ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ರಹಸ್ಯ ಸಭೆ; ಬಿಜೆಪಿ ಅಡ್ಡಮತದಾನದ ಹಿಂದೆ ಸಂಚು: ಸ್ಪೋಟಕ ಮಾಹಿತಿ ಹೊರಹಾಕಿದ ಸದಾನಂದ ಗೌಡ

ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಅಡ್ಡಮತದಾನದ ಹಿಂದೆ ಬೆಂಗಳೂರಿನ ಐಷಾರಾಮಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ರಹಸ್ಯ ಸಭೆಯ ಸುಳಿವು ಇತ್ತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸ್ಫೋಟಕ ಆರೋಪ ಮಾಡಿದ್ದಾರೆ.

ಸೋಮವಾರ ಖಾಸಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಗೂ ಕೆಲ ದಿನಗಳ ಮುನ್ನ ತಮ್ಮ ಆಪ್ತರೊಬ್ಬರು ಕರೆ ಮಾಡಿ ಮಹತ್ವದ ಮಾಹಿತಿ ನೀಡಿದ್ದರು ಎಂದು ಹೇಳಿದರು. “ಅವರು ನನ್ನ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಮಾಹಿತಿ ಹಂಚಿಕೊಂಡಿದ್ದರು. ಬೆಂಗಳೂರಿನ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಇಬ್ಬರು ಅಥವಾ ಮೂವರು ಬಿಜೆಪಿ ನಾಯಕರು ಹಾಗೂ ಇಬ್ಬರು ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿದ್ದಾರೆ. ಈ ಸಭೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರ ಮತಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ನಡೆಯುತ್ತಿರಬಹುದು ಎಂಬ ಸುಳಿವು ನೀಡಿದ್ದರು” ಎಂದು ಹೇಳಿದರು.

ಈ ಮಾಹಿತಿ ಸಿಕ್ಕ ತಕ್ಷಣ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಕರೆ ಮಾಡಲು ಪ್ರಯತ್ನಿಸಿದ್ದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಮಾಹಿತಿ ನೀಡಿ ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದೆ ಎಂದು ಸದಾನಂದ ಗೌಡ ತಿಳಿಸಿದರು.

“ಮೊದಲ ಸಭೆಯ ಬಳಿಕ ಮತ್ತೊಂದು ಸಭೆಯೂ ನಡೆದಿತ್ತು. ಅದರ ಮಾಹಿತಿಯನ್ನೂ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ನೀಡಿದ್ದೆ. ಆದರೂ ಯಾವುದೇ ಎಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ನಂತರ ವಿಧಾನ ಪರಿಷತ್ ಚುನಾವಣೆ ನಡೆದು ಫಲಿತಾಂಶ ಹೊರಬಂದ ಬಳಿಕ, ನಾನು ಮಾಹಿತಿ ನೀಡಿದ್ದ ಅದೇ ರಾಜ್ಯ ಪ್ರಧಾನ ಕಾರ್ಯದರ್ಶಿಯವರು ಕರೆ ಮಾಡಿ ‘ನೀವು ಹೇಳಿದಂತೆಯೇ ಆಯಿತು’ ಎಂದು ಬೇಸರ ವ್ಯಕ್ತಪಡಿಸಿದರು” ಎಂದು ಅವರು ಹೇಳಿದರು.

ಸದಾನಂದ ಗೌಡರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಕುರಿತು ಬಿಜೆಪಿ ಒಳಗೇ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಬಹಿರಂಗಗೊಂಡಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು