Friday, February 6, 2026

ಸತ್ಯ | ನ್ಯಾಯ |ಧರ್ಮ

ವಿವಾದದ ಗಾಂಧಿ ಜಾಹೀರಾತು: ಇದು ಯಾರ ಶ್ರದ್ಧಾಂಜಲಿ?

“..ಇಡೀ ಜಗತ್ತು ಗಾಂಧಿಯನ್ನು ಅಹಿಂಸಾ ಮೂರ್ತಿಯಾಗಿ ಕೊಂಡಾಡುತ್ತದೆ, ಗೌರವಿಸುತ್ತದೆ. ಆದರೆ ಆ ಜಗತ್ತಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳು ಇಲ್ಲ. ಅವರದು ಬೇರೆಯದೇ ಜಗತ್ತು. ಅವರ ಆ ಜಗತ್ತಿನಲ್ಲಿ ಹಿಂಸೆ, ದ್ವೇಷ, ಜೀವವಿರೋಧಿ ಚಿಂತನೆಗಳದ್ದೇ ಪಾರಮ್ಯ..” ಮಾಚಯ್ಯ ಎಂ ಹಿಪ್ಪರಿಗಿಯವರ ಬರಹದಲ್ಲಿ

ಒಮ್ಮೆ ಗಾಂಧಿ ತಮ್ಮ ಸಬರಮತಿ ಆಶ್ರಮದಲ್ಲಿ ಒಡನಾಡಿಗಳ ಜೊತೆ ಚರ್ಚೆಯಲ್ಲಿ ತಲ್ಲೀನರಾಗಿದ್ದರು. ಆಗ ಇದ್ದಕ್ಕಿದ್ದಂತೆ ಒಂದು ಚೇಳು ಅವರತ್ತ ಹರಿದುಬರಲು ಆರಂಭಿಸಿತು. ಗಾಬರಿಯಾದ ಸಹಚರರು, ಗಲಾಟೆಯೆಬ್ಬಿಸುತ್ತಾ, ಅದನ್ನು ಕೊಲ್ಲಲು ಮುಂದಾದರು. ಆ ಗಲಭೆಯ ನಡುವೆಯೂ ಶಾಂತಮೂರ್ತಿಯಾಗಿದ್ದ ಗಾಂಧಿ ಕೈಸನ್ನೆಯಲ್ಲೆ ಅವರನ್ನು ತಡೆದು ನಿಲ್ಲಿಸಿದರು. ಪಕ್ಕದಲ್ಲಿದ್ದ ಕಾಗದದ ರೊಟ್ಟಿನ ಚೂರೊಂದನ್ನು ಕೈಗೆತ್ತಿಕೊಂಡು ಚೇಳಿಗೆ ಅಡ್ಡನಾಗಿ ಹಿಡಿದರು. ಚೇಳು ಅದರ ಮೇಲೆ ಏರಿತು. ಚೂರಿನ ಸಮೇತ ಅದನ್ನು ಹೊರೆಗೆಸೆದು ಬರುವಂತೆ ತಮ್ಮ ಸಹಚರನೊಬ್ಬನ ಕೈಗೆ ಕೊಟ್ಟರು.

ಆಗ ಅಲ್ಲಿದ್ದವರು ಕೇಳುತ್ತಾರೆ, “ಬಾಪೂ, ಆ ಚೇಳು ನಿಮಗೆ ಕಚ್ಚಿದ್ದರೆ ಏನು ಮಾಡುತ್ತಿದ್ದಿರಿ? ನೀವೇಕೆ ಅಷ್ಟು ಅಪಾಯವನ್ನು ಮೇಲೆಳೆದುಕೊಂಡಿರಿ? ಅದನ್ನು ಹೊಡೆದು ಕೊಲ್ಲಬಹುದಿತ್ತಲ್ಲವೇ?”

ಗಾಂಧಿ ಉತ್ತರಿಸುತ್ತಾರೆ, “ಆ ಚೇಳಿಗೆ ನನ್ನ ಮೇಲೆ ದ್ವೇಷ ಸಾಧಿಸುವಂತದ್ದೇನಿದೆ? ಅದಕ್ಕೆ ತಿಳಿದಿರುವ ಭಾಷೆ ಒಂದೇ, ಆತ್ಮರಕ್ಷಣೆಗೆ ಆಕ್ರಮಣಶೀಲನಾಗುವುದು. ಅದರ ಪ್ರಾಣಕ್ಕೆ ಅಪಾಯವಿಲ್ಲದಿದ್ದರೆ, ಅದು ಕೂಡಾ ಯಾರನ್ನೂ ಕುಟುಕಲಾರದು. ಹಾಗಿರುವಾಗ ವಿನಾ ಕಾರಣ ನಮ್ಮ ಭಯದಿಂದಾಗಿ ಯಾಕೆ ಅದನ್ನು ಕೊಲ್ಲಬೇಕು?”

