Thursday, June 13, 2024

ಸತ್ಯ | ನ್ಯಾಯ |ಧರ್ಮ

‘ಗೃಹಲಕ್ಷ್ಮಿ’ ನೋಂದಣಿಗೆ ಕ್ಷಣಗಣನೆ ; ಹೇಗೆಲ್ಲಾ ಇರಲಿದೆ ವ್ಯವಸ್ಥೆ?

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣದ ಅಡಿಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿದ ‘ಗೃಹಲಕ್ಷ್ಮಿ’ ಯೋಜನೆಗೆ ಸರ್ಕಾರ ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಮತ್ತು ಅವರ ಸಹಾಯಕರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ ಅಂದರೆ ಜುಲೈ 19 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಇದು ಕಾಂಗ್ರೆಸ್‌ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿದ್ದು, ಯೋಜನೆಯ ನೋಂದಣಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ ಹಾಗೂ ಅರ್ಜಿ ಸಲ್ಲಿಸಲು ಡೆಡ್‌ಲೈನ್‌ ಕೂಡ ನಿಗದಿ ಪಡಿಸಿಲ್ಲʼ ಎಂದು ತಿಳಿಸಿದ್ದಾರೆ.

2,000 ರೂ ನಗದು ಹಣವನ್ನು ಫಲಾನುಭವಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಆಗಸ್ಟ್ 16 ರಿಂದ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗುತ್ತದೆ. ಫಲಾನುಭವಿಯು ಹೊಸ ಬ್ಯಾಂಕ್ ಖಾತೆಯನ್ನು ಒದಗಿಸಿದ್ದರೆ (ಆಕೆಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಖಾತೆಯನ್ನು ಹೊರತುಪಡಿಸಿ), ಮೊತ್ತವನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಲಾಗುತ್ತದೆ” ಎಂದು ಸಚಿವರು ಹೇಳಿದರು.

ಈಗಾಗಲೇ ತಿಳಿಸಿದಂತೆ BPL, APL ಅಥವಾ ಅಂತ್ಯೋದಯ ಕಾರ್ಡ್ ಗಳಲ್ಲಿ ಸೂಚಿಸಲಾದ ಕುಟುಂಬದ ಮಹಿಳೆಯರಲ್ಲಿ ಮನೆಯ ಹಿರಿಯ ಸದಸ್ಯೆ ಆಗಿರಬೇಕು. ಆಧಾರ್ ಕಾರ್ಡ್ ಮೂಲಕ ಲಿಂಕ್ ಆದ ಬ್ಯಾಂಕ್ ಗೆ ಮಹಿಳೆಗೆ ಹಣ ವರ್ಗಾವಣೆ ಆಗುವುದು. ಪ್ರಮುಖವಾಗಿ ಮಹಿಳೆಯ ಗಂಡ ಅಥವಾ ಮಗ GST ಪಾವತಿದಾರ ಆಗಿರಬಾರದು ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ? ಅಲ್ಲಿನ ವ್ಯವಸ್ಥೆಗಳೇನು?
ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ನಿಗದಿ ಪಡಿಸಿದ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ನಿಮ್ಮ ಹತ್ತಿರದಲ್ಲಿರುವ ಈ ಯಾವುದಾದರೂ ಒಂದು ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಸಲ್ಲಿಸಬಹುದು. ಗೃಹಜ್ಯೋತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಂತೆ ಇದಕ್ಕೆ ಸಲ್ಲಿಸಲು ಸಾಧ್ಯವಿಲ್ಲ.

ರೇಷನ್‌ ಕಾರ್ಡ್‌ನಲ್ಲಿ ಗುರುತಿಸಲಾಗಿರುವ ಕುಟುಂಬದ ಯಜಮಾನಿ ಮಹಿಳೆಗೆ ದಿನಾಂಕ, ಸಮಯ, ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರವನ್ನು ತಿಳಿಸಲಾಗುವುದು. ಆನಂತರವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಸಮಯದ ಮಿತಿ ಇಲ್ಲ. ಆದರೆ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಎರಡನೇ ವಾರದ ಅಂತ್ಯದ ವೇಳೆಗೆ ಹಣ ವರ್ಗಾವಣೆ ಆಗಲಿದೆ.

* ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ತೊಂದರೆ ಆಗದಂತೆ, ಪ್ರತೀ ನೋಂದಣಿ ಕೇಂದ್ರಕ್ಕೆ ಒಬ್ಬರಂತೆ ಮೇಲ್ವಿಚಾರಣೆ ಅಧಿಕಾರಿಯನ್ನು ನೇಮಿಸಲಾಗುವುದು.
* ಕೆಲವು ಸೂಕ್ಷ್ಮ ಪ್ರದೇಶ ಮತ್ತು ಜನದಟ್ಟಣೆ ಜಾಸ್ತಿ ಇರುವ ಕಡೆಗಳಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನೂ ನೇಮಿಸಲಾಗುವುದು.
* ನೋಂದಣಿ ಕೇಂದ್ರದಲ್ಲಿ ವಿದ್ಯುತ್ ತೊಂದರೆ ಆಗದಂತೆ ಬ್ಯಾಟರಿ ವ್ಯವಸ್ಥೆ ಮತ್ತು ಸುಸ್ಥಿತಿಯಲ್ಲಿ ಇರುವ ಪ್ರಿಂಟರ್ ವ್ಯವಸ್ಥೆ ಮಾಡಲಾಗುವುದು. ಇದರ ಸಂಪೂರ್ಣ ನಿರ್ವಹಣೆ ಕೇಂದ್ರದ ಮೇಲ್ವಿಚಾರಣೆ ಅಧಿಕಾರಿಯ ಮೇಲಿರುತ್ತದೆ.
* ಈ ಬಗ್ಗೆಹೆಚ್ಚಿನ ಮಾಹಿತಿಗಾಗಿ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ಹೆಲ್ಪ್ ಡೆಸ್ಕ್ ವ್ಯವಸ್ಥೆ ಮಾಡಲಾಗುವುದು.
* ನೋಂದಣಿ ಕಾರ್ಯಕ್ಕೆ ಅಗತ್ಯವಿರುವ ಪ್ರಜಾಪ್ರತಿನಿಧಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತರಬೇತಿ ಕೊಡಿಸಲಾಗುವುದು.
* ಮಳೆ ಮತ್ತು ಬಿಸಿಲಿಗೆ ಪ್ರತೀ ನೋಂದಣಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು
* ಪ್ರತೀ ನೋಂದಣಿ ಕೇಂದ್ರಕ್ಕೆ ನಿಯೋಜಿಸಲಾದ ನೋಡಲ್ ಅಧಿಕಾರಿಯ ಮಾಹಿತಿಗಳನ್ನು ಇ – ಆಡಳಿತ ಇಲಾಖೆ ಒದಗಿಸುವ ಲಿಂಕ್ ನಲ್ಲಿ ಅಪ್ ಲೋಡ್ ಮಾಡಲಾಗುವುದು.

ಇವಿಷ್ಟು ಪ್ರತೀ ಕೇಂದ್ರಗಳಲ್ಲೂ ಮಹಿಳೆಯರಿಗೆ ಮತ್ತು ಅವರ ಸಹಾಯಕರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ಅನುಸರಿಸುವ ಕ್ರಮಗಳು ಎಂಬುದಾಗಿ ಇಲಾಖೆ ಸುತ್ತೋಲೆ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು