Friday, June 14, 2024

ಸತ್ಯ | ನ್ಯಾಯ |ಧರ್ಮ

‘ಬುಲ್ ಡೋಜರ್ ನ್ಯಾಯ’ದ ಅಡಿಯಲ್ಲಿ ಅಪ್ಪಚ್ಚಿಯಾದ ಭಾರತ ಸಂವಿಧಾನ

ಸರಕಾರ ಓಡಿಸುತ್ತಿರುವ ಬುಲ್ ಡೋಜರ್ ಅಡಿಯಲ್ಲಿ ಅಪ್ಪಚ್ಚಿಯಾಗುತ್ತಿರುವುದು ಯಾರದೋ ಬಡವರ ಗುಡಿಸಲುಗಳಲ್ಲ, ಬದಲಿಗೆ ಜನತೆಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಭರವಸೆ ನೀಡಿದ ದೇಶದ ಸಂವಿಧಾನ – ಶ್ರೀನಿವಾಸ ಕಾರ್ಕಳ, ಲೇಖಕರು

ನಿಮ್ಮ ಮೇಲೆ ಅಪರಾಧವೊಂದರ ಆರೋಪ ಬಂದಿತೆಂದು ಇಟ್ಟುಕೊಳ್ಳೋಣ. ಆರೋಪ ಬಂದುದರಿಂದ ಸದ್ಯದ ಮಟ್ಟಿಗೆ ನೀವು ಕೇವಲ ‘ಆರೋಪಿ’ಯೇ ಹೊರತು, ‘ಅಪರಾಧಿ’ಯಲ್ಲ. ಪೊಲೀಸರು ನಿಮ್ಮನ್ನು ಪ್ರಾಥಮಿಕ ತನಿಖೆಗೊಳಪಡಿಸಿ, ಸಾಕ್ಷ್ಯಾಧಾರ ಸಂಗ್ರಹಿಸಿ, ನೀವು ಅಪರಾಧಿ ಹೌದೋ ಅಲ್ಲವೋ ಎಂದು ತೀರ್ಮಾನಿಸಲು ನಿಮ್ಮನ್ನು ನ್ಯಾಯಾಲಯದ ಕಟಕಟೆಯ ಮುಂದೆ ನಿಲ್ಲಿಸುತ್ತಾರೆ. ಅಲ್ಲಿ ವಿಚಾರಣೆ ನಡೆದು, ಸಾಕ್ಷ್ಯಗಳ ಆಧಾರದ ಮೇಲೆ ನಿಮ್ಮನ್ನು ನ್ಯಾಯಾಲಯವು ಅಪರಾಧಿಯೆಂದು ತೀರ್ಮಾನಿಸಿ ಶಿಕ್ಷೆ ವಿಧಿಸಬಹುದು ಅಥವಾ ನಿರಪರಾಧಿಯೆಂದು ಘೋಷಿಸಿ ಬಿಡುಗಡೆಗೊಳಿಸಲೂಬಹುದು. ಇದು ಸಂವಿಧಾನದ ಅಡಿಯಲ್ಲಿ, ಕಾನೂನು ಆಡಳಿತದ ಅನುಸಾರ ನ್ಯಾಯಯುತವಾಗಿ ನಡೆಯಬೇಕಾದ ಪ್ರಕ್ರಿಯೆ. ಇದರ ಬದಲಿಗೆ, ಆರೋಪ ಬಂದಾಕ್ಷಣ ನೀವು ‘ಅಪರಾಧಿ’ ಎಂದು ತೀರ್ಮಾನಿಸಿ ಪೊಲೀಸರೇ ನಿಮಗೆ, ‘ತಮಗೆ ಇಷ್ಟಬಂದ’ ಶಿಕ್ಷೆ ವಿಧಿಸಿದರೆ ಏನಾಗುತ್ತದೆ?

