ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ದೇಶದ ಪ್ರಪ್ರಥಮ ಎಐ ಸಿಟಿ ‘ಗ್ರೇಟರ್ ಬೆಂಗಳೂರು ಇನ್ನೋವೇಶನ್ ಆ್ಯಂಡ್ ಟೆಕ್ ಸಿಟಿ’ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ಬಿಡದಿಯಲ್ಲಿ ನಿರ್ಮಾಣವಾಗಲಿರುವ ಬಿಡದಿ ಸಮಗ್ರ ಉಪನಗರ ಯೋಜನೆ ಅಡಿ ‘ಕೆಲಸ,ವಾಸ,ಉಲ್ಲಾಸ’ ಪರಿಕಲ್ಪನೆ ಅಡಿ ದೇಶದಲ್ಲೇ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ನಗರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು’ ಎಂದರು.
ಯೋಜನೆಗಾಗಿ ಒಂಬತ್ತು ಗ್ರಾಮಗಳ 8,493 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುವುದು. ಭೂಮಿ ಕೊಟ್ಟವರಿಗೆ 2013ರ ಭೂ ಸ್ವಾಧೀನ ಕಾಯ್ದೆ ಅಡಿ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪ್ರತಿ ಎಕರೆಗೆ ₹1.50 ಕೋಟಿಯಿಂದ ₹2.50 ಕೋಟಿವರೆಗೆ ಪರಿಹಾರ ನೀಡಲಾಗುವುದು. ಒಪ್ಪಿಗೆ ಪತ್ರ ಕೊಟ್ಟವರಿಗೆ ಮೂರು ದಿನದಲ್ಲಿ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಭರವಸೆ ನೀಡಿದರು.
‘ಪರಿಹಾರದ ಬದಲು ಯೋಜನೆಯ ಸಹಭಾಗಿತ್ವ ಪಡೆಯಲು ಮುಂದೆ ಬರುವ ರೈತರಿಗೆ, ವಸತಿ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ 50:50 ಅನುಪಾತದಲ್ಲಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅಭಿವೃದ್ಧಿಪಡಿಸುವ ಪ್ರದೇಶದಲ್ಲಿ 45:55 ಅನುಪಾತದಲ್ಲಿ ನಿವೇಶನ ಒದಗಿಸಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಇಂತಹದ್ದೊಂದು ಐತಿಹಾಸಿಕ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ’ ಎಂದು ತಿಳಿಸಿದರು.
ಯೋಜನೆಯ ಅಂತಿಮ ಅಧಿಸೂಚನೆ ದಿನಾಂಕದಿಂದ ಪರಿಹಾರ ನೀಡುವುವರೆಗೆ ಹಾಗೂ ಅಭಿವೃದ್ಧಿಪಡಿಸಿದ ಜಾಗವನ್ನು ಮಾಲೀಕರಿಗೆ ಹಸ್ತಾಂತರ ಮಾಡುವವರೆಗೆ ಜೀವನೋಪಾಯದ ಬೆಂಬಲಕ್ಕಾಗಿ ಪ್ರತ್ಯೇಕವಾಗಿ ವಾರ್ಷಿಕ ಪರಿಹಾರ ನೀಡಲಾಗುವುದು. ವರ್ಷಕ್ಕೆ ಪ್ರತಿ ಎಕರೆ ಖುಷ್ಕಿ ಜಮೀನಿಗೆ (ಒಣಭೂಮಿ) ₹30 ಸಾವಿರ, ತರಿಗೆ ಜಮೀನಿಗೆ (ಮಳೆ ಅಥವಾ ನೀರಾವರಿಯಿಲ್ಲದೆ ವ್ಯವಸಾಯ ಮಾಡುವ ಭೂಮಿ) ₹40 ಸಾವಿರ, ಭಾಗಾಯ್ತು ಭೂಮಿಗೆ (ನೀರಾವರಿ ಅಥವಾ ಮಳೆಯಾಶ್ರಿತ ತೋಟ) ₹50 ಸಾವಿರ ಹಾಗೂ ಭೂರಹಿತ ಕುಟುಂಬಕ್ಕೆ ₹25 ಸಾವಿರ ನೀಡಲಾಗುವುದು ಎಂದು ಹೇಳಿದರು.
‘ಅಧಿಸೂಚನೆ ಬಳಿಕ 6,300 ಭೂ ಮಾಲೀಕರಿಗೆ ನೋಟಿಸ್ ನೀಡಿ ಆಕ್ಷೇಪಣೆ ಸ್ವೀಕರಿಸಲಾಗಿತ್ತು. ಈ ಪೈಕಿ ಶೇ 18.12ರಷ್ಟು ಮಂದಿ ಮಾತ್ರ ಭೂಸ್ವಾಧೀನ ಕೈಬಿಡಿ ಎಂದಿದ್ದಾರೆ. ನಾನು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡಬೇಕಿದೆ. ಹಾಗಾಗಿ, ಅದು ಸಾಧ್ಯವಿಲ್ಲ ಎಂದು ಅವರನ್ನು ನಾನು ಕೈ ಮುಗಿದು ಪ್ರಾರ್ಥಿಸಿಕೊಳ್ಳುತ್ತೇನೆ’ ಎಂದರು.
ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಆಯುಕ್ತ ರಾಜೇಂದ್ರ ಪಿ. ಚೋಳನ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹಾಗೂ ಇತರರು ಇದ್ದರು.