ಬೆಂಗಳೂರು: ಮುಡಾ ಪ್ರಕರಣದ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತಿದೆ.
ಬಿಜೆಪಿ ಮತ್ತು ಅದರ ನಾಯಕರು ಕೋರ್ಟ್ ತೀರ್ಮಾನದ ನಂತರ ಸಿದ್ಧರಾಮಯ್ಯನವರ ಬಳಿ ರಾಜೀನಾಮೆ ಕೊಡುವಂತೆ ಆಗ್ರಹಿಸಿ ಹೋದಲ್ಲಿ ಬಂದಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಪ್ರಲ್ಹಾದ ಜೋಷಿ, ಅಶ್ವತ್ಥ ನಾರಾಯಣ ಸೇರಿದಂತೆ ಬಿಜೆಪಿ ಹಲವು ನಾಯಕರು ಮುಖ್ಯಮಂತ್ರಿಯ ಬಳಿ ರಾಜೀನಾಮೆ ಕೇಳುತ್ತಿದ್ದಾರೆ.
ಈಗ ಬಿಜೆಪಿಯ ಆಗ್ರಹಗಳಿಗೆ ಕಾಂಗ್ರೆಸ್ ಕಟುವಾಗಿಯೇ ಉತ್ತರಿಸಿದ್ದು, ಅದು ಬಿಜೆಪಿಗೆ “ಬಿಜೆಪಿಯವರು ಕೇಳಿದಾಕ್ಷಣ ರಾಜೀನಾಮೆ ಕೊಡುವುದಕ್ಕೆ ಸಿದ್ದರಾಮಯ್ಯನವರು 2,500 ಕೋಟಿ ಕೊಟ್ಟು ಮುಖ್ಯಮಂತ್ರಿಯಾದವರಲ್ಲ, ಕನ್ನಡಿಗರು ಹಾಗೂ ಕನ್ನಡಿಗರಿಂದ ಆಯ್ಕೆಯಾದ ಶಾಸಕರಿಂದ ಮುಖ್ಯಮಂತ್ರಿಯಾದವರು” ಎಂದು ಹೇಳಿದೆ.
ಅಲ್ಲದೆ ಆಪರೇಷನ್ ಕಮಲದ ಕುರಿತಾಗಿಯೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಆಡಳಿತ ಪಕ್ಷ “ನಮ್ಮದು ಆಪರೇಷನ್ ಕಮಲದ ಸರ್ಕಾರವಲ್ಲ, ಜನಾಶೀರ್ವಾದದ ಸರ್ಕಾರ. ಭ್ರಷ್ಟಾಚಾರವನ್ನೇ ಉಸಿರಾಡುವ ನಾಯಕರು ತಮ್ಮಲ್ಲಿನ ಕೊಳೆಯನ್ನು ತೊಳೆದುಕೊಳ್ಳುವತ್ತ ಗಮನಹರಿಸಲಿ” ಎಂದು ಕುಟುಕಿದೆ.