‘ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು’ ಎಂಬ ನಾಣ್ಣುಡಿಯೊಂದು ನಮ್ಮಲ್ಲಿ ರೂಢಿಯಲ್ಲಿದೆ. ಮನೆ ಕಟ್ಟುವುದಾಗಲೀ, ಮದುವೆ ಮಾಡುವುದಾಗಲೀ ಅಷ್ಟು ಸುಲಭದ ಕೆಲಸವಲ್ಲ, ಅದರ ಹಿಂದೆ ಅಪಾರ ಕಷ್ಟ ಇರುತ್ತದೆ, ಅಪಾರ ಹಣ ವ್ಯಯಿಸಬೇಕಾಗುತ್ತದೆ ಎಂಬುದು ಅದರ ಹಿಂದಿನ ಅರ್ಥ.

ನಮ್ಮದೇ ಆದ, ಪುಟ್ಟದೇ ಆದರೂ ಒಂದು ಮನೆ ಬೇಕು ಎಂಬುದು ಪ್ರತಿಯೊಬ್ಬರ ಕನಸು. ಶ್ರೀಮಂತರಿಗೆ ಈ ಕನಸು ನನಸು ಮಾಡುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆದರೆ ಆರ್ಥಿಕವಾಗಿ ಸ್ಥಿತಿವಂತರಲ್ಲದವರಿಗೆ ಇದೊಂದು ಭಗೀರಥ ಸಾಹಸ. ಜೀವಮಾನದ ಸಂಪಾದನೆಯನ್ನೆಲ್ಲ ಒಟ್ಟುಗೂಡಿಸಿ, ಎಲ್ಲೆಲ್ಲಿಂದಲೋ ಸಾಲವನ್ನೂ ಪಡೆದು ನೀವು ಒಂದು ಪುಟ್ಟ ಮನೆ ಕಟ್ಟಿಸಿಕೊಂಡಿರೆಂದುಕೊಳ್ಳೋಣ. ಆ ನಿಮ್ಮ ಮನೆ ಬರೇ ಕಟ್ಟಡವಲ್ಲ. ಅದೇ ನಿಮ್ಮ ಬದುಕು. ಅದರೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವೂ ಇರುತ್ತದೆ. ಅದು ನಿಮಗೆ ಭದ್ರತೆಯ ಭಾವನೆಯನ್ನೂ ಕೊಟ್ಟಿರುತ್ತದೆ. ಚಾಲ್ತಿಯಲ್ಲಿರುವ ಎಲ್ಲ ಕಾನೂನು ನಿಯಮಗಳ ಅಡಿಯಲ್ಲಿಯೇ ನೀವು ಕಟ್ಟಿಕೊಂಡ ನಿಮ್ಮ ಮನೆಯನ್ನು, ನಿಮ್ಮ ಮನೆಯ ಒಬ್ಬ ಸದಸ್ಯ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಎಂಬ ‘ಆರೋಪ’ದ ಮೇಲೆ ಸರಕಾರವು ಪೊಲೀಸ್ ಬಲ ಬಳಸಿಕೊಂಡು ಬುಲ್ ಡೋಜರ್ ಮೂಲಕ ಕ್ಷಣಗಳಲ್ಲಿ ನೆಲಸಮ ಮಾಡಿದರೆ ನಿಮಗೆ ಏನನಿಸುತ್ತದೆ? ಮನೆಯ ಪುರುಷರಾದರೋ ಬಯಲಿನಲ್ಲಿಯೇ ಮಲಗಿ ದಿನ ಕಳೆಯಬಹುದು, ಮನೆಯ ಮಹಿಳೆಯರು ಪುಟ್ಟ ಮಕ್ಕಳು ಏನು ಮಾಡಬೇಕು?

ಬುಲ್ ಡೋಜರ್ ನ್ಯಾಯ

ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಎಪ್ಪತ್ತೈದು ವರ್ಷಗಳ ಪೈಕಿ, ಸುಮಾರು ಎಪ್ಪತ್ತು ವರ್ಷಗಳ ಕಾಲವೂ ನಾವು ಇಂತಹ ಒಂದು ‘ಬುಲ್ ಡೋಜರ್ ನ್ಯಾಯ’ ಎಂಬ ಸರಕಾರಿ ಕ್ರೌರ್ಯವನ್ನು ಕೇಳಿದ, ನೋಡಿದ ಉದಾಹರಣೆಯೇ ಇಲ್ಲ. ಆದರೆ ದೇಶದ ಆಡಳಿತವು ಹಿಂದುತ್ವವಾದಿ ರಾಜಕೀಯ ಪಕ್ಷದ ವಶವಾಗಿ, ದೇಶವು ‘ಒಂದು ರಾಷ್ಟ್ರ ಒಂದು ಧರ್ಮ’ದ ಹಾದಿ ಹಿಡಿದು, ಬಹುಸಂಖ್ಯಾತವಾದವು ಮೇಲುಗೈ ಸಾಧಿಸುತ್ತಿದ್ದಂತೆ, ಸರಕಾರಿ ಕ್ರೌರ್ಯವೂ ವಿಕಾರ ರೂಪವನ್ನು ಪಡೆಯಲಾರಂಭಿಸಿತು. ಅಲ್ಲಿ ಮನುಷ್ಯತ್ವಕ್ಕಾಗಲೀ, ಸಾಂವಿಧಾನಿಕ ಹಕ್ಕುಗಳಿಗಾಗಲೀ, ಮಾನವ ಹಕ್ಕುಗಳಿಗಾಗಲೀ, ಕಾನೂನು ಆಡಳಿತಕ್ಕಾಗಲೀ ಚಿಕ್ಕಾಸಿನ ಬೆಲೆಯೂ ಇಲ್ಲವಾಗುತ್ತಿದೆ. ವಿಶೇಷವಾಗಿ, ಮುಸ್ಲಿಮರು ಈ ದೇಶದ ಪ್ರಜೆಗಳೇ ಅಲ್ಲವೇನೋ, ಅವರು ಮನುಷ್ಯರೇ ಅಲ್ಲವೇನೋ ಎಂಬಂತೆ ಅವರ ವಿರುದ್ಧ ಈ ‘ಬುಲ್ ಡೋಜರ್ ನ್ಯಾಯ’ ವ್ಯಾಪಕವಾಗುತ್ತಿದೆ.

‘ಬುಲ್ ಡೋಜರ್ ನ್ಯಾಯ’ ಮೊದಲು ಆರಂಭವಾದುದು ಆದಿತ್ಯನಾಥರ ಬಿಜೆಪಿ ಸರಕಾರದ ಉತ್ತರಪ್ರದೇಶದಲ್ಲಿ. ಸಿಎಎ ವಿರೋಧಿ ಪ್ರತಿಭಟನೆಯ ಬಳಿಕ ಪ್ರತಿಭಟನೆಯ ಸಂದರ್ಭದ ನಷ್ಟ ವಸೂಲಿ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಸರಕಾರಿ ದೌರ್ಜನ್ಯದ ಗುರಿಯಾಗಿಸುವ ಕ್ರಮ ಅಲ್ಲಿ ಮಾಮೂಲಾಗಿ ಹೋಯಿತು. ವ್ಯಕ್ತಿಯೊಬ್ಬ ಅಪರಾಧ ಕೃತ್ಯವೊಂದರ ಆರೋಪಿಯೆಂದು ತಿಳಿದರೆ ಸಾಕು, ಸರಕಾರದ ಬುಲ್ ಡೋಜರ್ ಆತನ ಮನೆಯತ್ತ ಧಾವಿಸುತ್ತದೆ. ಕ್ಷಣ ಮಾತ್ರಗಳಲ್ಲಿ ಅದನ್ನು ಕೆಡವಿ ಹಾಕಲಾಗುತ್ತದೆ (ಕೆಡವಲು ಕಾರಣ ಅದು ಅಕ್ರಮ ಕಟ್ಟಡ ಎಂಬ ಸಬೂಬು ನೀಡಲಾಗುತ್ತದೆ. ದಶಕಗಳ ಹಿಂದೆ ಕಟ್ಟಿದ ಕಟ್ಟಡ ಇದ್ದಕ್ಕಿದ್ದಂತೆ ಅಕ್ರಮ ಕಟ್ಟಡವಾಗುವುದಾದರೂ ಹೇಗೆ?!). ಅಪರಾಧದ ಆರೋಪವನ್ನೂ ಹೊಂದಿರದ ಆತನ ತಂದೆ, ತಾಯಿ, ಅಜ್ಜ, ಅಜ್ಜಿ, ಸಹೋದರ, ಸಹೋದರಿಯರನ್ನು ಬೀದಿಪಾಲು ಮಾಡುವ ಮೂಲಕ ಅವರೆಲ್ಲರ ಮೇಲೆ ಸಾಮೂಹಿಕ ಶಿಕ್ಷೆ ವಿಧಿಸಲಾಗುತ್ತದೆ.

