಸುವವರೆಗೂ ಅದನ್ನು ನಾಮಪತ್ರದಲ್ಲಿ ಬಹಿರಂಗಪಡಿಸುವ ಅಗತ್ಯವಿರುವುದಿಲ್ಲ. ಹೀಗಾಗಿ ಚುನಾವಣಾಧಿಕಾರಿಯ ನಿರ್ಧಾರ ಕಾನೂನುಬಾಹಿರವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಮತ್ತು ಕಾಂಗ್ರೆಸ್ ಒಳಗಿನ ಭಿನ್ನಮತ: ಹೈದರಾಬಾದ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಎ. ಶ್ರೀಲತಾ ಎಂಬ ಮಹಿಳೆ ಆಗಸ್ಟ್ 2025 ರಲ್ಲಿ ದಾಖಲಿಸಿದ್ದ ದೂರಿನಲ್ಲಿ ಮೀನಾಕ್ಷಿ ನಟರಾಜನ್ ಅವರನ್ನು ನಾಲ್ಕನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 2025 ರಲ್ಲಿ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಅಕ್ಟೋಬರ್‌ನಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿದ್ದ ಮೀನಾಕ್ಷಿ ಅವರ ವಕೀಲರು, ಇದು ರಾಜಕೀಯ ಪ್ರೇರಿತ ದೂರು ಎಂದು ವಾದಿಸಿ ವಜಾಗೊಳಿಸುವಂತೆ ಕೋರಿದ್ದರು. ಆದರೆ ನ್ಯಾಯಾಲಯ ಆ ಮನವಿಯನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಪ್ರಕರಣ ಇನ್ನೂ ಬಾಕಿ ಉಳಿದಿದೆ.
ಈ ಮಧ್ಯೆ, ಈ ಬೆಳವಣಿಗೆಯು ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಭಿನ್ನಮತವನ್ನು ಮುನ್ನಲೆಗೆ ತಂದಿದೆ. ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗೀಯ ಅವರು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ, “ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಅಲ್ಲಿಂದ ಮೀನಾಕ್ಷಿ ಅವರ ವಿರುದ್ಧದ ದಾಖಲೆಗಳನ್ನು ನಮಗೆ ತಲುಪಿಸಿದ್ದೇ ಕಾಂಗ್ರೆಸ್ ನಾಯಕರು. ಕಾಂಗ್ರೆಸ್‌ನೊಳಗಿನ ಭಿನ್ನಮತವೇ ಅವರ ರಾಜ್ಯಸಭೆಯ ಕನಸನ್ನು ಭಂಗಗೊಳಿಸಿದೆ” ಎಂದು ಲೇವಡಿ ಮಾಡಿದ್ದಾರೆ.