ಈ ಘಟನೆ ಮಹಾತ್ಮ ಗಾಂಧಿಯವರ ಸೋದರ ಸಂಬಂಧಿ ಮೊಮ್ಮಗನಾದ ಪ್ರಭುದಾಸ್‌ ಗಾಂಧಿಯವರ My Childhood with Gandhiji ಕೃತಿಯಲ್ಲಿ ಉಲ್ಲೇಖವಾಗಿದೆ. ಗಾಂಧಿಯವರ ಆತ್ಮೀಯರಾಗಿದ್ದ ಮಹಾದೇವ ದೇಸಾಯಿಯವರ ಮಗ ನಾರಾಯಣ ದೇಸಾಯಿ (ಗಾಂಧಿಯವರ ತೊಡೆ ಮೇಲೆ ಆಡಿ ಬೆಳೆದ ಬಾಲಕ) ಅವರು ತಮ್ಮ ಅನುಭವದ Maru Jeevan Ej Mari Vani (The Fire and the Rose) ಕೃತಿಯಲ್ಲೂ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ.

ಗಾಂಧಿಯವರ ಅಹಿಂಸಾ ತತ್ವ, ನ್ಯಾಯಬದ್ಧತೆ, ಹೋರಾಟದ ಮಾರ್ಗಗಳಿಗೆ ಮಾರುಹೋಗಿ ಇಂಗ್ಲೆಂಡ್‌ ನೆಲವನ್ನು ತೊರೆದು ಸಬರಮತಿ ಆಶ್ರಮದಲ್ಲಿ ಗಾಂಧಿ ಹೋರಾಟದ ಒಡನಾಡಿಯಾಗಿ ಗುರುತಿಸಿಕೊಂಡಿದ್ದವರು ಮೆಡಲೀನ್‌ ಸ್ಲೇಡ್‌. ಗಾಂಧಿ ಇವರಿಗೆ ಮೀರಾ ಬೆಹನ್‌ ಎಂದು ಮರುನಾಮಕರಣ ಮಾಡಿದ್ದರು. ಅವರು ಕೂಡಾ ತಮ್ಮ ಒಂದು ಕೃತಿಯಲ್ಲಿ ಇಂತದ್ದೇ ಇನ್ನೊಂದು ಪ್ರಸಂಗವನ್ನು ಸ್ಮರಿಸಿದ್ದಾರೆ. ಒಮ್ಮೆ, ಒಂದು ಹಾವು ಆಶ್ರಮವನ್ನು ಪ್ರವೇಶಿಸಿರುತ್ತದೆ. ಆಗ ಹಾವು ಹಿಡಿಯುವವರನ್ನು ಕರೆಸಲಾಗುತ್ತೆ. ಆ ಹಾವಾಡಿಗನನ್ನು ಕರೆದು ಗಾಂಧಿ ನೀಡುವ ಒಂದು ನಿರ್ದೇಶನ ನೀಡುತ್ತಾರೆ, “ಯಾವುದೇ ಕಾರಣಕ್ಕೂ ಹಾವಿಗೆ, ಅದರ ಪ್ರಾಣಕ್ಕೆ ಅಪಾಯವಾಗದಂತೆ ಜೋಪಾನವಾಗಿ ಅದನ್ನು ಹಿಡಿದು ಹೊರಬಿಡಬೇಕು!”.