ಇಂತಹ ಸರಕಾರಿ ಕ್ರೌರ್ಯವನ್ನು ಸಂಭ್ರಮಿಸುವ ಬಹುದೊಡ್ಡ ವರ್ಗ ನಮ್ಮಲ್ಲಿರುವುದರಿಂದ ಸರಕಾರಕ್ಕೆ ಇನ್ನಷ್ಟು ಧೈರ್ಯ ಬರುತ್ತದೆ. ಇಂತಹ ಕೆಲಸದ ಕಾರಣವಾಗಿಯೇ ಆದಿತ್ಯನಾಥರಿಗೆ ‘ಬುಲ್ ಡೋಜರ್ ಬಾಬಾ’ ಎಂಬ ಪದವಿಯೂ ದೊರೆಯಿತು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಗೆ ‘ಬುಲ್ಡೋಜರ್ ಮಾಮಾ’ ಎಂಬ ಹೆಸರೂ ಬಂತು. ಟ್ಯಾಬ್ಲೋಗಳಲ್ಲಿ ಬುಲ್ ಡೋಜರ್ ಬಳಸಲಾಯಿತು. ಗೋದಿ ಮೀಡಿಯಾದ ಆಂಕರ್ ಗಳು ಕೂಡಾ ಇದನ್ನು ಲಘುವಾಗಿ ತೆಗೆದುಕೊಂಡು ಜೋಕ್ ಮಟ್ಟದಲ್ಲಿ ಮಾತನಾಡುವಲ್ಲಿ ಹಿಂದೆ ಬೀಳಲಿಲ್ಲ. ಸುಮ್ಮನೆ ಯೂಟ್ಯೂಬ್ ನಲ್ಲಿ ‘ಬುಲ್ ಡೋಜರ್ ಜಸ್ಟಿಸ್’ ಎಂದು   ಸರ್ಚ್ ಮಾಡಿ, ನಮ್ಮ ಮಾಧ್ಯಮಗಳು ಈ ಪಾಶವೀ ಕೃತ್ಯವನ್ನು ಹೇಗೆ ಪ್ರೋತ್ಸಾಹಿಸುತ್ತವೆ, ವಿಜೃಂಭಿಸುತ್ತವೆ ಎನ್ನುವುದು ತಿಳಿದೀತು.

ನ್ಯಾಯಾಲಯ ಯಾಕೆ ಸುಮ್ಮನಿದೆ?!

ಸರಕಾರವೇನೋ ಒಂದು ರಾಜಕೀಯ ಪಕ್ಷದಿಂದ ನಡೆಯುವಂಥದ್ದು. ಪಕ್ಷದ ನಿಲುವು ಸರಕಾರದ ನಿಲುವು ಆಗುವುದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ದೇಶದ ನ್ಯಾಯಾಲಯಗಳು ಏನು ಮಾಡುತ್ತಿವೆ? ‘ಬುಲ್ ಡೋಜರ್ ನ್ಯಾಯ’ ನೀಡಿಕೆ ನ್ಯಾಯಾಲಯಗಳಿಗೆ ತಿಳಿಯದ ಸಂಗತಿಯೇನಲ್ಲ. ಮಾಧ್ಯಮಗಳು ಆ ಬಗ್ಗೆ ವ್ಯಾಪಕವಾಗಿ ವರದಿ ಮಾಡುತ್ತಲೇ ಇವೆ. ‘ಇಲ್ಲಿ ಕೆಡವಲಾಗುತ್ತಿರುವುದು ಮನೆಗಳನ್ನಲ್ಲ, ಭಾರತದ ಸಂವಿಧಾನವನ್ನು’ ಎಂದು ಪತ್ರಿಕೆಗಳು ಸಂಪಾದಕೀಯ ಕೂಡಾ ಬರೆದಿವೆ. ದೇಶದ ಹಿರಿಯ ನ್ಯಾಯವಾದಿಗಳು ಇದನ್ನು ಅತ್ಯುನ್ನತ ನ್ಯಾಯಾಲಯದ ಗಮನಕ್ಕೆ ತಂದು, ಈ ಸರಕಾರಿ ಅನ್ಯಾಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಕೋರಿದ್ದರು ಕೂಡಾ. ಆದರೆ ನ್ಯಾಯಾಧೀಶರಿಗೆ ಇದೊಂದು ಗಂಭೀರ ವಿಷಯ ಅನಿಸಲೇ ಇಲ್ಲ. ಇದರಿಂದ ಇನ್ನಷ್ಟು ಉತ್ಸಾಹಿತವಾದ ಬಿಜೆಪಿ ಆಡಳಿತದ ಸರಕಾರಗಳು ಬುಲ್ ಡೋಜರ್ ಓಡಿಸುವ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸಿದವು. ಮಧ್ಯಪ್ರದೇಶದ ಖಾರ್ಗೋನೆ, ಗುಜರಾತ್ ನ ಖಂಭತ್, ದಿಲ್ಲಿಯ ಜಹಾಂಗೀರ್ ಪುರಿ, ಅಸ್ಸಾಂ ನ ನಗಾಂವ್ ಹೀಗೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಈ ಸರಕಾರಿ ಕ್ರೌರ್ಯ ಈಗ ಮಾಮೂಲು. (ಹುಬ್ಬಳ್ಳಿ ಗಲಾಟೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ‘ಬುಲ್ ಡೋಜರ್ ನ್ಯಾಯ’ಕ್ಕೆ ಬಿಜೆಪಿ ವಲಯದಲ್ಲಿ ಒತ್ತಾಯ ಬಂದಿತ್ತು).

ಇದೀಗ ಹರ್ಯಾನಾ ಸರಕಾರವೂ ನೂಹ್ ಹಿಂಸಾಚಾರ ನೆಪದಲ್ಲಿ ಮುಸ್ಲಿಮರ ಮನೆಗಳ ಮೇಲೆ ಯಾವ ಪರಿಯಲ್ಲಿ ಬುಲ್ ಡೋಜರ್ ಓಡಿಸಿ ಸಾವಿರಾರು ಮಂದಿಯನ್ನು ಬೀದಿಪಾಲು ಮಾಡಿತು ಎಂದರೆ, ಹರ್ಯಾನಾ ಪಂಜಾಬ್ ಹೈಕೋರ್ಟ್ ಮಧ್ಯಪ್ರವೇಶಿಸಿ, ತಕ್ಷಣ ಈ ಕ್ರಮ ನಿಲ್ಲಿಸಲು ಸೂಚಿಸಿದ್ದಲ್ಲದೆ, ‘ಏನು ಸರ್ಕಾರವೇ ethnic cleansing ಗೆ (ಜನಾಂಗ ನಿರ್ಮೂಲನೆ) ಹೊರಟಿದೆಯೇ?’ ಎಂದು ಕಟುವಾಗಿ ಪ್ರಶ್ನಿಸುವಂತಾಯಿತು. ಆದರೆ ಹೀಗೆ ತಡೆಯಾಜ್ಞೆ ಕೊಡುವ ಮುನ್ನವೇ ಬಹುತೇಕ ಮುಸ್ಲಿಂ ಸಮುದಾಯದ 1,208 ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು (ಹಿಂದುಸ್ತಾನ್ ಟೈಮ್ಸ್ ವರದಿ).

