ರಾಯಚೂರಿನ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಅತಿ ದೊಡ್ಡ ಖೋಟಾನೋಟು ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ ಈ ಜಾಲದಲ್ಲಿ ಪೊಲೀಸ್ ಇಲಾಖೆಯವರೇ ಭಾಗಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಖೋಟಾನೋಟು ಜಾಲದ ಕಾಳದಂಧೆಯಲ್ಲಿ ತೊಡಗಿದ್ದ ಪೈಕಿ ಪೊಲೀಸ್ ಕಾನ್ಸ್ ಸ್ಟೇಬಲ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾಯಚೂರು ನಗರದಲ್ಲಿ ದಾಳಿಯನ್ನು ನಡೆಸಿ, ಖೋಟಾ ನೋಟು ದಂಧೆಯಲ್ಲಿ ತೊಡಗಿದವರನ್ನು ಪತ್ತೆ ಹಚ್ಚಿದ್ದಾರೆ.
ದಾಳಿಯ ವೇಳೆಯಲ್ಲಿ ಲಕ್ಷಾಂತರ ಮೌಲ್ಯದ ಖೋಟಾ ನೋಟುಗಳು, ಖೋಟಾನೋಟು ತಯಾರಿಗೆ ಬಳಸುತ್ತಿದ್ದ ವಸ್ತುಗಳು, ಮೆಷಿನ್ ಗಳು ಹಾಗೂ ಕಚ್ಚಾವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ದಾಳಿಯಲ್ಲಿ ರಾಯಚೂರು ಸಶಸ್ತ್ರ ಮೀಸಲು ಪಡೆಯ ಕಾನ್ಸ್ ಸ್ಟೇಬಲ್ ಮರಿಲಿಂಗ, ರಮೇಶ್ ಆದಿ, ಶಿವಲಿಂಗ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.