ಇಂತಹ ಬಿಡಿಬಿಡಿ ಘಟನೆಗಳಿಂದ ನಮಗೆ ಒಂದು ಸಂಗತಿ ಅರ್ಥವಾಗುತ್ತೆ, ಮಹಾತ್ಮನಿಗೆ ಅಹಿಂಸೆ ಎನ್ನುವುದು ಕೇವಲ ಬ್ರಿಟಿಷರ ವಿರುದ್ಧ ಹೋರಾಡುವ ಒಂದು ರಾಜಕೀಯ ಮಾರ್ಗವಾಗಿರಲಿಲ್ಲ; ಅವರ ಬದುಕಿನ ಆಧ್ಯಾತ್ಮವಾಗಿತ್ತು. ಹಾಗಾಗಿಯೇ, ಬಂಗಾಳದ ನೌಖಾಲಿಯಲ್ಲಿ ಕೋಮುಜ್ವಾಲೆ ಉಲ್ಬಣಿಸಿ ರಕ್ತದ ಕೋಡಿ ಹರಿಯುತ್ತಿದ್ದಾಗ, ಆ ಮುದಿಜೀವ ಯಾರ ಹಂಗೂ ಇಲ್ಲದೆ ಏಕಾಂಗಿಯಾಗಿ ಆ ನೆಲದಲ್ಲಿ ಸಂಚರಿಸಿ, ಶಾಂತಿ ಮೂಡಿಸಲು ಸಾಧ್ಯವಾಯ್ತು. ಆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ನೌಖಾಲಿಗೆ ಹೋಗದಂತೆ ನೆಹರೂ, ಸರ್ದಾರರು ಗಾಂಧಿಗೆ ಎಷ್ಟು ದಂಬಾಲು ಬಿದ್ದರೂ ಕಿವಿಗೊಡದೆ ಆ ಬೆಂಕಿಯ ಜ್ವಾಲೆಗಳ ನಡುವೆ ಸಂಚರಿಸಿ ತಣ್ಣಗಾಗಿಸಿದರು. ಅಹಿಂಸೆಯ ಮೇಲೆ ಗಾಂಧಿಗಿದ್ದ ಅಚಲ ನಂಬಿಕೆ, ವ್ರತನಿಷ್ಠೆ ಇಂತದ್ದು.

ಹಣ, ಖ್ಯಾತಿ, ಅಧಿಕಾರ ಎಲ್ಲರಿಗೂ ಮುಖ್ಯ. ಹಾಗಂತ ನಾವಂದುಕೊಂಡಿದ್ದೇವೆ. ಅದಕ್ಕಿಂತಲೂ ಮುಖ್ಯವಾದುದು ಯಾವುದು? ನಮ್ಮ ಪ್ರಾಣ! ಅದೇ ಇಲ್ಲದೆ ಹೋದರೆ ಮಿಕ್ಕೆಲ್ಲವೂ ಇದ್ದು ಏನು ಪ್ರಯೋಜನ. ಆದರೆ ಒಬ್ಬ ವ್ಯಕ್ತಿ ಆ ಪ್ರಾಣದ ಹಂಗನ್ನೂ ತೊರೆದು ಬದುಕುತ್ತಾನೆಂದರೆ, ಆತನಿಗೆ ಅದಕ್ಕಿಂತಲೂ ಮುಖ್ಯವಾದುದು ಮತ್ತೇನೋ ಇದೆ ಎಂದರ್ಥ. ಗಾಂಧಿಯ ವಿಚಾರದಲ್ಲಿ ಆ ಮತ್ತೊಂದು ಎನ್ನುವ ಸಂಗತಿ `ಅಹಿಂಸೆ’ಯೇ ಆಗಿತ್ತು. ಹಾಗಾಗಿ ಆರು ಬಾರಿ ತನ್ನ ಹತ್ಯೆಗೆ ಯತ್ನ ನಡೆದರೂ ಆ ಮನುಷ್ಯ, ತಲೆಕೆಡಿಸಿಕೊಳ್ಳದೆ ಗೋಡ್ಸೆಗೆ ಇನ್ನೊಂದು ಅವಕಾಶ ಕೊಟ್ಟರು! ಹೋಗುವ ಪ್ರಾಣಕ್ಕಿಂತ ನೆಲೆಗೊಳ್ಳಬೇಕಿರುವ ಅಹಿಂಸೆ ಗಾಂಧಿಗೆ ಮುಖ್ಯವಾಗಿತ್ತು.