ನೂಹ್ ಹಿಂಸಾಚಾರ

ಇದೇ ಜುಲೈ 31, 2023 ರಂದು ಬಜರಂಗದಳ, ಮೈತ್ರಿಶಕ್ತಿ ದುರ್ಗಾವಾಹಿನಿ ಮತ್ತು ವಿಶ‍್ವ ಹಿಂದೂ ಪರಿಷತ್ ಅಯೋಜಿಸಿದ್ದ ಮೆರವಣಿಗೆ ‘ಬ್ರಿಜ್ ಮಂಡಲ್ ಜಲಾಭಿಷೇಕ್’ ಯಾತ್ರೆಯ ಸಂದರ್ಭದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ನೂಹ್ ನ ನಲ್ ಹಾರ್ ನಲ್ಲಿ ಆರಂಭವಾದ ಇದು ಬಳಿಕ ಇತರ ಜಿಲ್ಲೆಗಳಿಗೂ ಹರಡಿತ್ತು. ಹಿಂಸಾಚಾರದಲ್ಲಿ 6 ಮಂದಿ ಅಸುನೀಗಿದ್ದರು, 88 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಸರಕಾರಕ್ಕೆ ಗಲಭೆ ಸಾಧ್ಯತೆಯ ಮಾಹಿತಿ ಇದ್ದರೂ ಸೂಕ್ತ ಕ್ರಮಗೊಂಡಿರಲಿಲ್ಲ. ಹಿಂಸಾಚಾರದ ಬಳಿಕ ಅದಕ್ಕೆ ಮುಖ್ಯ ಕಾರಣರಾದ ಮೋನು ಮನೇಸರ್ (ಈತ ಈ ಹಿಂದೆ ಇಬ್ಬರು ಮುಸ್ಲಿಮರನ್ನು ಗೋರಕ್ಷಣೆ ನೆಪದಲ್ಲಿ ಕೊಂದ ಆರೋಪಿ) ಮತ್ತಿತರ ಆರೋಪಿಗಳ ಮೇಲೂ ಕ್ರಮ ಜರುಗಿಸುವ ಬದಲು, ಇಡೀ ಸರಕಾರ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಿಂತಿತು. ಅದರ ಮಂತ್ರಿಗಳು ಬಹಿರಂಗವಾಗಿಯೇ ಆ ಸಮುದಾಯದ ವಿರುದ್ಧ ಹೇಳಿಕೆ ನೀಡಿದರು. ಮುಸ್ಲಿಂ ಸಮುದಾಯದವರು ಜಾಗ ಖಾಲಿ ಮಾಡಬೇಕು ಎಂದು ಬಹಿರಂಗ ಕರೆ ನೀಡಲಾಯಿತು. ಮುಸ್ಲಿಮರ ಮೇಲೆ ವ್ಯಾಪಾರ ಮತ್ತು ಸಾಮಾಜಿಕ ಬಹಿಷ್ಕಾರದ ಕರೆ ನೀಡಲಾಯಿತು. ಆದರೆ ಸರಕಾರ ತನ್ನ ಸಾಂವಿಧಾನಿಕ ಕರ್ತವ್ಯ ನಿಭಾಯಿಸಲೇ ಇಲ್ಲ. ಬದಲಿಗೆ ಬುಲ್ ಡೋಜರ್ ಓಡಿಸುವತ್ತಲೇ ಅದರ ಆಸಕ್ತಿ.

ಸರಿಸುಮಾರು ನಾಲ್ಕು ದಿನ ಬುಲ್ ಡೋಜರ್ ಗಳು ಓಡಿದವು. ಹಿಂದೆಲ್ಲ ಹೀಗೆ ಮನೆ ಉರುಳಿಸುವಾಗ ಅವನ್ನು ಅಕ್ರಮ ಕಟ್ಟಡ ಎನ್ನಲಾಗುತ್ತಿತ್ತು. ಈ ಬಾರಿ ಇವೆಲ್ಲ ಕೋಮು ಹಿಂಸಾಚಾರದ ಆರೋಪಿಗಳಿಗೆ ಸೇರಿದ ಮನೆ, ಈ ಕಟ್ಟಡಗಳಿಂದಲೇ ಅವರು ಹಿಂಸೆ ಎಸಗಿದ್ದರು ಎಂಬ ನೆಪದಲ್ಲಿ ಬಹುಮಹಡಿ ಕಟ್ಟಡಗಳನ್ನೂ ಉರುಳಿಸಲಾಯಿತು. 1 ಜಿಲ್ಲೆ, 11 ಪಟ್ಟಣಗಳು, 5 ದಿನ, 1208 ಕಟ್ಟಡಗಳು ಮತ್ತು ಇತರ ಸಂರಚನೆಗಳು, 37 ತಾಣಗಳು, 72.1 ಎಕರೆ ಪ್ರದೇಶ. ಬಹುತೇಕ ಎಲ್ಲವೂ ಮುಸ್ಲಿಮರಿಗೆ ಸೇರಿದವು.

ಮಧ್ಯಪ್ರವೇಶಿಸಿದ ಹೈಕೋರ್ಟ್

ನಾಲ್ಕು ದಿನಗಳ ಬಳಿಕ ಆಗಸ್ಟ್ 7, 2023 ರಂದು ಪಂಜಾಬ್ ಹರ್ಯಾನಾ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತು. “ಏನು ಜನಾಂಗ ನಿರ್ಮೂಲನೆಗೆ ಹೊರಟಿದ್ದೀರಾ?” ಎಂಬ ಕಟುವಾದ ಪ್ರಶ್ನೆಯನ್ನು ಕೇಳಿದ ಅದು, ತಕ್ಷಣ ಕಾನೂನು ಬಾಹಿರ ನೆಲಸಮ ಕಾರ್ಯಾಚರಣೆ ನಿಲ್ಲಿಸುವಂತೆ ಅದೇಶಿಸಿತು. ಇದುವರೆಗೆ ಎಷ್ಟು ಕಟ್ಟಡ ಕೆಡವಲಾಗಿದೆ, ಕಟ್ಟಡದ ಮಾಲೀಕರಿಗೆ ನೊಟೀಸ್ ನೀಡಲಾಗಿದೆಯೇ ಈ ಎಲ್ಲ ಮಾಹಿತಿಗಳನ್ನು ಒದಗಿಸುವಂತೆ ಅದು ಸರಕಾರಿ ವಕೀಲರಿಗೆ ಆದೇಶ ನೀಡಿತು. ಈ ಆದೇಶ ನೀಡಿದ್ದು ಜಸ್ಟಿಸ್ ಜಿ ಎಸ್ ಸಂಧವಾಲಿಯಾ ಮತ್ತು ಹರ್ಪ್ರೀತ್ ಕೌರ್ ಜೀವನ್ ಅವರಿದ್ದ ವಿಭಾಗೀಯ ಪೀಠ. ಕೇವಲ ಐದು ದಿನಗಳಲ್ಲಿ ಸದರಿ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಿದ್ದರ ಹಿಂದಿರುವುದು ದುರುದ್ದೇಶವಲ್ಲವೇ ಎಂಬ ಪ್ರಶ್ನೆಗಳು ಅನೇಕ ಮೂಲೆಗಳಿಂದ ಕೇಳಿಬಂದಿದೆ.

ಅದಿರಲಿ, ಕೋರ್ಟ್ ಮುಂದಿನ ದಿನಗಳಲ್ಲಿ ಏನು ಕ್ರಮ ಜರುಗಿಸುತ್ತದೆ, ಪರಿಹಾರ ನೀಡುವಂತೆ ಅದೇಶಿಸುತ್ತದೆಯೇ ಕಾದು ನೋಡಬೇಕಿದೆ. ಭಾರತದ ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಮೂಡುವಂತೆ ಮಾಡಬೇಕಿದ್ದರೆ ಭಾರತದ ಪ್ರಜೆಗಳೇ ಆದ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ರಾಜಕೀಯ ದುರುದ್ದೇಶದ ಈ ಸರಕಾರಿ ಅಕ್ರಮಗಳಿಗೆ ನ್ಯಾಯಾಂಗ ಶಾಶ್ವತ ಪೂರ್ಣವಿರಾಮ ಹಾಕಬೇಕು, ಈಗಾಗಲೇ ಮಾಡಿರುವ ಹಾನಿಗೆ ಸರಕಾರ ಪರಿಹಾರ ನೀಡುವಂತೆ ಮಾಡಬೇಕು.

ಬುಲ್ ಡೋಜರ್ ಗಳ ಆವಿಷ್ಕಾರವಾದುದು 100 ವರ್ಷಗಳ ಹಿಂದೆ. ಮನೆಗಳನ್ನು ಕಚೇರಿಗಳನ್ನು ರಸ್ತೆಗಳನ್ನು ಮತ್ತು ಇತರ ಮೂಲಸೌಕರ್ಯಗಳನ್ನು ಕಟ್ಟಲು ಅವನ್ನು ಜಗತ್ತಿನಾದ್ಯಂತ ಬಳಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಹಿಂದುತ್ವವಾದಿ ಸರಕಾರಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ಮನೆಗಳನ್ನು, ಜೀವನೋಪಾಯಗಳನ್ನು ನಾಶಪಡಿಸಲು ಅವನ್ನು ಬಳಸುತ್ತಿರುವುದು ದುಃಖದ ಸಂಗತಿ. ‘ಬುಲ್ ಡೋಜರ್ ನ್ಯಾಯ’ ದ ಈ ಅಮಾನವೀಯ ಕೆಲಸಕ್ಕೆ ಬಹುಸಂಖ್ಯಾತ ಸಮುದಾಯದ ಬೆಂಬಲವಿದೆ, ಸರಕಾರದ ಆಶೀರ್ವಾದವಿದೆ, ದೇಶದ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕಾದ ದೇಶದ ನ್ಯಾಯಾಂಗ ವ್ಯವಸ್ಥೆಯು ‘ನೋಡಿಯೂ ನೋಡದಂತೆ’ ಸುಮ್ಮನಿದೆ ಎನ್ನುವುದು ಇನ್ನೂ ದುಃಖದ ಸಂಗತಿ. ಪರಿಣಾಮವಾಗಿ ಸರಕಾರ ಓಡಿಸುತ್ತಿರುವ ಬುಲ್ ಡೋಜರ್ ಅಡಿಯಲ್ಲಿ ಅಪ್ಪಚ್ಚಿಯಾಗುತ್ತಿರುವುದು ಯಾರದೋ ಬಡವರ ಗುಡಿಸಲುಗಳಲ್ಲ, ಬದಲಿಗೆ ಜನತೆಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಭರವಸೆ ನೀಡಿದ ದೇಶದ ಸಂವಿಧಾನ.

ಶ್ರೀನಿವಾಸ ಕಾರ್ಕಳ

ಹಿರಿಯ ಲೇಖಕರು

ಇದನ್ನೂ ಓದಿ-ವಿಕಾರ ರೂಪ ಪಡೆಯುತ್ತಿರುವ ಮತೀಯ ದ್ವೇಷ

Related Articles

ಇತ್ತೀಚಿನ ಸುದ್ದಿಗಳು