Friday, June 21, 2024

ಸತ್ಯ | ನ್ಯಾಯ |ಧರ್ಮ

ನಿಸರ್ಗದ ನಿರಂತರ ನಾಶ

ಭಾರತ ತನ್ನ ಎಲ್ಲ ರೀತಿಯ ಸಂಪನ್ಮೂಲಗಳಿಗೆ ಆಂತರಿಕವಾಗಿಯೇ ಹೆಚ್ಚು ಅವಲಂಬಿತವಾಗಿದೆ. ಇದನ್ನು ನಿಭಾಯಿಸಲು ಒಂದು ಸುಸ್ಥಿರವಾದ ಪರಸರ ಸ್ನೇಹಿಯಾದ ಸಂಯಮದ ಆರ್ಥಿಕ ಸಾಮಾಜಿಕ ವ್ಯವಸ್ಥೆ ಅಗತ್ಯ – ಪ್ರಸಾದ್‌ ರಕ್ಷಿದಿ.

ಈ ಹಿಂದೆ ಹೇಳಿದ ಎಲ್ಲಾ ವಿಷಯಗಳೂ ಸೇರಿ ಜಗತ್ತಿನಾದ್ಯಂತ ನಗರೀಕರಣ ನಡೆದಿದೆ. ಅಷ್ಟೇ ಅಲ್ಲ ಭೂಮಿಯ ನೈಸರ್ಗಿಕ ಸಂಪತ್ತಿನ ಬಹುದೊಡ್ಡ ಪಾಲನ್ನು ನಗರಗಳು ಬಳಸುತ್ತಿವೆ.  ಇದರ ಫಲವೇ  ನಿಸರ್ಗದ ನಿರಂತರ ನಾಶ. ಇದರಲ್ಲಿ ಮತ್ತೂ ಒಂದು ಸಂಗತಿಯಿದೆ. ಕೆಲವು ದೇಶಗಳು ಬಹು ವಿಸ್ತಾರವಾದ ಭೂ ಪ್ರದೇಶವನ್ನು ಹೊಂದಿವೆ. ಆದರೆ ಅವುಗಳ ಜನ ಸಂಖ್ಯೆ ಆ ಗಾತ್ರಕ್ಕೆ ಹೋಲಿಸಿದರೆ ಕಡಿಮೆಯಿದೆ. ಅದರಿಂದಾಗಿ  ಅವು ತಮ್ಮ ದೇಶದ ನೈಸರ್ಗಿಕ ಸಂಪತ್ತನ್ನು ನಮಗಿಂತ ಹೆಚ್ಚು ಕಾಪಾಡಿಕೊಳ್ಳ ಬಲ್ಲವು. ಅದಲ್ಲದೆ ಆ ದೇಶಗಳೆಲ್ಲ “ಮುಂದುವರಿದ” ದೇಶಗಳು, ಯುದ್ಧೋದ್ಯಮ ಮತ್ತು ಇತರ ರಾಜಕೀಯ ಕಾರಣಗಳಿಂದ ಆರ್ಥಿಕ ಶಕ್ತಿಗಳಾಗಿ ಶ್ರೀಮಂತ ದೇಶಗಳೆನಿಸಿಕೊಂಡಿವೆ. ನವ ಆರ್ಥಿಕ ಸಿದ್ಧಾಂತಗಳ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿವೆ. ಇಡೀ ಪ್ರಪಂಚದ ನೈಸರ್ಗಿಕ ಸಂಪತ್ತಿಗೆ ಕೈಚಾಚಿ ಕಬಳಿಸುತ್ತವೆ. ಜೊತೆಗೆ ತಮ್ಮ ದೇಶವನ್ನು ಮಾದರಿಯೆಂದು ಪರಿಗಣಿಸಿ ಇತರರಿಗೆ, ಪರಿಸರ ರಕ್ಷಣೆಯ ಪಾಠವನ್ನೂ ಹೇಳುತ್ತವೆ!

ಭಾರತದಂತಹ ಅನೇಕ ದೇಶಗಳ ಸಮಸ್ಯೆಯೆಂದರೆ ನಮ್ಮ ಜನಸಂಖ್ಯೆ. ಅದಕ್ಕೆ ಹೋಲಿಸಿದರೆ ಸೀಮಿತ ಭೂಪ್ರದೇಶ, ಜೊತೆಗೆ ಮುಂದುವರಿದ ದೇಶಗಳ ಮಾದರಿ ಅಭಿವೃದ್ಧಿಯ ಅನುಕರಣೆ. ಮುಂದುವರಿದ ದೇಶಗಳಿಗೆ ದೂರ ದೂರ ದೇಶಗಳವರೆಗೆ ಕೈಚಾಚಿ ಕಬಳಿಸುವ ಶಕ್ತಿ ಇರುವುದರಿಂದ ಅವುಗಳ ಭ್ರಷ್ಟಾಚಾರವೂ ಜಾಗತಿಕ ಮಟ್ಟದ್ದೂ ಮತ್ತು ಅತಿ ದೊಡ್ಡ ಪ್ರಮಾಣದ್ದೂ ಆಗಿರುತ್ತದೆ. ಆ ಮೂಲಕ ಗಳಿಸಿದ ಅಪಾರ ಸಂಪತ್ತಿನ ಕೆಲವು ಭಾಗವನ್ನು ಅವು ತಮ್ಮ ದೇಶದ ಪ್ರಜೆಗಳ ಸುಖ ಸಂತೋಷಗಳಿಗೆ ಬಳಸಿ ಅವರನ್ನು ಒಂದು ರೀತಿಯ ಸಂತೃಪ್ತಿಯಲ್ಲಿಡ ಬಲ್ಲವು. ಅದ್ದರಿಂದಲೇ ಉದಾಹರಣೆಗೆ ಅಮೆರಿಕಾದಂತಹ ದೇಶಗಳ ಸಾಮಾನ್ಯ ಜನರು ಬೇರೆ ದೇಶಗಳ ಆಗುಹೋಗುಗಳ ಬಗ್ಗೆ ಮಾತಾಡಿದಷ್ಟು ತಮ್ಮ ದೇಶದ ರಾಜಕಾರಣದ ಬಗ್ಗೆ ತಲೆಕೆಡಿಸಿ ಕೊಳ್ಳುವುದಿಲ್ಲ.  ಈ ಸ್ಥಿತಿಯಿದ್ದಾಗ ಆ ಪ್ರಜಾಪ್ರಭುತ್ವ ಕೇವಲ ಅಲಂಕಾರಿಕವಾಗಿರುತ್ತದೆ.

ಆ ದೇಶಗಳಲ್ಲಿ ಪ್ರಜ್ಞಾವಂತರು ಇಲ್ಲವೇ?  ಖಂಡಿತ ಇದ್ದಾರೆ. ಅಲ್ಲಿ ಕೂಡಾ ಅವರ ಧ್ವನಿ ವಿರಳವಾದದ್ದೇ. ಭಾರತದಂತಹ ದೇಶಗಳಿಗೆ  ಬೇರೆ ದೇಶಗಳನ್ನು ತನ್ನ ಆರ್ಥಿಕ ಸಾಮ್ರಾಜ್ಯದ ಅಧೀನವಾಗಿಸಿಕೊಂಡು ಲಾಭ ಗಳಿಸುವ ಶಕ್ತಿ ಬಹಳ ಕಡಿಮೆ. ಈ ವಿಚಾರದಲ್ಲಿ ಚೀನಾದ ಶಕ್ತಿ ದೊಡ್ಡದು. ಆದ್ದರಿಂದ ಭಾರತ ತನ್ನ ಎಲ್ಲ ರೀತಿಯ ಸಂಪನ್ಮೂಲಗಳಿಗೆ ಆಂತರಿಕವಾಗಿಯೇ ಹೆಚ್ಚು ಅವಲಂಬಿತವಾಗಿದೆ. ಇದನ್ನು ನಿಭಾಯಿಸಲು ಒಂದು ಸುಸ್ಥಿರವಾದ ಪರಸರ ಸ್ನೇಹಿಯಾದ ಸಂಯಮದ ಆರ್ಥಿಕ ಸಾಮಾಜಿಕ  ವ್ಯವಸ್ಥೆ ಅಗತ್ಯ.