ಈ ಕಾರಣದಿಂದಲೇ ಇಡೀ ಜಗತ್ತು ಗಾಂಧಿಯನ್ನು ಅಹಿಂಸಾ ಮೂರ್ತಿಯಾಗಿ ಕೊಂಡಾಡುತ್ತದೆ, ಗೌರವಿಸುತ್ತದೆ. ಆದರೆ ಆ ಜಗತ್ತಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿಗಳು ಇಲ್ಲ. ಅವರದು ಬೇರೆಯದೇ ಜಗತ್ತು. ಅವರ ಆ ಜಗತ್ತಿನಲ್ಲಿ ಹಿಂಸೆ, ದ್ವೇಷ, ಜೀವವಿರೋಧಿ ಚಿಂತನೆಗಳದ್ದೇ ಪಾರಮ್ಯ. ಅಂತಹ ದುಷ್ಟ ಜಗತ್ತಿಗೆ ಈಗ ನಮ್ಮ ಘನತೆವೆತ್ತ ಪತ್ರಿಕೆಗಳೂ ಪ್ರವೇಶ ಪಡೆದಿವೆ. ಇವತ್ತು ಕೆಲವು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕೀಳು ಅಭಿರುಚಿಯ ಜಾಹೀರಾತು ಅದನ್ನು ಪ್ರಕಟಿಸಿರುವ ಬಿಜೆಪಿಯ ನೀಚತನವನ್ನು ಮಾತ್ರವಲ್ಲ, ವ್ಯಾಪಾರೋದ್ಯಮದ ಹೆಸರಿನಲ್ಲಿ ಅದನ್ನು ಮುದ್ರಿಸಿರುವ ಪತ್ರಿಕೆಗಳ ಅಂತರ್ಮುಖಿ ನೀಚತನವನ್ನೂ ಬಯಲು ಮಾಡಿದೆ.

ರಾಜಕಾರಣ ಏನೇ ಇರಲಿ, ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಕೆಸರೆರಚಾಟ ಎಂತದ್ದೇ ಇರಲಿ, ಅದಕ್ಕಾಗಿ ಮಹಾತ್ಮನನ್ನು ಆತನ ಜೀವನದ ಮೌಲ್ಯದಿಂದಲೇ ದೂರ ಮಾಡಿ, ಹಿಂಸಾರೂಪಿಯಾಗಿ ಚಿತ್ರಿಸುವುದು ಕೇವಲ ಕೀಳು ಅಭಿರುಚಿಯಲ್ಲ, ನಿಜವಾದ ದೇಶದ್ರೋಹ! ಗಾಂಧಿ ತಮ್ಮ ಕೈಯಲ್ಲಿರುವ ಕೋಲನ್ನು ಸದಾ ಆಸರೆಯಾಗಿ, ಊರುಗೋಲಾಗಿ ಬಳಸುತ್ತಾ ಬಂದವರು. ಆ `ಆಸರೆ’ಯ ಸಂಕೇತವನ್ನು ‘ಹಿಂಸೆ’ಯ ಸಂಕೇತವಾಗಿ ಚಿತ್ರಿಸಲಾಗಿದೆ. ಇದನ್ನು ನೀವು ಜಾಹೀರಾತೆಂದು ಪ್ರಕಟಿಸುತ್ತೀರೆಂದರೆ, ಅದಕ್ಕಾಗಿ ವ್ಯಾಪಾರೋದ್ಯಮವನ್ನು ಸಮರ್ಥನೆಯನ್ನಾಗಿ ಬಳಸಿಕೊಳ್ಳುತ್ತೀರಿಂದರೆ ಅದಕ್ಕಿಂತ ನೈತಿಕ ಅಧಃಪತನ ಮತ್ತೊಂದಿರಲಿಕ್ಕಿಲ್ಲ.

