Monday, December 8, 2025

ಸತ್ಯ | ನ್ಯಾಯ |ಧರ್ಮ

ರೈತ ಸಂಘದ ಹೋರಾಟ ಫಲಿಸಿದ್ದು ಜೋಳ ಖರೀದಿ ಕೇಂದ್ರ ತೆರೆಯಬೇಕು – ಕಣಗಾಲ್ ಮೂರ್ತಿ ಅಗ್ರಹ

ಹಾಸನ: ರೈತ ಸಂಘದ ಹೋರಾಟ ಫಲಿಸಿದ್ದು, ರಾಜ್ಯ ಸರ್ಕಾರದಿಂದ ಜೋಳ ಖರೀದಿ ಆದೇಶ ನೀಡಿದ್ದು ಜಿಲ್ಲೆಯಲ್ಲಿ ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಎಂದು ಕಣಗಾಲ್ ಮೂರ್ತಿ ಅಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಸನ ಘಟಕದ ನಿರಂತರ ಹೋರಾಟದ ಪರಿಣಾಮವಾಗಿ, ಸರ್ಕಾರವು ಮೆಕ್ಕೆಜೋಳವನ್ನು ಕನಿಷ್ಠ 50 ಕ್ವಿಂಟಾಲ್‌ದಷ್ಟು ಪ್ರತಿಯೊಬ್ಬ ರೈತನಿಂದ ಖರೀದಿಸಲು ಆದೇಶ ಹೊರಡಿಸಿದೆ. ಜೊತೆಗೆ, ಬಿಳಿಸುಳಿ ರೋಗದಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡುವ ಭರವಸೆಯನ್ನೂ ಸರ್ಕಾರ ವ್ಯಕ್ತಪಡಿಸಿದೆ.

ನವೆಂಬರ್ 24ರಿಂದ 31ರ ವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತ ಸಂಘವು ಅಹೋರಾತ್ರಿ ಧರಣಿ–ಸತ್ಯಾಗ್ರಹ ನಡೆಸಿತ್ತು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಮತ್ತು ಬಿಳಿಸುಳಿ ರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ತುರ್ತು ಪರಿಹಾರ ನೀಡಬೇಕು ಎಂಬುದು ಮುಖ್ಯ ಬೇಡಿಕೆಗಳಾಗಿದ್ದವು.

ಧರಣಿಯ ಬಳಿಕ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆಎಂಎಫ್, ಎಪಿಎಂಸಿ, ಕೃಷಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೆಎಂಎಫ್ 1 ಡಿಸೆಂಬರ್‌ರಿಂದಲೇ ಸರ್ಕಾರ ನಿಗದಿ ಪಡಿಸಿದ ರೂ.2400 ದರಕ್ಕೆ ಖರೀದಿ ಪ್ರಾರಂಭಿಸುವುದಾಗಿ ಹೇಳಿತ್ತು. ಆದರೆ ಪ್ರಾರಂಭಿಕ ಹಂತದಲ್ಲಿ ಒಬ್ಬ ರೈತನಿಗೆ 20 ಕ್ವಿಂಟಾಲ್‌ವರೆಗೆ ಮಾತ್ರ ಮಿತಿ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 6ರಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಅವರ ನೇತೃತ್ವದಲ್ಲಿನ ತಂಡವು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, 50 ಕ್ವಿಂಟಾಲ್ ಪೂರ್ಣ ಪ್ರಮಾಣದ ಖರೀದಿ ಹಾಗೂ ಬಿಳಿಸುಳಿ ರೋಗದಿಂದ ಬಳಲುತ್ತಿರುವ 12,000 ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಿತು.

ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಪರಿಹಾರದ ಬಗ್ಗೆ ಭರವಸೆ ನೀಡಿದ್ದು, 7 ಡಿಸೆಂಬರ್ ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಮೂಲಕ ಪ್ರತಿಯೊಬ್ಬ ರೈತನಿಂದ 50 ಕ್ವಿಂಟಾಲ್ ಜೋಳವನ್ನು ಖರೀದಿಸಲು ಅಧಿಕೃತ ಆದೇಶ ಹೊರಡಿಸಲಾಗಿದೆ.

ಹಾಸನ ಜಿಲ್ಲೆಯಾದ್ಯಂತ ತಕ್ಷಣ ಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಹಾಗು ಬಿಳಿಸುಳಿ ರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಜು ಬಿಟ್ಟ ಗೌಡನಹಳ್ಳಿ, ಲಕ್ಷ್ಮಣ್ , ಕಾಂತರಾಜ್ , ಶಿವಣ್ಣ ಇತರರು ಹಾಜರಿದ್ದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page