Wednesday, June 19, 2024

ಸತ್ಯ | ನ್ಯಾಯ |ಧರ್ಮ

ರಾತ್ರಿ 11 ಗಂಟೆಯ ನಂತರ ನಡೆದಾಡಿದ್ದಕ್ಕೆ ದಂಪತಿಗೆ ದಂಡ: ಇಬ್ಬರು ಪೊಲೀಸರು ಅಮಾನತು

ಬೆಂಗಳೂರು: ಬೆಂಗಳೂರಿನಲ್ಲಿ ರಾತ್ರಿ 11 ಗಂಟೆಯ ನಂತರ ಬೀದಿಯೊಂದರಲ್ಲಿ ನಡೆದಾಡುತ್ತಿದ್ದ ವಿವಾಹಿತ ದಂಪತಿಗೆ 1,000 ರೂ.ಗಳ ‘ದಂಡ’ ವಿಧಿಸಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಭಾನುವಾರ ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜೇಶ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ನಾಗೇಶ್ ಎಂಬ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು, ಕಾರ್ತಿಕ್ ಪತ್ರಿ ಎಂಬುವರ ಟ್ವಿಟರ್ ಪೋಸ್ಟ್‌ಗಳ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ (ಈಶಾನ್ಯ) ಅನೂಪ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಬ್ಬರು ಪೊಲೀಸರಿಂದ ಕಿರುಕುಳಕ್ಕೊಳಗಾದ ಘಟನೆಯ ಕುರಿತು ಸರಣಿ ಪೋಸ್ಟ್‌ ಮಾಡಿರುವ ʼಕಾರ್ತಿಕ್ ಪತ್ರಿʼಯವರು, ʼಅದು ಮಧ್ಯರಾತ್ರಿ 12:30ರ ಸುಮಾರು, ನಾನು ಮತ್ತು ನನ್ನ ಹೆಂಡತಿ, ನನ್ನ ಸ್ನೇಹಿತನ ಹುಟ್ಟುಹಬ್ಬದ ಸಮಾರಂಭಕ್ಕೆ ಹೋಗಿದ್ದ ಕಾರಣ, ಮನೆಗೆ ಹಿಂತಿರುಗುತಿದ್ದೇವು, ನಮ್ಮ ಮನೆ ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದಲ್ಲಿದೆ, ಅಲ್ಲಿಗೆ ತಲುಪಲು ಕೇಲವು ಮೀಟರ್‌ಗಳಷ್ಟೆ ದೂರ ಇದ್ದೇವು ,ಆಗ ಗುಲಾಬಿ ಬಣ್ಣದ ಹೊಯ್ಸಳ ಗಸ್ತು ವಾಹನವು ನಮ್ಮ ಬಳಿ ಬಂದು ನಿಂತಿತು, ನಂತರ ಪೊಲೀಸ್ ಸಮವಸ್ತ್ರದಲ್ಲಿದ್ದ ಇಬ್ಬರು ಪುರುಷ ಸಿಬ್ಬಂದಿಗಳು ಬಂದು, ನಮ್ಮ ಗುರುತಿನ ಚೀಟಿಗಳನ್ನು( ಆಧಾರ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ) ತೊರಿಸಿ ಎಂದು ಕೇಳಿದರು, ಆಗ ನಾವು ದಿಗ್ಭ್ರಮೆಗೊಂಡೆವು ಎಂದು ಘಟನೆ ಕುರಿತು ತಿಳಿಸಿದ್ದಾರೆ.

