Home ಬೆಂಗಳೂರು ʼಆರೋಪ ಸಾಬೀತಾದರೆ ತಕ್ಷಣ ರಾಜೀನಾಮೆʼ: ದಲಿತ ಎಂಬ ಕಾರಣಕ್ಕೆ ಪಿತೂರಿ – ಸಚಿವ ತಿಮ್ಮಾಪುರ ಕಿಡಿ

ʼಆರೋಪ ಸಾಬೀತಾದರೆ ತಕ್ಷಣ ರಾಜೀನಾಮೆʼ: ದಲಿತ ಎಂಬ ಕಾರಣಕ್ಕೆ ಪಿತೂರಿ – ಸಚಿವ ತಿಮ್ಮಾಪುರ ಕಿಡಿ

0

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ತಮ್ಮನ್ನು ಬಲವಾಗಿ ಸಮರ್ಥಿಸಿಕೊಂಡರು. “ನನ್ನ ಮೇಲಿನ ಆರೋಪಗಳು ಸಾಬೀತಾದರೆ ತಕ್ಷಣವೇ ರಾಜೀನಾಮೆ ನೀಡುವುದಲ್ಲದೆ, ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ,” ಎಂದು ಅವರು ಸವಾಲು ಹಾಕಿದರು.

ತಾವು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ತಿಮ್ಮಾಪುರ ಬೇಸರ ವ್ಯಕ್ತಪಡಿಸಿದರು. “ವಿರೋಧ ಪಕ್ಷದವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಈ ಹಿಂದೆ ರೇಣುಕಾಚಾರ್ಯ, ಗೋಪಾಲಯ್ಯ, ಸತೀಶ್ ಜಾರಕಿಹೊಳಿ ಅವರಂತಹ ಸಚಿವರೂ ಇಂತಹ ಆರೋಪಗಳನ್ನು ಎದುರಿಸಿದ್ದರು,” ಎಂದು ಅವರು ನೆನಪಿಸಿದರು. ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ತಂದಿರುವುದು ಮತ್ತು ಪರವಾನಗಿ ನವೀಕರಣ ಅವಧಿಯನ್ನು 5 ವರ್ಷಕ್ಕೇರಿಸುವಂತಹ ಸುಧಾರಣೆಗಳನ್ನು ತಂದಿದ್ದೇ ಈ ಆರೋಪಗಳಿಗೆ ಕಾರಣ ಎಂದು ಅವರು ವಿಶ್ಲೇಷಿಸಿದರು.

ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಜಗದೀಶ್ ನಾಯಕ್ ಎಂಬ ಅಧಿಕಾರಿ ಲಂಚ ಕೇಳುವಾಗ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಅದಕ್ಕಾಗಿ ನಾನು ರಾಜೀನಾಮೆ ನೀಡಬೇಕೇ?” ಎಂದು ಪ್ರಶ್ನಿಸಿದರು. ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಸ್ತಿತ್ವದಲ್ಲೇ ಇಲ್ಲ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಇದೇ ವೇಳೆ ಕೈಯಲ್ಲಿ ನೀಲಿ ಬಣ್ಣದ ಪೆನ್‌ಡ್ರೈವ್ ಪ್ರದರ್ಶಿಸಿದ ತಿಮ್ಮಾಪುರ, “ಇದರಲ್ಲಿ ಹಿಂದಿನ ಸಚಿವರ ಭ್ರಷ್ಟಾಚಾರದ ಸಾಕ್ಷ್ಯಗಳಿವೆ,” ಎಂದು ಬಾಂಬ್ ಸಿಡಿಸಿದರು. ಆದರೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, “ಲಂಚ ವಸೂಲಿಗೆ ‘ಮಂತ್ಲಿ ಕಾರ್ಡ್’ (ಮಾಸಿಕ) ವ್ಯವಸ್ಥೆಯಿದೆ. ಡಿಜಿಟಲ್ ಸಾಕ್ಷ್ಯಗಳಿದ್ದು, ಸಚಿವರು ರಾಜೀನಾಮೆ ನೀಡಬೇಕು,” ಎಂದು ಪಟ್ಟು ಹಿಡಿದರು. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಸದಸ್ಯ ಎನ್. ರವಿಕುಮಾರ್ ನಡುವೆ ತೀವ್ರ ವಾಗ್ವಾದ ನಡೆಯಿತು. ಕೊನೆಗೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

You cannot copy content of this page

Exit mobile version