ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಶುಕ್ರವಾರ ಹೇಳಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, “ನಾವು ನೀಡುವ ಚೆಕ್‌ಗಳನ್ನು ಬ್ಯಾಂಕ್‌ಗಳು ನಗದುಗೊಳಿಸುತ್ತಿಲ್ಲ” ಎಂದು ಹೇಳಿದರು.
ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, ಯೂತ್ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದು ನಮಗೆ ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷದ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆʼ’ ಎಂದು ಅವರು ಹೇಳಿದರು.
ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಮಾಕೆನ್, “ಇದು ಪ್ರಜಾಪ್ರಭುತ್ವವನ್ನು ಸ್ಥಗಿತಗೊಳಿಸಿದಂತೆ” ಎಂದು ಹೇಳಿದರು. “ಭಾರತದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣವಾಗಿ ಕೊನೆಗೊಂಡಿದೆ. ದೇಶದ ಪ್ರಮುಖ ವಿರೋಧ ಪಕ್ಷದ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ, ಇದರೊಂದಿಗೆ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಸಹ ಸ್ಥಗಿತಗೊಳಿಸಲಾಗಿದೆ” ಎಂದು ಅವರು ಹೇಳಿದರು.
ನ್ಯಾಯಾಂಗವು ತನ್ನ ಕರ್ತವ್ಯ ನಿರ್ವಹಿಸಲಿ
ಹಿರಿಯ ಕಾಂಗ್ರೆಸ್ ನಾಯಕರು ನ್ಯಾಯಾಂಗವು ಮಧ್ಯಪ್ರವೇಶಿಸಿ “ಪ್ರಜಾಪ್ರಭುತ್ವವನ್ನು ಉಳಿಸಲು” ಒತ್ತಾಯಿಸಿದರು.
“ಸದ್ಯ ನಮ್ಮ ಬಳಿ ಖರ್ಚು ಮಾಡಲು, ವಿದ್ಯುತ್ ಬಿಲ್‌ಗಳನ್ನು ಪಾವತಿಸಲು, ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಯಾವುದೇ ಹಣವಿಲ್ಲ. ಎಲ್ಲದರ ಮೇಲೂ ಇದು ಪರಿಣಾಮ ಬೀರುತ್ತದೆ, ನ್ಯಾಯ ಯಾತ್ರೆ ಮಾತ್ರವಲ್ಲದೆ ಎಲ್ಲಾ ರಾಜಕೀಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ”ಎಂದು ಅವರು ಹೇಳಿದರು.
‘ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ’
ಈ ವಿಷಯದ ಬಗ್ಗೆ ಕಾಂಗ್ರೆಸ್ ಬೀದಿಗಿಳಿದು ವ್ಯಾಪಕ ಆಂದೋಲನವನ್ನು ಆಯೋಜಿಸುತ್ತದೆ ಎಂದು ನಾಯಕ ಘೋಷಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಅಧಿಕಾರದ ಮದವೇರಿರುವ ಮೋದಿ ನಮ್ಮ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ. ಅದೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವಾಗ ಹೀಗೆ ಮಾಡಿದ್ದಾರೆ.
ಬಿಜೆಪಿ ತಾನು ಅಸಾಂವಿಧಾನಿಕವಾಗಿ ಪಡೆದ ಹಣವನ್ನು ಚುನಾವಣೆಗೆ ಬಳಸುತ್ತಿದೆ, ಆದರೆ ಸಾರ್ವಜನಿಕರಿಂದ ಸಾಂವಿಧಾನಿಕವಾಗಿ ಪಡೆದ ಹಣವನ್ನು ನಮ್ಮ ಪಕ್ಷ ಬಳಸದಂತೆ ಅದು ತಡೆಯುತ್ತಿದೆ. ಈ ಹಿಂದೆಯೇ ನಾನು ಇನ್ನು ಮುಂದೆ ಚುನಾವಣೆಗಳು ನಡೆಯುವುದಿಲ್ಲ ಎಂದಿದ್ದೆ. ಅದರ ಸೂಚನೆಯಾಗಿ ಇದು ನಡೆದಿದೆ” ಎಂದು ಖರ್ಗೆ ಆರೋಪಿಸಿದ್ದಾರೆ.
ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ.