Home ರಾಜಕೀಯ ಇಡಿ ದಾಳಿ ಚರ್ಚೆ ನಡುವೆ ಸತೀಶ್ ಜಾರಕಿಹೊಳಿ ಇಲಾಖೆಗೆ ಗುತ್ತಿಗೆದಾರರಿಂದಲೇ ‘ಕ್ಲೀನ್‌ಚಿಟ್’ ; ಸಿಎಂಗೆ ಬರೆದ...

ಇಡಿ ದಾಳಿ ಚರ್ಚೆ ನಡುವೆ ಸತೀಶ್ ಜಾರಕಿಹೊಳಿ ಇಲಾಖೆಗೆ ಗುತ್ತಿಗೆದಾರರಿಂದಲೇ ‘ಕ್ಲೀನ್‌ಚಿಟ್’ ; ಸಿಎಂಗೆ ಬರೆದ ಪತ್ರದಲ್ಲಿ ಇಲಾಖೆ ಪಾರದರ್ಶಕತೆ ಬಗ್ಗೆ ಪ್ರಸ್ತಾಪ

0

ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ (ED) ದಾಳಿ ವೇಳೆ PWD ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ, ಇದೇ ಇಲಾಖೆಯ ಟೆಂಡರ್ ಮತ್ತು ಹಣ ಬಿಡುಗಡೆ ಪ್ರಕ್ರಿಯೆ ಕುರಿತು ಗುತ್ತಿಗೆದಾರರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಪತ್ರ ಇದೀಗ ಗಮನ ಸೆಳೆದಿದೆ.

PWD ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆ ಹಾಗೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಪಾರದರ್ಶಕತೆ ಇದೆ ಎಂದು ಗುತ್ತಿಗೆದಾರರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಇಲಾಖೆಯ ಕಾರ್ಯವೈಖರಿ ಕುರಿತು ಗುತ್ತಿಗೆದಾರರ ವಲಯದಿಂದ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ.

ಪತ್ರದಲ್ಲಿ ರಾಜ್ಯದ ಗುತ್ತಿಗೆದಾರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. 2021-22ನೇ ಸಾಲಿನಿಂದ ಇಲ್ಲಿಯವರೆಗೆ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ಹಲವು ಇಲಾಖೆಗಳು ಬಿಡುಗಡೆ ಮಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಲೋಕೋಪಯೋಗಿ ಇಲಾಖೆ ಹಾಗೂ ಬಿಬಿಎಂಪಿಯಲ್ಲಿ ಟೆಂಡರ್ ಮತ್ತು ಹಣ ಬಿಡುಗಡೆ ವಿಚಾರದಲ್ಲಿ ಪಾರದರ್ಶಕತೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ನೀಡಿರುವ ಭರವಸೆಯಂತೆ ಗುತ್ತಿಗೆದಾರರಿಗೆ ಬಾಕಿ ಇರುವ ₹38,000 ಕೋಟಿ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದರ ಜೊತೆಗೆ, 2017-18 ಮತ್ತು 2018-19ನೇ ಸಾಲಿನ ವ್ಯಾಟ್‌ನಿಂದ ಜಿಎಸ್‌ಟಿಗೆ ಬದಲಾವಣೆಯ ಸಂದರ್ಭದಲ್ಲಿ ಉಂಟಾದ ಶೇ.8ರಷ್ಟು ವ್ಯತ್ಯಾಸದ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ಈ ಸಂಬಂಧ ಆರ್ಥಿಕ ಇಲಾಖೆಗೆ ಮುಖ್ಯಮಂತ್ರಿ ಶಿಫಾರಸು ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಇ-ಸಂಗ್ರಹಣಾ ನಿಯಮ ಬದಲಾವಣೆಗೆ ಆಗ್ರಹ
ಇ-ಸಂಗ್ರಹಣಾ ವೇದಿಕೆಯ Contract Management Moduleನಲ್ಲಿ ಕಾಮಗಾರಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡುವಂತೆ ಇರುವ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನೂ ಗುತ್ತಿಗೆದಾರರು ಮುಂದಿಟ್ಟಿದ್ದಾರೆ.

ಕಾಮಗಾರಿಗಳು ಪೂರ್ಣಗೊಂಡಿದ್ದರೂ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಮರುಪರಿಶೀಲಿಸಬೇಕು ಎಂಬುದು ಗುತ್ತಿಗೆದಾರರ ಮನವಿಯಾಗಿದೆ.

ಸ್ಥಳೀಯರಿಗೆ ಟೆಂಡರ್‌ನಲ್ಲಿ ಆದ್ಯತೆ ನೀಡಲು ಒತ್ತಾಯ
ಇದೇ ವೇಳೆ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಟೆಂಡರ್‌ಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಗುತ್ತಿಗೆದಾರರಿಗೆ ಅನಗತ್ಯವಾಗಿ ಪ್ರೋತ್ಸಾಹ ನೀಡದೆ, ಸ್ಥಳೀಯ ಗುತ್ತಿಗೆದಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಒಂದೆಡೆ PWD ಕಾಮಗಾರಿಗಳಿಗೆ ಸಂಬಂಧಿಸಿದಂತೆ ED ತನಿಖೆ ಕುರಿತು ಚರ್ಚೆಗಳು ನಡೆಯುತ್ತಿರುವಾಗಲೇ, ಮತ್ತೊಂದೆಡೆ ಗುತ್ತಿಗೆದಾರರು ಇದೇ ಇಲಾಖೆಯ ಟೆಂಡರ್ ಹಾಗೂ ಹಣ ಬಿಡುಗಡೆ ವ್ಯವಸ್ಥೆಯನ್ನು ಪಾರದರ್ಶಕ ಎಂದು ಬಣ್ಣಿಸಿರುವುದು ರಾಜಕೀಯ ಮತ್ತು ಆಡಳಿತಾತ್ಮಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಆದರೆ, ED ದಾಳಿ ವೇಳೆ ಯಾವ ದಾಖಲೆಗಳು ಪತ್ತೆಯಾಗಿವೆ ಮತ್ತು ಅವುಗಳ ಆಧಾರದ ಮೇಲೆ ತನಿಖೆಯಲ್ಲಿ ಯಾವ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂಬುದರ ಕುರಿತು ಅಧಿಕೃತ ತನಿಖಾ ಸಂಸ್ಥೆಯಿಂದ ದೃಢೀಕೃತ ವಿವರಗಳು ಲಭ್ಯವಾದ ಬಳಿಕವೇ ಅದರ ಕುರಿತು ಅಂತಿಮ ನಿರ್ಣಯಕ್ಕೆ ಬರಬೇಕಿದೆ.

You cannot copy content of this page

Exit mobile version