ಗ್ರಾಮೀಣ ಜನರ ಭದ್ರತೆಗೆ ಅಪಾಯವಾಗುವಂತೆ ಉದ್ಯೋಗ ಖಾತ್ರಿಗೆ ತಿದ್ದುಪಡಿ ತಂದು, ಗಾಂಧಿಯ ಹೆಸರನ್ನೂ ಯೋಜನೆಯಿಂದ ಕೈಬಿಟ್ಟ ಕೇಂದ್ರ ಸರ್ಕಾರದ ವಿರುದ್ಧ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ಜಾಹೀರಾತಿಗೆ ಪ್ರತಿಯಾಗಿ ಬಿಜೆಪಿ ಇದನ್ನು ಪ್ರಕಟಿಸಿದೆ ಎಂದು ಕೆಲವರು ವಾದಿಸುತ್ತಾರೆ. ಇವೆರಡೂ ಜಾಹೀರಾತುಗಳನ್ನು ಪರಸ್ಪರ ತುಲನೆ ಮಾಡಿ ನೋಡಿದರೆ, ಆ ಎರಡೂ ಸಿದ್ದಾಂತಗಳ ನಡುವಿನ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ರಾಜ್ಯ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ಒಬ್ಬ ವ್ಯಕ್ತಿಯ ಜೊತೆ ಸಂವಾದಿಸುತ್ತಿರುವ ಸರಣಿ ಚಿತ್ರ ರೂಪಣೆಗಳಿದ್ದವು. ಬಿಜೆಪಿ ಪ್ರಕಟಿಸಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ತನ್ನ ದೊಣ್ಣೆಯೆತ್ತಿ ಸಿದ್ದರಾಮಯ್ಯ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ರೂಪವನ್ನು ಹೋಲುವವರಿಗೆ ಹೊಡೆಯುತ್ತಿರುವಂತೆ ಚಿತ್ರಿಸಲಾಗಿದೆ. ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ತನ್ನ ವಿರೋಧಿಯ ಜೊತೆಗೂ ಸಂವಾದ ನಡೆಸುವ ವಿಶಾಲತೆ ನಮಗೆ ಗೋಚರವಾಗುತ್ತದೆ. ಆ ಸಂವಾದವೇ ನಿಜವಾದ ಗಾಂಧಿತತ್ವ. ಇನ್ನು ಬಿಜೆಪಿ ನೀಡಿರುವ ಜಾಹೀರಾತಿನಲ್ಲಿ ಮಹಾತ್ಮ ಗಾಂಧಿ ತಮ್ಮ ತತ್ವಸಿದ್ದಾಂತಿಗಳ ಮೇಲೆಯೇ ಹಲ್ಲೆ ಮಾಡುತ್ತಿದ್ದಾರೆ. ಇಲ್ಲಿ ಹಿಂಸೆ ವಿಜೃಂಭಿಸುತ್ತಿದೆ. ಸಂವಾದಕ್ಕೆ ಆಸ್ಪದವಿಲ್ಲ. ಇದು ನಿಜವಾದ ಗೋಡ್ಸೆವಾದ!

ಬಿಜೆಪಿಯವರು ಈ ಬಗೆಯ ಜಾಹೀರಾತು ನೀಡಿರುವುದರಲ್ಲಿ ಅಚ್ಚರಿಯಿಲ್ಲ. ಯಾಕೆಂದರೆ ಅವರ ಆಲೋಚನೆಯೆ ಹಿಂಸೆಯಿಂದ ಆವೃತವಾದುದು; ಗಾಂಧಿಯ ತತ್ವವನ್ನು ವಿರೋಧಿಸುವಂತದ್ದು. ಆದರೆ ಅದನ್ನು ಪ್ರಕಟಿಸಿದ ಪತ್ರಿಕೆಗಳ ಸೂಕ್ಷ್ಮತೆಗೆ ಏನಾಯ್ತು? ಕೇವಲ ಹಣದಾಸೆಗೆ ಪತ್ರಿಕೆಗಳು ಈ ಮಟ್ಟಕ್ಕೆ ಇಳಿದಿವೆ ಎನ್ನುವುದು ಸುಳ್ಳು. ಅವುಗಳು ಸಹಾ ಕೋಮುವಾದಿ ಮನಸ್ಥಿತಿಯ ಕುಲುಮೆಗಳಾಗಿ ರೂಪಾಂತರವಾಗಿವೆ. ಬಹುತ್ವದ ಜೀವಂತಿಕೆಯನ್ನು ಕಳೆದುಕೊಂಡಿವೆ. ಅದು ಈ ಜಾಹೀರಾತಿನಲ್ಲಿ ಜಗಜ್ಜಾಹೀರಾಗಿದೆ. ನಿಜ ಹೇಳಬೇಕೆಂದರೆ, ಅದು ಗಾಂಧಿಯನ್ನು ವಿರೂಪಗೊಳಿಸುವ, ಹಿಂಸೆಯನ್ನು ವಿಜೃಂಭಿಸುವ ಅಥವಾ ರಾಜಕೀಯ ಲೇವಡಿ ಮಾಡುವ ಜಾಹೀರಾತಲ್ಲ; ಪತ್ರಿಕೆಗಳು ತಮಗೆ ತಾವೇ ಪ್ರಕಟಿಸಿಕೊಂಡ ಶ್ರದ್ದಾಂಜಲಿ ಜಾಹೀರಾತು!

Related Articles

ಇತ್ತೀಚಿನ ಸುದ್ದಿಗಳು

You cannot copy content of this page