Thursday, February 6, 2025

ಸತ್ಯ | ನ್ಯಾಯ |ಧರ್ಮ

CM ಸಿದ್ದರಾಮಯ್ಯರವರಿಗೆ ನೋಟಿಸ್ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹಾಗೂ ನೋಟಿಸ್ ವಾಪಸ್ ಪಡೆಯುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.ಬಿ.ಎಂ.ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು, ತಮಟೆ ಬಡಿಯುತ್ತಾ, ಕೊಂಬು-ಕಹಳೆ ಊದುತ್ತಾ, ರಾಜ್ಯಪಾಲರು, ಬಿಜೆಪಿ- ಜೆಡಿಎಸ್ ವಿರುದ್ಧ ಹಾಗೂ ಸಿದ್ದರಾಮಯ್ಯ ಅವರ ಪರ ಫಲಕ ಹಿಡಿದು  ಎನ್.ಆರ್. ವೃತ್ತದವರೆಗೆ ಸಾಗಿದರು.

ಮಾನವ ಸರಪಳಿ ನಿರ್ಮಿಸಿ, ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ. ಅದೇ ದುರುದ್ದೇಶದಿಂದ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ದೂರಿದರು.ಬಿಜೆಪಿ-ಜೆಡಿಎಸ್ ಪಕ್ಷಗಳು ಬಹುಮತ ದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಮೂಲಕ ವಾಮ ಮಾರ್ಗದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ-ಜೆಡಿಎಸ್‌ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಕರ್ನಾಟಕದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ನೀಡಿ, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ದಾರೆ.

ನಾಡಿನ ಜನರ ಅಭಿಪ್ರಾಯ ಗೌರವಿಸದೇ, ದೇಶದ ಪ್ರಾಮಾಣಿಕ ರಾಜಕಾರಣಿ ಎನಿಸಿರುವ ಸಿದರಾಮಯ್ಯ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ನೀಡಿದ ದೂರು ಆಧರಿಸಿ ನೋಟಿಸ್‌ ನೀಡುವುದು ಖಂಡನೀಯ. ಇನ್ನಾದರೂ ರಾಜ್ಯಪಾಲರು ಬಿಜೆಪಿ ಕೈಗೊಂಬೆಯಂತೆ ವರ್ತಿಸುವುದನ್ನು ಬಿಟ್ಟು ನೋಟಿ‌‌ಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿ ಸಿ.ಸತ್ಯಭಾಮ ಅವರ ಮೂಲಕ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿವುದನ್ನು ಬಿಟ್ಟು ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕು. ಮುಡಾ ಹಗರಣ ಆರೋಪ ಸಂಬಂಧ ತನಿಖೆ ನಡೆಯುತ್ತಿದೆ. ಅದರ ವರದಿ ಬರುವ ಮೊದಲೇ ಖಾಸಗಿ ವ್ಯಕ್ತಿ ದೂರು ಆಧರಿಸಿ ರಾಜ್ಯಪಾಲರು ನೋಟಿಸ್ ನೀಡಿ , ಪ್ರಾಸಿಕ್ಯೂಷನ್ ಗೆ  ಅನುಮತಿ ನೀಡುವ ಹುನ್ನಾರ ಮಾಡುತ್ತಿರುವುದು ಸರಿಯಲ್ಲ ಎಂದರು. ಈ ವಿಚಾರದಲ್ಲಿ ವಿರೋಧಪಕ್ಷಗಳನ್ನು ಸುಳ್ಳನ್ನೇ ಸತ್ಯ ಮಾಡಲು ಹೊರಟಿವೆ. ಅವರ ಯಾವುದೇ ದುರುದ್ದೇಶ ಫಲಿಸದು ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page