Thursday, March 20, 2025

ಸತ್ಯ | ನ್ಯಾಯ |ಧರ್ಮ

10 ದಿನಗಳಲ್ಲಿ ವರದಿ ನೀಡಿ: ಕುಮಾರಸ್ವಾಮಿ ಸರಕಾರಿ ಜಮೀನಿನ ಒತ್ತುವರಿ ಪ್ರಕರಣದಲ್ಲಿ ಕೋರ್ಟಿನಿಂದ ಕಟ್ಟುನಿಟ್ಟಿನ ಆದೇಶ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಮತ್ತಿತರರಿಂದ ರಾಮನಗರ ಜಿಲ್ಲಾ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಆಗಿರುವ ಸರಕಾರಿ ಜಮೀನಿನ ಒತ್ತುವರಿ ತೆರವು ಕುರಿತಂತೆ 10 ದಿನಗಳಲ್ಲಿ ವರದಿ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಹೈಕೊರ್ಟ್‌ ಗಡುವು ನೀಡಿದೆ.

ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಮಾಡಿರುವ ಆದೇಶ ಜಾರಿ ಮಾಡುವಂತೆ ಹೈಕೋರ್ಟ್‌ ಹೊರಡಿಸಿದ್ದ ಆದೇಶ ಪಾಲಿಸದ ರಾಜ್ಯ ಸರಕಾರದ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಈ ಗಡುವು ನೀಡಿ ವಿಚಾರಣೆಯನ್ನು ಎಪ್ರಿಲ್‌ 3ಕ್ಕೆ ಮುಂದೂಡಿದೆ.

ನ್ಯಾಯಾಲಯದ ಆದೇಶದಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಅವರ ಪರ ಸರಕಾರಿ ವಕೀಲರು ವಾದ ಮಂಡಿಸಿ, ಕೇತಗಾನಹಳ್ಳಿ ಸುತ್ತಮುತ್ತ ಸ್ಥಳೀಯರಿಗೆ ಸರಕಾರದಿಂದ ಮಂಜೂರಾಗಿರುವ ಗೋಮಾಳ ಜಮೀನು ಕುರಿತಂತೆ ಪರಿಶೀಲನೆ ನಡೆಸಲು ಸಮಿತಿ ರಚನೆಯಾಗಿದೆ.

ಜಮೀನು ಮಂಜೂರಾತಿ ಅಸಲಿಯೇ ಅಥವಾ ಇಲ್ಲವೇ ಎಂದು ಸಮಿತಿ ವಿಚಾರಣೆ ನಡೆಸುತ್ತಿದೆ. ಈಗಾಗಲೇ 14 ಎಕರೆ ಜಮೀನು ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ18 ಎಕರೆ ಒತ್ತುವರಿ ಕುರಿತಂತೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗುತ್ತಿದೆ. ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗುವುದು ಎಂದು ವಿವರಣೆ ನೀಡಿದರು.

ಅದಕ್ಕೆ ತೀವ್ರ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಒಟ್ಟು 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ. ಯಾವುದಕ್ಕೂ ಮಂಜರಾತಿ ಪತ್ರ ಇಲ್ಲ. ನಕಲಿ ಮಂಜೂರಾತಿ ಪತ್ರ ಆಧರಿಸಿ ಗೋಮಾಳ ಜಮೀನನ್ನು ರಾಜಕಾರಣಿಗಳು/ಪ್ರಭಾವಿಗಳು ಖರೀದಿಸಿದ್ದರೆ. ಈ ಕುರಿತು 2014ರಲ್ಲೆ ತಹಶೀಲ್ದಾರ್‌ ವರದಿ ನೀಡಿದ್ದರು. ಆದ್ದರಿಂದ ಈವರೆಗೂ ಆ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿಲ್ಲ. ಸಂಪೂರ್ಣವಾಗಿ ಒತ್ತುವರಿ ತೆರವುಗೊಳಿಸಿ, ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದರು.

ಮುಂದೆ ಜಮೀನು ನಾಪತ್ತೆ ಆಗಬಹುದು: ನ್ಯಾಯಪೀಠ
ಕಾಲಾವಕಾಶ ಕೊಡಬೇಕು ಎಂಬ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ವಾದಕ್ಕೆ ಸಿಟ್ಟಾದ ನ್ಯಾಯಪೀಠ, ಈಗ ದಾಖಲೆ ನಾಪತ್ತೆಯಾಗಿವೆ. ಮುಂದೆ ಜಮೀನು ನಾಪತ್ತೆಯಾಗಬಹುದು. ಪ್ರಭಾವಿಗಳು ಒತ್ತುವರಿ ಮಾಡಿರುವುದರಿಂದ ಕೈ ಕಟ್ಟಿ ಕುಳಿತಿದ್ದೀರಿ. ಅದೇ ಭಿಕ್ಷುಕರು, ಬಡವರು ಐದಾರು ಅಡಿ ಒತ್ತುವರಿ ಮಾಡಿದರೆ ಬುಲ್ಡೋಜರ್‌ ತೆಗೆದುಕೊಂಡು ಹೋಗಿ ತೆರವು ಮಾಡುತ್ತಿದ್ದೀರಿ.

ಸರಕಾರಕ್ಕೆ ಧೈರ್ಯವಿದ್ದರೆ ಒತ್ತುವರಿ ತೆರವುಗೊಳಿಸಿ ಸರಕಾರದ ವಶಕ್ಕೆ ಜಮೀನು ಪಡೆಯಬೇಕು. ಇಲ್ಲವಾದರೆ ನ್ಯಾಯಾಲಯವೇ ಆ ಬಗ್ಗೆ ಸೂಕ್ತ ಆದೇಶ ಹೊರಡಿಸುತ್ತದೆ. ಜಮೀನು ಒತ್ತುವರಿಯಿಂದ ಪಡೆದಿರುವ ಲಾಭವನ್ನೂ ವಸೂಲಿಗೆ ಆದೇಶಿಸಬೇಕಾಗಬಹುದು ಎಂದು ಎಚ್ಚರಿಸಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page