ಆದರೆ ಇಲ್ಲಿನ ಪರಿಸ್ಥಿತಿ ತದ್ವಿರುದ್ಧವಾಗಿದೆ.  ಅಪಾರ ಜನಸಂಖ್ಯೆ, ಜಾಗತಿಕವಾಗಿ ಹಬ್ಬಿ ಬಂದ ಕೊಳ್ಳುಬಾಕ ಜೀವನ ಶೈಲಿ, ಹೆಸರಿಗೆ ಪ್ರಜಾಪ್ರಭುತ್ವವಾದರೂ ಇನ್ನೂ ಪಾಳೇಗಾರಿ ವ್ಯವಸ್ಥೆಯಲ್ಲೇ ಇರುವ ರಾಜಕಾರಣ, ವ್ಯಾಪಕ ಭ್ರಷ್ಟಾಚಾರ ಇವೆಲ್ಲವುಗಳಿಂದಾಗಿ ಹೇಗಾದರೂ ಸರಿ ಹಣ ಸಂಪಾದಿಸು, ಕೂಡಿಡು ಸಂಪತ್ತು ಹೆಚ್ಚಿಸಿಕೋ ಎನ್ನುವ ಸ್ಥಿತಿ ವ್ಯಾಪಕವಾಗಿದೆ. ಇದರಿಂದಾಗಿಯೇ ಭ್ರಷ್ಟಾಚಾರ ಒಂದು ವಿಷಯವೇ ಅಲ್ಲ ಎನ್ನುವ ಸ್ಥಿತಿಗೆ ಸಾಮಾನ್ಯ ಜನರೂ ಬಂದು ನಿಂತಿದ್ದಾರೆ. ಇದು ನಮ್ಮನ್ನು ಆಳುವವರಿಗೆ ಮತ್ತು ದೋಚುವವರಿಗೆ ಬಹಳ ಅನುಕೂಲವಾದ ಸ್ಥಿತಿ. ಹಾಗಾಗಿ ಹಣ ಗಳಿಸು ಉಳಿದೆಲ್ಲವೂ ನೀನು ಹೇಳಿದಂತೆ ನಡೆಯುತ್ತದೆ ಎನ್ನುವ ತೀರ್ಮಾನಕ್ಕೆ ಬಂದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ನಮ್ಮ ಕಾರ್ಯಕ್ರಮಗಳೂ ರೂಪಿತವಾಗುತ್ತಿವೆ. ಇದರಿಂದಾಗಿ ಪ್ರಜ್ಞಾವಂತರು ಕಾಲ ಕಾಲಕ್ಕೆ ನೀಡುತ್ತಿರುವ ಸೂಚನೆ, ಎಚ್ಚರಿಕೆ, ತಿಳುವಳಿಕೆಗಳು ಉಪೇಕ್ಷಿಸಲ್ಪಡುತ್ತವೆ ಮತ್ತು ಇತ್ತೀಚಿನ ದಿನಗಳಲ್ಲಿ ಅದನ್ನು ಹತ್ತಿಕ್ಕಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ನಾನು ಮನುಷ್ಯ ಮತ್ತು ಜೀವಸಂಕುಲದ ಉಳಿವಿನ ಬಗ್ಗೆ ಏನು ಮಾಡಬಹುದು ?

ಅಂತಾರಾಷ್ಟ್ರೀಯ ವಿದ್ಯಮಾನಗಳನ್ನು ಒಂದೆಡೆ ಇಟ್ಟು ನಾವು ಆಂತರಿಕವಾಗಿ ಮತ್ತು ಸ್ಥಳೀಯವಾಗಿ ಏನು ಮಾಡಬಹುದು? ನೋಡೋಣ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ.

ಇದನ್ನೂ ಓದಿ-https://peepalmedia.com/hydropower-lines-and-environmental-degradation%e0%b2%b6/ಜಲವಿದ್ಯುತ್ ಮಾರ್ಗಗಳು ಮತ್ತು ಪರಿಸರ ನಾಶ

Related Articles

ಇತ್ತೀಚಿನ ಸುದ್ದಿಗಳು