ಮುಂದುವರೆದು ಸರಣಿ ಟ್ವೀಟ್‌ ಮಾಡಿರುವ ಅವರು, ʼಅದೃಷ್ಟವಶಾತ್, ನಾವು ನಮ್ಮ ಆಧಾರ್ ಕಾರ್ಡ್‌ಗಳ ಫೋಟೋಗಳು ನಮ್ಮ ಬಳಿ ಇದ್ದವು, ಬಳಿಕ ನಮ್ಮ ಬಳಿ ಇದ್ದ ಪೋನ್‌ಗಳನ್ನು ಕಸಿದುಕೊಂಡರು, ನಮ್ಮ ಇಬ್ಬರ ಸಂಬಂಧ, ಏನು ಕೆಲಸ ಮಾಡುತ್ತಿದ್ದೀರಿ, ಪೋಷಕರ ಹೆಸರು ಏನು ಹೀಗೆ ಇತ್ಯಾದಿ ವಿವಿರಗಳನ್ನು ಕೇಳಲು ಆರಂಭಿಸಿದರು. ನಾವು ಕೂಡ ಸ್ವಲ್ಪ ಅಲುಗಾಡದೇ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದೆವು. ಈ ಸಮಯದಲ್ಲಿ, ಅವರಲ್ಲಿ ಒಬ್ಬರು ಚಲನ್ ಪುಸ್ತಕದಂತೆ ಕಾಣುತ್ತಿದ್ದುದನ್ನು ಹೊರತೆಗೆದು, ಅದರಲ್ಲಿ ನಮ್ಮ ಹೆಸರುಗಳು ಮತ್ತು ಆಧಾರ್ ಸಂಖ್ಯೆಗಳನ್ನು ಬರೆಯಲು ಪ್ರಾರಂಭಿಸಿದರು. ಬಳಿಕ ಏಕೆ ಈ ಚಲನ್‌ ನೀಡುತ್ತಿದ್ದೀರಿ ಎಂದು ಕೇಳಿದಾಗ, ರಾತ್ರಿ 11 ಗಂಟೆಯ ನಂತರ ಜನರು ಬೀದಿಗಳಲ್ಲಿ ತಿರುಗಾಡಲು ಅವಕಾಶವಿಲ್ಲ ಎಂದು ಪೊಲೀಸರಲ್ಲಿ ಒಬ್ಬರು ಪ್ರತಿಕ್ರಿಯಿಸಿದರು. ಬಳಿಕ ಪೊಲೀಸರು ಆರಂಭದಲ್ಲಿ ನಮಗೆ 3,000 ರೂ.ಗಳನ್ನು ದಂಡದ ರೂಪದಲ್ಲಿ ಕೇಳಿದರು, ನಂತರ 1,000 ರೂ.ಗಳನ್ನು ಸ್ವೀಕರಿಸಿದರು ಎಂದು ಕಾರ್ತಿಕ್‌ ಹೇಳಿದ್ದಾರೆ.

ʼ ಈ ಕುರಿತು ಪೊಲೀಸರನ್ನು ಪ್ರಶ್ನಿಸಿದಾಗ, ನಮ್ಮ ವಿರುದ್ಧ ʼಬಲವಾದʼ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು, ನಂತರ ಮಧ್ಯರಾತ್ರಿ ರಸ್ತೆಯಲ್ಲಿ ನಡೆದಾಡುವುದು ಕಂಡುಬಂದರೆ ಕೊರ್ಟ್‌ಗೆ ಹೋಗಬೇಕಾಗುತ್ತದೆ ಎಂದು ಪೊಲೀಸರು ಬೆದರಿಕೆ ಹಾಕಿದರುʼ ಎಂದು ಕಾರ್ತಿಕ್‌ ಟ್ವಿಟರ್‌ ನಲ್ಲಿ ಆರೋಪಿಸಿದ್ದಾರೆ.

ʼಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ʼಘಟನೆಗೆ ಕಾರಣರಾದವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳು ಎಂದು ಗುರುತಿಸಲಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ  ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ʼಬೆಂಗಳೂರು ನಗರ ಪೊಲೀಸ್‌ʼ ತನ್ನ ಸಿಬ್ಬಂದಿಯ ವಿಕೃತ ವರ್ತನೆಯನ್ನು ಸಹಿಸುವುದಿಲ್ಲʼ ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು